»   » ಪುನೀತ್ ಅರ್ಪಿಸುವ ಕನ್ನಡದ ಕೊಟ್ಯಾಧಿಪತಿಗೆ ಇಂದು ತೆರೆ

ಪುನೀತ್ ಅರ್ಪಿಸುವ ಕನ್ನಡದ ಕೊಟ್ಯಾಧಿಪತಿಗೆ ಇಂದು ತೆರೆ

Posted By:
Subscribe to Filmibeat Kannada
Season 1 of Kannadada Kotyadipati comes to an end
ಕಿರುತೆರೆಯಲ್ಲಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಯಶಸ್ಸು ಪಡೆದುಕೊಂಡಿದ್ದ ಪುನೀತ್ ರಾಜಕುಮಾರ್ ನಿರೂಪಕರಾಗಿರುವ ಕನ್ನಡದ ಕೊಟ್ಯಾಧಿಪತಿ ಕಾರ್ಯಕ್ರಮಕ್ಕೆ ಇಂದು (ಜುಲೈ 26) ತೆರೆ ಬೀಳಲಿದೆ. ಮಾರ್ಚ್ 12, 2012 ರಂದು ಈ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಆರಂಭಗೊಂಡಿತ್ತು. 80 ಕಂತುಗಳ ಮೊದಲ ಈ ಗೇಂ ಶೋಗೆ ಇಂದು ತೆರೆಬೀಳಲಿದೆ.

ಸುಮಾರು ನಾಲ್ಕೈದು ತಿಂಗಳಿನಿಂದ ವಾರಕ್ಕೆ ನಾಲ್ಕು ದಿನ ಪ್ರಸಾರವಾಗಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದ ಈ ಗೇಂ ಶೋ ಕನ್ನಡಿಗರ ಜೊತೆ ಬೇರೆ ಭಾಷೆಯ ಜನರನ್ನೂ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಗೇಮ್ ಶೋ ನಡೆಯುತ್ತಿತ್ತು. ಉಳಿದ ಎರಡು ಭಾಷೆಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮ ಜನರನ್ನು ತನ್ನತ್ತ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿತ್ತು.

ಇಂದು (ಜು 26) ನಡೆಯುವ ಮೊದಲ ಸೀಸನ್ ನ ಕೊನೆಯ ಎಪಿಸೋಡ್ ನಲ್ಲಿ ಇದುವರೆಗೆ ಸ್ಪರ್ಧೆಯಲ್ಲಿ ಗೆದ್ದಿರುವ ಎಲ್ಲಾ ವಿಜೇತರು ಪ್ರೇಕ್ಷಕರಾಗಿ ಗ್ಯಾಲರಿಯಲ್ಲಿ ಹಾಜರಾಗಲಿದ್ದಾರೆ. ಯಾರಾದರೊಬ್ಬರು ಕೋಟಿ ಗೆಲ್ಲಬಹುದು ಎನ್ನುವ ನಿರೀಕ್ಷೆ ಸೀಸನ್ ಒಂದರಲ್ಲಂತೂ ಈಡೇರಲೇ ಇಲ್ಲ. ಇನ್ನೇನು ಕೋಟಿ ಗೆದ್ದೇ ಬಿಟ್ಟರು ಎಂದಿದ್ದ ರಾಯಚೂರಿನ ಪಂಪಣ್ಣ ಮಾಸ್ತರ್ 50 ಲಕ್ಷ ರೂಪಾಯಿಗೆ ತನ್ನ ಆಟ ಮುಗಿಸಿದರು.

ಸ್ಟಾರ್ ಟಿವಿಯ ಕಾರ್ಯಕ್ರಮವನ್ನು ಕಾಪಿ ಹೊಡೆದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದವರೂ ಈ ಶೋನಲ್ಲಿ ಭಾಗವಹಿಸಲು ಹಂಬಲಿಸುತ್ತಿದ್ದರು. ಮೊದಲಿನಿಂದಲೂ ವಿಶಿಷ್ಟ ರೀತಿಯಲ್ಲಿ ನಡೆದು ಬಂದ ಈ ಗೇಮ್ ಶೋಗೆ ನಿರ್ದೇಶಕ ಗುರುಪ್ರಸಾದ್ ಸಂಭಾಷಣೆ ಬರೆದಿದ್ದರು. ರಮ್ಯಾ, ಲಕ್ಷ್ಮಿ, ರವಿಚಂದ್ರನ್ ಮತ್ತು ಅನಿಲ್ ಕುಂಬ್ಳೆ ಸೆಲೆಬ್ರಿಟಿಗಳಾಗಿ ಶೋನಲ್ಲಿ ಭಾಗವಹಿಸಿದ್ದರು.

ಕೊಟ್ಯಾಧಿಪತಿ ಶೀರ್ಷಿಕೆಯಲ್ಲಿ ವ್ಯಾಕರಣ ದೋಷ ಇದೆಯೆಂದು ವಾದ, ವಿವಾದಗಳು ನಡೆದಿದ್ದವು. ಈ ವಾದ, ವಿವಾದದ ನಡುವೆ ಗೇಮ್ ಶೋನ ಅಂತಿಮ ಕಂತು ಇಂದು ಪ್ರಸಾರವಾಗಲಿದೆ. ಮೊದಲೇ ಕನ್ನಡದ ಪವರ್ ಸ್ಟಾರ್ ಆಗಿರುವ ಪುನೀತ್ ರಾಜಕುಮಾರ್, ಈ ಶೋನಲ್ಲಿ ತನ್ನ ನಿರೂಪಣಾ ಶೈಲಿಯಿಂದ ತನ್ನ ಜನಪ್ರಿಯತೆಯನ್ನು ಆಕಾಶದೆತ್ತರಕ್ಕೆ ಏರಿಸಿಕೊಂಡಿದ್ದಾರೆ.

ಬಹಳಷ್ಟು ಜನರ ಕಣ್ಣೀರಿಗೆ ಸಾಂತ್ವನವಾದ ಈ ಗೇಮ್ ಶೋನ ಎರಡನೇ ಕಂತು ಆದಷ್ಟು ಬೇಗ ಮತ್ತೆ ಆರಂಭವಾಗಿ, ಸಮಾಜದಲ್ಲಿ ವಿವಿಧ ಕಾರಣಗಳಿಂದ ನೊಂದ ಹೃದಯಗಳಿಗೆ ಮತ್ತೆ ಆಸರೆಯಾಗಲಿ ಎನ್ನುವುದು ಎಲ್ಲರ ಆಶಯ. ಯಾವ ಭಾಷೆಗೂ ಕಮ್ಮಿಯಿಲ್ಲದಂತೆ ಕಾರ್ಯಕ್ರಮ ಆಯೋಜಿಸಿದ ಸುವರ್ಣ ವಾಹಿನಿಗೆ ಮತ್ತು ನಿರೂಪಕ ಪುನೀತ್ ರಾಜಕುಮಾರ್ ಅವರಿಗೆ ಅಭಿನಂದನೆಗಳು.

English summary
The Season 1 of Kannadada Kotyadipati comes to an end today (July 26). This game show has given many memorable moments to the audience. Thanks to Suvarna TV and Puneet Rajkumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada