»   » ವಿಮರ್ಶೆ: ಒಳ್ಳೆಯ ಕೆಲಸಗಳಿಗೆ ತಾಳ್ಮೆ ಇರಲಿ ಎಂದು ಹೇಳುವ 'ಚೌಕ'

ವಿಮರ್ಶೆ: ಒಳ್ಳೆಯ ಕೆಲಸಗಳಿಗೆ ತಾಳ್ಮೆ ಇರಲಿ ಎಂದು ಹೇಳುವ 'ಚೌಕ'

Posted By:
Subscribe to Filmibeat Kannada

ಒಬ್ಬ ಮನುಷ್ಯನಲ್ಲಿ ಒಳ್ಳೆಯಗುಣ ಮತ್ತು ಕೆಟ್ಟಗುಣ ಎರಡು ಸಹ ಇರುತ್ತವೆ. ಉತ್ತಮವಾದ ಗುಣಗಳನ್ನು ಮೈಗೂಡಿಕೊಳ್ಳಲು ತಾಳ್ಮೆ ಬೇಕು. ಇಂತಹ ಅಂಶಗಳನ್ನು ತರುಣ್ ಸುಧೀರ್ ಅವರು ತಮ್ಮ ಚೊಚ್ಚಲ ನಿರ್ದೇಶನದಲ್ಲಿ ತಮ್ಮದೇ ಕತೆಯಲ್ಲಿ ತೆರೆಮೇಲೆ ಕಟ್ಟಿಕೊಡುವ ಸಾಹಸ ಮಾಡಿದ್ದಾರೆ.

ಒಂದೇ ಚಿತ್ರದಲ್ಲಿ ನಾಲ್ಕು ನಟರಿಗೆ ನಾಲ್ಕು ರೀತಿಯ ಕಥೆಗಳನ್ನು ಬರೆದು 'ಚೌಕ' ನಿರ್ಮಾಣ ಮಾಡಿರುವ ತರುಣ್ ಸುದೀರ್, ಕ್ಲೈಮ್ಯಾಕ್ಸ್ ನಲ್ಲಿ ಪ್ರಸ್ತುತ ಸಮಾಜದಲ್ಲಿ ಸಹಾಯಕರು, ಅಸಹಾಯಕರಂತೆ ವರ್ತಿಸುವುದರ ಮೇಲೆ ಬೆಳಕು ಚೆಲ್ಲುವ ಸಾರಾಂಶವನ್ನು ಹೇಳಲು ಹೊರಟಿದ್ದಾರೆ.

Rating:
3.5/5

ಚಿತ್ರ : ಚೌಕ
ನಿರ್ದೇಶನ : ತರುಣ್ ಸುದೀರ್
ನಿರ್ಮಾಣ : ಬಿ.ಎಸ್‌. ದ್ವಾರಕೀಶ್, ಯೋಗೀಶ್ ದ್ವಾರಕೀಶ್ ಬಂಗಲೆ
ಛಾಯಾಗ್ರಹಣ : ಸತ್ಯಾ ಹೆಗ್ಡೆ, ಎಸ್.ಕೃಷ್ಣ, ಸಂತೋಷ್ ರೈ ಪಥತೆ, ಶೇಖರ್, ಚಂದ್ರು, ಸುಧಾಕರ್ ರಾಜ್‌
ಸಂಗೀತ : ಗುರುಕಿರಣ್, ಅರ್ಜುನ್ ಜನ್ಯಾ, ವಿ.ಹರಿಕೃಷ್ಣ, ಅನೂಪ್ ಸೀಳೀನ್, ಶ್ರೀಧರ್ ವಿ ಸಂಭ್ರಮ್
ತಾರಾಗಣ : ವಿಜಯ್ ರಾಘವೇಂದ್ರ, ದಿಗಂತ್, ಪ್ರೇಮ್ ಕುಮಾರ್, ಪ್ರಜ್ವಲ್ ದೇವರಾಜ್, ಪ್ರಿಯಾಮಣಿ, ದೀಪಾ ಸನ್ನಿಧಿ, ಭಾವನಾ, ಐಂದ್ರಿತಾ ರೇ, ತಬಲ ನಾಣಿ, ಅವಿನಾಶ್, ಚಿಕ್ಕಣ್ಣ,
ಬಿಡುಗಡೆ : ಫೆಬ್ರವರಿ 03, 2017

ಕಥಾಹಂದರ

1986 ರಲ್ಲಿ ಹಕ್ಕಿ ಕೃಷ್ಣ (ಪ್ರೇಮ್), ದೊಡ್ಡ ರೌಡಿ ಆಗಬೇಕು ಎಂಬ ಆಸೆಯಲ್ಲಿ, ಮಾಡದ ಕೊಲೆಗೆ ಸರೆಂಡರ್ ಆಗಿ ಜೈಲಿಗೆ ಸೇರುತ್ತಾನೆ. 1995 ರಲ್ಲಿ ಜರುಗುವ ಕಥೆಯಲ್ಲಿ ಕೃಷ್ಣ ರಾವ್ (ದಿಗಂತ್) ಹೆಣ್ಣಿನ ಮೋಹಕ್ಕೆ ಒಳಗಾಗಿ, ಈತನು ಸಹ ಮಾಡದ ತಪ್ಪಿಗೆ ಶಿಕ್ಷೆಗೆ ಗುರಿ ಆಗುತ್ತಾನೆ. ಇನ್ನೂ 2000 ಇಸವಿಯಲ್ಲಿ ಕಾಣಿಸಿಕೊಳ್ಳುವ ಸೂರ್ಯ ಶೆಟ್ಟಿ(ವಿಜಯ್ ರಾಘವೇಂದ್ರ) ತಾನು ಮತ್ತು ತನ್ನ ಪ್ರೇಯಸಿ(ಭಾವನಾ) ಇಬ್ಬರು, ಪಬ್ ಒಂದರ ಮೇಲೆ ದಾಳಿ ನಡೆದಾಗ ಬಚಾವಾಗುವ ವೇಳೆ ಸೂರ್ಯ ಶೆಟ್ಟಿ ಇಂದ ಆಕಸ್ಮಿಕವಾಗಿ ವ್ಯಕ್ತಿಯೊಬ್ಬನ ಕೊಲೆ ಆಗುತ್ತದೆ. ಆದ್ದರಿಂದ ಸೂರ್ಯ ಶೆಟ್ಟಿ ಸಹ 14 ವರ್ಷಗಳ ಜೈಲು ಶಿಕ್ಷೆಗೆ ಗುರಿ ಆಗುತ್ತಾರೆ. 2007 ಕಾಲಘಟ್ಟದಲ್ಲಿ ಕಾಣಿಸಿಕೊಂಡಿರುವ ಮೊಹಮದ್ ಅನ್ವರ್(ಪ್ರಜ್ವಲ್ ದೇವರಾಜ್) ಟೂರಿಸ್ಟ್ ಗೈಡ್ ಆಗಿ ಬಣ್ಣ ಹಚ್ಚಿದ್ದಾರೆ. ಪರಮ ದೇಶಭಕ್ತ ನಾದರೂ ಇತರರಿಗೆ ಸಹಾಯ ಮಾಡಲು ಹೋಗಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅನ್ವರ್ ಗೂ ಮರಣದಂಡನೆಗೆ ಶಿಕ್ಷೆಗೆ ಆಗುತ್ತಾನೆ. ಹಾಗಿದ್ರೆ ಮುಂದೇನು? ಅನ್ನೋದು ಎಲ್ಲರಿಗೂ ಕಾಡುವ ಪ್ರಶ್ನೆ..

2017 ರಲ್ಲಿ ಕಂಕ್ಲೂಸನ್

ವಿಭಿನ್ನವಾಗಿ ಸಾಗುವ ನಾಲ್ಕು ಸ್ಟಾರ್ ಗಳ ನಾಲ್ಕು ಚಿತ್ರಕಥೆ ಒಟ್ಟಿಗೆ ಸಾಗಿದ್ದು, ತೆರೆಮೇಲೆ ಒಮ್ಮೆಯೇ ನಾಲ್ವರು ಜೈಲಿಗೆ ಹೋಗುವ ದೃಶ್ಯವನ್ನು ನಿರ್ದೇಶಕರು ತೋರಿಸಿದ್ದು, ಕಂಕ್ಲೂಸನ್ 2017 ರಲ್ಲಿ ಎಂದು ಹೇಳುವ ಮೂಲಕ ಸಸ್ಪೆನ್ಸ್ ಅನ್ನು ಪ್ರೇಕ್ಷಕರ ಮುಂದೆ ಇಡುತ್ತಾರೆ. ಇದಕ್ಕೆ ಉತ್ತರ ತಿಳಿಯಲು ಸಿನಿ ಪ್ರಿಯರು ಥಿಯೇಟರ್ ಗೆ ಭೇಟಿ ಕೊಡಿ.

ಕಾಮಿಡಿಗೆ ಚಿಕ್ಕಣ್ಣ ಅವರ ಜುಗಲ್ ಬಂದಿ

ಚಿತ್ರದಲ್ಲಿ ಮೂಡಿ ಬಂದಿರುವ ನಾಲ್ಕು ಗಟ್ಟಗಳ ಕಥೆಯ ನಾಲ್ಕು ನಾಯಕರಿಗೆ ಒಬ್ಬನೇ ಸ್ನೇಹಿತ. ಅವರೇ ಚಿಕ್ಕಣ್ಣ. ಜೀವನದಲ್ಲಿ ಒಬ್ಬ ವ್ಯಕ್ತಿ ಹಾಳಾಗಲು ಹಾಗೂ ಉದ್ಧಾರವಾಗಲು ಸ್ನೇಹಿತರ ಸಲಹೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು, ಚಿಕ್ಕಣ್ಣ ಅವರ ಮೂಲಕ ತೋರಿಸಲಾಗಿದೆ. ಈ ಚಿತ್ರದಲ್ಲಿ ಚಿಕ್ಕಣ್ಣ ಸೀರಿಯಸ್ ಮತ್ತು ಕಾಮಿಡಿ ರೋಲ್ ಎರಡರಲ್ಲೂ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ನಾಲ್ಕು ನಾಯಕಿಯರ ಪಾತ್ರ ಹೇಗಿದೆ?

ಐಂದ್ರಿತಾ ರೇ, ಪ್ರೇಮ್ ಗೆ ಪ್ರೇಯಸಿ ಆಗಿ, ಪ್ರಿಯಾಮಣಿ ಅವರು ದಿಂಗತ್ ಗೆ ಕಾಂಬಿನೇಷನ್ ಆಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಅವರಿಗೆ ಪ್ರೇಯಸಿ ಆಗಿ ಭಾವನಾ ಮತ್ತು ಪ್ರಜ್ವಲ್ ದೇವರಾಜ್‌ ಗೆ ಬೇಗಂ ಆಗಿ ದೀಪಾ ಸನ್ನಿಧಿ ಅವರು ಕಾಣಿಸಿಕೊಂಡಿದ್ದಾರೆ. 'ಚೌಕ' ಮಲ್ಟಿಸ್ಟಾರರ್ ಚಿತ್ರವಾಗಿದ್ದು, ಒಂದು ಮೇಸೇಜ್ ಹೇಳಲು ಹೊರಟಿರುವುದರಿಂದ ನಾಯಕಿಯರು ಪರದೆ ಮೇಲೆ ಕಾಣಿಸಿಕೊಂಡಿರುವುದು ಅತೀ ಕಡಿಮೆ.

ಎಸ್ಕೇಪ್ ರಾಜ ನಾಗಿ ಕಾಶಿನಾಥ್

ಸಿನಿಮಾದಲ್ಲಿ ಪ್ರತಿಯೊಂದು ಹಂತದಲ್ಲೂ ಒಬ್ಬಬ್ಬ ಸ್ಟಾರ್ ಗಳನ್ನು ಪರಿಚಯಿಸಿದ್ದು, ಹಲವು ವರ್ಷಗಳ ನಂತರ ಕಾಶಿನಾಥ್ ಅವರು 'ಚೌಕ' ಚಿತ್ರದ ಮೂಲಕ ಎರಡನೇ ಬಾರಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಕಾಶಿನಾಥ್ ಅವರು ಖೈದಿ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಡಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ.

ದರ್ಶನ್ ಅವರ ಸ್ಪೆಷಲ್ ಎಂಟ್ರಿ

'ಚೌಕ' ಚಿತ್ರದಲ್ಲಿ ದರ್ಶನ್ ಅವರು, ಪ್ರೇಕ್ಷಕರ ನಿರೀಕ್ಷೆಗೆ ಹೊರತಾದ ವಿಶೇಷ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, 'ಬಾಹುಬಲಿ' ಚಿತ್ರದಲ್ಲಿ 'ಕಾಲಕೇಯ'ನ ಪಾತ್ರ ಮಾಡಿದ್ದ ಪ್ರಭಾಕರ್ ಜೊತೆ ದೊಡ್ಡ ಕಾಳಗವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಈ ಫೈಟ್ ಸಹ ವಿಶೇಷವಾಗಿದ್ದು, ಚಿತ್ರಮಂದಿರಕ್ಕೆ ಹೋದ ದರ್ಶನ್ ಅಭಿಮಾನಿಗಳಿಗೆ ಅವರ ಫೈಟ್ ನೋಡುವ ಅವಕಾಶವಿದೆ.

'ಚೌಕ' ದಲ್ಲಿ ಯಾರೆಲ್ಲಾ ಇದ್ದಾರೆ?

ಅವಿನಾಶ್ ರಾಜಕಾರಣಿ ಆಗಿ, ತಬಲ ನಾಣಿ ಪೋಲೀಸ್ ಪಾತ್ರದಲ್ಲಿ, ಮಾನ್ವಿತಾ ಹರೀಶ್ ಅವರು ಕಾಶಿನಾಥ್ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಜೈಲರ್ ಪಾತ್ರದಲ್ಲಿ 'ಲಾಲಿಹಾಡು' ಚಿತ್ರದ ನಾಯಕಿ ಅಭಿರಮಿ ಅವರು ಬಣ್ಣ ಹಚ್ಚಿದ್ದಾರೆ.

ಚಿತ್ರದಲ್ಲಿ ನಾಲ್ಕು ಹಾಡುಗಳು

'ಚೌಕ' ಚಿತ್ರದ ಹೆಸರಿಗೆ ತಕ್ಕಂತೆ ನಾಲ್ಕು ಹಾಡುಗಳಿದ್ದು, ಯೋಗರಾಜ್ ಭಟ್ ಸಾಹಿತ್ಯದ 'ಅಲ್ಲಾಡ್ಸು.. ಅಲ್ಲಾಡ್ಸು' ಮತ್ತು ನಾಗೇಂದ್ರ ಪ್ರಸಾದ್ ಬರೆದಿರುವ 'ಅಪ್ಪಾ ಐ ಲವ್ ಯು ಅಪ್ಪಾ' ಎರಡೇ ಹಾಡುಗಳು ಹೆಚ್ಚು ವಿಶೇಷ ಎನಿಸಿವೆ. ಉಳಿದಂತೆ ಅರ್ಜುನ್ ಜನ್ಯಾ ಅವರ ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಚಿತ್ರದ ಕಡೆ ಗಮನಹರಿಸಲು ಸಾಥ್ ನೀಡಿದೆ.

ಛಾಯಾಗ್ರಹಣ ಮಂಕು

'ಚೌಕ' ಚಿತ್ರಕ್ಕೆ ಖ್ಯಾತ ಛಾಯಾಗ್ರಹಕರ ಕೈಚಳಕ ಇದ್ದರೂ, ದ್ವಾರಕೀಶ್ ಅವರ ನಿರ್ಮಾಣದ ಸಿನಿಮಾಗೆ ಕ್ಯಾಮೆರಾ ವರ್ಕ್ ಹೆಚ್ಚು ಮಂಕಾಗಿಯೇ ಇದೆ.

ಯಾರೆಲ್ಲಾ ನೋಡಬಹುದು

ಪ್ರತಿಯೊಬ್ಬರ ಜೀವನದಲ್ಲಿ ಅವರ ಗೆಳಯರ ಪಾತ್ರ ಹೇಗೆ ಪರಿಣಾಮ ಬೀರುತ್ತದೆ. ತಪ್ಪು ಮಾಡದ ಅಮಾಯಕರು ಸಹ ಹೇಗೆಲ್ಲಾ ಜೈಲಿಗೆ ಹೋಗುತ್ತಾರೆ ಎಂಬ ಅಂಶಗಳಿರುವ ಚಿತ್ರ, ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿಯೂ ಯಶಸ್ವಿಯಾಗಿದ್ದು, ಕ್ಲಾಸ್ ಮತ್ತು ಮಾಸ್ ಎಂಬ ಬೇದಭಾವ ಇಲ್ಲದೇ ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾ.

ಫೈನಲ್ ಸ್ಟೇಟ್ ಮೆಂಟ್

ಪೊಲಿಟಿಕಲ್ ಮತ್ತು ಪಬ್ಲಿಕ್ ಕರ್ತವ್ಯಗಳ ಮೇಲೆ ಚಿತ್ರ ಬೆಳಕು ಚೆಲ್ಲಿದೆ. 'ಸಹಾಯ ಮತ್ತು ಹೋರಾಟ ಎಂಬ ಎರಡು ಸನ್ನಿವೇಶಗಳು ಬಂದಾಗ ಎಲ್ಲರೂ ಸಹ ಪಕ್ಕದ ಮನೆಯಲ್ಲೇ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಹುಟ್ಟಲಿ ಎಂದು ಯೋಚಿಸುತ್ತಾರೆ' ಈ ಒಂದು ಮನೋಭಾವದ ಬದಲಾವಣೆಗಾಗಿ ಚಿತ್ರದಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಆದ್ದರಿಂದ 'ಚೌಕ' ಚಿತ್ರವನ್ನು ಮುಕ್ತ ಮನಸ್ಸಿನಿಂದ ನೋಡಿ ಕನ್ನಡ ಚಿತ್ರಗಳನ್ನ ಪ್ರೋತ್ಸಾಹಿಸಿ...

English summary
Tarun Sudhir Directorial, Multi Starrer 'Chowka' movie has hit the screens today (February 3rd). Here is the complete review of 'Chowka'

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X