»   » ವಿಮರ್ಶೆ : ಮನ ಮಿಡಿಯುವ ವಿಡಿಯುಮ್ ಮುನ್ ಚಿತ್ರ

ವಿಮರ್ಶೆ : ಮನ ಮಿಡಿಯುವ ವಿಡಿಯುಮ್ ಮುನ್ ಚಿತ್ರ

By: ಸಂಪಿಗೆ ಶ್ರೀನಿವಾಸ, ಬೆಂಗಳೂರು
Subscribe to Filmibeat Kannada

ವಿಡಿಯುಮ್ ಮುನ್ ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಬಂದಿರುವ ಒಂದು ಅತ್ಯುತ್ತಮ ರೋಮಾಂಚಕ ಹಾಗೂ ಕುತೂಹಲಭರಿತ ಚಿತ್ರ. ಈ ಚಿತ್ರವನ್ನು ನೋಡುತ್ತಿರುವಾಗ ನಮಗೆ ಆಂಗ್ಲ ಭಾಷೆಯ ಚಿತ್ರ ನೋಡಿದ ಅನುಭವವಾಗುತ್ತದೆ.

ಇದಕ್ಕೆ ಕಾರಣ ಈ ಚಿತ್ರದ ನಿರ್ದೇಶಕರಾದ ಬಾಲಾಜಿ ಕೆ. ಕುಮಾರ್. ಇವರು ಹಾಲಿವುಡ್ ನಲ್ಲಿ ಒಂದು ಆಂಗ್ಲ ಚಿತ್ರವನ್ನು ನಿರ್ದೇಶಿಸಿರುವ ಜೊತೆಗೆ ಅಲ್ಲಿನ ತಾಂತ್ರಿಕತೆಯನ್ನು ಉತ್ತಮವಾಗಿ ಕರಗತ ಮಾಡಿಕೊಂಡಿದ್ದಾರೆ ಎಂಬುದು ಅವರ ವಿಡಿಯುಮ್ ಮುನ್ ಚಿತ್ರದ ನಿರ್ಮಾಣದಲ್ಲಿನ ತಾಂತ್ರಿಕತೆ ಹಾಗೂ ಕಥೆ ಹೇಳುವ ಶೈಲಿ ನೋಡಿದರೆ ತಿಳಿಯುತ್ತದೆ.

ಈ ಚಿತ್ರದಲ್ಲಿ ಬರುವ ಕೆಲವೇ ಕೆಲವು ಪಾತ್ರಗಳು ಹಾಗೂ ಆ ಪಾತ್ರಗಳಿಗೆ ಜೀವ ತುಂಬಿರುವ ಕಲಾವಿದರ ನಟನೆಯೇ ಈ ಚಿತ್ರದ ಜೀವಾಳ.

ಈ ಕೆಲವು ಪಾತ್ರಗಳನ್ನು ಒಂದಕ್ಕೊಂದು ಸಮೀಕರಿಸಿ ಚಿತ್ರವನ್ನು ಪರಿಣಾಮಕಾರಿಯಾಗಿ ಹೆಣೆದಿರುವ ನಿರ್ದೇಶಕರ ಕೌಶಲ್ಯ ಮೆಚ್ಚುವಂತದ್ದು. ಅವರಿಗೆ ಅತ್ಯುತ್ತಮವಾಗಿ ಸಾಥ್ ನೀಡಿರುವುದು ಛಾಯಾಗ್ರಾಹಕರಾದ ಶಿವಕುಮಾರ್ ವಿಜಯನ್ ಅವರ ನೆರಳು ಬೆಳಕಿನ ಪರಿಣಾಮಕಾರಿ ಚಿತ್ರೀಕರಣ ಜೊತೆಗೆ ಗಿರೀಶ್ ಗೋಪಾಲಕೃಷ್ಣನ್ ಅವರ ಅತ್ಯುತ್ತಮ ಹಿನ್ನೆಲೆ ಸಂಗೀತ.

ಈ ಚಿತ್ರದ ಮುಖ್ಯ ಅಂಶವೆಂದರೆ ಇದು ಮಹಿಳಾ ಪ್ರಧಾನ ಕಥಾವಸ್ತು ಹೊಂದಿರುವುದು ಹಾಗೂ ಪ್ರಸಿದ್ದ ನಟರ ಹಂಗಿಲ್ಲದೆ ಪ್ರತಿಭಾವಂತ ಕಲಾವಿದರನ್ನು ಬಳಸಿಕೊಂಡಿರುವುದು. ರೇಖಾ ಎಂಬ ಒಬ್ಬ ವೇಶ್ಯೆ ಹನ್ನೆರಡರ ಹರೆಯದ ಹುಡುಗಿಯನ್ನು ತಲೆ ಹಿಡುಕನಿಗೆ ಒಪ್ಪಿಸುವ ತಪ್ಪು ಮಾಡುತ್ತಾಳೆ. ಮುಂದೇನಾಗುತ್ತದೆ ಓದಿ...

ರೋಮಾಂಚಕ ತಿರುವುಗಳು

ನಂತರ ಆ ತಪ್ಪಿನ ಅರಿವಾಗಿ ಆ ಹುಡುಗಿಯನ್ನು ಆ ಕ್ರೂರ ಜನರಿಂದ ರಕ್ಷಿಸುವ, ಒಂದು ದಿನದಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಸ್ಥೂಲ ಕಥಾಹಂದರ. ಈ ಚಿತ್ರದ ಕೊನೆಯಲ್ಲಿನ ಕುತೂಹಲ ಭರಿತ ಹಾಗೂ ರೋಮಾಂಚಕ ತಿರುವು ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರುವಂತೆ ಮಾಡುತ್ತದೆ.

ವಿಭಿನ್ನ ಪಾತ್ರದಲ್ಲಿ ಪೂಜಾ

ನಾನ್ ಕಡವುಳ್ ಚಿತ್ರದಲ್ಲಿನ ಅಂಧ ಭಿಕ್ಷುಕಿಯಾಗಿ ಎಲ್ಲರ ಮನಗೆದ್ದಿದ್ದ ಪ್ರತಿಭಾವಂತ ನಟಿ ಪೂಜಾ ಉಮಾಶಂಕರ್ ನಾಲ್ಕು ವರ್ಷಗಳ ಬಿಡುವಿನ ಬಳಿಕ ಒಂದು ಅತ್ಯುತ್ತಮ ಪಾತ್ರ (ರೇಖಾ) ಮಾಡಿದ್ದಾರೆ. ಒಂದು ಹೆಣ್ಣಿನ ಅಸಹಾಯಕತೆ, ಭೀತಿ, ತನ್ನ ತಪ್ಪಿನಿಂದ ಒಂದು ಮುಗ್ಧ ಹುಡುಗಿಯನ್ನು ಕ್ರೌರ್ಯಕ್ಕೆ ತಳ್ಳಿದ ತಳಮಳ, ಆ ತಪ್ಪನ್ನು ಸರಿಪಡಿಸುವ ಧೈರ್ಯ ಹಾಗೂ ದೃಡತೆಯನ್ನು ಪೂಜಾ ನೈಜವಾಗಿ ಅಭಿನಯಿಸಿದ್ದಾರೆ.

ಕನ್ನಡತಿ ಪೂಜಾ

ಪೂಜಾ ನಟನೆಯಲ್ಲಿ ಮಾಗಿರುವುದು ಅವರು ಮುಖದಲ್ಲಿ ವ್ಯಕ್ತಪಡಿಸಿರುವ ಭಾವನೆಗಳು ಹಾಗೂ ದ್ವನಿಯಲ್ಲಿನ ಏರಿಳಿತ ನೋಡಿದಾಗ ತಿಳಿಯುತ್ತದೆ. ಇಂಥ ಪ್ರತಿಭಾವಂತ ನಟಿ ಕನ್ನಡತಿ ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ.

ಇತರೆ ಪಾತ್ರವರ್ಗ

ಇನ್ನು ಚಿಕ್ಕ ಹುಡುಗಿ ನಂದಿನಿಯ ಪಾತ್ರವನ್ನು ಮಾಡಿರುವ ಮಾಳವಿಕಾಳ ನಟನೆಯನ್ನು ನೋಡಿದಾಗ, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ನೆನಪಾಗುತ್ತದೆ. ಕಣ್ಣಿನಲ್ಲೇ ಕ್ರೌರ್ಯವನ್ನು, ಭೀತಿಯನ್ನು ಸೂಸುವ ಖಳನ ಪಾತ್ರದಲ್ಲಿ ವಿನೋದ್ ಕಿಶನ್ ಯಶಸ್ವಿಯಾಗಿದ್ದಾರೆ. ಅವರಿಗೆ ಸರಿಸಾಟಿಯಾಗಿ ಜಾನ್ ವಿಜಯ್ ಹಾಗೂ ಅಮರೇಂದ್ರನ್ ಖಳರಾಗಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಉತ್ತಮ ನಿರ್ದೇಶನ

ಒಟ್ಟಿನಲ್ಲಿ ನಿರ್ದೇಶಕರು ಹೆಣ್ಣು ಮಕ್ಕಳ ಲೈಂಗಿಕ ಶೋಷಣೆಯ ಸಾಮಾಜಿಕ ಪಿಡುಗನ್ನು, ಅಶ್ಲೀಲತೆಯನ್ನು ಎಲ್ಲೂ ವೈಭವೀಕರಿಸದೇ, ರೋಮಂಚಕತೆಯನ್ನಷ್ಟೇ ತೆರೆಯ ಮೇಲೆ ಬಿಡಿಸಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಸಂದೇಶವನ್ನು ನೆರವಾಗಿ ಹೇಳದೆ, ಪ್ರೇಕ್ಷಕರಿಗೆ ಈ ಪಿಡುಗಿನ ಬಗ್ಗೆ ಚಿಂತಿಸಲು ಬಿಟ್ಟಿರುವುದು ಅವರ ವಿಭಿನ್ನತೆಯನ್ನು ತೋರಿಸುತ್ತದೆ.

English summary
The latest flick on this subject Vidiyum Munn stands quite different by not following the traditional way as it avoids cliches. Newbie Balaji K Kumar presents a well-written suspense thriller that engages its viewers from the word go. Kannada lass Pooja Umashankar makes good comeback to Kollywood
Please Wait while comments are loading...