ಮತ್ತೆ ಬರ್ತಿದೆ 'ಕೌನ್ ಬನೇಗಾ ಕರೋಡ್‌ಪತಿ': ಈ ಬಾರಿಯ ವಿಶೇಷತೆಗಳೇನು?
ಭಾರತೀಯ ಟಿವಿ ರಂಗದಲ್ಲಿ ಒಂದು ಕಾಲದ ಅತ್ಯಂತ ಯಶಸ್ವಿ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್‌ಪತಿ'. ಅಮಿತಾಬ್ ಬಚ್ಚನ್ ನಿರೂಪಣೆ ಮಾಡುವ ಈ ಶೋ 12 ವರ್ಷವಾದರೂ ಈಗಲೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ.
ಎರಡು ವರ್ಷಗಳ ಹಿಂದೆ ಈ ಶೋನ 13ನೇ ಸೀಸನ್ ಪ್ರಸಾರವಾಗಿತ್ತು. ಇದೀಗ 14 ನೇ ಸೀಸನ್ ಪ್ರಸಾರವಾಗಲಿದ್ದು, ಈ ಬಗ್ಗೆ ಇಂದು ನಟ ಅಮಿತಾಬ್ ಬಚ್ಚನ್ ಹಾಗೂ ಕಾರ್ಯಕ್ರಮದ ಆಯೋಜಕರು ಸುದ್ದಿಗೋಷ್ಠಿ ನಡೆಸಿದ್ದಾರೆ.
'ಕೌನ್ ಬನೇಗಾ ಕರೋಡ್‌ಪತಿ' ಸೀಸನ್ 14 ಆಗಸ್ಟ್ 7 ರಿಂದ ರಾತ್ರಿ 9 ಗಂಟೆಗೆ ಸೋನಿ ಚಾನೆಲ್‌ನಲ್ಲಿ ಪ್ರಸಾರವಾಗಲಿದ್ದು, ಈ ಬಾರಿ ಕೆಲವು ವಿಶೇಷತೆಗಳನ್ನು ಹೊಂದಿರಲಿದೆ.

ಸ್ಪರ್ಧಿಗಳ ಆಯ್ಕೆ, ಕಾರ್ಯಕ್ರಮದ ನಿರೂಪಣೆ, ಪ್ರಸ್ತುತಿ ಇನ್ನಿತರ ವಿಷಯಗಳಲ್ಲಿ ಭಿನ್ನವಾಗಿರಲಿದೆ. ಅಲ್ಲದೆ ಈ ಬಾರಿ ಹಲವು ಹೊಸ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದೀಪಿಕಾ ಪಡುಕೋಣೆ, ಫರ್ಹಾನ್ ಅಖ್ತರ್, ಅಮೀರ್ ಖಾನ್, ಕರೀನಾ ಕಪೂರ್ ಇನ್ನೂ ಹಲವರು ಈ ಶೋನಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಶೋ ಪ್ರಾರಂಭವಾದ ಬಳಿಕ ಮೊದಲ ವಾರದಲ್ಲಿಯೇ ಸ್ವಾತಂತ್ರ್ಯ ದಿನೋತ್ಸವದ ಆಚರಣೆ ಮಾಡಲಾಗುತ್ತದೆ. ಆ ಕಾರ್ಯಕ್ರಮಕ್ಕೆ ಪದ್ಮಶ್ರೀ ಸುನಿಲ್ ಚೆಟ್ರಿ, ಮೇರಿ ಕೋಮ್,ನಟ ಆಮಿರ್ ಖಾನ್ ಅವರುಗಳು ಆಗಮಿಸಲಿದ್ದಾರೆ.
ಕೌನ್ ಬನೇಗಾ ಕರೋಡ್‌ಪತಿ ಸೀಸನ್ 14ರ ಹಲವು ಎಪಿಸೋಡ್‌ಗಳು ಈಗಾಗಲೇ ಚಿತ್ರೀಕರಣ ಆಗಿಬಿಟ್ಟಿವೆ. ಇನ್ನೂ ಕೆಲವು ಎಪಿಸೋಡ್‌ಗಳು ಚಿತ್ರೀಕರಣ ಆಗುವುದು ಬಾಕಿ ಇದೆ ಎನ್ನಲಾಗುತ್ತಿದೆ.
ಈ ಹಿಂದಿನ ಕೆಲವು ಸೀಸನ್‌ಗಳಲ್ಲಿ 7 ಕೋಟಿ ಇದ್ದ ಗ್ರ್ಯಾಂಡ್ ಪ್ರೈಜ್ ಈ ಬಾರಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಅಂಗವಾಗಿ 7.5 ಕೋಟಿಯನ್ನು ದೊಡ್ಡ ಬಹುಮಾನದ ಮೊತ್ತವಾಗಿ ನೀಡಲಾಗುತ್ತಿದೆ. ಈ ಶೋ ಅನ್ನೂ ಸಹ ಅಮಿತಾಬ್ ಬಚ್ಚನ್ ಅವರೇ ನಿರೂಪಣೆ ಮಾಡಲಿದ್ದಾರೆ.


Click it and Unblock the Notifications











