»   » 'ರಾಮಾ ರಾಮಾ ರೇ' ವಿಮರ್ಶೆ: ಕ್ಲಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಸಿನಿಮಾ

'ರಾಮಾ ರಾಮಾ ರೇ' ವಿಮರ್ಶೆ: ಕ್ಲಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಸಿನಿಮಾ

By: Bharath kumar
Subscribe to Filmibeat Kannada

ಒಂದು ಸಿನಿಮಾ ಗೆಲ್ಲಬೇಕಾದರೆ, ಸ್ಟಾರ್ ಗಳೇ ಇರಬೇಕು ಅಂತಿಲ್ಲ. ಗಟ್ಟಿ ಕಥೆ ಇಟ್ಟುಕೊಂಡು ಹೊಸಬರು ಮಾಡಿರುವ ಅನೇಕ ಪ್ರಯೋಗಗಳು ಸ್ಯಾಂಡಲ್ ವುಡ್ ಅಂಗಳದಲ್ಲಿ ಯಶಸ್ವಿ ಆಗಿದೆ, ಆಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಇಂದು ಬಿಡುಗಡೆ ಆಗಿರುವ 'ರಾಮಾ ರಾಮಾ ರೇ'. ಅದ್ಧೂರಿ ಅಲ್ಲದ, ಭರ್ಜರಿ ಪ್ರಚಾರ ಗಿಟ್ಟಿಸದ, ನುರಿತ ತಂತ್ರಜ್ಞರು ಇಲ್ಲದ, 'ಸ್ಟಾರ್' ಕಲಾವಿದರು ಇಲ್ಲದ ಸಂಪೂರ್ಣ ಹೊಸಬರೇ ಕೂಡಿ ಮಾಡಿರುವ 'ರಾಮಾ ರಾಮಾ ರೇ' ನೋಡ್ತಿದ್ರೆ, 'ಅಯ್ಯೋ..ರಾಮಾ ರಾಮಾ' ಅಂತ ಪ್ರೇಕ್ಷಕರು ಖಂಡಿತ ತಲೆ ಚಚ್ಚಿಕೊಳ್ಳುವುದಿಲ್ಲ. ಅಷ್ಟರಮಟ್ಟಿಗೆ ಎಲ್ಲರ ಮನಮುಟ್ಟುವಲ್ಲಿ ಚಿತ್ರತಂಡ ಯಶಸ್ವಿ ಆಗಿದೆ.

Rating:
3.5/5

ಚಿತ್ರ: 'ರಾಮಾ ರಾಮಾ ರೇ'
ನಿರ್ದೇಶನ: ಸತ್ಯ ಪ್ರಕಾಶ್
ಸಂಗೀತ: ವಾಸುಕಿ ವೈಭವ್
ಛಾಯಾಗ್ರಹಣ: ಲವಿತ್
ಸಂಕಲನ: ಬಿ.ಎಸ್.ಕೆಂಪರಾಜು
ತಾರಾಗಣ: ಕೆ.ಜಯರಾಮ್, ನಟರಾಜ್ ಎಸ್.ಭಟ್, ಧರ್ಮಣ್ಣ ಕಡೂರು ಇತರರು ಅಭಿನಯಿಸಿದ್ದಾರೆ.
ಬಿಡುಗಡೆ ದಿನಾಂಕ: ಅಕ್ಟೋಬರ್ 21

ಕಥಾ ಹಂದರ

ಗಲ್ಲು ಶಿಕ್ಷೆಗೆ ಒಳಗಾದ ಖೈದಿಯೊಬ್ಬ (ಸ್ಯಾಂಡಲ್ ರಾಜ) ಬದುಕಲೇಬೇಕೆಂಬ ಆಸೆಯಿಂದ ಜೈಲಿನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ. ಖೈದಿಯನ್ನ ಹುಡುಕಿಕೊಟ್ಟವರಿಗೆ 10 ಲಕ್ಷ ಬಹುಮಾನ ಅಂತ ಪೊಲೀಸರು ಘೋಷಣೆ ಮಾಡುತ್ತಾರೆ. ತಪ್ಪಿಸಿಕೊಂಡ ವ್ಯಕ್ತಿ ಇತ್ತ ಪೊಲೀಸರಿಂದ ತಲೆ ಮರಿಸಿಕೊಳ್ಳಲು ಆಗದೆ, ಅತ್ತ ಜನಗಳ ಕಣ್ಣು ತಪ್ಪಿಸಿ ಓಡುತ್ತಲೇ ಇರುತ್ತಾನೆ. ಈ ವೇಳೆ ವಯಸ್ಸಾದ ವ್ಯಕ್ತಿಯೊಬ್ಬ (ನಿವೃತ್ತಗೊಂಡಿರುವ ಗಲ್ಲು ನಿರ್ವಾಹಕ ರಾಮಣ್ಣ) ಜೀಪ್ ನಲ್ಲಿ ಅದೇ ರಸ್ತೆ ಮಾರ್ಗವಾಗಿ ಬರುತ್ತಾನೆ. ಆಕಸ್ಮಿಕವಾಗಿ ಒಂದಾಗುವ ಇವರಿಬ್ಬರು ಆ ಜೀಪ್ ನಲ್ಲಿ ಜರ್ನಿ ಶುರು ಮಾಡುತ್ತಾರೆ. ಅಲ್ಲಿಂದ 'ರಾಮಾ ರಾಮಾ ರೇ' ಕಥೆ ಶುರು.

ಕುತೂಹಲವಾಗಿದೆ ಚಿತ್ರಕಥೆ

ಖೈದಿ ಹಾಗೂ ಮುದುಕನ ಜೊತೆ, ಪ್ರೇಮಿಗಳಿಬ್ಬರು ಜೀಪ್ ನಲ್ಲಿ ಸೇರಿಕೊಳ್ಳುತ್ತಾರೆ. ಈ ನಾಲ್ವರ ಜರ್ನಿಯೇ ಇಡೀ ಸಿನಿಮಾ. ಬಹುತೇಕ ಚಿತ್ರ ಈ ಜೀಪ್ ನಲ್ಲೆ ಸಾಗುತ್ತೆ. ಈ ವೇಳೆ ಆಸೆ-ದುರಾಸೆ, ದುಡ್ಡು ಮತ್ತು ಸಂಬಂಧಗಳ ನಡುವಿನ ಸಂಘರ್ಷ ಎದುರಾಗುತ್ತೆ. ಹೀಗೆ ಜರ್ನಿಯಲ್ಲೆ ಸಾಗುವ ಚಿತ್ರದಲ್ಲಿ ಖೈದಿ ಸಿಕ್ಕಿ ಬೀಳ್ತಾನಾ? ತಂದೆ-ತಾಯಿ ಬಿಟ್ಟು ಬಂದ ಆ ಪ್ರೇಮಿಗಳು ಒಂದಾಗ್ತಾರಾ? ಆ ಮುದುಕ ಯಾರು? ಎಂಬ ಇಂಟ್ರೆಸ್ಟಿಂಗ್ ಸ್ಟೋರಿಯನ್ನ ನೀವು ಬೆಳ್ಳಿತೆರೆಮೇಲೆ ನೋಡಿ....

ನಿಧಾನಗತಿಯ ಮೊದಲಾರ್ಧ

ನಿಧಾನವಾಗಿ ಸಾಗುವ ಮೊದಲಾರ್ಧದಲ್ಲಿ ಕುತೂಹಲವಿದೆ. ಸೆಕೆಂಡ್ ಹಾಫ್ ನಲ್ಲಿ ಮನುಷ್ಯನ ಸಂಬಂಧಗಳಿಗೆ, ಭಾವನೆಗಳಿಗೆ ಬೆಲೆ ಕೊಡಲಾಗಿದೆ. ಅದರೂ, ಕಡೆಯವರೆಗೂ ಸಸ್ಪೆನ್ಸ್ ಬಿಟ್ಟು ಕೊಡದ ಚಿತ್ರತಂಡ ಪ್ರೇಕ್ಷಕರನ್ನ ಸೀಟಿನ ತುದಿಗೆ ಕೂರಿಸುತ್ತದೆ.

ಎಲ್ಲರ ಅಭಿನಯ ಹೇಗಿದೆ,?

'ಜಯನಗರ 4th ಬ್ಲಾಕ್' ಕಿರುಚಿತ್ರದಲ್ಲಿ ಪೋಷಕ ಪಾತ್ರ ನಿರ್ವಹಿಸಿದ ನಟರಾಜ್.ಎಸ್.ಭಟ್ 'ರಾಮಾ ರಾಮಾ ರೇ' ಚಿತ್ರದಲ್ಲಿ ಖೈದಿಯಾಗಿ ಕಾಣಿಸಿಕೊಂಡಿದ್ದಾರೆ. ಹೆಚ್ಚೇನೂ ಡೈಲಾಗ್ ಇಲ್ಲದೆ ಹೋದರು ಅಭಿನಯದಲ್ಲಿ ಜಾದೂ ಮಾಡಿದ್ದಾರೆ. ಉಳಿದಂತೆ ಕೆ.ಜಯರಾಮ್ ಹಾಗೂ ಧರ್ಮಣ್ಣ ಕಡೂರ, ಬಿಂಬಶ್ರೀ ನೀನಾಸಂ ಅವರ ಅಭಿನಯ ಅದ್ಭುತವಾಗಿದೆ.

ನಿರ್ದೇಶಕನ ಸಿನಿಮಾ

ಇಲ್ಲಿ ನಾಯಕ-ನಾಯಕಿ ಅಂತ ಯಾರು ಇಲ್ಲ. ಎಲ್ಲವೂ ಪ್ರಮುಖ ಪಾತ್ರಗಳೆ. 'ಜಯನಗರ 4th ಬ್ಲಾಕ್' ಎಂಬ ಕಿರುಚಿತ್ರದ ಮೂಲಕ ಭರವಸೆ ಮೂಡಿಸಿದ್ದ ಸತ್ಯ ಪ್ರಕಾಶ್, ನಿರ್ದೇಶಕನಾಗಿ ಉತ್ತಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಚೊಚ್ಚಲ ನಿರ್ದೇಶನದಲ್ಲಿ ಹೊಸ ಅಭಿರುಚಿಯ ಸಿನಿಮಾ ಕೊಟ್ಟಿದ್ದಾರೆ.

ಮೈನಸ್ ಪಾಯಿಂಟ್

'ರಾಮಾ ರಾಮಾ ರೇ' ಚಿತ್ರದಲ್ಲಿ ಮೈನಸ್ ಪಾಯಿಂಟ್ ಹುಡುಕುವುದು ಕಷ್ಟ. ಆದರೂ, ಸಂಗೀತದಲ್ಲಿ ಮತ್ತಷ್ಟು ಕೈಚಳಕ ತೋರಿಸಬಹುದಿತ್ತು. ಚಿತ್ರಕಥೆ ನಿಧಾನವಾಗಿದೆ. ಪಾತ್ರಗಳ ಹಿನ್ನಲೆ ಹೇಳದೆ ಇರುವುದು ಹಾಗೂ ಲೋಕೇಷನ್ ಗಳ ಪರಿಚಯ ಮಾಡದಿರುವುದು, ಕೆಲವು ಗೊಂದಲಗಳನ್ನ ಸೃಷ್ಟಿಸುತ್ತದೆ.

ಟೆಕ್ನಿಕಲಿ 'ರಾಮಾ ರಾಮಾ ರೇ'

ವಾಸುಕಿ ವೈಭವ್ ಅವರ ಸಂಗೀತ ಚಿತ್ರಕಥೆಗೆ ಪೂರಕವಾಗಿದೆ. ಬಿ.ಎಸ್.ಕೆಂಪರಾಜು ಅವರ ಸಂಕಲನ, ಹಾಗೂ ಲವಿತ್ ಅವರ ಛಾಯಾಗ್ರಹಣ ಆಕರ್ಷಕವಾಗಿದೆ.

ಫೈನಲ್ ಸ್ಟೇಟ್ ಮೆಂಟ್

'ರಾಮಾ ರಾಮಾ ರೇ' ಪಕ್ಕಾ ಕ್ಲಾಸ್ ಸಿನಿಮಾ. ಫ್ಯಾಮಿಲಿ ಆಡಿಯೆನ್ಸ್ ಕೂತು ನೋಡಬಹುದಾದ ಚಿತ್ರ. ಮಾಸ್ ಎಲಿಮೆಂಟ್ಸ್ ಗಳು ಇಲ್ಲದೆ ಹೋದರೂ ಎಲ್ಲೂ ಬೋರ್ ಆಗದಂತೆ ಸಿನಿಮಾ ಮಾಡಿದ್ದಾರೆ. ಕೊಟ್ಟ ದುಡ್ಡಿಗೆ ಮೋಸ ಅಂತೂ ಆಗಲ್ಲ. ಈ ವಾರದಲ್ಲಿ ಸಿನಿಮಾ ನೋಡುವ ಯೋಚನೆಯಿದ್ದರೆ 'ರಾಮಾ ರಾಮಾ ರೇ' ಚಿತ್ರವನ್ನ ಒಮ್ಮೆ ನೋಡಿ.

English summary
Director Satya Prakash of 'Jayanagar 4th block' short film fame Directed 'Rama Rama Re' Movie has hit the screens today (October 21). The movie is a treat for Class Audience. 'Rama Rama Re' features Jayaram, Nataraj, Darmanna Kadoor in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada