»   » ಮಗುದೊಮ್ಮೆ ಸಾಬೀತಾದ ಅಣ್ಣಾವ್ರ ಜನಪ್ರಿಯತೆ

ಮಗುದೊಮ್ಮೆ ಸಾಬೀತಾದ ಅಣ್ಣಾವ್ರ ಜನಪ್ರಿಯತೆ

Posted By:
Subscribe to Filmibeat Kannada
Dr. Rajkumar in Premada Kanike
ಭರ್ಜರಿ ಪ್ರದರ್ಶನ ಕಂಡ ಚಿತ್ರಗಳಿಗೆ ಟಿವಿ ವಾಹಿನಿಯಲ್ಲಿ ಜಾಹೀರಾತು ಪ್ರದರ್ಶಿಸಲು ಉತ್ತಮ ಬೇಡಿಕೆ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಅದಕ್ಕೆ ಮುಂಗಾರು ಮಳೆ, ಆಪ್ತಮಿತ್ರ, ಗಾಳಿಪಟ, ಕೆಂಪೇಗೌಡ, ಜಾಕಿ ಮುಂತಾದ ಚಿತ್ರಗಳೇ ಸಾಕ್ಷಿ. ಚಿತ್ರದ ಮಧ್ಯೆ ಜಾಹೀರಾತು ಇದೆಯೋ ಅಥವಾ ಜಾಹೀರಾತಿನ ಮಧ್ಯೆ ಚಿತ್ರ ಪ್ರದರ್ಶನ ಕಾಣುತ್ತಿದೆಯೋ ಎನ್ನುವಷ್ಟು ಮಟ್ಟಿಗೆ ಜಾಹೀರಾತು ಮಯವಾಗಿರುತ್ತದೆ.

ಮೂವತ್ತಾರು ವರ್ಷದ ಹಿಂದೆ ತೆರೆಕಂಡು ಅದ್ದೂರಿ ಪ್ರದರ್ಶನ ಕಂಡ ಚಿತ್ರವೊಂದು ಕಿರುತೆರೆಯಲ್ಲಿ ಪ್ರಸಾರವಾಗುತ್ತೆ. ಇತ್ತೀಚಿಗೆ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರಗಳಿಗೆ ಕಮ್ಮಿಯಿಲ್ಲದಂತೆ ಮೂರು ನಾಲ್ಕು ದಶಕಗಳಷ್ಟು ಹಿಂದಿನ ಈ ಚಿತ್ರವೊಂದು ಜಾಹೀರಾತು ವಿಚಾರದಲ್ಲಿ ಹೊಸ ಚಿತ್ರಗಳಿಗೆ ಪೈಪೋಟಿ ನೀಡುತ್ತದೆ ಎಂದರೆ ನಂಬಲಸಾಧ್ಯ.

ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರದಂದು (ಜು 27) ಡಾ. ರಾಜಕುಮಾರ್ ಮುಖ್ಯಭೂಮಿಕೆಯಲ್ಲಿರುವ ಪ್ರೇಮದಕಾಣಿಕೆ ಚಿತ್ರ ಉದಯ ಮೂವೀಸ್ ನಲ್ಲಿ ಪ್ರಸಾರಗೊಂಡಿತ್ತು. ರಾತ್ರಿ 7.30ಕ್ಕೆ ಆರಂಭವಾದ ಚಿತ್ರ ಮುಕ್ತಾಯಗೊಂಡಿದ್ದು ರಾತ್ರಿ ಹನ್ನೊಂದು ಗಂಟೆಗೆ ಐದು ನಿಮಿಷ ಇರಬೇಕಾದರೆ. ಅಂದರೆ ಉದಯವಾಹಿನಿ ಈ ಚಿತ್ರ ಮುಗಿಸಲು ಮೂರು ಗಂಟೆ ಮೂವತ್ತು ನಿಮಿಷ ತೆಗೆದುಕೊಂಡಿತು.

ಪ್ರತಿ ಹದಿನೈದು ನಿಮಿಷಕ್ಕೆ ಒಮ್ಮೆಯಂತೆ 7 ರಿಂದ 10 ನಿಮಿಷದವರೆಗೆ ಜಾಹೀರಾತು ಪ್ರದರ್ಶನಗೊಳ್ಳುತ್ತಿತ್ತು. ಸುಮಾರು 140 ನಿಮಿಷದ ಈ ಚಿತ್ರವನ್ನು ಉದಯ ಮೂವೀಸ್ 200 ನಿಮಿಷದಲ್ಲಿ ಮುಗಿಸಿತು. ಅದು ಕೂಡಾ ಅಲ್ಲಲ್ಲಿ ದೃಶ್ಯಗಳಿಗೆ ಕತ್ತರಿ ಪ್ರಯೋಗ ನಡೆಸಿ.

ರೈಲಿನಲ್ಲಿ ನಡೆಯುವ ಕೊಲೆಯ ರಹಸ್ಯ ಹಿನ್ನಲೆಯಲ್ಲಿ ಸಾಗುವ ಚಿತ್ರ ಆರಂಭದಿಂದ ಅಂತ್ಯದವರೆಗೂ ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. 1976 ರಲ್ಲಿ ಬಿಡುಗಡೆಗೊಂಡ ಪ್ರೇಮದಕಾಣಿಕೆ ಚಿತ್ರದಲ್ಲಿ ಡಾ. ರಾಜ್, ಜಯಮಾಲಾ, ಆರತಿ, ಬಾಲಕೃಷ್ಣ, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಪ್ರಮುಖ ತಾರಾಗಣದಲ್ಲಿದ್ದರು.

ವಿ ಸೋಮಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಉಪೇಂದ್ರ ಕುಮಾರ್ ಸಂಗೀತ ನೀಡಿದ್ದರು. ಚಿನ್ನ ಎಂದೂ ನಗುತೀರು, ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ, ಇದು ಯಾರು ಬರೆದ ಕಥೆಯೋ ನನಗಾಗಿ ಬಂದ ವ್ಯಥೆಯೋ ಹಾಡುಗಳು ಇಂದಿಗೂ ಜನಪ್ರಿಯ ಪಟ್ಟಿಗೆ ಸೇರಿದ ಮೆಲೋಡಿಯಸ್ ಗೀತೆಗಳು.

ಇಷ್ಟು ಹಳೆಯದಾದ ರಾಜಕುಮಾರ್ ಚಿತ್ರವೊಂದಕ್ಕೆ ಈ ರೀತಿಯ ಬೇಡಿಕೆ ಇದೆಯೆಂದರೆ ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ ಅಲ್ವೇ ?

English summary
Matinee idol Dr. Rajkumar's popularity was proved again. His one of the all time great movie 'Premada Kanike' released during 1976, was aired on Udaya Movies on Friday (July 27) had a lot of commercial breaks.
Please Wait while comments are loading...