Just In
Don't Miss!
- News
130 ಕೋಟಿ ಜನರನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲಾರದು: ಮೋದಿ
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Automobiles
ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಜಾವಾ 42 ಬೈಕ್
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Sports
ಟೀಮ್ ಇಂಡಿಯಾದ 6 ಆಟಗಾರರಿಗೆ ಆನಂದ್ ಮಹೀಂದ್ರರಿಂದ ಭರ್ಜರಿ ಗಿಫ್ಟ್!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾಸರವಳ್ಳಿ ಕುಟುಂಬದ ಅಪ್ರತಿಮ ಪ್ರತಿಭಾವಂತೆ
ಬದ್ಧತೆ ಎಂದರೆ ಇದೇ.ಸಣ್ಣದೊಂದು ತಲೆನೋವು ಬಂದರೂ ಶ್ಯೂಟಿಂಗ್‌ಗೆ ಚಕ್ಕರ್ ಹಾಕಿ ನಿರ್ದೇಶಕರಿಗೆ ತಲೆನೋವನ್ನು ಹಸ್ತಾಂತರಿಸುವ ಕಲಾವಿದರು ಇವಳನ್ನು ನೋಡಿ ಕಲಿಯಬೇಕು.ನಟನೆ ಕೇವಲ ವ್ಯವಹಾರವಲ್ಲ,ಅದೊಂದು ಕಲೆ ಎಂಬುದನ್ನು ತಲೆಗೆ ತುಂಬಿಕೊಳ್ಳಬೇಕು.ರಂಗಭೂಮಿಯನ್ನರಿತು ಭರತನಾಟ್ಯ ಹಾಗು ಇನ್ನಿತರ ಕಲೆಗಳಲ್ಲಿ ನುರಿತು ಶಾಸ್ತ್ರೀಯವಾಗಿ ಸಾಧನೆ ಮಾಡಿದವರಿಗೆ ಮಾತ್ರ ಇಂತಹ ಬದ್ಧತೆ ಸಿದ್ಧವಾಗಿ ಬಂದಿರುತ್ತದೆ.ಕಿರುತೆರೆ,ಬೆಳ್ಳಿತೆರೆ ಎಲ್ಲೇ ಅವರು ಪ್ರಸಿದ್ಧರಾದರೂ ಇದ್ದಂತೆಯೇ ಇರುತ್ತಾರೆ.ಅಂತವರು ಎಲ್ಲರಂತಲ್ಲ. ಈಕೆಯೂ ಎಲ್ಲರಂತಲ್ಲ. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕುಟುಂಬದ ಮತ್ತೊಂದು ಬಳ್ಳಿ ಮುದ್ದುಮುದ್ದಾದ ಹುಡುಗಿ ಕಿರುತೆರೆಯಲ್ಲಿ ಹೂನಗೆಯನ್ನು ಬೀರುತ್ತಿದ್ದಾಳೆ, ಶೀರ್ಷಿಕಾ ಕಾಸರವಳ್ಳಿ.
"ಮುಂಬೆಳಗು"ಮೂಡಿಸಿ "ಮುಂಜಾನೆ"ಯನ್ನು ತಂಪಾಗಿಸಿದ ಸುಂದರಿ.ಸಂಗೀತ-ನಾಟ್ಯವನ್ನು ಕಲಿಯುತ್ತಾ "ನಮ್ಮಮ್ಮ ಶಾರದೆ" ಎನ್ನುವ ಕುವರಿ.ಕಲಾಯಾನದಲ್ಲಿ "ಸಾಗುತ ದೂರ ದೂರ" ತಾನು "ಎಲ್ಲರಂತಲ್ಲ" ಎಂದು ಛಲಬಿಡದೆ ಸಾಧಿಸಿದ ಹಟಮಾರಿ! ಎಲ್ಲ ನಟಿಯರೂ ತಾವು ನಟಿಸುವ ಪಾತ್ರದಲ್ಲಿ ರೂಪವತಿಯಾಗಿರಬೇಕೆಂದು ಹಾತೊರೆದರೆ ಈಕೆ ತಾನು ಸುರಸುಂದರಿಯಾದರೂ ತನ್ನ ಸೌಂದರ್ಯವನ್ನು ತೊರೆದು ಕುರೂಪಿಯಾಗಿ ನಟಿಸಿದ್ದಳು.ನೀವು ನೋಡಿರಬಹುದು ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಎಲ್ಲರಂತಲ್ಲ ನಮ್ಮ ರಾಜಿ"ಧಾರವಾಹಿಯಲ್ಲಿ ತನ್ನ ಸಹಜ ಅಭಿನಯದಿಂದ ನೋಡುಗರ ಅಂತರಂಗವನ್ನು ಆಕ್ರಮಿಸಿಕೊಂಡಿದ್ದಳು.
ತನ್ನ ಮನೋಜ್ಞ ಅಭಿನಯದಿಂದ ಬಹಿರಂಗಕ್ಕಿಂತ ಅಂತರಂಗದ ಸೌಂದರ್ಯವೇ ಮೇಲೆಂದು ಜಗತ್ತಿಗೆ ಸಾರಿದ್ದಳು.ಕುರೂಪಿಗಳಿಗೂ ಎಲ್ಲರಂತೆ ಭಾವನೆಗಳು,ಕಾಮನೆಗಳು ತುಂಬಿಕೊಂಡಿರುತ್ತವೆ ಎಂಬುದನ್ನು ಅರಿವು ಮೂಡಿಸಿದ್ದಳು.ಹೌದು... ಅದೇ ನಗುಮೊಗದ ಚೆಲುವೆಯ ಚೆಲುವನ್ನು ತಿಂದುಹಾಕಿದ್ದ ಉಬ್ಬುಹಲ್ಲು ಹಾಗು ದಪ್ಪ ಕಟ್ಟಿನ ಕನ್ನಡಕವನ್ನು ತೊಟ್ಟ ಈ ಕನ್ನಡತಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ.
ಮಲೆನಾಡ ಕುವರಿ: ಶೀರ್ಷಿಕಾ ಹುಟ್ಟಿ ಬೆಳೆದು ಕಲಿತು ಕಲೆತದ್ದೆಲ್ಲಾ ಮಲೆನಾಡ ತವರು ಶಿವಮೊಗ್ಗದಲ್ಲಿ.ಶಿವಮೊಗ್ಗದಲ್ಲಿ ಎಲ್ಲೇ ಸಂಗೀತ-ನಾಟ್ಯ ಸ್ಪರ್ಧೆ,ಪ್ರದರ್ಶನಗಳಾದರೂ ಅಲ್ಲಿ ಹಾಜರಾಗುತ್ತಿದ್ದಳು ಇದೇ ಶೀರ್ಷಿಕಾ ಅಂದು.ಸನ್ಮಾನ,ಬಹುಮಾನ ಒಂದಲ್ಲ ಒಂದು.ಇತ್ತ ಓದಿನಲ್ಲೂ ಸದಾ ಮುಂದು.ಒಂದೆಡೆ ಬಿ.ಕಾಮ್,ಎಂಬಿ.ಎ ಪದವಿಗಳನ್ನು ಧರಿಸಿ ಇನ್ನೊಂದೆಡೆ ಭರತನಾಟ್ಯದಲ್ಲಿ-ಸಂಗೀತದಲ್ಲಿ ಸೀನಿಯರ್ ಪರೀಕ್ಷೆ ಮುಗಿಸಿದ ಈಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ರ‌್ಯಾಂಕ್!
ನಂತರ ಜೀವನದ ಪರೀಕ್ಷೆಯನ್ನೆದುರಿಸಲು ಬೆಂಗಳೂರಿನತ್ತ ಪಯಣ.ಕಂಪೆನಿಯೊಂದರಲ್ಲಿ ಉದ್ಯೋಗಿಯಾದ ಶೀರ್ಷಿಕಾ ತಾನು ಏನನ್ನೋ ಕಳೆದುಕೊಳ್ಳುತ್ತಿದ್ದೇನೆ ಎಂಬ ಕೊರಗು ಮನವನ್ನು ಕೊರೆಯಲಾರಂಭಿಸಿತು.ಅಭಿನಯ ಕರೆಯಲಾರಂಭಿಸಿತು.ವಾರಾಂತ್ಯದಲ್ಲಾದರೂ ಕಲೆಯಲ್ಲಿ ತೊಡಗಿಸಿಕೊಳ್ಳುವ ತವಕ.ತಾನು ಒಳ್ಳೆಯ ನಟಿಯಾಗಬೇಕು,ಧಾರವಾಹಿಗಳಲ್ಲಿ ಮಿಂಚಬೇಕೆಂಬ ಕನಸನ್ನು ಮನಸಲ್ಲೇ ಬಚ್ಚಿಟ್ಟುಕೊಂಡಿದ್ದ ಶೀರ್ಷಿಕಾ,"ಮುಂಬೆಳಗು"ಧಾರವಾಹಿಯ ನಿರ್ಮಾಪಕರನ್ನು ಭೇಟಿಯಾಗಿ ಅವಕಾಶಗಿಟ್ಟಿಸಿಕೊಂಡಳು.
ಮೊದಮೊದಲು ಪಾರ್ಟ್ ಟೈಮ್ ಆಗಿದ್ದ ನಟನೆ ಫುಲ್ ಟೈಮಾಗಿ ಹೋಯಿತು.ಪ್ರವೃತ್ತಿಯೇ ವೃತ್ತಿಯಾಯಿತು.ಆತ್ಮೀಯರು ಆತ್ಮೀಯವಾಗಿ ಕಿವಿಹಿಂಡಿ ತಡೆದರೂ ಮುನ್ನಡೆದು ಕಿರುತೆರೆಯಲ್ಲೇ ನೆಲೆಯೂರಿದ ಶೀರ್ಷಿಕಾ ತನ್ನ ಆತ್ಮಸಂತೋಷವನ್ನು ಅಭಿನಯದಲ್ಲೇ ಕಂಡುಕೊಂಡಳು.ಹಿಂದೆ ಕಿವಿಹಿಂಡಿದವರೆಲ್ಲಾ ಇವಳ ಅಭಿನಯವನ್ನು ಕಣ್‌ತುಂಬ ನೋಡಿ ಬಾಯಿತುಂಬ ಹೊಗಳಲಾರಂಭಿಸಿದರು.ಇದೇ ಶೀರ್ಷಿಕಾ ಮಹಿಮೆ!
ತನ್ನ ದೊಡ್ಡಪ್ಪ ಗಿರೀಶ್ ಕಾಸರವಳ್ಳಿ ಒಬ್ಬ ಪರಿಪೂರ್ಣ ನಿರ್ದೇಶಕ ಎಂದು ಹೆಮ್ಮೆಪಡುವ ಶೀರ್ಷಿಕಾ ಇಂತಹ ಕುಟುಂಬದಲ್ಲಿ ಜನಿಸಿರುವ ತನಗೂ ಅವರಿಂದಲೇ ಇವೆಲ್ಲಾ ಒಲಿದಿರಬಹುದೆಂಬ ಭಾವನೆಯಿದೆ.ಆದರೂ ದೊಡ್ಡಪ್ಪನ ಹೆಸರನ್ನು ಬಳಸಿಕೊಳ್ಳದೆ ತಾನೇ ಸ್ವಯಂ ಕಷ್ಟಪಟ್ಟು ಹೆಸರನ್ನು ಗಳಿಸಿಕೊಳ್ಳುತ್ತಿದ್ದಾಳೆ.ಪ್ರೇಕ್ಷಕರಲ್ಲಿ ತಾನೊಬ್ಬ ಒಳ್ಳೆಯ ನಟಿಯೆಂಬ ನಂಬಿಕೆಯನ್ನು ಉಳಿಸಿಕೊಂಡಿದ್ದಾಳೆ. ಅಪ್ಪ ಅಜ್ಜನ ಹೆಸರಿನಿಂದ ಮೇಲೇರುವ ಕಲಾವಿದರ ಸಾಲಲ್ಲಿ ನಿಲ್ಲದೆ ಸ್ವಂತ ಪರಿಶ್ರಮ,ಪ್ರತಿಭೆಯನ್ನು ಪಣಕ್ಕಿಟ್ಟಿದ್ದಾಳೆ.ಇದ್ದಕ್ಕೆ ಅವಳ ಪೋಷಕರಾದ ನಟೇಶ್ ಕಾಸರವಳ್ಳಿ ಹಾಗು ಉಶಾ ನಟೇಶ್ ಅವರ ಸಹಕಾರವೂ ಇದೆ.ಅಣ್ಣನ ಪ್ರೀತಿಯೂ ಜೊತೆಗಿದೆ.
ಇಂತಿಪ್ಪ ನಿರಾಭರಣ ಸುಂದರಿ ಶೀರ್ಷಿಕಾ ತನ್ನದೇ ತಂಡವನ್ನು ಕಟ್ಟಿಕೊಂಡು ಅವಕಾಶವಿದ್ದೆಡೆಯೆಲ್ಲಾ ನೃತ್ಯರೂಪಕಗಳನ್ನು ಪ್ರದರ್ಶನ ಮಾಡುತ್ತಾ ಬಂದಿದ್ದಾಳೆ.ಬಟ್ಟಲುಕಂಗಳಲ್ಲಿ ಆತ್ಮವಿಶ್ವಾಸದ ನೋಟವನ್ನು ತುಂಬಿಕೊಂಡು ಇಂಪಾಗಿ ಮಾತುಗಳನ್ನು ಹಾಡುವ ಈ ಕೋಗಿಲೆ ಸುಕೋಮಲೆಗೆ ಕಿರಿತೆರೆಯಲ್ಲಿ ತಾನಿನ್ನೂ ಮನಮುಟ್ಟುವ ಪಾತ್ರಗಳನ್ನು ಮಾಡಬೇಕೆನ್ನುವ ತುಡಿತವಿದೆ.ಬಿಡುವಾದಾಗ ತಾನೇ ನೃತ್ಯರೂಪಕಗಳನ್ನು ನಿರ್ದೇಶಿಸಿ ಯಶಸ್ವಿಯಾಗುವ ಆಸೆಯೂ ಇದೆ.ಈ ಎಲ್ಲ ಆಸೆಗಳು ಶೀಘ್ರವಾಗಿ ಈಡೇರಲಿ ಎಂಬುದೇ ಶೀರ್ಷಿಕಾಳ ಅಭಿಮಾನಿ ಬಳಗದ ಆಶಯ.ಅಂದ ಹಾಗೆ ಸದ್ಯದಲ್ಲೇ ಈ ಟೀವಿಯಲ್ಲಿ ಪ್ರಸಾರವಾಗಲಿರುವ ಟಿ.ಎನ್.ಸೀತಾರಮ್ ಅವರ "ಚಿತ್ರಲೇಖ"ಧಾರವಾಹಿಯ ಮೂಲಕ ಶೀರ್ಷಿಕಾ ನಿಮ್ಮ ಮನೆಮನ ತಲುಪುವ ತವಕದಲ್ಲಿದ್ದಾಳೆ.ಸ್ವಾಗತಿಸಿ...ಶುಭಹಾರೈಸಿ.