ಲಾಕ್‌ಡೌನ್ ನಿಯಮ ಪಾಲಿಸಿ ಸರಳ ವಿವಾಹದ ಮೂಲಕ ಮಾದರಿಯಾದ ನಟ
ಮಲಯಾಳಂ ಚಿತ್ರರಂಗದ ಪ್ರಶಸ್ತಿ ವಿಜೇತ ನಟ ಮಣಿಕಂದನ್ ಆಚಾರಿ ಕೇರಳದ ತ್ರಿಪುರಾಂತರದ ದೇವಸ್ಥಾನವೊಂದರಲ್ಲಿ ತಮ್ಮ ಗೆಳತಿ ಅಂಜಲಿ ಅವರನ್ನು ಭಾನುವಾರ ಮದುವೆಯಾಗಿದ್ದಾರೆ. ಆಡಂಬರ, ಹೆಚ್ಚು ಜನರಿಲ್ಲದೆ ಅತ್ಯಂತ ಸರಳ ರೀತಿಯಲ್ಲಿ ಅವರು ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ.
Recommended Video
ಮತ್ತೊಂದು ವಿಶೇಷವೆಂದರೆ ಮಣಿಕಂದನ್ ಮತ್ತು ಅಂಜಲಿ ಇಬ್ಬರೂ ತಮ್ಮ ಮದುವೆಗೆ ಬಳಸಲು ಕೂಡಿರಿಸಿದ್ದ ಹಣವನ್ನೆಲ್ಲ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಸಿಪಿಐಎಂನ ಶಾಸಕ ಎಂ. ಸ್ವರಾಜ್ ಅವರಿಗೆ ಈ ಹಣವನ್ನು ಅವರು ಹಸ್ತಾಂತರಿಸಿದ್ದಾರೆ.
ಅನೇಕ ಸಿನಿಮಾಗಳಲ್ಲಿ ನಟಿಸಿರುವ ಮಣಿಕಂದನ್, 2016ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ತಾವು ನಟಿಸಿದ ಮೊದಲ ಚಿತ್ರ 'ಕಮ್ಮಟಿಪಾದ'ದ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಮುಂದೆ ಓದಿ...

ಸರಳವಾಗಿ ಮದುವೆ
ಮದುವೆ ಸಂದರ್ಭದಲ್ಲಿ ಮಣಿಕಂದನ್ ಮತ್ತು ಅಂಜಲಿ ಕುಟುಂಬದವರು ಲಾಕ್‌ಡೌನ್ ನಿಯಮಗಳು ಹಾಗೂ ಸಾಮಾಜಿಕ ಅಂತರದ ನಿಯಮ ಮತ್ತು ಶಿಷ್ಟಾಚಾರಗಳನ್ನು ಪಾಲಿಸಿದರು. ಆರು ತಿಂಗಳ ಹಿಂದೆಯೇ ಮದುವೆಯ ದಿನಾಂಕ ನಿಶ್ಚಯವಾಗಿತ್ತು. ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಅದನ್ನು ಮುಂದೂಡಲು ಅವರು ಬಯಸಿರಲಿಲ್ಲ. ಹೀಗಾಗಿ ಎರಡೂ ಕುಟುಂಬದ ಕೆಲವೇ ಮಂದಿಯ ಸಮ್ಮುಖದಲ್ಲಿ ಸರಳವಾಗಿ ದೇವಸ್ಥಾನದಲ್ಲಿ ಮದುವೆ ನೆರವೇರಿಸಲು ಸಮ್ಮತಿ ನೀಡಿದ್ದರು.

ಅದ್ಧೂರಿಯಾಗದಿದ್ದಕ್ಕೆ ಬೇಸರವಿಲ್ಲ
ಮದುವೆಯ ಬಳಿಕ ಮಾತನಾಡಿದ ಮಣಿಕಂದನ್, 'ನಾವು ಕೊರೊನಾ ವೈರಸ್ ಹಾವಳಿಯನ್ನು ನಿಯಂತ್ರಿಸುವುದರಲ್ಲಿ ಯಶಸ್ವಿಯಾಗುತ್ತೇವೆ, ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿರುವುದಕ್ಕೆ ನಮಗೆ ಖುಷಿಯಿದೆ. ನಮ್ಮ ಮದುವೆ ಅದ್ಧೂರಿಯಾಗಿ ನಡೆಯಲಿಲ್ಲ ಎನ್ನುವುದು ನಮಗೆ ಬೇಸರವನ್ನೇನೂ ಮೂಡಿಸಿಲ್ಲ' ಎಂದಿದ್ದಾರೆ.

ದೇವಸ್ಥಾನದಲ್ಲಿ ಆದ ಭೇಟಿ
ಮಣಿಕಂದನ್ ಮತ್ತು ಮರಾಡು ಪ್ರದೇಶದ ಅಂಜಲಿ ಇಬ್ಬರೂ ಒಂದೂವರೆ ವರ್ಷದ ಹಿಂದೆ ದೇವಸ್ಥಾನವೊಂದರ ಉತ್ಸವದಲ್ಲಿ ಭೇಟಿಯಾಗಿದ್ದರು. ಹಾಗೆಯೇ ಪ್ರೀತಿಯಲ್ಲಿ ಬಿದ್ದರು. ಅವರ ಪ್ರೀತಿಗೆ ಮನೆಯವರ ಆಶೀರ್ವಾದವೂ ಸಿಕ್ಕಿತು. ಅದೀಗ ಮದುವೆಯ ಅಂಕಿತ ಪಡೆದುಕೊಂಡಿದೆ.

ಇದು ಸಂಭ್ರಮಿಸುವ ಸಮಯವಲ್ಲ
'ಮದುವೆಯನ್ನು ಮುಂದೂಡದೆ ಈ ವೇಳೆಯೇ ನಡೆಸುವ ನಿರ್ಧಾರವನ್ನು ಎಲ್ಲರೂ ಸೇರಿ ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಸಂತೋಷವಿದೆ' ಎಂದು ಅಂಜಲಿ ಹೇಳಿದ್ದಾರೆ. 'ಇದು ಸಂಭ್ರಮ ಪಡುವ ಸಮಯವಲ್ಲ. ಏಕೆಂದರೆ ಇಡೀ ಜಗತ್ತು ಸಂಕಷ್ಟದಲ್ಲಿದೆ. ನಾವು ಯಾವಾಗ ಬೇಕಾದರೂ ಸಂಭ್ರಮಾಚರಣೆ ಮಾಡಬಹುದು' ಎಂದು ಮಣಿಕಂದನ್ ತಿಳಿಸಿದ್ದಾರೆ.


Click it and Unblock the Notifications











