ಜಗನ್ ಗೆ 'ಹುಷಾರು' ಎಂದು ಎಚ್ಚರಿಸಿ, ಬುದ್ಧಿಮಾತು ಹೇಳಿದ ಕಿಚ್ಚ ಸುದೀಪ್.!
Recommended Video

'ಬಿಗ್ ಬಾಸ್' ಮನೆಗೆ ಕಾಲಿಟ್ಟ ದಿನದಿಂದಲೂ, 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ರವರ ವರ್ತನೆ ಬಗ್ಗೆ ವೀಕ್ಷಕರಿಗೆ ಬೇಸರ ಇದ್ದೇ ಇದೆ. ಸಂಬಂಧಪಡದ ವಿಚಾರಕ್ಕೆಲ್ಲ ಮೂಗು ತೂರಿಸಿ, ಕಣ್ಣನ್ನ ಕೆಂಪಗೆ ಮಾಡಿ, ಏರುದನಿಯಲ್ಲಿ ಮಾತನಾಡುವ ಜಗನ್ ಸ್ವಭಾವ ವೀಕ್ಷಕರಿಗೆ ಇಷ್ಟ ಆಗುತ್ತಿಲ್ಲ.
ಇನ್ನೂ ಟಾಸ್ಕ್ ನಲ್ಲಿ ರೋಷಾವೇಶ ಮೆರೆಯುವ ಜಗನ್, ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಸಮೀರಾಚಾರ್ಯ ರವರ ಶರ್ಟ್ ನ ಎಳೆದು ಹರಿದು ಹಾಕಿದ್ದರು. ಸಾಲದಕ್ಕೆ ದೊಡ್ಡ ರಾದ್ಧಾಂತಕ್ಕೆ ನಾಂದಿ ಹಾಡಿದ್ದರು.
ಈ ಎಲ್ಲವನ್ನೂ ಗಮನಿಸಿದ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಜಗನ್ನಾಥ್ ಚಂದ್ರಶೇಖರ್ ಅವರಿಗೆ 'ಹುಷಾರು' ಎಂದು ಎಚ್ಚರಿಸಿ, ಬುದ್ಧಿ ಮಾತನ್ನು ಹೇಳಿದರು. ಮುಂದೆ ಓದಿರಿ...

ಜಗನ್ ತಡೆಯಲಿಲ್ಲ, ಎಳೆದದ್ದು.!
''ಜಗನ್ ಅವರೇ... ಟಾಸ್ಕ್ ಅಂತ ಬಂದಾಗ ತಾವು ಅದ್ಭುತವಾಗಿ ಪರ್ಫಾಮ್ ಮಾಡಿದ್ರಿ. ಟಾಸ್ಕ್ ಹೀಟ್ ನಲ್ಲಿ ತಾವು ಹಾಗೂ ಸಮೀರಾಚಾರ್ಯ ಮಾಡಿದ್ದು ಸರಿ ಅಲ್ಲ. ತಡೆದೆ ಅಂತ ತಾವು ಹೇಳಿದ್ರಿ. ಆದ್ರೆ, ತಾವು ಕೋಪದಲ್ಲಿ ಶರ್ಟ್ ನ ಹಿಡಿದುಕೊಂಡ್ರಿ. ಅದು ನಿಮಗೂ ಗೊತ್ತು'' ಎಂದು ಸತ್ಯವನ್ನ ಹೊರಗೆ ತರುವ ಪ್ರಯತ್ನವನ್ನ ಸುದೀಪ್ ಮಾಡಿದರು.

ತಪ್ಪನ್ನ ಒಪ್ಪಿಕೊಂಡ ಜಗನ್
''ತಡೆಯುವುದು ಹೇಗೆ, ಹಿಡಿಯುವುದು ಹೇಗೆ'' ಅಂತ ಸುದೀಪ್ ತೋರಿಸಿದಾಗ, ತಮ್ಮ ತಪ್ಪನ್ನ ಜಗನ್ ಒಪ್ಪಿಕೊಂಡರು.

ಅವಾಯ್ಡ್ ಮಾಡಿ ಎಂದ ಸುದೀಪ್
''ನಮ್ಮ ಜೀವನದಲ್ಲಿ ಎಲ್ಲವೂ ಚೆನ್ನಾಗಿ ಹೋಗುತ್ತಿದೆ ಎನ್ನುವಾಗ, ಕೆಲವನ್ನ ಅವಾಯ್ಡ್ ಮಾಡಬೇಕು ಜಗನ್'' ಎಂದು ಸುದೀಪ್ ಬುದ್ಧಿಮಾತು ಹೇಳಿದರು.

ಆದ ಘಟನೆ ಬಗ್ಗೆ ಸಮರ್ಥನೆ ಕೊಟ್ಟ ಜಗನ್
''ಮೊದಲೆರಡು ಬಾರಿ ಕೇಳಿಕೊಂಡೆ... ಈ ಬಗ್ಗೆ ವಿವರಣೆ ಕೊಡಲು ನನಗೆ ಇಷ್ಟ ಇಲ್ಲ. ಯಾಕಂದ್ರೆ, ಎಲ್ಲರೂ ನೋಡಿರ್ತಾರೆ. ''ಬಿಟ್ಟುಬಿಡಿ, ಬಿಟ್ಟುಬಿಡಿ'' ಅಂತ ಒಳಗಡೆಯಿಂದಲೇ ಹೇಳುತ್ತಾ ಬಂದೆ. ಆದ್ರೆ, ಅವರು ಕಬ್ಬನ್ನ ಜೋರಾಗಿ ಎಳೆದಾಗ ನನ್ನ ಕೈಗೆ ತುಂಬಾ ನೋವಾಯ್ತು. ಈಗಲೂ ನನಗೆ ನೋವಿದೆ. ಆಚಾರ್ಯ ಅವರಿಗೂ ಅಷ್ಟೊಂದು ಆಕ್ರಮಣಕಾರಿ ಆಟ ಬೇಕಾಗಿರಲಿಲ್ಲ. ಅವರು ಜೋರಾಗಿ ಎಳೆದಾಗ, ನನಗೆ ತಡೆದುಕೊಳ್ಳಲು ಆಗಲಿಲ್ಲ. ತಳ್ಳೋಕೆ ಹೋದಾಗ ಶರ್ಟ್ ಸಿಕ್ತು. ಹೌದು, ಅದನ್ನ ನಾನು ಎಳೆದೆ'' ಎಂದು ಸಮರ್ಥಿಸಿಕೊಂಡರು ಜಗನ್ನಾಥ್ ಚಂದ್ರಶೇಖರ್.

ಕ್ಷಮೆ ಕೇಳಿದ್ರಂತೆ.!
''ನಾನು ತಪ್ಪು ಮಾಡಿದೆ ಅಂತ ನನಗೆ ಅನಿಸ್ತು. ಹೀಗಾಗಿ ಅವರ ಬಳಿ ಹೋಗಿ ನಾನು ಕ್ಷಮೆ ಕೇಳಿದೆ'' ಎಂದರು ಜಗನ್

ಜನರ ಭಾವನೆ ಬೇರೆ ಆಗಿದೆ
''ಮೂರು ವಾರಗಳ ಕಾಲ, ತಾವು ಎಲ್ಲಿ ಕಣ್ಣನ್ನ ದೊಡ್ಡದಾಗಿ ಬಿಡುವ ಅವಶ್ಯಕತೆ ಇರಲಿಲ್ವೋ.... ಅಲ್ಲೆಲ್ಲ ಮಾಡಿಬಿಟ್ಟಿದ್ದೀರಾ. ನಿಮಗೆ ಕರ್ಮದ ಬಗ್ಗೆ ನಂಬಿಕೆ ಇದ್ಯಾ.?'' ಅಂತ ಸುದೀಪ್ ಕೇಳಿದಾಗ, ''ಹೌದು'' ಎಂದು ಜಗನ್ ಒಪ್ಪಿಕೊಂಡರು.
ಆಗ, ''ಅದೇ ನಿಮ್ಮನ್ನ ಹಿಡಿದುಕೊಳ್ತು ಅನಿಸ್ತು ಈ ಬಾರಿ. ಯಾಕಂದ್ರೆ ಹಿಂದೆ ಕೆಲವು ತಪ್ಪು ನಡೆದಿರುತ್ತದೆ. ಅದರಿಂದ ಜನರ ಭಾವನೆ ಬೇರೆ ಆಗುತ್ತೆ. ಸ್ವಲ್ಪ ಹುಷಾರು.... ನೀವು ನಡೆದುಕೊಳ್ಳುತ್ತಿರುವ ರೀತಿಯಲ್ಲಿ ಪ್ರಾಮಾಣಿಕತೆ ಬಗ್ಗೆ ಎರಡು ಮಾತಿಲ್ಲ. ಟಾಸ್ಕ್ ಬಂದಾಗ ರೋಷಾವೇಷ ಇದ್ದದ್ದೇ. ಆದರೆ, ಇಷ್ಟೊಂದು ಬೇಕಾ.?'' ಅಂತ ಸುದೀಪ್ ಪ್ರಶ್ನಿಸಿದರು.

ಸುದೀಪ್ ಕೊಟ್ಟ ಪ್ರಾಮಾಣಿಕವಾದ ಅಭಿಪ್ರಾಯ
''ಏನ್ ಮಾಡ್ತೀರಾ.?'' ಅಂತ ಜಗನ್ ಹೇಳಿದಕ್ಕೆ, ''ನಿಮಗೆ ಬಿಡ್ತೀನಿ. ಬರೀ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಅಲ್ಲ. ಯು ಹ್ಯಾವ್ ಎ ಲಾಂಗ್ ವೇ ಟು ಗೋ... ಇದು ನನ್ನ ಪ್ರಾಮಾಣಿಕವಾದ ಅಭಿಪ್ರಾಯ'' ಅಂತ ಜಗನ್ ಗೆ ಸುದೀಪ್ ಬುದ್ಧಿ ಹೇಳಿದರು.


Click it and Unblock the Notifications











