For Quick Alerts
ALLOW NOTIFICATIONS  
For Daily Alerts

  2018 ರೌಂಡಪ್: ಗಾಂಧಿನಗರದಲ್ಲಿ ಈ ವರ್ಷ ಕೋಲಾಹಲ ಸೃಷ್ಟಿಸಿದ ವಿವಾದಗಳಿವು.!

  |

  ಪ್ರತಿ ವರ್ಷದಂತೆ ಈ ವರ್ಷವೂ ಗಾಂಧಿನಗರದಲ್ಲಿ ವಿವಾದಗಳಿಗೇನೂ ಕಮ್ಮಿ ಇರಲಿಲ್ಲ. ಹೊಸ ಹೊಸ ಚಿತ್ರಗಳಿಂದ, ಕ್ರಿಯೇಟಿವಿಯಿಂದ, ಕಲೆಕ್ಷನ್ ನಿಂದ ಸದ್ದು ಮಾಡಬೇಕಿದ್ದ ಸ್ಯಾಂಡಲ್ ವುಡ್ ಈ ವರ್ಷ ಬೇಜಾನ್ ವಿವಾದಗಳಿಂದ ಸುದ್ದಿ ಮಾಡಿತು.

  ಅದ್ರಲ್ಲೂ, ಈ ವರ್ಷ ಹೆಚ್ಚು ವಿವಾದಗಳನ್ನ ಮೈ ಮೇಲೆ ಎಳೆದುಕೊಂಡು ಬ್ರೇಕಿಂಗ್ ನ್ಯೂಸ್ ಮಾಡಿದವರು ಬ್ಲಾಕ್ ಕೋಬ್ರಾ ದುನಿಯಾ ವಿಜಯ್.! ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾದ ದುನಿಯಾ ವಿಜಯ್ ಫ್ಯಾಮಿಲಿ ಪ್ರಾಬ್ಲಂ ಬೀದಿಬೀದಿಯಲ್ಲಿ ಚರ್ಚೆ ಆಗುವ ಹಾಗೆ ಆಗಿದ್ದು ಕೆಲ ತಿಂಗಳುಗಳ ಹಿಂದೆಯಷ್ಟೇ.

  ಇನ್ನೂ #ಮೀಟೂ ಅಭಿಯಾನ ಶುರು ಆಗುತ್ತಿದ್ದ ಹಾಗೆ, ಕನ್ನಡ ನಟಿ ಶ್ರುತಿ ಹರಿಹರನ್ ಸೃಷ್ಟಿಸಿದ ವಿವಾದ ಇನ್ನೂ ತಣ್ಣಗಾಗಿಲ್ಲ. ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನ ಸಮಸ್ಯೆ ಸದ್ಯ ಕೋರ್ಟ್ ಅಂಗಳದಲ್ಲಿದೆ.

  ಅತ್ತ ಆಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರಿದರೂ, ನಟ ದರ್ಶನ್ ಗೆ ಕಾಂಟ್ರವರ್ಸಿಯ ಬಿಸಿ ತಾಕಿತು. ಇತ್ತ 'ದಿ ವಿಲನ್' ಚಿತ್ರ ಮಾಡಿದ ಪ್ರೇಮ್ ಸೌಂಡ್ ಮಾಡಿದ್ದೆಲ್ಲಾ ಬೇಡದ ವಿಚಾರಕ್ಕೆ. ಹೀಗೇ ಹೇಳುತ್ತಾ ಹೋದರೆ ಇನ್ನೂ ಸಾಕಷ್ಟಿದೆ.

  2018 ರಲ್ಲಿ ಸ್ಯಾಂಡಲ್ ವುಡ್ ನಲ್ಲಿ ನಡೆದ ಗದ್ದಲ-ಗಲಾಟೆ, ಕೋಳಿ ಜಗಳ, ವಾಕ್ಸಮರಗಳ ಸುತ್ತ ಒಂದು ಇಣುಕು ನೋಟ ಇಲ್ಲಿದೆ, ನೋಡಿರಿ...

  ರಾಪ್ ವಾರ್

  ಕನ್ನಡ ರಾಪರ್ಸ್ ಅಲೋಕ್ ಮತ್ತು ರಾಹುಲ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳು ತಿರುಗಿ ಬಿದ್ದದ್ದು ಇದೇ ವರ್ಷಾರಂಭದಲ್ಲಿ. 'ನಂಗನ್ಸಿದ್ದು' ಹಾಡಿನಲ್ಲಿ ಚಂದನ್ ಶೆಟ್ಟಿ ಕಾಲೆಳೆಯಲಾಗಿದೆ ಎಂಬ ಕಾರಣಕ್ಕೆ ಅಲೋಕ್ ಹಾಗೂ ರಾಹುಲ್ ಯದ್ವಾತದ್ವಾ ಟ್ರೋಲ್ ಆಗಿದ್ದರು.


  ಚಂದನ್ ಶೆಟ್ಟಿಗೆ ಯಾಕೆ ಕ್ಷಮೆ ಕೇಳಬೇಕು ಗುರು.?

  ಜಗ್ಗೇಶ್ ವರ್ಸಸ್ ರಮ್ಯಾ

  ''ಪ್ರಧಾನಿ ಮೋದಿ ನಶೆಯಲ್ಲಿದ್ದಾಗ ಹೀಗೆ ಆಗೋದು'' ಎಂದು ಟ್ವೀಟ್ ಮಾಡಿದ್ದ ನಟಿ ರಮ್ಯಾಗೆ ತಿರುಗೇಟು ನೀಡುವ ಸಲುವಾಗಿ ಜಗ್ಗೇಶ್ ಮಾಡಿದ್ದ ಒಂದು ಟ್ವೀಟ್ ವಿವಾದಕ್ಕೆ ಕಾರಣವಾಗಿತ್ತು. ತಮ್ಮ ಟ್ವೀಟ್ ನಲ್ಲಿ 'ಪಾರ್ಟಿ' ಮತ್ತು 'ಪಲ್ಲಂಗ' ಎಂಬ ಪದಗಳನ್ನ ಪ್ರಯೋಗ ಮಾಡಿದ್ದರು ಜಗ್ಗೇಶ್. ಇದರಿಂದ ರಮ್ಯಾ ಫ್ಯಾನ್ಸ್ ಮತ್ತು ಜಗ್ಗೇಶ್ ನಡುವೆ ಟ್ವೀಟ್ ಸಮರ ನಡೆದಿತ್ತು.


  'ಪಲ್ಲಂಗ' ಅಂದ್ರೆ 'ಅದಲ್ಲ'! ಜಗ್ಗೇಶ್ ಹೇಳಿದ್ದು ಬೇರೆಯದ್ದೇ ಅರ್ಥದಲ್ಲಿ...

  ರಮ್ಯಾ ಫೇಕ್ ಅಕೌಂಟ್ ಕಥೆ

  ಫೇಕ್ ಅಕೌಂಟ್ ಗಳ ಬಗ್ಗೆ ರಮ್ಯಾ ಮಾತನಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಆ ವಿಡಿಯೋದಲ್ಲಿ ''ಫೇಕ್ ಅಕೌಂಟ್ ಕ್ರಿಯೇಟ್ ಮಾಡುವುದು ತಪ್ಪಲ್ಲ'' ಎನ್ನುವ ಅರ್ಥದಲ್ಲಿ ರಮ್ಯಾ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ರಮ್ಯಾ ವಿವಾದದ ಕೇಂದ್ರಬಿಂದುವಾದರು. ಕೊನೆಗೆ ಈ ಬಗ್ಗೆ ರಮ್ಯಾ ಸ್ಪಷ್ಟನೆ ನೀಡಿದರು.


  ಫೇಕ್ ಅಕೌಂಟ್ ವಿಡಿಯೋ ಬಗ್ಗೆ ಫೇಸ್ ಬುಕ್ ನಲ್ಲಿ ಕ್ಲಾರಿಟಿ ಕೊಟ್ಟ ರಮ್ಯಾ

  ರೊಚ್ಚಿಗೆದ್ದ ಪ್ಯಾಟೆ ಹುಡುಗಿಯರು.!

  ಸ್ಟಾರ್ ಸುವರ್ಣ ವಾಹಿನಿಯ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮದ ನಾಲ್ಕನೇ ಆವೃತ್ತಿಗಾಗಿ ನಡೆಯುತ್ತಿದ್ದ ಆಡಿಷನ್ ನಲ್ಲಿ ಯುವತಿಯರಿಗೆ ರಿಯಾಲಿಟಿ ಶೋ ಆಯೋಜಕರು ಅಶ್ಲೀಲ ಹಾಗೂ ಕೀಳು ಮಟ್ಟದ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿ ಹುಡುಗಿಯರು ರಾದ್ಧಾಂತ ಸೃಷ್ಟಿಸಿದ್ದು ಇದೇ ವರ್ಷ.


  'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಅಶ್ಲೀಲ ಆಡಿಷನ್: ರೊಚ್ಚಿಗೆದ್ದ ಯುವತಿಯರು!

  ಕೆ.ಪಿ.ಜೆ.ಪಿಗೆ ಉಪೇಂದ್ರ ಗುಡ್ ಬೈ

  'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'ಗೆ ರಿಯಲ್ ಸ್ಟಾರ್ ಉಪೇಂದ್ರ 'ದೊಡ್ಡ ನಮಸ್ಕಾರ' ಹಾಕಿದರು. ಸೈನಿಂಗ್ ಅಥಾರಿಟಿ ವಿಷಯದಲ್ಲಿ ಉಪೇಂದ್ರ ಮತ್ತು ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದ ಕಾರಣ ಕೆ.ಪಿ.ಜೆ.ಪಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿತು. ಕೊನೆಗೆ ಪಕ್ಷದಿಂದ ಉಪೇಂದ್ರ ಹೊರಬಂದರು.


  ಕೆ.ಪಿ.ಜೆ.ಪಿಗೆ ಉಪೇಂದ್ರ ಗುಡ್ ಬೈ: ಹೊಸ 'ಪ್ರಜಾಕೀಯ' ಪಕ್ಷ ಕಟ್ಟಲು ನಿರ್ಧಾರ!

  ಲಕ್ಷ್ಮಿ-ಸುಂದರ್ ಮ್ಯಾರೇಜ್ ಸ್ಟೋರಿ

  ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಅವರ ಮಗಳು ಲಕ್ಷ್ಮಿ ನಾಯ್ಕ್ ಇದ್ದಕ್ಕಿದ್ದಂತೆ ಕಾಣೆಯಾಗಿ ಕನ್ನಡ ನಿರ್ಮಾಪಕ ಸುಂದರ್ ಗೌಡ ಅವರನ್ನು ಮದುವೆ ಆದ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗಿದ್ದು ಇದೇ ವರ್ಷ. ಇನ್ನೂ ನಿರ್ಮಾಪಕ ಸುಂದರ್ ಗೌಡ ಅವರನ್ನು ಬಚಾವ್ ಮಾಡಲು ಹೋಗಿ ದುನಿಯಾ ವಿಜಯ್ ಸಂಕಷ್ಟಕ್ಕೆ ಸಿಲುಕಿದ್ದು ನಿಮಗೆ ಗೊತ್ತಿರಬಹುದು.


  ವಿಜಿ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ ಲಕ್ಷ್ಮೀ- ಸುಂದರ್

  ಹುಚ್ಚ ವೆಂಕಟ್ ವಿರುದ್ಧ ಸಿಡಿದೆದ್ದ ಶಿವಣ್ಣ ಫ್ಯಾನ್ಸ್

  ಶಿವರಾಜ್ ಕುಮಾರ್ ಅವರನ್ನ ಭೇಟಿ ಮಾಡಲು, ಅವರ ಮನೆ ಬಳಿ ಹುಚ್ಚ ವೆಂಕಟ್ ಹೋಗಿದ್ದಾರೆ. ಆದ್ರೆ, ಮನೆಯಲ್ಲಿ ಶಿವಣ್ಣ ಇರಲಿಲ್ಲ. ಶಿವಣ್ಣನ ಡ್ರೈವರ್ ಹಾಗೂ ಸೆಕ್ಯೂರಿಟಿ ಗಾರ್ಡ್ ಕೂಡ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಅಷ್ಟಕ್ಕೆ, ಶಿವಣ್ಣನ ಬಗ್ಗೆ ಹುಚ್ಚ ವೆಂಕಟ್ ಬಾಯಿಗೆ ಬಂದ ಹಾಗೆ ಮಾತನಾಡಿದ್ದರು. ಆ ವಿಡಿಯೋ ನೋಡಿದ ಶಿವಣ್ಣ ಅಭಿಮಾನಿಗಳು ಹುಚ್ಚ ವೆಂಕಟ್ ಗೆ ಬಿಸಿ ಮುಟ್ಟಿಸಿದರು. ಕೊನೆಗೆ ಮಾಡಿದ ತಪ್ಪಿಗೆ ಹುಚ್ಚ ವೆಂಕಟ್ ಕ್ಷಮೆ ಕೇಳಿದರು.


  ಹುಚ್ಚ ವೆಂಕಟ್ ಗೆ ಉಗಿದು ಉಪ್ಪಿನಕಾಯಿ ಹಾಕಿದ ಶಿವಣ್ಣನ ಅಭಿಮಾನಿಗಳು!

  'ರಾಜರಥ' ಬ್ರದರ್ಸ್ ವಿವಾದ

  ಸಂದರ್ಶನವೊಂದರಲ್ಲಿ ''ರಾಜರಥ' ಸಿನಿಮಾ ನೋಡದವರು ಕಚಡ ನನ್ ಮಕ್ಳು'' ಎಂದು ಭಂಡಾರಿ ಬ್ರದರ್ಸ್ ಹೇಳಿದ್ದರು. ಇದರಿಂದ ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ವಿರುದ್ಧ ಕನ್ನಡಿಗರು ಕೋಪಿಸಿಕೊಂಡರು. ಫಿಲ್ಮ್ ಚೇಂಬರ್ ನಲ್ಲಿ ಈ ಕುರಿತು ನಿರೂಪಕಿ ರಾಪಿಡ್ ರಶ್ಮಿ, ಅನೂಪ್ ಮತ್ತು ನಿರೂಪ್ ಭಂಡಾರಿ ಕ್ಷಮೆ ಕೇಳಿದ್ಮೇಲೆ ವಿವಾದ ತಣ್ಣಗಾಯಿತು.


  ಅನೂಪ್-ನಿರೂಪ್ ವಿರುದ್ಧ ಕನ್ನಡಿಗರ ಆಕ್ರೋಶ: ಕಲಕಿದ ನೆಟ್ಟಿಗರ ಹೃದಯ ಸಮುದ್ರ!

  ಕಿನ್ನರಿ ಧಾರಾವಾಹಿ ನಟನ ವಿರುದ್ಧ ದೂರು

  'ಕಿನ್ನರಿ' ಧಾರಾವಾಹಿ ನಾಯಕ ಕಿರಣ್ ರಾಜ್ ವಿರುದ್ಧ ಯಾಸ್ಮಿನ್ ಪಠಾಣ್ ಎಂಬಾಕೆ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಲಿವಿಂಗ್ ಟು ಗೆದರ್ ರಿಲೇಶನ್ ಶಿಪ್ ನಲ್ಲಿದ್ದ ಕಿರಣ್ ರಾಜ್ ಮತ್ತು ಯಾಸ್ಮಿನ್ ನಡುವೆ ಗಲಾಟೆ ಆಗಿತ್ತು. ಯಾಸ್ಮಿನ್ ಮೇಲೆ ಕಿರಣ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ದೂರಿನ ಅನ್ವಯ ಕಿರಣ್ ಅರೆಸ್ಟ್ ಆದರು.


  ಕಿನ್ನರಿ ಧಾರಾವಾಹಿ ನಾಯಕನ ವಿರುದ್ದ ಹಲ್ಲೆಯ ದೂರು ದಾಖಲು

  ಯಶ್ ಬಾಡಿಗೆ ಮನೆ ಪ್ರಾಬ್ಲಂ

  ಯಶ್ ಬಾಡಿಗೆ ಮನೆ ರಂಪಾಟ ಕೋರ್ಟ್ ಮೆಟ್ಟಿಲೇರಿದ್ಮೇಲೆ, ಮನೆ ಮಾಲೀಕರು ಮಾಡಿದ ಅನ್ಯಾಯವನ್ನ ಫೇಸ್ ಬುಕ್ ನಲ್ಲಿ ಯಶ್ ಹೊರಹಾಕಿದರು. ಮಾಲೀಕರು ಮತ್ತು ಯಶ್ ಕುಟುಂಬದ ನಡುವೆ ಏನೇನೆಲ್ಲಾ ಆಯ್ತು ಎಂಬುದನ್ನ ಯಶ್ ಫೇಸ್ ಬುಕ್ ಲೈವ್ ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟರು.


  ಬಾಡಿಗೆ ಮನೆ ರಾದ್ಧಾಂತದ ಬಗ್ಗೆ ಕಡೆಗೂ ಸತ್ಯ ಬಾಯ್ಬಿಟ್ಟ ನಟ ಯಶ್.!

  ಕರ್ನಾಟಕದಲ್ಲಿ 'ಕಾಲಾ' ನಿಷೇಧ

  ಕಾವೇರಿ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಹೇಳಿಕೆ ನೀಡಿದ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರವನ್ನ ಕರ್ನಾಟಕದಲ್ಲಿ ನಿಷೇಧಿಸಲು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದವು. ಇದನ್ನ ಪ್ರಶ್ನಿಸಿ ನಿರ್ಮಾಪಕ ಧನುಷ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಆದೇಶದ ಮೇರೆಗೆ ಸೂಕ್ತ ಭದ್ರತೆಯೊಂದಿಗೆ 'ಕಾಲಾ' ಬಿಡುಗಡೆ ಆಯ್ತು. ನಿರೀಕ್ಷಿಸಿದ ಮಟ್ಟಕ್ಕೆ 'ಕಾಲಾ' ಕಮಾಲ್ ಮಾಡಲಿಲ್ಲ.


  'ಕಾಲಾ' ಚಿತ್ರದ ಪರವಾಗಿ ನಿಂತ ಕರ್ನಾಟಕ ಹೈ ಕೋರ್ಟ್

  ಯಶ್ ವರ್ಸಸ್ ಸುದೀಪ್ ಫ್ಯಾನ್ಸ್ ವಾರ್

  'ಹಮ್ ಫಿಟ್ ತೋ ಇಂಡಿಯಾ ಫಿಟ್' ಅಭಿಯಾನದ ಅಡಿ ಮಾಡಿದ ವಿಡಿಯೋದಲ್ಲಿ ನಟ ಯಶ್, ''ಸುದೀಪ್ ಸರ್.. ಸುದೀಪ್ ಅವರೇ'' ಎಂದು ಹೇಳಲಿಲ್ಲ. ಏಕಾಏಕಿ ''ಹಾಯ್ ಸುದೀಪ್'' ಅಂತ ಯಶ್ ಹೇಳಿದ್ದಕ್ಕೆ, ಸುದೀಪ್ ಗೆ ಗೌರವ ಕೊಟ್ಟಿಲ್ಲ ಅಂತ ಸುದೀಪ್ ಅಭಿಮಾನಿಗಳು ಯಶ್ ವಿರುದ್ಧ ಸಮರ ಸಾರಿದರು.


  ಯಶ್ ಮಾಡಿಬಿಟ್ಟರೇ ಮಹಾಪರಾಧ? ಕುದಿಯುತ್ತಿದೆ ಸುದೀಪ್ ಅಭಿಮಾನಿಗಳ ರಕ್ತ!

  ಜಗ್ಗೇಶ್ ಮೇಲೆ ಹಲ್ಲೆ ಆರೋಪ

  ಕನ್ನಡ ನಟ, ನವರಸ ನಾಯಕ ಜಗ್ಗೇಶ್ ಮಲ್ಲೇಶ್ವರಂನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂತು. ಇದಕ್ಕೆ ಸಂಬಂಧಪಟ್ಟಂತೆ ಜಗ್ಗೇಶ್ ಮತ್ತು ಮಾದೇಗೌಡ ಎಂಬ ವ್ಯಕ್ತಿಯ ನಡುವೆ ತಳ್ಳಾಟ ನಡೆದಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಈ ಬಗ್ಗೆ ನಟ ಜಗ್ಗೇಶ್, ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ಕೊಟ್ಟು ವಿವಾದಕ್ಕೆ ಶುಭಂ ಹಾಡಿದರು.


  ವ್ಯಕ್ತಿ ಮೇಲೆ ಜಗ್ಗೇಶ್ ಹಲ್ಲೆ ಆರೋಪ: ಘಟನೆ ತಿರುಚಲಾಗಿದೆ ಎಂದ ನಟ

  ಜೋಗಿ ಪ್ರೇಮ್ ವಿರುದ್ಧ ಶಿವಣ್ಣ ಫ್ಯಾನ್ಸ್ ವಾರ್

  ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಸಿನಿಮಾ ಈ ವರ್ಷಪೂರ್ತಿ ಒಂದಲ್ಲಾ ಒಂದು ವಿವಾದದಿಂದಲೇ ಸದ್ದು ಮಾಡಿತು. 'ನಂಬರ್ ಒನ್ ಅಂತಾರಲ್ಲೋ..' ಹಾಡಿನಿಂದ ಹಿಡಿದು 'ಬಾಸ್ ಯಾರು.?' ಎಂಬುದರವರೆಗೂ ಗಾಂಧಿನಗರದಲ್ಲಿ ಚರ್ಚೆ ಹುಟ್ಟು ಹಾಕಿದ್ದು 'ದಿ ವಿಲನ್' ಚಿತ್ರ. ಇನ್ನೂ 'ದಿ ವಿಲನ್' ಚಿತ್ರ ನೋಡಿದ ಶಿವಣ್ಣನ ಅಭಿಮಾನಿಗಳು, ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿಬಿದ್ದದ್ದು ನಿಮಗೆ ಗೊತ್ತಿರಲೇಬೇಕು.


  ರೊಚ್ಚಿಗೆದ್ದ ಶಿವಣ್ಣನ ಅಭಿಮಾನಿಗಳು: 'ಜೋಗಿ' ಪ್ರೇಮ್ ಗೆ ಮಾರಿಹಬ್ಬ ಶುರು!

  'ಅಯೋಗ್ಯ'ನ ಸಮಸ್ಯೆ

  'ಅಯೋಗ್ಯ' ಚಿತ್ರಕ್ಕೆ 'ಗ್ರಾಮ ಪಂಚಾಯತಿ ಸದಸ್ಯ' ಎನ್ನುವ ಟ್ಯಾಗ್ ಲೈನ್ ಇಡಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮೈಸೂರಿನ ಕ್ರಾಂತಿ ದಳ ಸಂಘಟನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿತ್ತು. ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ, 'ಅಯೋಗ್ಯ ಮತ್ತು ಗ್ರಾಮ ಪಂಚಾಯತಿ ಸದಸ್ಯ' ಎಂದು ಬದಲಾವಣೆ ಮಾಡಲು ಚಿತ್ರತಂಡ ನಿರ್ಧರಿಸಿತು. ಆದ್ರೆ, ಇದೂ ಕೂಡ ಗ್ರಾಮ ಪಂಚಾಯತಿ ಸದಸ್ಯರಿಗೆ ಸಮಾಧಾನ ತರಲಿಲ್ಲ. ಕೊನೆಗೆ ಗ್ರಾಮ ಪಂಚಾಯತಿ ಸದಸ್ಯರ ಒತ್ತಾಯಕ್ಕೆ ಮಣಿದು, ಫಿಲ್ಮ್ ಚೇಂಬರ್ ಅಧ್ಯಕ್ಷರ ಮಾತಿಗೆ ಬೆಲೆ ಕೊಟ್ಟು ನಿರ್ದೇಶಕ ಮಹೇಶ್ 'ಗ್ರಾಮ ಪಂಚಾಯತಿ ಸದಸ್ಯ' ಎಂಬ ಟ್ಯಾಗ್ ಲೈನ್ ನ ಕೈಬಿಡಲು ಮನಸ್ಸು ಮಾಡಿದರು.


  'ಅಯೋಗ್ಯ' ವಿವಾದ ಸುಖಾಂತ್ಯ: ಬೇಸರದಿಂದ ಟ್ಯಾಗ್ ಲೈನ್ ಕೈಬಿಟ್ಟ ನಿರ್ದೇಶಕ

  ದರ್ಶನ್ ಗೆ ದೋಖಾ

  'ದಾಸ' ದರ್ಶನ್ ಹಾಗೂ ದಿನಕರ್ ತೂಗುದೀಪ ಅವರಿಗೆ ಅತ್ಯಾಪ್ತರಾಗಿದ್ದ ಮಲ್ಲಿಕಾರ್ಜುನ್ ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡು ಏಕಾಏಕಿ ನಾಪತ್ತೆ ಆದರು. ದರ್ಶನ್ ಹಾಗೂ ದಿನಕರ್ ರಿಂದಲೂ ಹಣ ಪಡೆದಿದ್ದ ಮಲ್ಲಿಕಾರ್ಜುನ್ ಈವರೆಗೂ ದರ್ಶನ್ ಸುತ್ತಮುತ್ತ ಕಾಣಿಸಿಕೊಂಡಿಲ್ಲ.


  ಮಹಾ ಮೋಸ: ಮ್ಯಾನೇಜರ್ 'ಮಲ್ಲಿ'ಯಿಂದ 'ದಾಸ' ದರ್ಶನ್ ಗೆ ದೋಖಾ.!

  ಕಿಕಿ 'ಕಿರಿಕ್'

  ಅಪಾಯಕಾರಿ ಕಿಕಿ ಚಾಲೆಂಜ್ ನ ಸ್ವೀಕರಿಸಿ ನಟಿ ಅದಾ ಶರ್ಮಾ, ರೆಜಿನಾ, ನಿವೇದಿತಾ ಗೌಡ ಸೇರಿದಂತೆ ಕೆಲ ತಾರೆಯರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದರು.


  ಬೇಡ ಬೇಡ ಅಂದರೂ ತಾರೆಯರೇ ಡೇಂಜರಸ್ ಚಾಲೆಂಜ್ ಒಪ್ಪಿಕೊಳ್ತಾರಲ್ಲ.! ಇದು ಸರೀನಾ.?

  ದರ್ಶನ್ ಮೇಲೆ ಹಲ್ಲೆ ಆರೋಪ

  'ಯಜಮಾನ' ಚಿತ್ರೀಕರಣದ ವೇಳೆ ಫೋಟೋ ತೆಗೆದ ಕಾರಣಕ್ಕೆ ಸಹ ಕಲಾವಿದ ಶಿವಶಂಕರ್ ಎಂಬುವರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂತು. ದರ್ಶನ್ ವಿರುದ್ಧ ದೂರು ನೀಡಲು ಸಹ ಕಲಾವಿದರೆಲ್ಲರೂ ತಾವರೆಕೆರೆ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಆದ್ರೆ, ದರ್ಶನ್ ಹಲ್ಲೆ ಮಾಡಿಲ್ಲ ಅಂತ ನಿರ್ಮಾಪಕಿ ಶೈಲಜಾ ನಾಗ್ ಸ್ಪಷ್ಟ ಪಡಿಸಿದರು.


  ''ದರ್ಶನ್ ನನ್ನ ಕಪಾಳಕ್ಕೆ ಹೊಡೆದ್ರು'' - ಸಹ ಕಲಾವಿದ ಶಿವಶಂಕರ್ ಆರೋಪ.!

  ತಮಿಳು ಚಿತ್ರದಿಂದ ಕನ್ನಡ ನಟ ಔಟ್

  ತಮಿಳುನಾಡಿನ ಪತ್ರಕರ್ತರು ಹಾಗೂ ಮಾಧ್ಯಮಗಳ ಮುಂದೆ ನಿಂತು ಮಂಡ್ಯದಲ್ಲಿ ಇರುವ ಕಾವೇರಿ ನೀರಿನ ಸಮಸ್ಯೆ ಕುರಿತು ವಿವರಿಸಿದ ಕನ್ನಡ ನಟ ಯೋಗಿಯನ್ನ ತಮಿಳು ಚಿತ್ರದಿಂದ ಕೈಬಿಡಲಾಯಿತು. ತಮಿಳು ಸಿನಿಮಾ 'ಪಾರ್ತಿಬನ್ ಕಾದಲ್' ನಲ್ಲಿ ಯೋಗಿ ಹೀರೋ ಆಗಿ ನಟಿಸಬೇಕಿತ್ತು.

  ತಮಿಳು ಚಿತ್ರದಿಂದ ಕನ್ನಡ ನಟ ಕಿಕ್ ಔಟ್: ನಟ ಯೋಗಿ ಹೇಳಿದಿಷ್ಟು.!

  ನಟ ದುನಿಯಾ ವಿಜಯ್ ರಂಪಾಟ

  ಜಿಮ್ ಟ್ರೈನರ್ ಹಾಗೂ ಬಾಡಿ ಬಿಲ್ಡರ್ ಮಾರುತಿ ಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ದುನಿಯಾ ವಿಜಯ್ ಮತ್ತು ಸಹಚರರನ್ನು ಬಂಧಿಸಲಾಯಿತು. ಎಂಟು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸಿದ ಮೇಲೆ ಜಾಮೀನಿನ ಮೇಲೆ ದುನಿಯಾ ವಿಜಯ್ ಹೊರಬಂದರು.


  ಜೈಲಿನಿಂದ ಹೊರಬಂದ ಬ್ಲಾಕ್ ಕೋಬ್ರಾ ದುನಿಯಾ ವಿಜಯ್

  ದುನಿಯಾ ವಿಜಯ್ ಫ್ಯಾಮಿಲಿ ಪ್ರಾಬ್ಲಂ

  ಅತ್ತ ದುನಿಯಾ ವಿಜಯ್ ಜೈಲು ಸೇರಿದ್ದರೆ, ಇತ್ತ ದುನಿಯಾ ವಿಜಯ್ ಇಬ್ಬರು ಹೆಂಡಿರ ಜಗಳ ಶುರುವಾಯ್ತು. ಕೀರ್ತಿ ಗೌಡ ವಿರುದ್ಧ ನಾಗರತ್ನ ಸಿಡಿದೆದ್ದರು. ಪ್ರೆಸ್ ಮೀಟ್ ಮಾಡಿ ಕೀರ್ತಿ ಗೌಡ ಬಗ್ಗೆ ನಾಗರತ್ನ ಗುಡುಗಿದರು. ಕೀರ್ತಿ ಗೌಡ ಮೇಲೆ ಹಲ್ಲೆ ಮಾಡಿದ ನಾಗರತ್ನ ವಿರುದ್ಧ ದೂರು ದಾಖಲಾಯಿತು. ನಾಗರತ್ನ ನಾಪತ್ತೆ ಆದರು. ಒಟ್ನಲ್ಲಿ, ದಿನಕ್ಕೊಂದು ತಿರುವು ಪಡೆಯುತ್ತಾ ದುನಿಯಾ ವಿಜಯ್ ಸಂಸಾರ ಗಲಾಟೆ ಬ್ರೇಕಿಂಗ್ ನ್ಯೂಸ್ ಆಗುತ್ತಲೇ ಇತ್ತು.


  ಕೀರ್ತಿ ಗೌಡದು ದರಿದ್ರ ಕಾಲು: ಛೀಮಾರಿ ಹಾಕಿದ ದುನಿಯಾ ವಿಜಯ್ ಪತ್ನಿ ನಾಗರತ್ನ.!

  ದರ್ಶನ್ ಕಾರು ಅಪಘಾತದ ಸುತ್ತ...

  ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ದರ್ಶನ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಯಿತು. ಆಕ್ಸಿಡೆಂಟ್ ಆದ್ಮೇಲೆ, ಕಾರನ್ನ ಗೌಪ್ಯವಾಗಿ ಬೇರೆ ಸ್ಥಳಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಶ್ರೀರಂಗಪಟ್ಟಣದ ತೋಟದಲ್ಲಿ ಕಾರನ್ನ ಮುಚ್ಚಿಟ್ಟು, ಬಳಿಕ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದು ಈ ಅಪಘಾತ ಪ್ರಕರಣದಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿತು.


  'ದಾಸ' ದರ್ಶನ್ ಅಪಘಾತದ ಸುತ್ತ ಹಲವು ಅನುಮಾನಗಳ ಹುತ್ತ.!

  ಸದ್ದು ಮಾಡಿದ 'ಮದಕರಿ ನಾಯಕ'

  ರಾಜಕೀಯದಲ್ಲಿ ಹೆಚ್ಚು ಕಾಣುತ್ತಿದ್ದ ಜಾತಿವಾದ 'ಮದಕರಿ ನಾಯಕ' ಸಿನಿಮಾ ಮೂಲಕ ಚಿತ್ರರಂಗಕ್ಕೂ ಕಾಲಿಟ್ಟಿತು. 'ಮದಕರಿ ನಾಯಕ' ಚಿತ್ರದಲ್ಲಿ ದರ್ಶನ್ ನಟನೆಗೆ ವಿರೋಧ ವ್ಯಕ್ತಪಡಿಸಿದ ವಾಲ್ಮೀಕಿ ಸಮುದಾಯದವರು, ನಮ್ಮ ಸಮುದಾಯದವರಾದ ಸುದೀಪ್ ಅವರೇ ಈ ಸಿನಿಮಾ ಮಾಡಲಿ, ಬೇರೆಯವರು ಮಾಡಿದ್ರೆ ಕಾನೂನು ಹೋರಾಟ ಅಥವಾ ಪ್ರತಿಭಟನೆ ಮಾಡ್ತೀವಿ ಅಂತ ಹೇಳಿದ್ದು ವ್ಯಾಪಕ ವಿವಾದಕ್ಕೆ ಕಾರಣವಾಯಿತು.


  ದರ್ಶನ್-ಸುದೀಪ್ ಸುಮ್ಮನಿದ್ರೂ 'ಜಾತಿವಾದಿ'ಗಳು ಸುಮ್ಮನಾಗುತ್ತಿಲ್ಲ.!

  ಸ್ಯಾಂಡಲ್ ವುಡ್ ನಲ್ಲಿ ಮೀಟೂ

  ಬಾಲಿವುಡ್ ನಲ್ಲಿ ಸದ್ದು ಮಾಡಿದ #ಮೀಟೂ ಅಭಿಯಾನ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿತು. ಸ್ಯಾಂಡಲ್ ವುಡ್ ನಲ್ಲಿ ತಾವು ಎದುರಿಸಿದ ಕಹಿ ಅನುಭವಗಳನ್ನು ನಟಿ ಸಂಗೀತಾ ಭಟ್ ಎಳೆಎಳೆಯಾಗಿ ಬಿಚ್ಚಿಟ್ಟರು.


  ಸ್ಯಾಂಡಲ್ ವುಡ್ ನಲ್ಲಿ ಎದುರಿಸಿದ ಕಿರುಕುಳದ ಬಗ್ಗೆ ಮೌನ ಮುರಿದ ನಟಿ ಸಂಗೀತ ಭಟ್.!

  ಬಾಂಬ್ ಸಿಡಿಸಿದ ಶ್ರುತಿ ಹರಿಹರನ್

  #ಮೀಟೂ ಅಭಿಯಾನದ ಅಡಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಬಾಂಬ್ ಸಿಡಿಸಿದರು. 'ವಿಸ್ಮಯ' ಚಿತ್ರದ ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಶ್ರುತಿ ಹರಿಹರನ್ ಆರೋಪಿಸಿದರು. ಫಿಲ್ಮ್ ಚೇಂಬರ್ ನಲ್ಲಿ ಇಬ್ಬರ ನಡುವಿನ ಸಂಧಾನ ಮುರಿದು ಬಿತ್ತು. ಶ್ರುತಿ ವಿರುದ್ಧ ಆರ್ಜುನ್ ಸರ್ಜಾ ಕೋರ್ಟ್ ಮೆಟ್ಟಿಲೇರಿದರು. ಸದ್ಯ ಶ್ರುತಿ ಹರಿಹರನ್-ಅರ್ಜುನ್ ಸರ್ಜಾ ವಿವಾದ ಕೋರ್ಟ್ ಅಂಗಳದಲ್ಲಿದೆ.


  ಶ್ರುತಿ ಆರೋಪದ ಬಗ್ಗೆ ಅನುಮಾನ ಮೂಡಿಸುತ್ತಿದೆ ಈ 6 ಅಂಶಗಳು

  ಫೈರ್ ವಿವಾದ

  ಶ್ರುತಿ ಹರಿಹರನ್ ವಿವಾದ ಭುಗಿಲೇಳುತ್ತಿದ್ದಂತೆಯೇ, 'ಫೈರ್' ಸಂಸ್ಥೆಯಿಂದ ನಟಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಹಲವರು ಹೊರಬಂದರು. ಶ್ರುತಿ ಹರಿಹರನ್ ಪರವಾಗಿ ನಿಂತ ಚೇತನ್ ಎಲ್ಲರ ಕೆಂಗಣ್ಣಿಗೆ ಗುರಿಯಾದರು.


  ಶ್ರುತಿ ಹರಿಹರನ್ ವಿವಾದ: 'ಫೈರ್' ಸಂಸ್ಥೆಗೆ ಗುಡ್ ಬೈ ಹೇಳಿದ ಪ್ರಿಯಾಂಕಾ ಮತ್ತು ತಂಡ.!

  ಆರೋಪ ಮಾಡಿ ಕ್ಷಮೆ ಕೇಳಿದ ಸಂಜನಾ

  #ಮೀಟೂ ಅಭಿಯಾನದ ಅಡಿ ನಿರ್ದೇಶಕ ರವಿ ಶ್ರೀವತ್ಸ ವಿರುದ್ದ ಆರೋಪ ಮಾಡಿದ್ದ 'ಗಂಡ ಹೆಂಡತಿ' ಸಿನಿಮಾ ಖ್ಯಾತಿಯ ನಟಿ ಸಂಜನಾ, ಕೊನೆಗೆ ಕ್ಷಮೆ ಕೇಳಿದರು.

  'ಗಂಡ ಹೆಂಡತಿ' ಸಂಧಾನ: ಆರೋಪ ಮಾಡಿದ್ದು ಸಂಜನಾ, 'ಸಾರಿ' ಕೇಳಿದ್ದು ಅವರೇ.!

  ಬಗೆಹರಿಯದ ವಿಷ್ಣು ಸ್ಮಾರಕ ಬಿಕ್ಕಟ್ಟು

  ಡಾ.ವಿಷ್ಣುವರ್ಧನ್ ಸ್ಮಾರಕ ಕುರಿತ ಬಿಕ್ಕಟ್ಟು ಈ ವರ್ಷವೂ ನಿವಾರಣೆ ಆಗಿಲ್ಲ. ಸ್ಮಾರಕ ವಿಚಾರಕ್ಕೆ ಸಂಬಂಧಪಟ್ಟಂತೆ ಡಾ.ವಿಷ್ಣು ಅಳಿಯ ಅನಿರುದ್ಧ್ ಆಕ್ರೋಶಗೊಂಡರು. ಪುತ್ರಿ ಕೀರ್ತಿ ಕೂಡ ಗರಂ ಆದರು. ಸ್ಮಾರಕದ ಬಗ್ಗೆ ಗೊಂದಲ ಬೇಡ ಅಂತ ಸಿಎಂ ಹೇಳಿದ್ದಾರೆ. ಮುಂದೇನಾಗುತ್ತೋ, ನೋಡಬೇಕು.


  ವಿಷ್ಣು ಸ್ಮಾರಕ ನಿರ್ಮಾಣಕ್ಕೆ 'ಕಂಠೀರವ' ನಾಲ್ಕನೇ ಜಾಗ, ಎಲ್ಲ ಕಡೆಯೂ ವಿವಾದ.!

  'ಸಲಾಮ್ ರಾಕಿ ಭಾಯ್' ಸಾಹಿತ್ಯಕ್ಕೆ ವಿರೋಧ

  ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರದ ಹಾಡು 'ಸಲಾಮ್ ರಾಕಿ ಭಾಯ್'ನಲ್ಲಿ 'ಕನ್ನಡ ಎಲ್ಲಿದೆ' ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇದು ಹಿಂದಿ ವಾತಾವರಣದಲ್ಲಿ ಮೂಡಿರುವ ಹಾಡಾದ ಕಾರಣ, ಹಿಂದಿ ಪದಗಳ ಬಳಕೆ ಅನಿವಾರ್ಯ ಅಂತ ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. ಆದರೂ, ವಿವಾದ ತಣ್ಣಗಾಗಿಲ್ಲ.


  'ಸಲಾಮ್ ರಾಕಿ ಭಾಯ್' ಹಿಂದಿ ಸಾಹಿತ್ಯಕ್ಕೆ ವಿರೋಧ: ನಾಗೇಂದ್ರ ಪ್ರಸಾದ್ ಪ್ರತಿಕ್ರಿಯೆ

  ಪ್ರೇಮ್ ವರ್ಸಸ್ ಕನಕಪುರ ಶ್ರೀನಿವಾಸ್

  'ಜೋಗಿ' ಚಿತ್ರದ ಬಳಿಕ ಒಂದು ಸಿನಿಮಾ ಮಾಡಲು ನಿರ್ದೇಶಕ ಪ್ರೇಮ್ ಗೆ ಕನಕಪುರ ಶ್ರೀನಿವಾಸ್ 10 ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದರು. ಆದ್ರೆ, ಪ್ರೇಮ್ ಸಿನಿಮಾ ಮಾಡಿಲ್ಲ. ದುಡ್ಡು ಕೂಡ ವಾಪಸ್ ಕೊಟ್ಟಿಲ್ಲ ಅಂತ ಕನಕಪುರ ಶ್ರೀನಿವಾಸ್ ಗುಡುಗಿದರು. ಇತ್ತ ಪ್ರೇಮ್ ಹೇಳುವುದೇ ಬೇರೆ. ''ಅವರ ಚಿತ್ರಕ್ಕಾಗಿ ನಾನು ಒಂದು ವರ್ಷ ಕೆಲಸ ಮಾಡಿದ್ದೇನೆ. ಆದ್ರೆ, ಅವರೇ ಚಿತ್ರ ಮಾಡಲು ಮುಂದೆ ಬರಲಿಲ್ಲ. ಐದು ಲಕ್ಷ ವಾಪಸ್ ಕೊಟ್ಟಿದ್ದೇನೆ. ಒಂದು ವರ್ಷ ನಾನು ಮಾಡಿರುವ ಕೆಲಸಕ್ಕೆ ದುಡ್ಡು ಯಾರು ಕೊಡುತ್ತಾರೆ.?'' ಎನ್ನುವುದು ನಿರ್ದೇಶಕ ಪ್ರೇಮ್ ಪ್ರಶ್ನೆ. ಸದ್ಯ ಈ ವಿವಾದ ಫಿಲ್ಮ್ ಚೇಂಬರ್ ಮೆಟ್ಟಿಲೇರುವ ಸಾಧ್ಯತೆ ಇದೆ. ವಾಣಿಜ್ಯ ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಅಂತ ಪ್ರೇಮ್ ತಿಳಿಸಿದ್ದಾರೆ.


  ನಿರ್ದೇಶಕ ಪ್ರೇಮ್ ವಿರುದ್ಧ ಮತ್ತೆ ಗುಡುಗಿದ ಕನಕಪುರ ಶ್ರೀನಿವಾಸ್

  English summary
  Sandalwood and Kannada Stars made Headlines this year for many controversies. Here, is the detailed report of Controversies of Sandalwood in 2018.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more