»   » ಚಿತ್ರ ವಿಮರ್ಶೆ : ದಿ ಅಟಾಕ್ಸ್ ಆಫ್ 26/11

ಚಿತ್ರ ವಿಮರ್ಶೆ : ದಿ ಅಟಾಕ್ಸ್ ಆಫ್ 26/11

By: ನಬನಿತಾ
Subscribe to Filmibeat Kannada

ಭೂತ್ ರಿಟರ್ನ್ಸ್, ಡಿಪಾರ್ಟ್‌ಮೆಂಟ್, ನಾಟ್ ಅ ಲವ್ ಸ್ಟೋರಿಯಂಥ ಫ್ಲಾಪ್ ಚಿತ್ರಗಳನ್ನು ಇತ್ತೀಚಿನ ವರ್ಷಗಳಲ್ಲಿ ನಿರ್ದೇಶಿಸಿ, ಫ್ಲಾಪ್ ನಿರ್ದೇಶಕ ಎಂಬ ಹಣಪಟ್ಟಿ ಕಟ್ಟಿಕೊಂಡಿದ್ದ ರಾಮ್ ಗೋಪಾಲ್ ವರ್ಮಾ, 'ದಿ ಅಟಾಕ್ಸ್ ಆಫ್ 26/11' ಚಿತ್ರದ ಮುಖಾಂತರ ತಮ್ಮ ಟೀಕಾಕಾರರಿಗೆ ಜಬರ್ದಸ್ತ್ ಉತ್ತರ ನೀಡಿದ್ದಾರೆ.

2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಭೀಭತ್ಸ ಚಿತ್ರಣವನ್ನು 'ದಿ ಅಟಾಕ್ಸ್ ಆಫ್ 26/11' ಚಿತ್ರದ ಮೂಲಕ ರಾಮ್ ಗೋಪಾಲ್ ವರ್ಮಾ ಮತ್ತೆ ತೆರೆದಿಟ್ಟಿದ್ದಾರೆ. ವರ್ಮಾ ಅವರೇ ಬರೆದಿರುವ ಉತ್ತಮ ಚಿತ್ರಕಥೆ, ನಟರ ಪರಿಣಾಮಕಾರಿ ಅಭಿನಯ, ಮೈನವಿರೇಳಿಸುವ ಹಿನ್ನೆಲೆ ಸಂಗೀತ, ಅತ್ಯುದ್ಭುತ ಅನ್ನಿಸುವಂತಹ ಸಿನೆಮಾಟೋಗ್ರಫಿ ಮತ್ತು ಅತ್ಯುತ್ತಮ ಕಲಾನೈಪುಣ್ಯತೆ ಚಿತ್ರದ ಹೈಲೈಟ್.

ಅಂದು ನಡೆದ ಆ ರಕ್ತದೋಕುಳಿಯನ್ನು ಇನ್ನೂ ಅಳಿಸಿರಲಿಲ್ಲ, ಆಗಲೇ ಇದೇ ರಾಮಾ ಗೋಪಾಲ್ ವರ್ಮಾ ತಾಜ್ ಹೋಟೆಲಿಗೆ ಅಂದಿನ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಅವರ ಮಗ ರಿತೇಶ್ ಜೊತೆ ಹೋಗಿ ವಿವಾದವೆಬ್ಬಿಸಿದ್ದರು, ಸಾಕಷ್ಟು ಟೀಕೆಗೂ ಗುರಿಯಾಗಿದ್ದರು. ಚಿತ್ರನಿರ್ಮಿಸುವ ಉದ್ದೇಶದಿಂದ ಅಲ್ಲಿ ಬಂದಿರಲಿಲ್ಲ ಎಂದು ವರ್ಮಾ ಹೇಳಿದ್ದರೂ ಯಾರೂ ನಂಬಿರಲಿಲ್ಲ. ಅಂದು ಅಲ್ಲಿ ಹೋದ ಉದ್ದೇಶವನ್ನು ಇಂದು ವರ್ಮಾ ಪೂರೈಸಿದ್ದಾರೆ.

ಇಂಥ ಸತ್ಯಕಥೆ ಕುರಿತ ಚಿತ್ರ ಬರಲಿ ಬರದೇ ಇರಲಿ, ಪಾಕಿಸ್ತಾನದ ಅಮಾನವೀಯ ಉಗ್ರರು ನಡೆಸಿದ ಆ ನರಮೇಧವನ್ನು ಜನರು ಇನ್ನೂ ಮರೆತಿಲ್ಲ. ಟಿವಿಗಳಲ್ಲಿ, ಪುಸ್ತಕಗಳಲ್ಲಿ ಅದರ ಕಥೆಯನ್ನು ಓದಿದ್ದ ಜನರಿಗೆ, ಆ ದುರ್ಘಟನೆಯ ನೈಜ ಚಿತ್ರಣವನ್ನು ನೀಡಲು ರಾಮ್ ಗೋಪಾಲ್ ವರ್ಮಾ ಭಾರೀ ಶ್ರಮಿಸಿದ್ದಾರೆ. ಅದರಲ್ಲಿ ಭಾಗಶಃ ಯಶಸ್ವಿಯೂ ಆಗಿದ್ದಾರೆ.

ಚಿತ್ರಕಥೆ ಹೇಗಿದೆ, ಕಮಿಷನರ್ ಪಾತ್ರದಲ್ಲಿ ನಾನಾ ಪಾಟೇಕರ್ ಮತ್ತು ಅಜ್ಮಲ್ ಕಸಬ್ ಪಾತ್ರದಲ್ಲಿ ಸಂಜೀವ್ ಜೈಸ್ವಾಲ್ ಹೇಗೆ ಅಭಿನಯಿಸಿದ್ದಾರೆ, ಚಿತ್ರ ನೈಜ ಕಥೆಯನ್ನು ತೆರೆದಿಡುತ್ತದಾ ಎಂಬುದನ್ನು ಮುಂದೆ ಓದಿರಿ.

ಉಗ್ರರ ಮುಂಬೈ ಪ್ರವೇಶದಿಂದ ಕಥೆ ಆರಂಭ

ಉಗ್ರರು ಎಲ್ಲಿ ಬೋಟನ್ನು ಹೈಜಾಕ್ ಮಾಡಿದರು, ಹೇಗೆ ಮುಂಬೈ ನಗರವನ್ನು ಪ್ರವೇಶಿಸಿದರು, ಪ್ಲಾನ್ ಯಾವ ರೀತಿ ರೂಪಿಸಿದ್ದರು, ಎಲ್ಲೆಲ್ಲಿ ದಾಳಿ ನಡೆಸಬೇಕೆಂದು ಸ್ಕೆಚ್ ಹಾಕಿದ್ದರು, ಎಲ್ಲೆಲ್ಲಿ ದಾಳಿ ನಡೆಸಿದರು, ಪೊಲೀಸರು ಮತ್ತು ಸೇನೆ ಯಾವ ರೀತಿ ಪ್ರತಿದಾಳಿ ನಡೆಸಿತು, ಅಜ್ಮಲ್ ಕಸಬ್ ಹೇಗೆ ಸಿಕ್ಕ ಎಂಬುದನ್ನು ಜಂಟಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ (ನಾನಾ ಪಾಟೇಕರ್) ಅವರು ಸಮಿತಿಯ ಮುಂದೆ ವಿವರಿಸುವ ದೃಶ್ಯದ ಮುಖಾಂತರ ಚಿತ್ರ ತೆರೆದುಕೊಳ್ಳುತ್ತದೆ.

ರಕ್ತದೋಕುಳಿಯ ಹಸಿಬಿಸಿ ನಿರೂಪಣೆ

ಚಿತ್ರಕಥೆ ಬರೆದಿರುವ ರಾಮ್ ಗೋಪಾಲ್ ವರ್ಮಾ ಉಗ್ರರು ನಡೆಸಿದ ದಾಳಿ, ಗುಂಡು ಬಾಂಬುಗಳ ಮೊರೆತ, ಅಮಾಯಕರ ರಕ್ತದೋಕುಳಿ, ಹೊತ್ತಿ ಉರಿದ ತಾಜ್ ಹೋಟೆಲ್ ದೃಶ್ಯವಾಳಿ, ಸೇನೆಯ ಪ್ರತಿದಾಳಿ, ಪೊಲೀಸರ ಸಾಹಸದ ಕಥಾನಕವನ್ನು ಹಸಿಬಿಸಿಯಾಗಿ ತೋರಿಸಿದ್ದಾರೆ. ಉಗ್ರರ ಹಿಂಸೆ ಚಿತ್ರದಲ್ಲಿ ವೈಭವೀಕರಣವಾಗಿದೆ ಎಂದು ಎಲ್ಲಿಯೂ ಅನಿಸದು. ನೋಡುತ್ತಿದ್ದಂತೆ ಮೈಯಲ್ಲಿ ರೋಮಗಳು ನಿಮಿರದೆ ಇರದು.

ಅಜ್ಮಲ್ ಪಡಿಯಚ್ಚಂತಿರುವ ಜೈಸ್ವಾಲ್ ಅಭಿನಯ

ಉಗ್ರರ ಪೈಕಿ ಸಿಕ್ಕ ಏಕೈಕ ವ್ಯಕ್ತಿ ಅಜ್ಮಲ್ ಕಸಬ್‌ನ ಪಡಿಯಚ್ಚಂತಿರುವ ಸಂಜೀವ್ ಜೈಸ್ವಾಲ್ ಅಭಿನಯ ಪಿಕ್ಚರ್ ಪರ್ಫೆಕ್ಟ್. ಅಜ್ಮಲ್‌ನಲ್ಲಿದ್ದ ಕ್ರೌರ್ಯತೆ, ನಿರ್ದಾಕ್ಷಿಣ್ಯತೆ, ಹೇಡಿತನವನ್ನು ಸಂಜೀವ್ ಜೈಸ್ವಾಲ್ ಅತ್ಯಂತ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ. ಅಜ್ಮಲ್ ಮಾತುಗಳಿಗಿಂತ ಆಂಗಿಕ ಅಭಿನಯವೇ ಪ್ರಧಾನವಾಗಿದೆ. ಇಂಥ ವ್ಯಕ್ತಿಯನ್ನು ಹುಡುಕಿದ ವರ್ಮಾಗೆ ಒಂದು ಶಭಾಸ್‌ಗಿರಿ ನೀಡಲೇಬೇಕು.

ನಾನಾ ಪಾಟೇಕರ್ ಪವರ್ ಪ್ಯಾಕ್ಡ್ ಆಕ್ಟಿಂಗ್

ಇಂಥ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುವ ನಾನಾ ಪಾಟೇಕರ್ ಅವರಿಗೆ ಜಂಟಿ ಪೊಲೀಸ್ ಕಮಿಷನರ್ ಪಾತ್ರ ಹೇಳಿ ಮಾಡಿಸಿದ್ದು. ಪಾತ್ರವನ್ನು ನಾನಾ ಆವಾಹಿಸಿಕೊಂಡಿದ್ದಾರೆ. ಅವರಿಲ್ಲದಿದ್ದರೆ ಇನ್ನಾರಿಂದಲೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರೇ ಅವರಾಗಿದ್ದಾರೆ.

ಉಳಿದವರಿಂದಲೂ ಪೂರಕ ಅಭಿನಯ

ಅತುಲ್ ಕುಲಕರ್ಣಿ, ಗಣೇಶ್ ಯಾದವ್ ಮತ್ತಿತರರು ಪಾತ್ರವನ್ನು ಸಮರ್ಥವಾಗಿ ಪೋಷಿಸಿದ್ದಾರೆ. ಎಲ್ಲರಿಂದಲೂ ಪೂರಕವಾದ ಅಭಿನಯ ತೆಗೆಯುವಲ್ಲಿ ರಾಮ್ ಗೋಪಾಲ್ ವರ್ಮಾ ಯಶಸ್ವಿಯಾಗಿದ್ದಾರೆ.

ಮೈನವಿರೇಳಿಸುವ ಹಿನ್ನೆಲೆ ಸಂಗೀತ

ತಾಂತ್ರಿಕವಾಗಿ ಸಿನೆಮಾ ಅದ್ಧೂರಿಯಾಗಿದೆ. ರೂಶಿನ್ ದಲಾಲ್ ಮತ್ತು ಅಮರ್ ಮೋಹಿಲೆ ಅವರ ಹಿನ್ನೆಲೆ ಸಂಗೀತ ಅತ್ಯಂತ ರಿಚ್ ಆಗಿದ್ದು, ಸಂದರ್ಭ ಮತ್ತು ಸನ್ನಿವೇಶಗಳಿಗೆ ತಕ್ಕಂತೆ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಗುಂಡುಗಳು ಮೊರೆಯುವಾಗ, ಅಮಾನುಷವಾಗಿ ಹತ್ಯಾಕಾಂಡ ನಡೆಯುವಾಗ ಹಿನ್ನೆಲೆ ಸಂಗೀತ ಚಿತ್ರದ ಓಘವನ್ನು ಕಾಪಾಡಿಕೊಂಡಿದೆ.

ಸಿನೆಮಾಟೋಗ್ರಫಿ ಮತ್ತೊಂದು ಹೈಲೈಟ್

ಹರ್ಷರಾಜ್ ಶ್ರಾಫ್ ಅವರ ಕ್ಯಾಮೆರಾ ಕೈಚಳಕ ಚಿತ್ರದ ಮತ್ತೊಂದು ಹೈಲೈಟ್ ಎಂದರೂ ತಪ್ಪಿಲ್ಲ. ಭೀಭತ್ಸ ಹತ್ಯಾಕಾಂಡವನ್ನು ಎಲ್ಲಿಯೂ ವೈಭವೀಕರಿಸದಂತೆ ಹಿಡಿದಿಟ್ಟಿರುವುದು ಶ್ರಾಫ್ ಅವರ ನೈಪುಣ್ಯತೆಗೆ ಸಾಕ್ಷಿ. ಉಗ್ರರು ನಡೆಸಿದ ಹತ್ಯಾಕಾಂಡ, ಅಮಾಯಕರ ಆಕ್ರಂದನದ ದೃಶ್ಯಗಳು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿವೆ.

ತಾಜ್ ಹೋಟೆಲಿನ ಸೆಟ್ಟಿಂಗ್

ಚಿತ್ರೀಕರಣಕ್ಕಾಗಿ ತಾಜ್ ಹೋಟೆಲನ್ನು ಬಳಸದೆ, ಅದರ ಪ್ರತಿರೂಪವನ್ನು 2.5 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ. ರಬ್ ನೆ ಬನಾದಿ ಜೋಡಿ ಚಿತ್ರಕ್ಕೆ ಅತ್ಯದ್ಭುತ ಸೆಟ್ ನಿರ್ಮಿಸಿದ್ದ ಉದಯ್ ಪ್ರಕಾಶ್ ಸಿಂಗ್ ಅವರು The Attacks of 26/11 ಚಿತ್ರಕ್ಕೂ ಕಲಾ ನಿರ್ದೇಶಕರಾಗಿದ್ದಾರೆ.

ರಾಮ್ ಪ್ರಯತ್ನ ಈ ಬಾರಿ ವಿಫಲವಾಗಿಲ್ಲ

ಮುಂಬೈ ದಾಳಿಯಂಥ ಕಥೆಯನ್ನು ತೆರೆಯ ಮೇಲೆ ಸಮರ್ಥವಾಗಿ ತರುವುದು ಸುಲಭವಲ್ಲ. ಇಂಥದೊಂಡು ಡೇರಿಂಗ್ ಕಾರ್ಯಕ್ಕೆ ಕೈಹಾಕಿದ ರಾಮ್ ಗೋಪಾಲ್ ವರ್ಮಾ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಕಥೆಯನ್ನು ಇದ್ದಹಾಗೆ ಹೇಳಲು ಕೊಂಚ ಎಡವಿದ್ದಾರಾದರೂ ಒಟ್ಟಾರೆಯಾಗಿ ಸಾರ್ಥಕ ಭಾವನೆ ಮೂಡೂವಂತೆ ಮಾಡುತ್ತದೆ.

ತೆರೆಯ ಹಿಂದೆ ಮತ್ತು ಮುಂದೆ ಯಾರ್ಯಾರಿದ್ದಾರೆ?

ನಿರ್ಮಾಣ : ಪರಾಗ್ ಸಾಂಘ್ವಿ
ನಿರ್ದೇಶನ : ರಾಮ್ ಗೋಪಾಲ್ ವರ್ಮಾ
ತೆರೆಯ ಮೇಲೆ : ನಾನಾ ಪಾಟೇಕರ್, ಸಂಜೀವ್ ಜೈಸ್ವಾಲ್, ಅತುಲ್ ಕುಲಕರ್ಣಿ ಮುಂತಾದವರು
ಸಂಗೀತ ನಿರ್ದೇಶನ : ರೂಶಿನ್ ದಲಾಲ್ ಮತ್ತು ಅಮರ್ ಮೋಹಿಲೆ

English summary
The Attacks of 26/11 Movie Review. Ram Gopal Varma, who has repeatedly tortured the audience with films like Department, Aag and Bhoot Returns, has bounced back with a big bang. Varma re-tells the bloodbath, torrential shower of bullets and bombs that rained down on Mumbai on Nov 26, 2008, through his latest flick.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada