»   » ಕನ್ನಡ ಟೆಲಿವಿಷನ್ ಕೊಳೆ ತೊಳೆಯುವ ಸಮಯ

ಕನ್ನಡ ಟೆಲಿವಿಷನ್ ಕೊಳೆ ತೊಳೆಯುವ ಸಮಯ

By: ರವಿ ಕೃಷ್ಣಾ ರೆಡ್ಡಿ, ಬೆಂಗಳೂರು
Subscribe to Filmibeat Kannada

ಶಾಮಸುಂದರ್‌ರವರೆ,

ನೀವು ಹೇಳಿದಂತೆ ಕನ್ನಡದ ನ್ಯೂಸ್ ಚಾನಲ್‌ಗಳಿಗೆ ಈಗ ಸಂಕ್ರಮಣದ ಸಮಯ. ನನ್ನ ಪ್ರಕಾರ ಈಗ ಇರುವ ಎಲ್ಲಾ ಚಾನಲ್‌ಗಳಿಗೂ ಬದುಕುವ ಮತ್ತು ಬೆಳೆಯುವ ಅವಕಾಶ ಮತ್ತು ಮಾರುಕಟ್ಟೆ ಇದೆ. ಆದರೆ, ಕೆಲವು ಮಾತ್ರ ಲಾಭದಾಯಕವಾಗಿ ಉಳಿದು, ಮಿಕ್ಕವು ನಷ್ಟಕ್ಕೆ ಈಡಾಗಿ ಅಳಿವಿನ ಅಂಚಿಗೆ ಬಂದಿರುವುದಕ್ಕೆ, ಆ ಮೂಲಕ ಅನೇಕ ನೌಕರರು ಕೆಲಸ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣ ಅವುಗಳ ಸ್ಥಾಪನೆಯಲ್ಲಿಯ ಮೂಲ ಉದ್ದೇಶ ಮತ್ತು ತದನಂತರ ಅವುಗಳ ನಿರ್ವಹಣೆಯಲ್ಲಿಯೇ ದೋಷಗಳಿರುವುದು.

ನೀವು ಲಾಭದಾಯಕವಾಗಿ ನಡೆಯುತ್ತಿರುವ ಕೆಲವು ಚಾನಲ್‌ಗಳನ್ನು ಹೆಸರಿಸಿ ಅವುಗಳ ಮಾಲೀಕರು ಯಾರೂ ಕನ್ನಡದವರಲ್ಲ ಎಂದಿರುವುದರಲ್ಲಿಯೇ ನಾವು ಆ ವಲಯದಲ್ಲಿ ಇಂದು ಕಾಣುತ್ತಿರುವ ಗೊಂದಲಗಳಿಗೆ ಉತ್ತರವಿದೆ. ಆ ಚಾನಲ್ ಸ್ಥಾಪಕರ ಮೂಲ ಉದ್ದೇಶ ಒಂದು ಲಾಭದಾಯಕ ವಾರ್ತಾವಾಹಿನಿಯನ್ನು ಕಟ್ಟುವುದು. ಆ ಉದ್ದೇಶ ಇರುವವರು ಒಂದು ಚಾನಲ್ ಕಟ್ಟಲು ಬೇಕಾದ ಅಗತ್ಯ ಬಂಡವಾಳದ ಜೊತೆಗೆ ಉತ್ತಮ ವೃತ್ತಿಪರ ನಿರ್ವಹಣಾಧಿಕಾರಿಗಳ ಕೈಗೆ ಅವುಗಳ ಉಸ್ತುವಾರಿ ಕೊಡುತ್ತಾರೆ. ಹಾಕಿರುವ ಬಂಡವಾಳಕ್ಕೆ ಮೋಸವಾಗದಂತೆ ಮತ್ತು ಚಾನಲ್ ಜನಪ್ರಿಯವಾಗಿ ಲಾಭದಾಯಕವಾಗಲು ಏನೇನು ನಿರ್ಧಾರಗಳು ಅಗತ್ಯವೋ ಅದೆಲ್ಲವನ್ನೂ ಅವರು ನಿರ್ಭಾವುಕವಾಗಿ ಕೈಗೊಳ್ಳುತ್ತಾರೆ.

Funding media and the foul play

ಬೇರೆ ಕಡೆಯಿಂದ ಹೆಚ್ಚು ಸಂಬಳ ಕೊಟ್ಟು ಕರೆತರಬೇಕಾದ ಅವಶ್ಯಕತೆ ಬಿದ್ದರೆ ಕರೆತರುತ್ತಾರೆ, ಮತ್ತೆ ಅವರೇ ಹೊರೆ ಎನಿಸಿದರೆ ಕೂಡಲೆ ಮನೆಗೆ ಕಳುಹಿಸುತ್ತಾರೆ. ಆಗಾಗ ಖರ್ಚು ಕಡಿತಕ್ಕೆ ಏನೇನು ಮಾಡಬೇಕೊ ಅದನ್ನು ಮಾಡುತ್ತಾರೆ ಮತ್ತು ಎಲ್ಲಿ ಹಣ ತೊಡಗಿಸಿದರೆ ಹೆಚ್ಚು ಉಪಯೋಗವಾಗುತ್ತದೆ ಎನಿಸುತ್ತದೆಯೋ ಅಲ್ಲಿ ತೊಡಗಿಸುತ್ತಾರೆ. ಅದೇ ರೀತಿ ಕಾರ್ಯಕ್ರಮಗಳ ವಿಷಯದಲ್ಲಿಯೂ ಹೆಚ್ಚಿನ ಗೊಂದಲಗಳಿಲ್ಲದೆ ಯಾವ ತರಹದ ಕಾರ್ಯಕ್ರಮ ಹೆಚ್ಚು ಜನಪ್ರಿಯವಾಗುತ್ತದೆ ಎನ್ನಿಸುತ್ತದೆಯೊ ಅಂತಹುದನ್ನು ಹೆಚ್ಚೆಚ್ಚು ವೃತ್ತಿಪರತೆಯಿಂದ ನೀಡುತ್ತ ಹೋಗುತ್ತಾರೆ. ಬೇರೆ ಭಾಷೆಗಳ ಯಶಸ್ವಿ ಕಾರ್ಯಕ್ರಮಗಳನ್ನು ನಕಲು ಮಾಡುವುದರಿಂದ ಹಿಡಿದು ಅವರ ಕಾರ್ಯನಿರ್ವಹಣೆಯ ತಂತ್ರಗಳನ್ನೂ ಇಲ್ಲಿಗೆ ತರುತ್ತಾರೆ.

ಆದರೆ ಕನ್ನಡದಲ್ಲಿ ನಷ್ಟದಲ್ಲಿ ನಡೆಯುತ್ತಿರುವ ಮತ್ತು ಮುಚ್ಚುವ ಹಂತಕ್ಕೆ ಬದಿರುವ ಚಾನಲ್‌ಗಳನ್ನು ನೋಡಿ. ಇವೆಲ್ಲವೂ ನಮ್ಮ ರಾಜ್ಯದ ರಾಜಕಾರಣಿಗಳಿಂದ ಆರಂಭಿಸಲ್ಪಟ್ಟವು. ಅವರ್ಯಾರಿಗೂ ಮಾಧ್ಯಮ ರಂಗದ ಉದ್ದಿಮೆಯ ಪರಿಚಯ ಇರಲಿಲ್ಲ. ನಮ್ಮ ತುತ್ತೂರಿಯನ್ನು ಊದಿಕೊಳ್ಳಲು ನಮಗೂ ಒಂದು ಚಾನಲ್ ಇರಲಿ ಎಂದು ಚಾನಲ್ ಆರಂಭಿಸಿದವರೇ ಇವರೆಲ್ಲ. ಚಾನಲ್‌ಗಳ ಅರಂಭದ ಸಮಯದಲ್ಲಿ ಇವರ್ಯಾರಿಗೂ ಹಣದ ಕೊರತೆ ಇರಲಿಲ್ಲ. ಅಷ್ಟೇ ಅಲ್ಲ, ಒಂದು ಚಾನಲ್ ನಿಲ್ಲಲು ಎಷ್ಟು ದುಡ್ಡು ಮತ್ತು ದಿನ ಬೇಕಾಗುತ್ತದೆ ಎನ್ನುವ ಜ್ಞಾನವೂ ಇರಲಿಲ್ಲ.

ಬಹುತೇಕ ಸಂದರ್ಭದಲ್ಲಿ ಅನೀತಿ ಮತ್ತು ಭ್ರಷ್ಟ ಮಾರ್ಗಗಳಿಂದ ಸಂಪಾದಿಸಿದ ದುಡ್ಡೇ ಆಗಿದ್ದರಿಂದ ಕಳೆದುಕೊಳ್ಳುತ್ತೇವೆಂಬ ಭಯವಾಗಲಿ, ಆರ್ಥಿಕ ಶಿಸ್ತಾಗಲಿ ಇರಲಿಲ್ಲ. ಜೊತೆಗೆ ತಾವೊ, ತಮ್ಮ ಪತ್ನಿಯರೊ, ತಮಗೆ ಬೇಕಾದ ಬೇನಾಮಿ ವ್ಯಕ್ತಿಗಳೊ ಅವುಗಳಿಗೆ ಮುಖ್ಯಸ್ಥರಾದರು. ಬಹುತೇಕ ಎಲ್ಲಾ ಸಂದರ್ಭದಲ್ಲಿ ಹೀಗೆ ಮುಖ್ಯಸ್ಥರಾದವರು ಅಂತಹ ಒಂದು ಸಂಸ್ಥೆ ನಡೆಸಲು ಅನರ್ಹರಾಗಿದ್ದರು.

ಇತ್ತೀಚೆಗೆ ಸ್ನೇಹಿತರೊಬ್ಬರು ಹೇಳಿದಂತೆ ಇಂತಹ ಹಲವರು ಕೊಳಕರೂ ಆಗಿದ್ದರು. ತೀರಾ ಅನೈತಿಕ ಕೆಲಸಗಳಿಗೆ ತಮ್ಮ ಮಾಲೀಕತ್ವ ಮತ್ತು ಮುಖ್ಯಸ್ಥ ಸ್ಥಾನಗಳನ್ನು ಬಳಸಿಕೊಂಡಿದ್ದರು. ಇವರಿಗೆ ಚಾನಲ್ ಉಸ್ತುವಾರಿ ತಮ್ಮ ತೆವಲುಗಳ ಪೂರೈಕೆಗೆ ಒಂದು ಆಸ್ಥಾನ. ಇಂತಹವರಿಗೆ ಒಂದು ಸಂಸ್ಥೆಯ ಉಳಿಯುವಿಕೆ ಹೇಗೆ ಮುಖ್ಯವಾಗುತ್ತದೆ?

ಇದರ ಜೊತೆಗೆ, ಈ ಚಾನಲ್‌ಗಳ ಬೇರೆ ಕಾರ್ಯಕ್ರಮಗಳು ಎಷ್ಟೇ ಚೆನ್ನಾಗಿದ್ದರೂ ವಾರ್ತೆ ಮತ್ತು ವಿಶ್ಲೇಷಣೆಯ ವಿಚಾರಕ್ಕೆ ಬಂದಾಗ ಜನರಿಗೆ ಇವುಗಳ ಮೇಲೆ ವಿಶ್ವಾಸ ಮೂಡಲೇ ಇಲ್ಲ. ಮಾಲೀಕನ ಬಗ್ಗೆ ಅಥವ ಆತನ ಪಕ್ಷದ/ನಾಯಕರ ಬಗ್ಗೆ ಅವರು ತೋರಿಸುತ್ತಿದ್ದ/ತೋರಿಸುತ್ತಿರುವ ಪಕ್ಷಪಾತಿತನ ಅವುಗಳನ್ನು ನೋಡುಗರ ಒಂದು ವಲಯಕ್ಕೆ ಸೀಮಿತಗೊಳಿಸಿಬಿಟ್ಟಿವೆ. ಹೀಗಿರುವಾಗ, ಅವುಗಳ ಮಾರುಕಟ್ಟೆ ವಿಸ್ತಾರವಾಗುವುದಾದರೂ ಹೇಗೆ?

ಈ ಎಲ್ಲದರ ನಡುವೆ ಹಲವು ಚಾನಲ್‌ಗಳ ಕೆಲವು ನಿರೂಪಕರ ವಿಶ್ವಾಸಾರ್ಹತೆಯೂ ಪ್ರಶ್ನಾರ್ಹವಾಗುತ್ತ ಹೋಯಿತು. ಕೆಲವರು ತಮ್ಮ ಹುದ್ದೆ ಅಥವ ಮುಖಪರಿಚಯವನ್ನು ಅನೈತಿಕವಾಗಿ ದುಡ್ಡುಮಾಡಿಕೊಳ್ಳುವ ಭ್ರಷ್ಟ ಮಾರ್ಗಗಳಿಗೂ ಬಳಸಿಕೊಂಡರು. ತಮ್ಮ ಅನೀತಿ, ವೃತ್ತಿಪರತೆ ಇಲ್ಲದಿರುವುದು, ತಲೆಗೇರಿಸಿಕೊಂಡ ಅಹಂಕಾರ, ಇವುಗಳಿಂದ ತಾವೂ ಕೆಟ್ಟಿದ್ದೂ ಅಲ್ಲದೆ ತಮ್ಮ ಚಾನಲ್‌ಗಳ ಉಳಿವಿಗೂ ಸಂಚಕಾರ ತಂದರು.

ಈಗ ಹೀಗೆ ನಷ್ಟದಲ್ಲಿರುವ ಚಾನಲ್‌ಗಳ ಕೆಲವು ಮಾಲೀಕರ ದುಡ್ಡಿನ ಮೂಲಗಳು ಬತ್ತಿವೆ. ವಿಧಿಯಿಲ್ಲದೆ ಮಾರಲು ನೋಡುತ್ತಿದ್ದಾರೆ. ಕೊಳ್ಳಲು ಇತರೆ ಭ್ರಷ್ಟ ರಾಜಕಾರಣಿಗಳು ಮುಂದೆ ಬರುತ್ತಿಲ್ಲ. ಉದ್ದಿಮೆ ಎಂದು ಪರಿಗಣಿಸಿ ಬರಬಹುದಾದವರಿಗೆ ಈ ಚಾನಲ್‌ಗಳ ಇತಿಹಾಸ ಸ್ಫೂರ್ತಿ ಹುಟ್ಟಿಸುತ್ತಿಲ್ಲ.

ನೀವು ಹೇಳಿದ ಹಾಗೆ, ಕಳೆದ ಆರೇಳು ವರ್ಷಗಳ ಸಂದರ್ಭದಲ್ಲಿ ಎಂತೆಂತಹವರೆಲ್ಲ ಸ್ಟಾರ್‌ಗಳಾಗಿಬಿಟ್ಟರು. ಸರಿಯಾಗಿ ಒಂದು ವಿಷಯದ ಬಗ್ಗೆ ಬರೆಯಲು ಮತ್ತು ಮಾತನಾಡಲು ಬಾರದವರೆಲ್ಲ ಜನಾಭಿಪ್ರಾಯ ರೂಪಿಸುವ ಮಹಾನುಭಾವರಾಗಿಬಿಟ್ಟ ದುರದೃಷ್ಟಕರ ಪರಿಸ್ಥಿತಿ ಉಂಟಾಯಿತು. ಒಳ್ಳೆಯ, ವೃತ್ತಿಪರ, ಕಾಳಜಿಯುಳ್ಳ, ಪ್ರಾಮಾಣಿಕ ಮತ್ತು ಅರ್ಹ ಪತ್ರಕರ್ತರು ತಮಗೆ ಸಲ್ಲದ ಜಾಗದಲ್ಲಿ ಕುಳಿತು ತಮ್ಮ ಮಿತಿಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಘನತೆಯನ್ನು ಈ ವೃತ್ತಿಗೆ ತರಲು ಶ್ರಮಪಡುತ್ತ ಹೋದರು. ಆದರೆ ಇಂತಹ ಸಂಕ್ರಮಣದ ಸಂದರ್ಭದಲ್ಲಿಯೂ ವಿಶ್ವಾಸಾರ್ಹತೆ ಉಳಿಸಿಕೊಂಡ, ಅಂತಹ, ಜನಕ್ಕೆ ಹೆಚ್ಚಿನ ಅವಕಾಶಗಳು ಮತ್ತು ಜವಾಬ್ದಾರಿಗಳು ಸಿಗುತ್ತವೆ.

ಲಾಭದಲ್ಲಿ ನಡೆಯುತ್ತಿರುವ ಚಾನಲ್‌ಗಳಲ್ಲಿದ್ದರೂ ವಿಶ್ವಾಸಾರ್ಹತೆ ಕಳೆದುಕೊಂಡ, ಭ್ರಷ್ಟ ಎಂದು ಪರಿಗಣಿಸಲ್ಪಟ್ಟ ಹಲವು ತಲೆಹರಟೆ ಜನ ಕೆಲಸ ಕಳೆದುಕೊಂಡಿದ್ದಾರೆ ಅಥವ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಇದನ್ನು ಕೊಳೆ ತೊಳೆಯುವ ಸಮಯ ಎಂದೇ ನಾನು ಭಾವಿಸುತ್ತೇನೆ. ಈಗಿನ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಉಳಿಯುವ ಚಾನಲ್‌ಗಳು ಕನಿಷ್ಟ ಪಕ್ಷ ಅರ್ಹ ವ್ಯಕ್ತಿಗಳ ಉಸ್ತುವಾರಿಗೆ ಒಳಪಡುತ್ತವೆ ಮತ್ತು ಅವುಗಳ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುವವರು ಒಂದಿಷ್ಟು ಪತ್ರಕರ್ತನ ಬದ್ಧತೆ, ಕಾಳಜಿ, ವಿದ್ಯಾರ್ಹತೆ ಮತ್ತು ವೃತ್ತಿಪರತೆಯ ಇತಿಹಾಸ ಹೊಂದಿರುತ್ತಾರೆ ಎನ್ನುವ ವಿಶ್ವಾಸ ನನ್ನದು.

ನಮಸ್ಕಾರ,
ರವಿ ಕೃಷ್ಣಾ ರೆಡ್ಡಿ (ಚಿತ್ರದಲ್ಲಿರುವವರು - ಈ ಚಿತ್ರ ತೆಗೆದಿದ್ದು ಚಿಕ್ಕಮಗಳೂರಿನಿಂದ 20 ಕಿ.ಮೀ. ದೂರದಲ್ಲಿರುವ ಅಯ್ಯನಕೆರೆ ಎಂಬ ಮನಮೋಹಕ ಸ್ಥಳದಲ್ಲಿ.)

English summary
Couple of Kannada TV channels in dire straits and on the verge of closure is a direct result of funding media by corrupt and the unscrupulous. Ravi Krishna Reddy traces reasons for the disaster but, concludes with an optimistic note 'its cleansing phase for Kannada TV channels in Karnataka'. The author - https://www.facebook.com/ravikrishnareddy2011 is a writer and a Lok Satta Party worker.
Please Wait while comments are loading...