twitter
    For Quick Alerts
    ALLOW NOTIFICATIONS  
    For Daily Alerts

    'ಜೈ ಭೀಮ್' ಸಿನಿಮಾ: ವಿವಾದಿತ ದೃಶ್ಯದ ಬಗ್ಗೆ ಪ್ರಕಾಶ್ ರೈ ಪ್ರತಿಕ್ರಿಯೆ

    |

    ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಜೈ ಭೀಮ್' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು ಸಿನಿಮಾದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

    ಸಿನಿಮಾವು ಥುಳಿತಕ್ಕೊಳಗಾದವರ ಬಗ್ಗೆ ಚರ್ಚೆ ಮಾಡುತ್ತಿದ್ದು, ಕೆಲವು ವರ್ಗದ ಜನರಿಗೆ ಇದು ಸಹಿಸಲಾಗಿಲ್ಲ. ಅದರ ಜೊತೆಗೆ ಸಿನಿಮಾದಲ್ಲಿನ ಒಂದು ದೃಶ್ಯದ ಬಗ್ಗೆಯಂತೂ ಬಹುವಾಗಿ ಚರ್ಚೆಯಾಗುತ್ತಿದೆ.

    ಸಿನಿಮಾದಲ್ಲಿ ಐಜಿ ಪೆರುಮಾಳ್‌ಸ್ವಾಮಿ ಪಾತ್ರದಲ್ಲಿ ನಟಿಸಿರುವ ನಟ ಪ್ರಕಾಶ್ ರೈ, ಪ್ರಕರಣವೊಂದರ ತನಿಖೆ ನಡೆಸುತ್ತಾ ಹಿಂದಿ ಮಾತನಾಡುವ ವ್ಯಕ್ತಿಯೊಬ್ಬನ ಕಪಾಳಕ್ಕೆ ಹೊಡೆದು ತಮಿಳಿನಲ್ಲಿ ಮಾತನಾಡುವಂತೆ ಹೇಳುತ್ತಾರೆ. ಈ ದೃಶ್ಯದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಲವರು ಸಮರ್ಥಿಸಿಕೊಂಡಿದ್ದಾರೆ ಸಹ. ಇದೀಗ ಆ ದೃಶ್ಯದ ಬಗ್ಗೆ ಸ್ವತಃ ನಟ ಪ್ರಕಾಶ್ ರೈ ಮಾತನಾಡಿದ್ದಾರೆ.

    Prakash Raj Reaction About Jai Bhim Movie Slapping Scene

    ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ನಟ ಪ್ರಕಶ್ ರೈ, ''ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಗೆ ಗೊತ್ತಿದೆ ಆ ವಕ್ತಿ ತಮಿಳು ಮಾತನಾಡಬಲ್ಲ ಎಂಬುದು. ಆದರೆ ಆತ ತನಿಖೆಯ ದಿಕ್ಕು ತಪ್ಪಿಸಲು ಹಿಂದಿ ಭಾಷೆ ಮಾತನಾಡಲು ಯತ್ನಿಸುತ್ತಾನೆ. ಆ ಸಮಯದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಹಾಗೆಯೇ ವರ್ತಿಸುತ್ತಾನೆ, ಅದನ್ನು ಸಿನಿಮಾದಲ್ಲಿ ತೋರಿಸಲಾಗಿದೆ'' ಎಂದಿದ್ದಾರೆ.

    ''ಆ ಸಿನಿಮಾ 1990 ರ ದಶಕದ ಕತೆಯನ್ನು ಹೊಂದಿದೆ. ಆ ಸಂದರ್ಭದಲ್ಲಿ ಆ ಪಾತ್ರವು ಪೊಲೀಸ್ ಅಧಿಕಾರಿ ಮೇಲೆ ಹಿಂದಿ ಹೇರಿಕೆ ಮಾಡಲು ಯತ್ನಿಸಿದ್ದರೆ ಪೊಲೀಸ್ ಅಧಿಕಾರಿ ಹಾಗೆಯೇ ವರ್ತಿಸುತ್ತಿದ್ದ, ನನ್ನ ಯೋಚನಾಲಹರಿ ಸಹ ಹಾಗೆಯೇ ಇದೆ'' ಎಂದಿದ್ದಾರೆ ಪ್ರಕಾಶ್ ರೈ.

    ''ಜೈ ಭೀಮ್'ನಂಥಹಾ ಸಿನಿಮಾ ನೋಡಿದ ಮೇಲೆ ಅವರಿಗೆ ದಲಿತರ ಸಂಘರ್ಷ, ಅವರು ಎದುರಿಸುತ್ತಿರುವ ಕಷ್ಟ ಕಾಣಲಿಲ್ಲ. ಅವರಿಗೆ ಕೇವಲ ಆ ಕಪಾಳಕ್ಕೆ ಹೊಡೆದ ದೃಶ್ಯವಷ್ಟೆ ಕಂಡಿದೆ. ಇದು ಅವರ ಮನಸ್ಥಿತಿಯನ್ನು ಸೂಚಿಸುತ್ತಿದೆ. ಕೆಲವು ವಿಷಯಗಳನ್ನು ಸಿನಿಮಾದಲ್ಲಿ ದಾಖಲಿಸಬೇಕು ಎಂದು ನಿರ್ದೇಶಕರು ನಿರ್ಧರಿಸಿದ್ದರು, ದಕ್ಷಿಣದವರ ಮೇಲೆ ಹಿಂದಿ ಹೇರಿಕೆ ವಿರುದ್ಧ ಅವರಿಗಿರುವ ಆಕ್ರೋಶವನ್ನು ದಾಖಲಿಸುವ ಸಲುವಾಗಿ ಕಪಾಳಕ್ಕೆ ಹೊಡೆಯುವ ದೃಶ್ಯ ಇರಿಸಲಾಗಿದೆ'' ಎಂದಿದ್ದಾರೆ.

    ''ಕೆಲವರಿಗಂತೂ, ಆ ಕಪಾಳಕ್ಕೆ ಹೊಡೆಯುವ ದೃಶ್ಯದಲ್ಲಿ ಪ್ರಕಾಶ್ ರೈ ಇದ್ದಾನೆ ಎಂಬುದೇ ಆ ದೃಶ್ಯವನ್ನು, ಸಿನಿಮಾವನ್ನು ವಿರೋಧಿಸಲಿಕ್ಕೆ ಕಾರಣವಾಗಿದೆ. ಕೆಲವರು ಈಗ ಬೌದ್ಧಿಕವಾಗಿ ಬೆತ್ತಲಾಗಿ ನನ್ನ ವಿರುದ್ಧ ಮುಗಿಬಿದಿದ್ದಾರೆ. ಈ ಚರ್ಚೆಯ ಮೂಲಕ ವಿರೋಧಿಗಳ ಉದ್ದೇಶ ಬಹಿರಂಗವಾಗಿದೆ'' ಎಂದಿದ್ದಾರೆ ಪ್ರಕಾಶ್ ರೈ.

    ''ಆದಿವಾಸಿ ಜನಗಳ ಕಷ್ಟದ, ನೋವಿನ ಜೀವನ ಅವರನ್ನು ಚಿಂತೆಗೀಡು ಮಾಡಲಿಲ್ಲ, ಅವರ ಕಷ್ಟ ಕಂಡು ಅಯ್ಯೋ ಎನ್ನಲಿಲ್ಲ. ಈ ಹಿಂದಿ ವಿಷಯದ ಬಗ್ಗೆ ಆಸಕ್ತಿವಹಿಸಿದ್ದಾರೆ. ಇಂಥಹಾ ಏಕಪಕ್ಷೀಯವಾದ ಆಸಕ್ತಿಗಳಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ನಾನು ತಡವಾಗಿ ಹಿಂದಿ ಚಿತ್ರಗಳಲ್ಲಿ ನಟಿಸಲು ಆರಂಭಿಸಿದೆ. ನಾನು ಸಹ ಸಣ್ಣ ಮಟ್ಟಿನ ಸೇವೆಯನ್ನು ಹಿಂದಿ ಚಿತ್ರರಂಗಕ್ಕೆ ನೀಡಿದ್ದೇನೆ. ಇಲ್ಲಿ ವಿಷಯವ ಇರುವುದು ಅನ್ಯಾಯಕ್ಕೆ ಒಳಗಾದವರ ಬಗ್ಗೆ, ನಾವು ನ್ಯಾಯಯುತವಾಗಿ ಇದ್ದರೆ ಸಾಕಷ್ಟೆ'' ಎಂದಿದ್ದಾರೆ.

    ಸಿನಿಮಾದಲ್ಲಿ ಪ್ರಕಾಶ್ ರೈ ಎದುರು ವ್ಯಕ್ತಿಯೊಬ್ಬ (ಉತ್ತರ ಭಾರತ ಮೂಲದ ಚಿನ್ನದ ವ್ಯಾಪಾರಿ) ಹಿಂದಿಯಲ್ಲಿ ಮಾತನಾಡುತ್ತಾನೆ, ಅವನ ಕಪಾಳಕ್ಕೆ ಹೊಡೆವ ಪ್ರಕಾಶ್ ರೈ ತಮಿಳಿನಲ್ಲಿ ಮಾತನಾಡು ಎನ್ನುತ್ತಾನೆ. ಆ ನಂತರ ಆ ವ್ಯಕ್ತಿ ತಮಿಳಿನಲ್ಲಿ ಮಾತನಾಡಲು ಆರಂಭಿಸುತ್ತಾನೆ. 'ಜೈ ಭೀಮ್' ಸಿನಿಮಾವು ತಮಿಳು, ತೆಲುಗು, ಕನ್ನಡ, ಹಿಂದಿ ಭಾಷೆಯಲ್ಲಿಯೂ ಬಿಡುಗಡೆ ಆಗಿದ್ದು, ಹಿಂದಿಯಲ್ಲಿ ಹೊರತಾಗಿ ಇನ್ನೆಲ್ಲ ಭಾಷೆಯಲ್ಲಿಯೂ ಇದೇ ರೀತಿಯ ಸಂಭಾಷಣೆ ಇದೆ. ಆದರೆ ಹಿಂದಿಯಲ್ಲಿ ಮಾತ್ರ, ಕಪಾಳಕ್ಕೆ ಹೊಡೆದು ''ಈಗ ಸತ್ಯ ಹೇಳು'' ಎಂದಿದೆ.

    ಈ ದೃಶ್ಯದ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಹಲವರು ''ಪ್ರಕಾಶ್ ರೈ ಸಿನಿಮಾಗಳ ಮೂಲಕ ಪ್ರೊಪಾಗಾಂಡಾ ಭಿತ್ತಲು ಹೊರಟಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡಿಗರೇ ಕೆಲವರು ಈ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವ ಭಾಷೆ ಮಾತನಾಡಬೇಕು ಎಂಬುದು ವ್ಯಕ್ತಿಯ ಆಯ್ಕೆ ಹಿಂದಿ ಮಾತನಾಡಿದ ಎಂದು ಕಪಾಳಕ್ಕೆ ಹೊಡೆದಿರುವುದು ಸರಿಯಾದ ಭಾಷಾ ಪ್ರೇಮದ ಸರಿಯಾದ ಅಭಿವ್ಯಕ್ತಿ ಅಲ್ಲ ಎಂದಿದ್ದಾರೆ.

    ''ಪ್ರಕಾಶ್ ರೈ ಕಪಾಳಕ್ಕೆ ಹೊಡೆವ ದೃಶ್ಯವನ್ನು ಹಲವಾರು ಮಂದಿ ಸರಿಯೆಂದು ಸಹ ವಾದಿಸಿದ್ದು, 'ವರ್ಷಾನುಗಟ್ಟಲೆಗಳಿಂದ ಹಿಂದಿಯವರು ದಕ್ಷಿಣ ಭಾರತದವರನ್ನು ಜೋಕರ್‌ಗಳಂತೆ ತಮ್ಮ ಸಿನಿಮಾಗಳಲ್ಲಿ ಪ್ರದರ್ಶಿಸಿದ್ದಾರೆ, ಮದ್ರಾಸಿಗಳೆಂದು, ಚೆನ್ನೈವಾಲಾಗಳೆಂದು ಹಾಸ್ಯದ ಸರಕಾಗಿ ಬಳಸಿದ್ದಾರೆ. ಆಗೆಲ್ಲ ಇಲ್ಲದ 'ಭಾಷಾ ಸೂಕ್ಷ್ಮತೆ' ಈಗ ಒಂದು ದೃಶ್ಯಕ್ಕೆ ಪ್ರದರ್ಶಿಸುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

    English summary
    Actor Prakash Raj talks about Jai Bhim movie slapping scene. He said they did not seen the agony of Tribe people they moved by that one slapping scene.
    Sunday, November 7, 2021, 11:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X