For Quick Alerts
ALLOW NOTIFICATIONS  
For Daily Alerts

ಕಳಸದ ಕಲಾವಿದ ರಾಜಗೋಪಾಲ್ ಪ್ರೀತಿಯಿಂದ

By * ಚಿನ್ಮಯ.ಎಂ.ರಾವ್, ಹೊನಗೋಡು
|

ಸರಿ ಸುಮಾರು 23 ವರ್ಷಗಳ ಹಿಂದೆ ನಡೆದ ಘಟನೆ ಇದು. ಚಿಕ್ಕಮಗಳೂರು ಜಿಲ್ಲೆಯ ಕಳಸ ಎಂಬ ಊರು.ಆ ಊರಿನ ಗೆಳೆಯರೆಲ್ಲಾ ಸೇರಿ ಆ ವರ್ಷದ ದುರ್ಗಾ ಪೆಂಡಾಲ್‌ನಲ್ಲಿ ನಡೆಯುವ ನಾಟಕದಲ್ಲಿ ನೀವು ಅಭಿನಯಿಸಲೇಬೇಕೆಂದು ಇವರನ್ನು ದುಂಬಾಲು ಬಿದ್ದರು. ಸರಿ..ಒತ್ತಡಕ್ಕೆ ಮಣಿದ ಇವರು ದ್ವಂದ್ವಾರ್ಥದ ಪದಗಳನ್ನೆಲ್ಲಾ ಕಿತ್ತು ಹಾಕಿ ಸಂಭಾಷಣೆಯನ್ನು ಸುಂದರಗೊಳಿಸಿ ತಾವೇ ನಿರ್ದೇಶನ ಮಾಡಿ ಅಭಿನಯಿಸಿದರು. ಪ್ರದರ್ಶನ ಯಶಸ್ವಿಯೂ ಆಯಿತು.

ಅಂದು ಇವರನ್ನು ಕೈಹಿಡಿದು ರಂಗಭೂಮಿಗೆ ಕರೆತಂದ ಕಲಾದೇವಿ ಇಂದಿಗೂ ಕೈ ಬಿಡಲಿಲ್ಲ.ಅಂದು ಅಭಿನಂದನೆಯ ಸುರಿಮಳೆಯಾಯಿತೆಂದು ಇಂದಿಗೂ ಇವರು ನೆನೆಯುತ್ತಾರೆ. ಇಂದಿನ ಈ ಅಭಿನಯಕ್ಕೆ ಅಂದಿನ ಆಕಸ್ಮಿಕ ರಂಗಪ್ರವೇಶವೇ ಅಡಿಪಾಯ. ಅಂದು ಇಂದು ಮುಂದೆಂದಿನ ಅಭಿನಯಕ್ಕೆ ಅನ್ನಪೂರ್ಣೆ, ತಾಯಿ ಹಾಗು ಸದ್ಗುರುವಿನ ಅನುಗ್ರಹವೇ ಕಾರಣ ಎನ್ನುವ ಅವರ ಪ್ರತಿಯೊಂದು ಮಾತಿನಲ್ಲೂ...ಕೇವಲ ಮಾತಿನಲ್ಲಿ ಮಾತ್ರವಲ್ಲ ಆತ್ಮಪೂರ್ವಕವಾಗಿ ಅಂತರಾಳದಿಂದ ಸಹಜ ಆಧ್ಯಾತ್ಮಿಕತೆಯ ಭಾವದ ಕಿರಣವೊಂದು ನಮ್ಮೆಡೆ ಇಣುಕುತ್ತದೆ. ತೆರೆಯ ಮೇಲೂ ಕೂಡ ಇವರಿಗೆ ಅಂತದೇ ಅಂತಃಕರಣವಿರುವ ವ್ಯಕ್ತಿಯ ಪಾತ್ರ ಸಿಗುತ್ತಿದೆ ಎಂಬುದೇ ಆಶ್ಚರ್ಯ.

ಜವಾಬ್ದಾರಿಯುತ ತಂದೆಯ ಪಾತ್ರಗಳನ್ನು ಮಾಡಿ ಸಮಾಜದಲ್ಲಿ ಮಾದರಿ ತಂದೆಯಾಗುತ್ತಿದ್ದಾರೆ. ಅಭಿನಯದಲ್ಲಿ ಮುಂದೆ ಮುಂದೆ ಸಾಗುತ್ತಾ ನಟನೆಯಲ್ಲೂ ಮಾದರಿಯಾಗುತ್ತಿದ್ದಾರೆ. ಕಲೆಯಲ್ಲಿ ಹೊಂದಬಹುದಾದ ಆನಂದ ಆತ್ಮತೃಪ್ತಿ ಹಣದಲ್ಲಿ ಸಿಗುವುದಿಲ್ಲ ಎಂಬ ಸತ್ಯವನ್ನರಿತು ಹುಟ್ಟು ಶ್ರೀಮಂತಿಕೆಯನ್ನು ಬಿಟ್ಟು ಕಲಾಜೀವನದತ್ತ ಮುಖಮಾಡಿ ಕಲಾವಿದರಾಗಿದ್ದಾರೆ. ಇವರು ಯಾರು ಬಲ್ಲಿರೇನು?

ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಪ್ರೀತಿಯಿಂದ" ಧಾರವಾಹಿಯಲ್ಲಿ ನೀಲ-ಪಚ್ಚೆ ಎಂಬ ಹೆಣ್ಣುಮಕ್ಕಳನ್ನು ತನ್ನೆರಡು ಕಣ್ಣುಗಳಂತೆ ಕಾಪಾಡುತ್ತಿರುವ ಅಪ್ಪಯ್ಯ-ಮಾವಯ್ಯ ಕೃಷ್ಣಪ್ರಸಾದ್...ಕಳಸದ ಜಿ.ರಾಜಗೋಪಾಲ್ ಜೋಶಿ.

ಹದಿನೈದು ವರುಷಗಳ ಹಿಂದೆ ಐ.ಟಿ.ಐ ಆನಂದ್ ನಿರ್ದೇಶನದ ನಾಲ್ಕು ಟೆಲಿಚಿತ್ರಗಳಲ್ಲಿ ಅಭಿನಯಿಸಿದ್ದೇ ಮೊದಲ ಅನುಭವ.ನಂತರ ಹಿಂದಿರುಗಿ ನೋಡದ ಇವರು ಕಲಾಪ್ರಪಂಚದ ಆಜೀವ ಸದಸ್ಯತ್ವ ಪಡೆದೇ ಬಿಟ್ಟರು. ನಟನೆ ಜೀವನದ ಅವಿಭಾಜ್ಯ ಅಂಗವಾಯಿತು.

ಆದರ್ಶವ್ಯಕ್ತಿ ಪಾತ್ರಗಳು: ಇನ್ನು ಇಂತಹ ಸಜ್ಜನ ಸರಳ ವ್ಯಕ್ತಿಗಳನ್ನೇ ಹುಡುಕುವ ನಿರ್ದೇಶಕ ಅಶೋಕ್ ಕಶ್ಯಪ್ ಇವರನ್ನು ಸುಮ್ಮನೆ ಬಿಡುವರೆ? ಕನ್ನಡದ ಬಾನಂಗಳಕ್ಕೆ ಹೊಸಹೊಸ ತಾರೆಗಳನ್ನು ತಂದುಬಿಡುವ ಅಶೋಕ್ ಇವರನ್ನೂ ತಾರಾಸಮೂಹಕ್ಕೆ ಸೇರಿಸಿದ್ದಾರೆ. ಆದರ್ಶವ್ಯಕ್ತಿಗೆ ಆದರ್ಶವ್ಯಕ್ತಿಯ ಪಾತ್ರಗಳನ್ನೇ ತಮ್ಮ ಧಾರವಾಹಿಗಳಲ್ಲಿ ನೀಡುತ್ತಾ ಬಂದಿದ್ದಾರೆ."ಸೀತೆ"ಯಿಂದ ಕಿರುತೆರೆಗೆ ಪಾದಾರ್ಪಣೆ ಮಾಡಿದ ಇವರು, "ನಂದಗೋಕುಲ"ದಲ್ಲಿ ಮಕ್ಕಳಿಗೆ ಶಿಸ್ತಿನ ಪಾಠ ಹೇಳುವ ತಂದೆ. ಅಪ್ಪನನ್ನು ಕಳೆದುಕೊಂಡ ಎಷ್ಟೊಂದು ಮಂದಿಗೆ ಅಪ್ಪಾಜಿಯ ನೆನಪಿನ ಬುತ್ತಿಯನ್ನು ಮತ್ತೆ ಕಟ್ಟಿಕೊಟ್ಟಿದ್ದಾರೆ.

"ಹೆಳವನ ಕಟ್ಟೆ ಗಿರಿಯಮ್ಮ"ನ ತಂದೆಯಾಗಿ ಮಿಂಚಿದ್ದಾರೆ.ಮಾಯವಾಗದೇ ಮತ್ತೀಗ ಪ್ರತ್ಯಕ್ಷರಾಗಿದ್ದಾರೆ. ಅದೂ ಅಪ್ಪಯ್ಯನಾಗಿ "ಪ್ರೀತಿಯಿಂದ"ಧಾರವಾಹಿಯಲ್ಲಿ. ಅಪ್ಪನೆಂದರೆ ಹೀಗಿರಬೇಕೆಂದು ಸಾರುತ್ತಿದ್ದಾರೆ.ತನ್ನ ಪಾತ್ರಗಳ ಮೂಲಕ ಸಮಾಜಕ್ಕೆ ಸದಾ ಒಳ್ಳೆಯ ಸಂದೇಶವನ್ನು ನೀಡುತ್ತಿರಬೇಕೆನ್ನುವ ಜೋಶಿ "ಮಾಂಗಲ್ಯ"ಧಾರವಾಹಿಯಲ್ಲಿ ನೆಗೆಟಿವ್ ಪಾತ್ರವೊಂದನ್ನು ಅನಿವಾರ್ಯವಾಗಿ ಮಾಡಿ ವ್ಯಥೆಪಟ್ಟು ಕೂಡಲೆ ಅದರಿಂದ ಹೊರಬಂದಿದ್ದಾರೆ.

ನೆಗೆಟಿವ್ ಪಾತ್ರಕ್ಕೂ ಸೈ: ಹಾಗಾದರೆ ನೆಗೆಟಿವ್ ಪಾತ್ರಗಳನ್ನು ಯಾರಾದರೂ ಮಾಡಲೇಬೆಕಲ್ಲವೆ?ಅದೂ ಒಂದು ಸವಾಲಲ್ಲವೆ? ಎಂಬ ಪ್ರೆಶ್ನೆಗೆ ತಟ್ಟನೆ ಉತ್ತರಿಸುವ ಜೋಶಿ, ಹೌದು ಒಬ್ಬ ಕಲಾವಿದ ಎಲ್ಲಾ ರೀತಿಯ ಪಾತ್ರಗಳನ್ನು ಸವಾಲಾಗಿ ಸ್ವೀಕರಿಸಿ ಮಾಡಬೇಕು,ಹಾಗಾಗಿ ನಾನೂ ನೆಗೆಟಿವ್ ರೋಲ್ ಮಾಡಬಲ್ಲೆ ಎಂಬುದನ್ನು ಒಮ್ಮೆ ತೋರಿಸಿದ್ದೇನೆ. ಆದರೆ ಅದನ್ನೇ ಮತ್ತೆ ಮತ್ತೆ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ.ಮೂಲತಃ ನನ್ನ ಸ್ವಭಾವಕ್ಕೂ ಅಂತಹ ಪಾತ್ರಗಳಿಗೂ ಹೊಂದಿಕೆ ಬರುವುದಿಲ್ಲ.

ಒಬ್ಬ ಕಲಾವಿದನಿಗೆ ತನ್ನ ಸ್ವಭಾವಕ್ಕೆ ಸರಿಹೊಂದುವ ಪಾತ್ರ ಸಿಕ್ಕಾಗ ಪರಕಾಯಪ್ರವೇಶದ ಅಗತ್ಯವೇ ಇರುವುದಿಲ್ಲ,ಪರಪಾತ್ರಪ್ರವೇಶ ಸಾಕಷ್ಟೇ ಎನ್ನುತ್ತಾರೆ.ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡುವುದಕ್ಕಿಂತ ಒಳ್ಳೆಯದನ್ನೇ ಮಾಡಿ ಸರಿದಾರಿಗೆ ತರುವ ಪ್ರಯತ್ನ ಭಾರತೀಶ್ ನಿರ್ದೇಶನದ"ಹೆಳವನ ಕಟ್ಟೆ ಗಿರಿಯಮ್ಮ"ದಲ್ಲಿದೆ.ಅದು ಸಮಾಜಕ್ಕೆ ಆರೋಗ್ಯಕರ ಚಿಂತನೆಯನ್ನೂ ನೀಡುತ್ತದೆ ಎನ್ನುವ ಜೋಶಿ ಅವರ ಪ್ರತಿ ಮಾತಿನಲ್ಲೂ ದಾರ್ಶನಿಕತೆ ಎದ್ದು ಕಾಣುತ್ತದೆ.

"ನಂದಗೋಕುಲ"ದಲ್ಲಿ ತಮ್ಮನ್ನು ಹೆಚ್ಚು ಮಾಗಿಸಿಕೊಂಡಿದ್ದ ಜೋಶಿ ಆ ಧಾರವಾಹಿಯ ಸೆಟ್‌ನಲ್ಲಿ ವಿನಯ ಪ್ರಸಾದ್ ಮಾರ್ಗದರ್ಶನ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ.ದೃಶ್ಯವೊಂದರ ಚಿತ್ರೀಕರಣದಲ್ಲಿ ನಾನು ಮಾತ್ರ ಚೆನ್ನಾಗಿ ನಟಿಸಬೇಕೆಂದುಕೊಳ್ಳದೆ ನಾವು..ನಾವೆಲ್ಲಾ ಚೆನ್ನಾಗಿ ನಟಿಸಬೇಕೆಂದುಕೊಂಡರೆ ಫಲಿತಾಂಶ ಅತ್ಯುತ್ತಮವಾಗಿರುತ್ತದೆ ಎನ್ನುವುದು ಜೋಶಿ ಅವರ ಅಭಿಪ್ರಾಯ.

ಡಾ. ರಾಜ್‌ ಆದರ್ಶ:"ಪ್ರೀತಿಯಿಂದ" ಧಾರವಾಹಿಯನ್ನು ನಿರ್ಮಿಸಿ ನಿರ್ದೇಶಿಸುವ ಕನಸು ಹೊತ್ತಿದ್ದ ಅಶೋಕ್ ಕಶ್ಯಪ್ ಅದೊಂದು ದಿನ ಇವರನ್ನು ಕರೆದು,"ಕರ್ನಾಟಕದಲ್ಲಿ ಈ ಪಾತ್ರವನ್ನು ಡಾ.ರಾಜ್‌ಕುಮಾರ್ ಅವರಂತೆ ಮಾಡಿಕೊಡುವ ವ್ಯಕ್ತಿಗಾಗಿ ಹುಡುಕಾಟದಲ್ಲಿದ್ದೇನೆ..ನೀವೇ ಏಕೆ ಈ ಪಾತ್ರವನ್ನು ಮಾಡಬಾರದು?"ಎಂದಾಗ ತಾನು ಇಷ್ಟು ಕಾಲ ಅಭಿನಯಿಸಿದ್ದು ಸಾರ್ಥಕವಾಯಿತೆಂದು ಅನಿಸಿತಂತೆ ಜೋಶಿ ಅವರಿಗೆ. ಆದರೆ ರಾಜಣ್ಣನನ್ನು ನೆನಪಿಸಿಕೊಂಡು ಸ್ಪೂರ್ತಿಯಿಂದ ಆ ಮಟ್ಟದಲ್ಲಿ ಅಭಿನಯಿಸುವ ಪ್ರಯತ್ನ ಮಾಡುತ್ತಿದ್ದೇನೆ, ತಾನಿನ್ನೂ ಶೂನ್ಯ, ಕಲಿಯುವುದು ಬೆಟ್ಟದಷ್ಟಿದೆ ಎನ್ನುವಾಗ ಜೋಶಿ ಅವರ ನಮ್ರತೆ ಅನುಕರಣೀಯ ಎನಿಸುತ್ತದೆ.

ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿಭೀಮೇಶ್ವರ ಜೋಶಿ ಅವರ ಪ್ರೀತಿಯ ಕಿರಿಯ ತಮ್ಮ ರಾಜಗೋಪಾಲ ಜೋಶಿ ಅವರಿಗೆ ಧಾರ್ಮಿಕತೆ ಎಂಬುದು ಜನ್ಮತಃ ಬಂದಿದೆ.ಪ್ರವೃತ್ತಿಯಾಗಿದ್ದ ನಟನೆಯೇ ಈಗ ವೃತ್ತಿಯಾಗಿದೆ.ಈ ವೃತ್ತಿಯಿಂದ ನಿವೃತ್ತರಾಗದೆ ಚಿರಕಾಲ ಪ್ರೇಕ್ಷಕರ ಮನದಲ್ಲಿ ನೆಲೆಸಲಿ ಎಂಬುದೇ ಕೋಟ್ಯಾಂತರ ಕನ್ನಡಿಗರ ಆಶಯ.

English summary
Kannada TV Artist Rajagopal Joshi who is playing a father role in Preetiyinda serial being telecasted in Suvarna Kannada Channel. Rajagopal got good appreciation from the viewers. Rajagopal joshi is younger brother of Bhimeshwa Joshi of Horanadu.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more