For Quick Alerts
  ALLOW NOTIFICATIONS  
  For Daily Alerts

  RRR ಪ್ಯಾನ್ ಇಂಡಿಯಾ ರಿಲೀಸ್ ಎನ್ನುವ ಐವಾಶ್: ಇದಕ್ಕೆ ಕಾರಣ ನಮ್ಮವರೇ

  |

  ಯಶಸ್ವೀ ನಿರ್ದೇಶಕ ಎಸ್.ಎಸ್.ರಾಜಮೌಳಿಯವರ ಬಹುನಿರೀಕ್ಷಿತ RRR ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಚಿಕ್ಕಬಳ್ಳಾಪುರದಲ್ಲಿ ನಡೆದಿತ್ತು. ಕನ್ನಡದ ನೆಲದಲ್ಲಿ ತೆಲುಗು ಭಾಷಿಗರ ಸಾಮರ್ಥ್ಯವನ್ನು ಒರೆಗಚ್ಚಲೆಂದೇ ಈ ಕಾರ್ಯಕ್ರಮವನ್ನು ಆಯೋಜಿಸಿದಂತಿತ್ತು. ಈ ಮಾತಿಗೆ ಕಾರಣಗಳೇನು ಎನ್ನುವುದು ಬಿಡಿಸಿ ಹೇಳಬೇಕಾಗಿಲ್ಲ.

  ರಾಜಮೌಳಿ ನೇತೃತ್ವದ ತಂಡ ಕನ್ನಡ, ಕನ್ನಡ ಭಾಷೆಯನ್ನು ಪೂಜಿಸಿ, ಆರಾಧಿಸುವ ರೀತಿಯಲ್ಲಿ ಅಲ್ಲಿ ಮಾತನಾಡಿದ್ದರು. ಪಾವಗಡ ತಾಲೂಕಿನಲ್ಲಿ ಘೋರ ಬಸ್ ದುರಂತವಾಗಿದ್ದರೂ, ಮುಖ್ಯಮಂತ್ರಿ ಬೊಮ್ಮಾಯಿಯವರು RRR ಚಿತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  ಆ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡಾ ಭಾಗವಹಿಸಿದ್ದರು. ತುಂಬಿದ ಸಭೆಯಲ್ಲಿ ಚಿತ್ರದ ಹೆಚ್ಚಿನ ಶೋವನ್ನು ಕನ್ನಡದಲ್ಲೇ ಪ್ರದರ್ಶಿಸಬೇಕು ಎಂದು ಖುದ್ದು ಮುಖ್ಯಮಂತ್ರಿಗಳೇ ಮನವಿ ಮಾಡಿದ್ದರು. ವೇದಿಕೆಯಲ್ಲಿ ಸೌಜನ್ಯದ ಪರಮಾವಧಿಯ ರೀತಿಯಲ್ಲಿ ತಲೆಯಾಡಿಸಿದ್ದ ರಾಜಮೌಳಿ, ಹೈದರಾಬಾದಿಗೆ ಹೋಗಿ ಮಾಡಿದ್ದು ಇನ್ನೊಂದು.

  ಅಲ್ಲಾ.. ಎಟ್ ಲೀಸ್ಟ್ ಮುಖ್ಯಮಂತ್ರಿಗಳ ಮನವಿಗೆ ಒಂದು ಬೆಲೆ ಬೇಡವೇ? ಸದ್ಯ ಈ ಲೇಖನ ಅಪ್ಲೋಡ್ ಆದ ಸಮಯದ ಪ್ರಕಾರ (ಮಾರ್ಚ್ 24, ಮಧ್ಯಾಹ್ನ ಹನ್ನೆರಡು ಗಂಟೆ) ಈ ಚಿತ್ರದ ಕನ್ನಡ ಅವತರಿಣಿಕೆ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಕೇವಲ ಹತ್ತು ಚಿತ್ರಮಂದಿರದಲ್ಲಿ, ಹದಿನೈದು ಶೋ!. ಕನ್ನಡದ ಈ ಪರಿಸ್ಥಿತಿಗೆ ಕಾರಣ ಯಾರು? ರಾಜಮೌಳಿಯವರೋ ಅಥವಾ ನಮ್ಮವರೋ?

   ದಕ್ಷಿಣ ಭಾರತದ ಯಾವ ಭಾಷೆಯಲ್ಲಿಯೂ ಇಲ್ಲದ ಡಬ್ಬಿಂಗ್ ನಿಷೇಧ ಕರುನಾಡಿನಲ್ಲಿ

  ದಕ್ಷಿಣ ಭಾರತದ ಯಾವ ಭಾಷೆಯಲ್ಲಿಯೂ ಇಲ್ಲದ ಡಬ್ಬಿಂಗ್ ನಿಷೇಧ ಕರುನಾಡಿನಲ್ಲಿ

  ಈ ಹಿಂದೆ, ದಕ್ಷಿಣ ಭಾರತದ ಯಾವ ಭಾಷೆಯಲ್ಲಿಯೂ ಇಲ್ಲದ ಡಬ್ಬಿಂಗ್ ನಿಷೇಧ ಕರುನಾಡಿನಲ್ಲಿತ್ತು. ಸ್ಯಾಂಡಲ್ ವುಡ್ಡಿನ ಘಟಾನುಗಟಿಗಳು ಡಬ್ಬಿಂಗಿಗೆ ವಿರೋಧ ವ್ಯಕ್ತ ಪಡಿಸಿದ್ದರು. ಬದಲಾದ ಕಾಲಘಟ್ಟ, ಪ್ರೇಕ್ಷಕರ ಅಭಿರುಚಿಯನ್ನು ಮೆಟ್ಟಿನಿಲ್ಲಲು ಸಾಧ್ಯವಾಗದ ಹಿನ್ನಲೆಯಲ್ಲಿ ಡಬ್ಬಿಂಗ್ ಎನ್ನುವ ಭೂತಕ್ಕೆ ತಿಲಾಂಜಲಿ ಬಿದ್ದಿತ್ತು. ಆದರೆ ಏನು ಪ್ರಯೋಜನ? ಡಬ್ಬಿಂಗ್ ಬೇಕೆಂದು ಹೂಂಕರಿಸಿದ್ದ ಸೆಲೆಬ್ರಿಟಿಗಳು, ಭಾಷಾಭಿಮಾನಿಗಳು, ಪ್ರೇಕ್ಷಕರು ಯಾರೇ ಆಗಲಿ, ಈಗ RRR ಚಿತ್ರತಂಡದಿಂದ ಕನ್ನಡಕ್ಕೆ ಆಗುತ್ತಿರುವ ಅವಮಾನಕ್ಕೆ ಜವಾಬ್ದಾರಿಯಾಗುತ್ತಾರಾ? ಆಗುವುದಿಲ್ಲ..ಯಾಕೆಂದರೆ ಅದಕ್ಕೆ ನಮ್ಮವರೇ ಸಮಸ್ಯೆ..

   ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್

  ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್

  ಅತಿವೇಗದಲ್ಲಿ ಶತಕೋಟಿ ಗಳಿಕೆ ಕಂಡಿದೆ ಎನ್ನುವುದು ಆಮೇಲೆ, ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಗೆ ಏಪ್ರಿಲ್ 25ರಿಂದ ಚಿತ್ರಮಂದಿರದ ಸಮಸ್ಯೆ ಎದುರಾಗುವುದು ಖಂಡಿತ. ಕಾಶ್ಮೀರ್ ಫೈಲ್ಸ್ ಒಂದು ಕಡೆಯಾದರೆ, ಕನ್ನಡ ಚಿತ್ರಕ್ಕೆ ಬಹುದೊಡ್ಡ ಹೊಡೆತ RRR ಚಿತ್ರದಿಂದ. ಜೇಮ್ಸ್ ಎನ್ನುವ ಕನ್ನಡಿಗರ ಭಾವನಾತ್ಮಕ ಚಿತ್ರಕ್ಕೆ ಹೀಗಾಗಬಹುದಾದರೆ, ಏಪ್ರಿಲ್ 25ಕ್ಕೆ ಬಿಡುಗಡೆಗೆ ಸಿದ್ದವಾಗಿರುವ ಹೊಸಬರ ಕನ್ನಡ ಚಿತ್ರಕ್ಕೆ ಚಿತ್ರಮಂದಿರ ನೀಡುವವರಾರು? ಇದಕ್ಕೆ ಮೊದಲು ದೂಷಿಸಬೇಕಾಗಿರುವುದು ನಮ್ಮ ಚಲನಚಿತ್ರ ಮಂಡಳಿಯನ್ನು..

   ಚಲನಚಿತ್ರ ಮಂಡಳಿ (KFCC) ಹಲ್ಲುಕಿತ್ತ ಹಾವು

  ಚಲನಚಿತ್ರ ಮಂಡಳಿ (KFCC) ಹಲ್ಲುಕಿತ್ತ ಹಾವು

  ಪರಭಾಷಾ ಚಿತ್ರಗಳಿಂದ ಕನ್ನಡದ ಸಿನಿಮಾಗಳಿಗೆ ಹೊಡೆತ ಎನ್ನುವ ಸುದ್ದಿ ಹೊಸದೇನಲ್ಲ. ಅದರಲ್ಲೂ ತೆಲುಗು, ತಮಿಳು ಸಿನಿಮಾಗಳು ಬಿಡುಗಡೆಯಾದರಂತೂ ಕನ್ನಡ ಸಿನಿಮಾ ನೋಡಲು ಚಿತ್ರಮಂದಿರಗಳು ಎಲ್ಲಿವೆ ಎಂದು ದುರ್ಬಿನ್ ಹಿಡಿದು ನೋಡುವ ಪರಿಸ್ಶಿತಿ ಇಂದು ನಿನ್ನೆಯದಲ್ಲ. ಇದಕ್ಕೆ ಒಂದು ಭಾಷಾಭಿಮಾನದ ಕೊರತೆಯಿರಬಹುದು, ಇನ್ನೊಂದು ಚಲನಚಿತ್ರ ಮಂಡಳಿ (KFCC) ಹಲ್ಲುಕಿತ್ತ ಹಾವಿನಂತಿರಬಹುದು, ಮಗದೊಂದು ಮಂಡಳಿಯ ಆಯಕಟ್ಟಿನವರೇ ಇದಕ್ಕೆ ಕಾರಣರಾಗಿರಬಹುದು.

   ಕನ್ನಡದ ಖ್ಯಾತ ನಿರ್ಮಾಪಕ ಕೆ.ಮಂಜು

  ಕನ್ನಡದ ಖ್ಯಾತ ನಿರ್ಮಾಪಕ ಕೆ.ಮಂಜು

  ಒಂದು ಉದಾಹರಣೆ ಕೊಡಬಹುದಾದರೆ ಕನ್ನಡದ ಖ್ಯಾತ ನಿರ್ಮಾಪಕ ಕೆ.ಮಂಜು (ಕೊಬ್ಬರಿ ಮಂಜು) ತಮಿಳು ನಟ ವಿಜಯ್ ಅವರ ವೇಲಾಯುಧಂ ಮತ್ತು ಮತ್ತೋರ್ವ ನಟ ಅಜಿತ್ ಕುಮಾರ್ ಅವರ ಬಿಲ್ಲಾ - 2 ಚಿತ್ರದ ಕರ್ನಾಟಕ ವಿತರಣೆ ಹಕ್ಕನ್ನು ಪಡೆದಿದ್ದರು. ಆ ವೇಳೆ ಬಿಡುಗಡೆಯಾಗಿದ್ದ ಅಷ್ಟೂ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರದ ಸಮಸ್ಯೆ ಎದುರಾಗಿತ್ತು. ಚಿತ್ರತಂಡದವರ ಕೂಗನ್ನು ಚಲನಚಿತ್ರ ಮಂಡಳಿ ಆದಿಯಾಗಿ ಕೇಳುವವರೇ ಇರಲಿಲ್ಲ.

   RRR ಪ್ಯಾನ್ ಇಂಡಿಯಾ ರಿಲೀಸ್ ಎನ್ನುವ ಐವಾಶ್

  RRR ಪ್ಯಾನ್ ಇಂಡಿಯಾ ರಿಲೀಸ್ ಎನ್ನುವ ಐವಾಶ್

  ಒಂದಷ್ಟು ದಿನ ಟ್ವಿಟ್ಟರ್ ನಲ್ಲಿ ಕನ್ನಡ ಸಿನಿಮಾಗಳಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಟ್ರೆಂಡಿಂಗ್ ಆಯಿತು, ಆಮೇಲೆ ಠುಸ್. ಈಗ ಅದೇ ರೀತಿ, RRR ಸಿನಿಮಾದ ಕನ್ನಡ ಅವತರಣಿಕೆ ಹೆಚ್ಚಿನ ಸ್ಕ್ರೀನ್ ನಲ್ಲಿ ಬಿಡುಗಡೆಯಾಗುತ್ತಿಲ್ಲ ಎಂದು ಎರಡು ದಿನಗಳಿಂದ ಟ್ವಿಟ್ಟರ್ ನಲ್ಲಿ #BanRRRinkarnataka ಟ್ರೆಂಡಿಂಗ್ ನಲ್ಲಿದೆ. ಇದು ಚಿತ್ರತಂಡದ ಪ್ರಚಾರ ತಂತ್ರವೂ ಇರಬಹುದು. ಇದೂ ಅಷ್ಟೇ, ಸ್ವಲ್ಪದಿನ ಟ್ರೆಂಡ್ ಆಗುತ್ತೆ, ಆಮೇಲೆ ಮತ್ತದೇ ರಾಗ. ಒಟ್ಟಿನಲ್ಲಿ, ಕನ್ನಡಿಗರು ಗಟ್ಟಿ ಮನಸ್ಸು ಮಾಡಿದರೇ ಮಾತ್ರ ಇದಕ್ಕೆಲ್ಲಾ ಪರಿಹಾರ ಸಾಧ್ಯವೇ ಹೊರತು, ನಮ್ಮ ಚಲನಚಿತ್ರ ಮಂಡಳಿ, ನಿರ್ಮಾಪಕರು, ವಿತರಕರನ್ನು ನಂಬಿದರೆ ಅಲ್ಲ.

  English summary
  RRR Kannada Version Release In Karnataka Neglected. Screening Limited Show. Know More, RRR
  Thursday, March 24, 2022, 15:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X