ಪವನ್ ಕಲ್ಯಾಣ್ ಎವರ್ ಗ್ರೀನ್ ಹಿಟ್ 'ಖುಷಿ' ಮರು ಬಿಡುಗಡೆಗೆ ಮುಹೂರ್ತ ಫಿಕ್ಸ್

ತೆಲುಗು ಚಿತ್ರರಂಗದಲ್ಲಿ ರಿ ರಿಲೀಸ್ ಟ್ರೆಂಡ್ ಈ ವರ್ಷ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತು. ಮಹೇಶ್ ಬಾಬು ನಟನೆಯ ಪೊಕಿರಿ 4K ಪ್ರಿಂಟ್ ಮೂಲಕ ದೊಡ್ಡ ಮಟ್ಟದಲ್ಲಿ ಶುರುವಾದ ಮರು ಬಿಡುಗಡೆ ಅಭಿಯಾನ ನಂತರ ಜಲ್ಸಾ ಮೂಲಕ ಪೈಪೋಟಿಯ ರೂಪ ಪಡೆದುಕೊಂಡಿತು. ಪೊಕಿರಿ ಮರು ಬಿಡುಗಡೆಯಾದಾಗ ಆದ ಕಲೆಕ್ಷನ್ ಅನ್ನು ಪವನ್ ಕಲ್ಯಾಣ್ ನಟನೆಯ ಜಲ್ಸಾ ಹೊಡೆದುರುಳಿಸಿತು.
ಹೀಗೆ ಮರು ಬಿಡುಗಡೆಯ ಗಳಿಕೆಯಲ್ಲೂ ಬಾಕ್ಸ್ ಆಫೀಸ್ ಲೆಕ್ಕಾಚಾರ ಶುರುವಾದ ಬಳಿಕ ಹಲವು ವಿಂಟೇಜ್ ತೆಲುಗು ಚಿತ್ರಗಳು ಮತ್ತೆ ತೆರೆಗೆ ಅಪ್ಪಳಿಸಿದವು. ಪವನ್ ಕಲ್ಯಾಣ್ ನಟನೆಯ ತಮ್ಮುಡು, ನಂದಮೂರಿ ಬಾಲಕೃಷ್ಣ ನಟನೆಯ ಚನ್ನಕೇಶವ ರೆಡ್ಡಿ, ಚಿರಂಜೀವಿ ನಡನೆಯ ಘರನ ಮೊಗುಡು, ಪ್ರಭಾಸ್ ನಟನೆಯ ಬಿಲ್ಲಾ ಹಾಗೂ ರೆಬೆಲ್ ಚಿತ್ರಗಳು ಸಹ ಮರುಬಿಡುಗಡೆ ಆದವು.
ಯಾವಾಗ ಮರು ಬಿಡುಗಡೆಯಲ್ಲೂ ಸಹ ಕೋಟಿ ಗಳಿಕೆ ಆರಂಭವಾಯಿತೋ ನಿರ್ಮಾಪಕರೂ ಸಹ ಹಿಟ್ ಚಿತ್ರಗಳ 4K ಬಿಡುಗಡೆ ಮಾಡುವತ್ತ ಹೆಚ್ಚು ಆಸಕ್ತಿ ತೋರಿದರು. ಈ ಪೈಕಿ ಪವನ್ ಕಲ್ಯಾಣ್ ನಟನೆಯ ಖುಷಿ ಕೂಡ ಒಂದು. 2001ರಲ್ಲಿ ತೆರೆಕಂಡಿದ್ದ ಈ ಚಿತ್ರ ಆಗಿನ ಕಾಲಕ್ಕೆ ಬರೋಬ್ಬರಿ 27 ಕೋಟಿ ಗಳಿಸಿ ಸಂಚಲನ ಸೃಷ್ಟಿಸಿತ್ತು ಹಾಗೂ ತೆಲುಗು ಸಿನಿ ಪ್ರೇಕ್ಷಕರ ಪಾಲಿನ ಆಲ್ ಟೈಮ್ ಫೇವರಿಟ್ ಸಿನಿಮಾ ಆಗಿತ್ತು.
ಈ ಚಿತ್ರವನ್ನು ಮರುಬಿಡುಗಡೆ ಮಾಡಿ ಎಂದು ಅಭಿಮಾನಿಗಳೂ ಸಹ ಭಾರೀ ಬೇಡಿಕೆ ಇಟ್ಟಿದ್ದರು. ಈ ಹಿಂದೆಯೇ ಚಿತ್ರ 4K ವರ್ಷನ್ ಬರಲಿದೆ ಎಂದು ಘೋಷಿಸಿದ್ದ ನಿರ್ಮಾಪಕರು ಇದೀಗ ಚಿತ್ರದ ಬಿಡುಗಡೆಯ ದಿನಾಂಕವನ್ನು ಸಹ ಘೋಷಿಸಿದೆ. ಡಿಸೆಂಬರ್ 31ರಂದು ಖುಷಿ ಮರುಬಿಡುಗಡೆಯಾಗಲಿದೆ..


Click it and Unblock the Notifications











