For Quick Alerts
  ALLOW NOTIFICATIONS  
  For Daily Alerts

  ಕಮಲ್ ಕನ್ನಡ ಅಭಿಮಾನಿಗಳ ಸುವರ್ಣ ಸಂಭ್ರಮ

  By Staff
  |

  ನಟ ಕಮಲ್ ಹಾಸನ್ ಚಿತ್ರೋದ್ಯಮಕ್ಕೆ ಅಡಿಯಿಟ್ಟು ಅದಾಗಲೇ 50 ವಸಂತಗಳು ಉರುಳಿಹೋಗಿವೆ! ಈ ಒಂದು ಸುದೀರ್ಘ ಪಯಣದಲ್ಲಿ ಕಮಲ್ ಹಲವಾರು ಮೈಲುಗಲ್ಲುಗಳನ್ನು ತಲುಪಿರುವುದು ವಿಶೇಷ. ಈ ಸುವರ್ಣಾವಕಾಶವನ್ನು ಕರ್ನಾಟಕ ಕಮಲ್ ಅಭಿಮಾನಿಗಳ ಸಂಘ ಸಡಗರ, ಸಂಭ್ರದದಿಂದ ಆಚರಿಸಲು ಉತ್ಸುಕವಾಗಿದೆ.

  ಈ ಐವತ್ತು ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಹಲವು ಭಾರತೀಯ ಭಾಷೆಗಳ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಘನತೆ ಕಮಲ್ ಅವರದು. ಕೇವಲ ನಟನೆಗೆ ಮಾತ್ರ ಸೀಮಿತವಾಗದೆ ನಿರ್ದೇಶನಕ್ಕೂ ಕೈ ಹಾಕಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಂತಹ ಪ್ರತಿಭಾವಂತ. ಇದು ಕೇವಲ ಕಮಲ ಹಾಸನ್ ಅವರಷ್ಟೇ ಅಲ್ಲ ಅವರ ಅಭಿಮಾನಿಗಳೂ ಸಂಭ್ರಮಿಸಬೇಕಾದ ದಿನ.

  ''ಕಮಲ ಹಾಸನ್ ಚಿತ್ರೋದ್ಯಮಕ್ಕೆ ಅಡಿಯಿಟ್ಟು 50 ವರ್ಷಗಳಾದವು. ಹಿಂದಿ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈ ರೀತಿಯ ಸಾಧನೆಗೈದ ನಟ ಮತ್ತೊಬ್ಬರಿಲ್ಲ. ಈ ಒಂದು ಅಪೂರ್ವ ಸಾಧನೆಯನ್ನು ಸಮಸ್ತ ಕಮಲ್ ಅಭಿಮಾನಿಗಳು ಸಂಭ್ರಮಿಸಬೇಕಾಗಿದೆ'' ಎನ್ನುತ್ತಾರೆ ಕರ್ನಾಟಕ ಕಮಲ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಪ್ರಕಾಶ್.

  ಚೆನ್ನೈನ ಕಮಲ್ ಅಭಿಮಾನಿಗಳ ಸಂಘದೊಂದಿಗೆ ಕೈಜೋಡಿಸಿಆಗಸ್ಟ್ 12ರಂದು ಅದ್ದೂರಿ ಕಾರ್ಯಕ್ರಮ ನಡೆಸುತ್ತಿರುವುದಾಗಿ ಪ್ರಕಾಶ್ ತಿಳಿಸಿದರು. ಕಮಲ್ ಗೂ ಆಗಸ್ಟ್ 12ಕ್ಕೂ ಅವಿನಾಭಾವ ಸಂಬಂಧ. ಏಕೆಂದರೆ ಕಮಲ್ ಅಭಿನಯದ ಮೊದಲ ಚಿತ್ರ ಬಿಡುಗಡೆಯಾಗಿದ್ದು 1960ರ ಆಗಸ್ಟ್ 12ರಂದೇ. ಆ ದಿನವನ್ನು ಅದ್ದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಪ್ರಕಾಶ್ ತಿಳಿಸಿದರು.

  ಭಾರತೀಯ ಚಿತ್ರೋದ್ಯಮದಲ್ಲಿ ಬಹುಭಾಷಾ ನಟನೊಬ್ಬ ಐವತ್ತು ವರ್ಷಗಳನ್ನು ಪೂರೈಸಿದ್ದಾನೆ ಎಂದರೆ ಅದು ಕಮಲ್ ಗೆ ಮಾತ್ರ ಸಾಧ್ಯ ಎನ್ನುತ್ತಾರೆ ನಟ, ನಿರ್ದೇಶಕ ರಮೇಶ್ ಅರವಿಂದ್. ಕಮಲ್ ಜತೆ ತಮಿಳು ಸೇರಿದಂತೆ ಕನ್ನಡದಲ್ಲಿ 'ರಾಮ ಶಾಮ ಭಾಮ' ಚಿತ್ರದಲ್ಲಿ ರಮೇಶ್ ಅರವಿಂದ್ ನಟಿಸಿರುವುದು ಗೊತ್ತೇ ಇದೆ.

  ಈ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್, ಹೊಸ ಪೀಳಿಗೆಯ ನಟ, ನಿರ್ದೇಶಕರಿಗೆ ಕಮಲ್ ಯಾವತ್ತೂ ಸ್ಫೂರ್ತಿಯ ಸೆಲೆ. ನಟನೆ, ಸಂಭಾಷಣೆ, ನಿರ್ದೇಶನ ಸೇರಿದಂತೆ ಚಿತ್ರ ನಿರ್ಮಾಣದ ವಿವಿಧ ಆಯಾಮಗಳಲ್ಲಿ ತನ್ನದೆ ಆದ ವಿಶಿಷ್ಟ ಪ್ರತಿಭೆಯನ್ನು ತೋರಿಸಿದ ಘನತೆ ಕಮಲ್ ಗೆ ಸಲ್ಲುತ್ತದೆ. ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ ಕಮಲ್ ಇಂದು ಜಗತ್ತಿನ ಬಹುದೊಡ್ಡ ನಟರ ಸಾಲಿನಲ್ಲಿ ನಿಲ್ಲುತ್ತಾರೆ ಎಂದರು.

  ''ಯಾವ ಕೋನದಿಂದ ನೋಡಿದರೂ ಅವರೊಬ್ಬ ಅದ್ಭುತ ನಟ. ಅವರನ್ನು ಸನ್ಮಾನಿಸುವ ದಿನಕ್ಕಾಗಿ ಕಾಯುತ್ತಿದ್ದೇನೆ. ವೈಯಕ್ತಿಕವಾಗಿ ಕಮಲ್ ರನ್ನು ಅಭಿನಂದಿಸಬೇಕು ಎಂಬುದು ನನ್ನ ಇಚ್ಛೆ ಎಂದು ರಮೇಶ್ ತಮ್ಮ ಸಹೋದ್ಯೋಗಿ ನಟನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X