For Quick Alerts
  ALLOW NOTIFICATIONS  
  For Daily Alerts

  ರಿಯಾಲಿಟಿ ಶೋದಲ್ಲಿ ಮಾನವೀಯ ಮೌಲ್ಯಗಳ ಬಿಕರಿ

  |

  ಭಾರತದ ಇತಿಹಾಸದಲ್ಲಿ 1990ರ ದಶಕದ ಪ್ರಾರಂಭದ ವರ್ಷಗಳು ಮಹತ್ತರ ಘಟ್ಟ. ಹಣಕಾಸು ಬಂಡವಾಳದ ಮುಕ್ತ ಹರಿವು, ವಿದೇಶೀ ಮಾರುಕಟ್ಟೆಗೆ ಮುಕ್ತ ಪ್ರವೇಶ ಮತ್ತು ಭಾರತೀಯ ಆರ್ಥಿಕ ಹಾಗು ಸಾಮಾಜಿಕ ಕ್ಷೇತ್ರಗಳ ಜಾಗತೀಕರಣ ಈ ದಶಕದಲ್ಲುಂಟಾದ ಪ್ರಮುಖ ಬದಲಾವಣೆಗಳು. ಇದರೊಡನೆಯೇ ತೀವ್ರವಾದ ಪರಿವರ್ತನೆಗೊಳಗಾದ ಕ್ಷೇತ್ರವೆಂದರೆ ಸಂವಹನ ಮಾಧ್ಯಮ ಕ್ಷೇತ್ರ. 1980ರ ದಶಕದಲ್ಲಿ ರಾಷ್ಟ್ರವ್ಯಾಪಿಯಾಗಿ ಹರಡಿದ ಟೆಲಿವಿಷನ್ ಸಂಸ್ಕೃತಿ ಬಹುತೇಕ ಒಂದು ದಶಕದ ಕಾಲ ಸರ್ಕಾರದ ನಿರ್ಬಂಧಕ್ಕೊಳಗಾಗಿತ್ತು. ದೂರದರ್ಶನವೊಂದೇ ಪ್ರಮುಖ ವಾಹಿನಿಯಾಗಿತ್ತು. ರಾಷ್ಟ್ರೀಯ ಸುದ್ದಿ ಪ್ರಸಾರ, ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು ಮತ್ತು ಕೆಲವು ಅತ್ಯುತ್ತಮ ಧಾರಾವಾಹಿಗಳಿಗೆ ಸೀಮಿತವಾಗಿದ್ದ ಈ ಅವಧಿಯಲ್ಲಿ ಮೂಡಿಬಂದ ಕಾರ್ಯಕ್ರಮಗಳು ದೇಶದ ಮಧ್ಯಮವರ್ಗದ ಜನತೆಯನ್ನು ಟೆಲಿವಿಷನ್ ಸಂಸ್ಕೃತಿಗೆ ಒಗ್ಗುವಂತೆ ಮಾಡಿತ್ತು. ಆದರೆ ಜಾಗತೀಕರಣ ಪ್ರಕ್ರಿಯೆಯ ನಂತರ ಸಂವಹನ ಮಾಧ್ಯಮದಲ್ಲಿ ಉಂಟಾದ ತೀವ್ರ ಬದಲಾವಣೆಗಳ ಪರಿಣಾಮವಾಗಿ ದೃಶ್ಯ ಮಾಧ್ಯಮಗಳೂ ಜನಸಾಮಾನ್ಯರ ನಿತ್ಯಜೀವನದ ಅಂಶಿಕ ಭಾಗವಾಗಿ ಪರಿಣಮಿಸಿತ್ತು.

  90ರ ದಶಕದ ನಂತರ ಪ್ರಾರಂಭವಾದ ಖಾಸಗೀ ವಾಹಿನಿಗಳ ಭರಾಟೆ ದೃಶ್ಯ ಮಾಧ್ಯಮದ ಸ್ವರೂಪವನ್ನಷ್ಟೇ ಅಲ್ಲದೆ, ಪ್ರಭಾವವನ್ನೂ ಸಂಪೂರ್ಣವಾಗಿ ಪಲ್ಲಟಗೊಳಿಸಿತ್ತು. ಜ್ಞಾನಾರ್ಜನೆ, ಮನರಂಜನೆ, ಅರಿವು ಮತ್ತು ವಾಸ್ತವತೆಯ ಗ್ರಹಿಕೆಗಳ ಆಕರವಾಗಿದ್ದ ದೃಶ್ಯ ಮಾಧ್ಯಮಗಳು ಜನಸಾಮಾನ್ಯರನ್ನು ತಲುಪುವ ಉದ್ದೇಶದಿಂದ ದೃಶ್ಯಮಾಧ್ಯಮವನ್ನು ಮನರಂಜನೆಯ ಅಂಗಳವನ್ನಾಗಿ ಮಾಡಿದ್ದು ಮಾಧ್ಯಮದ ಸ್ವರೂಪವನ್ನೇ ಬದಲಿಸಿತ್ತು. ತತ್ಪರಿಣಾಮವಾಗಿ ಮಾಧ್ಯಮಗಳ ಆದ್ಯತೆಗಳೂ ಬದಲಾಗತೊಡಗಿದವು. ಜನತೆಗೆ ದೇಶದಲ್ಲಿನ ಆಗುಹೋಗುಗಳನ್ನು, ಸಾಂಸ್ಕೃತಿಕ ವೈಶಿಷ್ಟ್ಯತೆಗಳನ್ನು, ಸಾಮಾಜಿಕ ಸ್ಥಿತ್ಯಂತರಗಳನ್ನು ಮತ್ತು ಪಾರಂಪರಿಕ ಐತಿಹ್ಯಗಳನ್ನು ತಿಳಿಸುವ ಪರಂಪರೆ ಕ್ರಮೇಣ ನಶಿಸುತ್ತಾ ಬಂದಿತ್ತು. ದೃಶ್ಯ ಮಾಧ್ಯಮ ಕಟ್ಟ ಕಡೆಯ ಪ್ರಜೆಯನ್ನೂ ತಲುಪಬಹುದಾದ ಮನರಂಜನೆಯ ಸಾಧನವಾಗಿ ಬದಲಾಯಿತು. ಪ್ರಾರಂಭಿಕ ಹಂತಗಳಲ್ಲಿ ಕೌಟುಂಬಿಕ ಪರಿಸರಕ್ಕೆ ಹೊಂದಾಣಿಕೆಯಾಗುವಂತಹ ಸಾಮಾಜಿಕ ಧಾರಾವಾಹಿಗಳನ್ನು ಬಿಂಬಿಸುತ್ತಿದ್ದ ವಾಹಿನಿಗಳು ಕ್ರಮೇಣ ನೋಡುಗರನ್ನು ಚಲನಚಿತ್ರದೆಡೆಗೆ ಕೊಂಡೊಯ್ದಿದ್ದು ಮುಂಬರುವ ಕ್ರಾಂತಿಕಾರಿ ಬದಲಾವಣೆಗಳಿಗೆ ನಾಂದಿಯಾಗಿತ್ತು.

  ಆಧುನಿಕತೆಯ ಜಾಡಿನಲ್ಲಿ

  ದೇಶದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಪ್ರಾರಂಭವಾದ ಪ್ರಾದೇಶಿಕ ಟಿವಿ ವಾಹಿನಿಗಳು ಜಾಗತೀಕೃತ ಮಾರುಕಟ್ಟೆಯ ನಿಯಮಗಳಿಗೆ ಸ್ಪಂದಿಸಿದಂತೆಲ್ಲಾ ಸಾಂಸ್ಕೃತಿಕವಾಗಿಯೂ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿದ್ದವು. ಜನತೆಯ ಆಶಯಗಳಿಗೆ ಸ್ಪಂದಿಸುವುದಕ್ಕಿಂತಲೂ ಜಾಹೀರಾತು ಉದ್ಯಮ ಮತ್ತು ಕಾರ್ಪೋರೇಟ್ ವಲಯಗಳ ಮುಖವಾಣಿಗಳಾದವು. ರಾಷ್ಟ್ರೀಯ ಪರಂಪರೆಯ ಸ್ಥಾನವನ್ನು ಬಾಲಿವುಡ್ ಮುಂತಾದ ಸಿನಿಮಾ ಕ್ಷೇತ್ರಗಳು ಆವರಿಸಿಕೊಂಡಿದ್ದವು. ಮನರಂಜನೆಯ ಘಟ್ಟದಿಂದ ರೋಚಕತೆಯೆಡೆಗೆ ಸಾಗಿದ ಟಿವಿ ವಾಹಿನಿಗಳ ನಗರ ಕೇಂದ್ರಿತ ಕಾರ್ಯಕ್ರಮಗಳು ಮೇಲ್ ಮಧ್ಯಮ ವರ್ಗಗಳ ಆಸಕ್ತಿಗಳಿಗೆ ಪೂರಕವಾಗಿದ್ದು ಗ್ರಾಮೀಣ ಪ್ರದೇಶಗಳನ್ನೂ ಆಕರ್ಷಿಸಲಾರಂಭಿಸಿತು. ಟಿವಿ ವಾಹಿನಿಗಳ ಜನಪ್ರಿಯತೆಯನ್ನು ಅಳೆಯುವ ಮಾಪಕವಾಗಿ ಟಿಆರ್‌ಪಿ ರೇಟಿಂಗ್ ವ್ಯವಸ್ಥೆಯೂ ಜಾರಿಗೆ ಬಂದಿದ್ದು, ಎಲ್ಲ ವಾಹಿನಿಗಳೂ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ವೈವಿಧ್ಯತೆಗೆ ಮೊರೆ ಹೋಗಲಾರಂಭಿಸಿದವು. ಬಾಲಿವುಡ್ ಸಿನಿಮಾಗಳಿಗೆ ಹಾಲಿವುಡ್ ಪ್ರೇರಣೆಯಾದಂತೆ ಟಿವಿ ವಾಹಿನಿಗಳಿಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಟಿವಿ ಕಾರ್ಯಕ್ರಮಗಳು ಪ್ರೇರಕವಾದವು. ತತ್ಪರಿಣಾಮವಾಗಿ ಗಾಯನ, ನೃತ್ಯ, ಹಾಸ್ಯ, ನಗೆ ಧಾರಾವಾಹಿಗಳು ಟಿವಿ ಪರದೆಗಳನ್ನು ಆಕ್ರಮಿಸಿದವು.

  ಈ ಹಂತದಲ್ಲೇ ಭಾರತದ ದೃಶ್ಯಮಾಧ್ಯಮಗಳಲ್ಲಿ ರಿಯಾಲಿಟಿ ಶೋಗಳ ಆಗಮನವಾಯಿತು. ರಿಯಾಲಿಟಿ ಶೋಗಳಲ್ಲಿ ಹಲವು ವಿಧ. ಮಕ್ಕಳ, ಹದಿಹರೆಯದವರ ಸುಪ್ತ ಪ್ರತಿಭೆಗಳನ್ನು ಹೊರಗೆಳೆಯುವ ಗಾಯನ ಗೋಷ್ಠಿಗಳು, ನೃತ್ಯ ಕಾರ್ಯಕ್ರಮಗಳು, ಹಾಸ್ಯಪ್ರಜ್ಞೆಯನ್ನು ಬೆಳೆಸುವ ಹಾಸ್ಯಗೋಷ್ಠಿಗಳು, ಏಕಪಾತ್ರಾಭಿನಯ, ಕೌಟುಂಬಿಕ ಸಮಸ್ಯೆಗಳನ್ನು ಬಿಂಬಿಸುವುದು, ಖಾಸಗಿ ವಿಷಯಗಳನ್ನು ಬಹಿರಂಗಗೊಳಿಸುವುದು ಹೀಗೆ ಹತ್ತು ಹಲವಾರು ವಿಧಗಳಲ್ಲಿ ರಿಯಾಲಿಟಿ ಶೋಗಳು ಪ್ರಾರಂಭವಾದವು. ಇಂಗ್ಲೀಷ್ ಚಾನೆಲ್‌ನ ಕಾರ್ಯಕ್ರಮಗಳ ದೇಶಿ ಅವತರಣಿಕೆಗಳು ಭಾರತೀಯ ಮಾಧ್ಯಮ ಲೋಕಕ್ಕೆ ಲಗ್ಗೆ ಇಟ್ಟವು. ರಾಜೀವ್ ಖಂಡೇಲ್‌ವಾಲ್ ಅವರ ಸಚ್ ಕಾ ಸಾಮ್ನಾ (ಮೊಮೆಂಟ್ ಆಫ್ ಟ್ರೂತ್) ಸೋನಿ ಟಿವಿಯ ಇಸ್ ಜಂಗಲ್ ಸೆ ಮುಝೆ ಬಚಾವೋ(ಐ ಯಾಮ್ ಎ ಸೆಲಿಬ್ರಿಟಿ ಗೆಟ್ ಮಿ ಔಟ್ ಆಫ್ ಹಿಯರ್), ರಾಖೀ ಕಾ ಸ್ವಯಂವರ್ (ದಿ ಬ್ಯಾಚೆಲೊರೇಟ್), ದಸ್ ಕಾ ದಮ್ (ಪವರ್ ಆಫ್ ಟೆನ್), ಸರ್ಕಾರ್ ಕಿ ದುನಿಯಾ (ಸರ್ವೈವರ್), ಇಂಡಿಯನ್ ಐಡಲ್ (ಅಮೆರಿಕನ್ ಐಡಲ್), ಝಲಕ್ ದಿಖ್‌ಲಾಜಾ (ಡ್ಯಾನ್ಸಿಂಗ್ ವಿದ್ ದಿ ಸ್ಟಾರ್‍ಸ್), ಬಿಗ್ ಬಾಸ್ (ಬಿಗ್ ಬ್ರದರ್) ಇವೆಲ್ಲವೂ ಕೆಲವು ನಿದರ್ಶನಗಳಷ್ಟೆ.

  ಇದೇ ರೀಮೇಕ್ ಪರಂಪರೆ ಕನ್ನಡಕ್ಕೂ ಲಗ್ಗೆ ಇಟ್ಟಿದ್ದು ವಿಭಿನ್ನ ಹೆಸರುಗಳಲ್ಲಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಕನ್ನಡದಲ್ಲೂ ಹಿಂದಿಯ ಅವತರಣಿಕೆಗಳು ಹೇರಳವಾಗಿ ಪ್ರಸಾರವಾಗುತ್ತಿವೆ. ಕೌನ್ ಬನೇಕಾ ಕರೋಡ್‌ಪತಿಗೆ ಮುನ್ನ ಇದ್ದ ಈ ಮನರಂಜನಾ ಕಾರ್ಯಕ್ರಮಗಳ ಸ್ವರೂಪ ನಂತರದಲ್ಲಿ ಪೂರ್ಣ ಕಾರ್ಪೋರೇಟ್ ಸಂಸ್ಕೃತಿಗೆ ಒಳಗಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ರಿಯಾಲಿಟಿ ಶೋಗಳ ಮೂಲಕ ಹಣಗಳಿಸುವ ಲಾಲಸೆಯನ್ನು ಮಧ್ಯಮವರ್ಗಗಳಲ್ಲಿ ಮೂಡಿಸಲಾಯಿತು. ಕನ್ನಡ ವಾಹಿನಿಗಳಲ್ಲೂ ಕುಣಿಯೋಣ ಬಾರಾ, ಎದೆ ತುಂಬಿ ಹಾಡಿದೆನು, ಹಾಕು ಹೆಜ್ಜೆ ಹಾಕು, ಮುಂತಾದ ಕಾರ್ಯಕ್ರಮಗಳು ಹಿಂದಿಯ ಅವತರಣಿಕೆಯಾಗಿದ್ದು, ಧನಾರ್ಜನೆಯ ಮಾರ್ಗಗಳಾಗಿವೆ. ಹಾಡು, ನೃತ್ಯ, ಅಭಿನಯ, ಹಾಸ್ಯ ಇವೆಲ್ಲವನ್ನೂ ಕಲೆ ಎಂದೆಣಿಸಿದ್ದ ಸಾಮಾಜಿಕ ಪರಿಸರದಲ್ಲಿ, ಈ ಕಲಾಮಾಧ್ಯಮಗಳೂ ಧನಾರ್ಜನೆಯ ಮಾರ್ಗಗಳಾಗಬಹುದು ಎಂಬ ಭ್ರಮೆಯನ್ನು ಸೃಷ್ಟಿಸಿದ (ಅಪ)ಕೀರ್ತಿ ದೃಶ್ಯ ಮಾಧ್ಯಮಗಳಿಗೆ ಸಲ್ಲಬೇಕು.

  ಬಿಕರಿಗಿರುವ ಭಾವನೆಗಳು

  ರಿಯಾಲಿಟಿ ಶೋಗಳ ಮೂಲ ಉದ್ದೇಶ ಸಮಾಜದ ವಾಸ್ತವಗಳನ್ನು ಕಿರುತೆರೆಯ ಮೇಲೆ ನಾಟಕೀಯವಾಗಿ ಪ್ರಸ್ತುತಪಡಿಸುವ ಮೂಲಕ ಜನತೆಗೆ ಸಂದೇಶವನ್ನು ತಲುಪಿಸುವುದು ಎಂದು ಹೇಳಲಾಗುತ್ತದೆ. ಗಾಯನ ನೃತ್ಯ ಕಾರ್ಯಕ್ರಮಗಳ ಮೂಲಕ ಸುಪ್ತ ಪ್ರತಿಭೆಗಳನ್ನು ಹೊರಸೂಸುವ ಪ್ರಯತ್ನ ನಡೆಯುತ್ತಿದೆ ಎಂದೂ ಭಾವಿಸಲಾಗುತ್ತದೆ. ಆದರೆ ಈ ಶೋಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ಅಥವಾ ಅಭ್ಯರ್ಥಿಗಳು ಕ್ಯಾಮೆರಾಗಳ ಮುಂದೆ ನಿಂತಾಗ ಅವರ ವ್ಯಕ್ತಿತ್ವವನ್ನೇ ಮತ್ತೊಬ್ಬ ಸೂತ್ರಧಾರ ನಿರ್ವಹಿಸುತ್ತಿರುತ್ತಾನೆ. ಷೂಟಿಂಗ್ ನಂತರ ಎಡಿಟ್ ಮಾಡುವ ಹಂತದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ಶೋಗಳ ಮೂಲಕ ಅಪಾರ ಹಣ ಸಂಪಾದಿಸುವುದರೊಂದಿಗೆ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಳ್ಳುವ ಅವಕಾಶ ಲಭಿಸುವುದರಿಂದ ಭಾಗವಹಿಸುವವರೂ ಈ ಬದಲಾವಣೆಗಳು, ನೇತ್ಯಾತ್ಮಕವಾದರೂ, ಸಹಿಸಿಕೊಳ್ಳಬೇಕಾಗುತ್ತದೆ.

  ಅಲ್ಪ ಅವಧಿಯಲ್ಲೇ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಅವಕಾಶ ಒದಗಿಸುವ ಶೋಗಳಲ್ಲಿ ಒಬ್ಬರ ಸೋಲಿನ ಭಾವನೆಗಳನ್ನು ವೈಭವೀಕರಿಸಿ, ನೋಡುಗರನ್ನು ರಂಜಿಸುವ ಮೂಲಕ, ಗೆಲುವನ್ನು ಪ್ರಸ್ತುತಪಡಿಸಲಾಗುತ್ತದೆ. ಅನೇಕ ಕಾರ್ಯಕ್ರಮಗಳ ಫಲಿತಾಂಶಗಳು ಶ್ರೋತೃಗಳ ವೋಟುಗಳ ಮೂಲಕ ನಿರ್ಧರಿತವಾಗುತ್ತದೆ. ಭಾರತದಂತಹ ದೇಶಗಳಲ್ಲಿ ಈ ರೀತಿಯ ಓಟಿಂಗ್ ಪ್ರಕ್ರಿಯೆಗಳು ಜಾತಿ, ಪ್ರದೇಶ, ಧಾರ್ಮಿಕ ಭಾವನೆಗಳಿಗೆ ಬಲಿಯಾಗುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಅನೇಕ ಸ್ಪರ್ಧೆಗಳಲ್ಲಿ ಪ್ರತಿಭಾವಂತರು ಸೋಲುವುದನ್ನು ಕಾಣಬಹುದು. ಇದರೊಂದಿಗೆ ತೀರ್ಪುಗಾರರ ಪಕ್ಷಪಾತ ಧೋರಣೆ ಮತ್ತು ವೈಯ್ಯಕ್ತಿಕ ಇಷ್ಟಾನಿಷ್ಟಗಳೂ ಇಲ್ಲಿ ವ್ಯಕ್ತವಾಗುತ್ತವೆ.

  ಒಂದು ಸುತ್ತಿನಲ್ಲಿ ಸೋತ ಸ್ಪರ್ಧಿಗಳನ್ನು ಎಲಿಮಿನೇಷನ್ ರೌಂಡ್ ಮೂಲಕ ಉಚ್ಚಾಟಿಸುವ ಪ್ರಕ್ರಿಯೆ ನಾಟಕೀಯವಾಗಿರುವುದೇ ಅಲ್ಲದೆ, ಸ್ಪರ್ಧಿಗಳ ಭಾವನೆಗಳನ್ನು ಶೋಷಣೆಗೊಳಪಡಿಸುವ ಕ್ರೌರ್ಯ ಎದ್ದುಕಾಣುತ್ತದೆ. ಅನೇಕ ವೇಳೆ ಸ್ಪರ್ಧಿಗಳು ವೇದಿಕೆಯ ಮೇಲೆ ತಲೆ ಸುತ್ತಿ ಬಿದ್ದಿರುವ ಪ್ರಕರಣಗಳೂ ನಡೆದಿವೆ. ಪೋಷಕರು ಅಳುತ್ತಿರುವುದು, ತೀರ್ಪುಗಾರರು ಸೋತವರನ್ನು ಸಂತೈಸುವುದು, ಅಪ್ಪಿ ಮುದ್ದಾಡುವುದು ಈ ನಾಟಕೀಯತೆಗಳ ಪರಿಣಾಮವಾಗಿ ಇಡೀ ಕಾರ್ಯಕ್ರಮವೇ ಭಾವನೆಗಳ ಮಾರುಕಟ್ಟೆಯಾಗಿ ಪರಿಣಮಿಸುತ್ತದೆ. ಈ ಮಾರುಕಟ್ಟೆ ಪ್ರಕ್ರಿಯೆಗೆ ಬಲಿಯಾಗುವವರಲ್ಲಿ ಮಕ್ಕಳೇ ಹೆಚ್ಚಾಗಿರುವುದೂ ಆತಂಕಕಾರಿ ಸಂಗತಿ. ಗಾಯನ-ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳು ಎಎಸ್‌ಎಂಎಸ್ ಮೂಲಕ ತನಗೇ ಓಟು ನೀಡಲು ಬೇಡುವುದೇ ಕಲಾಮಾಧ್ಯಮದ ಅವಹೇಳನವಾಗುತ್ತದೆ. ಕೆಲವು ಮಕ್ಕಳು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದೂ ಇದೆ. ಇಲ್ಲಿ ವರ್ಗ ತಾರತಮ್ಯವೂ ತನ್ನದೇ ಆದ ಪಾತ್ರ ವಹಿಸುವುದರಿಂದ ಮೇಲ್ವರ್ಗದವರಿಗೇ ಹೆಚ್ಚು ಅನುಕೂಲವಾಗುತ್ತದೆ.

  ಕೌಟುಂಬಿಕ ಸಮಸ್ಯೆಗಳನ್ನು ಬಿಂಬಿಸುವ ಶೋಗಳಲ್ಲಿ ಸಣ್ಣ ಪುಟ್ಟ ಮಕ್ಕಳನ್ನು ಬಳಸಿಕೊಳ್ಳುವುದರ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ರಾಷ್ಟ್ರವ್ಯಾಪಿಯಾಗಿ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಸಚ್ ಕಾ ಸಾಮ್ನಾದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಮನದಾಳದ ಅಭಿಪ್ರಾಯಗಳನ್ನು ಸಂಗ್ರಹಿಸಿ, ಗತ ಜೀವನದ ಘಟನೆಗಳ ಬಗ್ಗೆ ಪ್ರಶ್ನಿಸಲಾಗುತ್ತದೆ. ಸ್ಪರ್ಧಿಗಳ ಹೇಳಿಕೆಗಳನ್ನು ಅವರ ಅರಿವಿಗೆ ಬಾರದಂತೆ ರಿಕಾರ್ಡ್ ಮಾಡಿ ನಂತರ ಸತ್ಯವನ್ನು ಹೊರಗೆಡಹಲಾಗುತ್ತದೆ. ಇನ್ನು ಕೆಲವು ಶೋಗಳಲ್ಲಿ ಸ್ಪರ್ಧಿಗಳಿಗೆ ನೇರವಾಗಿಯೇ ಕಸಿವಿಸಿಯಾಗುವಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕಿರುತೆರೆಯ ಮೇಲೆ ತಮ್ಮ ಕೌಟುಂಬಿಕ, ವೈಯ್ಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಕಣ್ಣೀರು ಸುರಿಸುವುದು ನೋಡುಗರಿಗೆ ಹೇಗೆ ಮನರಂಜನೆ ಒದಗಿಸಲು ಸಾಧ್ಯ? ಸಂಸಾರದ ಗುಟ್ಟು ವ್ಯಾಧಿ ರಟ್ಟು ಎಂಬ ಗಾದೆ ಭಾರತೀಯ ಕೌಟುಂಬಿಕ ಪರಂಪರೆಯ ತಳಹದಿಯಾಗಿದೆ. ಆದರೆ ಮನರಂಜನೆಯ ಹೆಸರಿನಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ವೈಭವೀಕರಿಸುವುದೇ ಅಲ್ಲದೆ ಸಾಮಾನ್ಯ ಜನತೆಯ ಭಾವನೆಗಳನ್ನು ಶೋಷಿಸುವ ಪರಂಪರೆಯನ್ನೂ ಮಾಧ್ಯಮಗಳು ಅನುಸರಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

  ಏತನ್ಮಧ್ಯೆ ರಾಖಿ ಕಾ ಸ್ವಯಂವರ್ ಎಂಬ ಹಿಂದಿ ರಿಯಾಲಿಟಿ ಶೋ ಮೂಲಕ ಮನೆಮಾತಾಗಿರುವ ರಾಖಿ ಸಾವಂತ್ ಕಿರುತೆರೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ಎನ್‌ಡಿಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ರಾಖಿಸಾವಂತಳನ್ನು ವಿವಾಹವಾಗ ಬಯಸುವವರು ಸ್ವಯಂವರದಲ್ಲಿ ಭಾಗವಹಿಸಬಹುದೆಂದು ಘೋಷಿಸಿದ 20 ದಿನಗಳಲ್ಲಿ 13 ಸಾವಿರ ಆಕಾಂಕ್ಷಿಗಳು ಅರ್ಜಿ ಗುಜರಾಯಿಸಿದ್ದರು. ವ್ಯಾಪಾರಿಗಳು, ಅನಿವಾಸಿ ಭಾರತೀಯರು, ವೈದ್ಯರು, ವಕೀಲರು, ಸಾಫ್ಟ್ ವೇರ್ ಇಂಜಿನಿಯರುಗಳು ಎಲ್ಲ ಕ್ಷೇತ್ರದ ಸ್ಪರ್ಧಿಗಳು ಭಾಗವಹಿಸಿದ್ದರು. ಕೊನೆಗೂ ಒಬ್ಬ ಶ್ರೀಮಂತ ವ್ಯಕ್ತಿ ರಾಖಿಯವರ ಕೈ ಹಿಡಿದಿದ್ದಾರೆ. ಇಲ್ಲಿ ಸ್ವಯಂವರ ಪರಂಪರೆ ಭಾರತಕ್ಕೆ ಹೊಸತೇನೂ ಅಲ್ಲವಾದರೂ, ಮಹಿಳೆಯನ್ನು ಪಡೆದುಕೊಳ್ಳುವ ಭೋಗದ ವಸ್ತುವನ್ನಾಗಿ ಪರಿಗಣಿಸುವ ಸ್ವಯಂವರ ಎಂಬ ಪುರುಷಪ್ರಧಾನ ವ್ಯವಸ್ಥೆಯ ಪ್ರಾಚೀನ ಸಂಸ್ಕೃತಿಯನ್ನು ದೃಶ್ಯ ಮಾಧ್ಯಮದ ಮೂಲಕ ಬಿತ್ತರಿಸುವುದು ಅಪಾಯದ ಸೂಚನೆಯಾಗಿದೆ.

  ಈ ಎಲ್ಲಾ ರಿಯಾಲಿಟಿ ಶೋಗಳ ಮೂಲಕ ಇಡೀ ಸಮಾಜವನ್ನು ಧನಾರ್ಜನೆಯ ಪರಂಪರೆಯೆಡೆಗೆ ಕೊಂಡೊಯ್ಯುತ್ತಿರುವ ಮಾಧ್ಯಮಗಳ ಮತ್ತು ಕಾರ್ಪೋರೇಟ್ ವಲಯಗಳ ನಾಗರಿಕ ಪ್ರಜ್ಞೆ ಮತ್ತು ಸಾಮಾಜಿಕ ಕಳಕಳಿಗಳು ಪ್ರಶ್ನಾರ್ಹವಾಗಿವೆ. ಕೆಳವರ್ಗದ ಸಾಮಾನ್ಯ ಜನತೆಯ ಭಾವನೆಗಳನ್ನು ಮನರಂಜನಾ ವಸ್ತುವನ್ನಾಗಿ ಪರಿಗಣಿಸುವುದೇ ಅಲ್ಲದೆ, ಅವರ ವೇದನೆಗಳನ್ನು, ಸಂಕಷ್ಟಗಳನ್ನು, ತುಡಿತಗಳನ್ನು ಮೌಲ್ಯೀಕರಣಗೊಳಿಸುವ ಭರದಲ್ಲಿ ಮಾಧ್ಯಮಗಳು ಮಾನವೀಯ ಮೌಲ್ಯಗಳನ್ನು ಬಿಕರಿ ಮಾಡುತ್ತಿರುವುದು ಖಂಡನಾರ್ಹವಷ್ಟೇ ಅಲ್ಲ ಶಿಕ್ಷಾರ್ಹವೂ ಆಗುತ್ತದೆ. ರಿಯಾಲಿಟಿ ಶೋಗಳಲ್ಲಿ ತಮ್ಮ ಮಕ್ಕಳು ಮಿಂಚುತ್ತಾರೆ ಎಂಬ ಆಶಾಭಾವನೆಯಿಂದ ಮಕ್ಕಳ ಮೇಲೆ ಒತ್ತಡ ಹೇರಿ ಅವರನ್ನು ಶೋಗಳಿಗೆ ತಯಾರಿ ಮಾಡುವ ಪೋಷಕರೂ ಈ ಸಂದರ್ಭದಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಾರೆ. ಈ ಇಡೀ ಪ್ರಕ್ರಿಯೆಗೆ ಬಲಿಯಾಗುವವವರು ಕೆಳವರ್ಗದ ಮತ್ತು ಮಧ್ಯಮ ವರ್ಗದ ಜನತೆಯೇ ಎಂದು ಹೇಳಬೇಕಿಲ್ಲ. ಏಕೆಂದರೆ ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಈ ವರ್ಗದ ಜನತೆಗೆ ಕಿರುತೆರೆ ಒಂದು ಅವಕಾಶ ಒದಗಿಸಿಕೊಟ್ಟಿದೆ. ಈ ಅವಕಾಶವನ್ನು ಮಾಧ್ಯಮಗಳು ಶೋಷಣೆಯ ಅಸ್ತ್ರವನ್ನಾಗಿ, ಧನಾರ್ಜನೆಯ ಮಾರ್ಗವನ್ನಾಗಿ ಮಾಡಲು ಮುಂದಾಗಿರುವುದು ಸಾಮಾಜಿಕ ಸಂರಚನೆಗೇ ಅಪಾಯ ಒಡ್ಡುವ ಸಂಕೇತವಾಗಿದೆ. ಸಾಮಾಜಿಕ ಕಾಳಜಿ, ಸಾರ್ವಜನಿಕ ಹೊಣೆಗಾರಿಕೆ, ಸಮಷ್ಟಿ ಪ್ರಜ್ಞೆ ಇರುವ ಜನತೆ ಈ ಕುರಿತು ಗಂಭೀರವಾಗಿ ಆಲೋಚನೆ ಮಾಡುವ ಅಗತ್ಯತೆಯೂ ಹೆಚ್ಚಾಗಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X