»   » ಕೃತಿಚೌರ್ಯ ವಿವಾದ : 'ಅಕ್ಕ' ಧಾರಾವಾಹಿಗೆ ತಡೆಯಾಜ್ಞೆ

ಕೃತಿಚೌರ್ಯ ವಿವಾದ : 'ಅಕ್ಕ' ಧಾರಾವಾಹಿಗೆ ತಡೆಯಾಜ್ಞೆ

Posted By:
Subscribe to Filmibeat Kannada

ಈಟಿವಿ ವಾಹಿನಿಯಲ್ಲಿ ಡಿಸೆಂಬರ್ 2ರಿಂದ ಸಂಜೆ 8.30ರಿಂದ 9 ಗಂಟೆಯವರೆಗೆ ಪ್ರಸಾರವಾಗಬೇಕಿದ್ದ ಕನ್ನಡ ಧಾರಾವಾಹಿ 'ಅಕ್ಕ'ಗೆ ನಗರ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಧಾರಾವಾಹಿಯನ್ನು ಕದ್ದ ಕಥೆಯನ್ನು ಆಧರಿಸಿ ನಿರ್ಮಿಸಲಾಗಿದೆ ಎಂದು ದೂರಲಾಗಿತ್ತು.

ಚಿತ್ರ ನಿರ್ಮಾಪಕಿ ಮತ್ತು ಬರಹಗಾರ್ತಿ ರೇಖಾ ರಾಣಿ ಅವರು ತಮ್ಮದೇ ಕಥೆಯಾದ 'ಕಣ್ಮಣಿ'ಯನ್ನು ಕದ್ದು 'ಅಕ್ಕ' ಧಾರಾವಾಹಿಯನ್ನು ನಿರ್ಮಿಸಲಾಗಿದೆ. ಇದಕ್ಕೆ ತಡೆಯಾಜ್ಞೆ ನೀಡಬೇಕೆಂದು ಅವರು ನ್ಯಾಯಾಲಯದ ಕದವನ್ನು ತಟ್ಟಿದ್ದರು. ಅವರ ಅರ್ಜಿಯನ್ನು ಆಲಿಸಿದ ಸಿಟಿ ಸಿವಿಲ್ ಕೋರ್ಟ್ ನಂ.10ರ ನ್ಯಾಯಾಧೀಶರು ಶುಕ್ರವಾರ ತಡೆಯಾಜ್ಞೆ ನೀಡಿದ್ದಾರೆ.

ವಿವಾದಕ್ಕೆ ಗುರಿಯಾಗಿದ್ದ ಅವಳಿ-ಜವಳಿ ಅಕ್ಕತಂಗಿಯರ ಕಥೆಯಿದ್ದ 'ಅಕ್ಕ' ಧಾರಾವಾಹಿ ಈಟಿವಿ ವಾಹಿನಿಯಲ್ಲಿ ಡಿಸೆಂಬರ್ 2ರಿಂದ ಹೆಂಗಳೆಯರನ್ನು ಸೆಳೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಮುಂದಿನ ವಿಚಾರಣೆ ನಡೆದು, ಕೃತಿಚೌರ್ಯದ ವಿವಾದ ಇತ್ಯರ್ಥವಾಗುವವರೆಗೆ ಈ ಧಾರಾವಾಹಿ ಈಟಿವಿಯಲ್ಲಿ ಪ್ರಸಾರವಾಗುವುದಿಲ್ಲ.


Plagiarism : Court stays Akka Kannada serial


ಅಪ್ಪಅಮ್ಮನನ್ನು ಕಳೆದುಕೊಂಡರೂ ಅವಿಭಕ್ತ ಕುಟುಂಬವೊಂದರ ಕಣ್ಮಣಿಗಳಾಗಿ ಬೆಳೆದು, ವಿಭಿನ್ನ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ಪರಿಸ್ಥಿತಿಯ ಕೈಗೊಂಬೆಗಳಾಗಿ ಜೀವನದಲ್ಲಿ ಏಳುಬೀಳುಗಳನ್ನು ಕಂಡರೂ ದಿಟ್ಟವಾಗಿ ಎದುರಿಸಿ ನಿಲ್ಲುವ ಅವಳಿ-ಜವಳಿ ಹೆಣ್ಣುಮಕ್ಕಳಿಬ್ಬರ ಹೃದಯಂಗಮ ಕಥೆಯನ್ನು ಲೇಖಕಿ, ನಿರ್ಮಾಪಕಿ ರೇಖಾ ರಾಣಿ ಹೆಣೆದಿದ್ದಾರೆ. ಕಥೆ ಓಡೋಡುತ್ತಲೇ ವಿಶಿಷ್ಟ ತಿರುಗಳನ್ನು ಪಡೆದು ಕುತೂಹಲವನ್ನು ಹುಟ್ಟುಹಾಕುತ್ತದೆ.

ಪ್ರಸ್ತುತ ಈಟಿವಿಯಲ್ಲಿ ಕ್ರಿಯೇಟಿವ್ ಮುಖ್ಯಸ್ಥರಾಗಿರುವ ಪರಮೇಶ್ವರ ಗುಂಡಕಲ್ ಅವರಿಗೆ, ಅವರು ಜೀ ಕನ್ನಡದಲ್ಲಿದ್ದಾಗ ನಾಲ್ಕು ವರ್ಷಗಳ ಹಿಂದೆ 'ಕಣ್ಮಣಿ'ಯನ್ನು ಧಾರಾವಾಹಿ ನಿರ್ಮಿಸುವ ಉದ್ದೇಶದಿಂದ ರೇಖಾರಾಣಿ ಅವರು ನೀಡಿದ್ದರು. ಪರಮೇಶ್ವರ ಅವರು ಕಥೆಯನ್ನು ಮೆಚ್ಚಿ ಧಾರಾವಾಹಿ ನಿರ್ಮಿಸಲು ಒಪ್ಪಿಕೊಂಡಿದ್ದರು. ಆದರೆ, ಅವರು ತಡ ಮಾಡಿದಾಗ, ಸುವರ್ಣ ವಾಹಿನಿಯಿಂದಲೂ ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿ ಧಾರಾವಾಹಿ ಮಾಡಲು ಸೂಚಿಸಿದ್ದರು.

ಆದರೆ, ಪರಮೇಶ್ವರ ಅವರು ಜೀ ಕನ್ನಡದಿಂದ ಹಾರಿ ಈಟಿವಿ ಸೇರಿಕೊಂಡಾಗ ತಮ್ಮ ಕಥೆಯನ್ನೂ ಹೈಜಾಕ್ ಮಾಡಿದ್ದರು ಎಂದು ರೇಖಾರಾಣಿ ಆರೋಪಿಸಿದ್ದರು. ಈ ಕಥೆ ನನ್ನದೇ ಎಂಬುದಕ್ಕೆ ನನ್ನ ಬಳಿ ಸಾಕಷ್ಟು ಪುರಾವೆಗಳಿವೆ ಎಂದು ರೇಖಾರಾಣಿ ಒನ್ಇಂಡಿಯಾ ಕನ್ನಡಕ್ಕೆ ಹೇಳಿದ್ದರು. ಆದರೆ, ಧಾರಾವಾಹಿಯ ನಿರ್ಮಾಪಕರು ಕಥೆ ರೇಖಾರಾಣಿ ಅವರದೆಂದು ಒಪ್ಪಲು ನಿರಾಕರಿಸಿದಾಗ ರೇಖಾರಾಣಿ ಅವರು ಅನಿವಾರ್ಯವಾಗಿ ಕೋರ್ಟ್ ಮೆಟ್ಟಲೇರಬೇಕಾಯಿತು.

English summary
City Civil Court No.10 has stayed telecast of Akka Kannada TV serial on ETV, which was to be telecast from December 2, 2013. Rekha Rani, the original writer of the story had knocked on the door of court complaining plagiarism.
Please Wait while comments are loading...