twitter
    For Quick Alerts
    ALLOW NOTIFICATIONS  
    For Daily Alerts

    'ಬಡವರ ಮಕ್ಕಳನ್ನೇ ಯಾರೋ ಟಾರ್ಗೆಟ್ ಮಾಡಿದ್ದಾರೆ': ಹಿಜಾಬ್ ಬಗ್ಗೆ ಕವಿರಾಜ್ ಪ್ರತಿಕ್ರಿಯೆ

    |

    ಹಿಜಾಬ್ ಪ್ರಕರಣ ಒಂದು ಚಿಕ್ಕ ಧಾರ್ಮಿಕ ಸಮಸ್ಯೆಯಾಗಿ ಉಳಿದಿಲ್ಲ. ಇಡೀ ದೇಶವೇ ಈ ಪ್ರಕರಣದ ಬಗ್ಗೆ ಚರ್ಚೆ ಮಾಡಲು ಶುರುವಿಟ್ಟುಕೊಂಡಿದೆ. ಒಂದು ಚಿಕ್ಕ ಸಮಸ್ಯೆಯನ್ನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳಸುವ ಅಗತ್ಯವೇನಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನ ಹಾರಾಜು ಆಗುವಂತೆ ಮಾಡುವಷ್ಟು ದೊಡ್ಡ ಸಮಸ್ಯೆಯೇ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳನ್ನು ಜನರು ಎತ್ತುತ್ತಿದ್ದಾರೆ. ಹಿಜಾಬ್ ಧರಿಸುವುದು ಈಗ ಸಮಸ್ಯೆಯಾಗಷ್ಟೇ ಉಳಿದಿಲ್ಲ. ಇದು ಕೋಮು ಪ್ರಕರಣಕ್ಕೆ ತಿರುಗಿದೆ.

    ಹಿಜಾವ್ Vs ಕೇಸರಿ ಶಾಲು Vs ನೀಲಿ ಶಾಲು ಎಂದಾಗಿದೆ. ಇದು ಸಮಾಜದ ಮೇಲೆ, ಮುಂದಿನ ಪೀಳಿಗೆಗಳ ಮೇಲೆ ಪ್ರಭಾವ ಬೀರುವ ಆತಂಕ ವ್ಯಕ್ತಪಡಿಸುತ್ತಾರೆ. ಈ ಹಿಜಾಬ್ ಪ್ರಕರಣದ ಬಗ್ಗೆ ಕನ್ನಡ ಚಿತ್ರರಂಗದ ಸಿನಿ ಸಾಹಿತಿ, ನಿರ್ದೇಶಕ ಕವಿರಾಜ್ ಫಿಲ್ಮಿ ಬೀಟ್ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    ಹಿಜಾಬ್ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯ?

    ಹಿಜಾಬ್ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯ?

    "ಹಿಜಾಬ್ ಇಷ್ಟು ದೊಡ್ಡ ಮಟ್ಟದ ಗಲಾಟೆ, ಇಷ್ಟು ದೊಡ್ಡ ಗಲಾಟೆ ಆಗುತ್ತಿರುವುದು ವಿಷಾದನೀಯ. ದ್ವೇಷ ಹರಡುವಂಥ ವಿಷಯ ಇದು ಆಗಬಾರದಿತ್ತು. ಶಾಲೆಯಲ್ಲಿ ಸಮವಸ್ತ್ರ ಇರಬೇಕು ಅನ್ನುವುದು ಒಂದು ಮಟ್ಟಕ್ಕೆ ಸರಿನೇ. ಯಾರೋ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಕೇಳಿದ್ದರು. ಅದೂ ಕೂಡ ತಪ್ಪಿಲ್ಲ. ಅವರ ಬೇಡಿಕೆಯನ್ನು ಅವರು ಮಂಡಿಸಿದ್ದರು. ಶಾಲಾಭಿವೃದ್ಧಿ ಮಂಡಳಿ ಅಥವಾ ಅಲ್ಲಿನ ಸ್ಥಳೀಯ ಆಡಳಿತ ಕೂತು ಸೌಹಾರ್ದಯುತವಾಗಿ ಕೂತು ಬಗೆ ಹರಿಸಬೇಕಿತ್ತು. ವಿದ್ಯಾರ್ಥಿಗಳೇ ಬೀದಿಗೆ ಇಳಿದು ಕಲ್ಲು ಹಿಡಿದು ಹೋರಾಟ ಮಾಡುವಂತೆ ರಾಜಕೀಯಗೊಳಿಸಿದ್ದು ತುಂಬಾ ತಪ್ಪು."

    ಶಾಲೆಯಲ್ಲಿ ಸಮವಸ್ತ್ರ ಮುಖ್ಯನಾ?

    ಶಾಲೆಯಲ್ಲಿ ಸಮವಸ್ತ್ರ ಮುಖ್ಯನಾ?

    "ಸದ್ಯ ಈ ಪ್ರಕರಣ ಕೋರ್ಟ್‌ನಲ್ಲಿದೆ. ಅಲ್ಲಿ ತೀರ್ಪು ಸಿಗುತ್ತದೆಯೋ ನೋಡೋಣ. ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ, ಶಾಲೆಯಲ್ಲಿ ಸಮವಸ್ತ್ರ ಇದ್ದರೆ ಒಳ್ಳೆಯದು. ಶಾಲೆಯಲ್ಲಿ ನಿನ್ನ ಧರ್ಮ, ಗುಂಪಿನಿಂದ ಪ್ರತ್ಯೇಕವಾಗಿರುವುದು ಒಳ್ಳೆಯದಲ್ಲ. ಆದರೂ ಧರ್ಮದ ಬೇರೆ ಗುರುತುಗಳು ಶಾಲೆಯಲ್ಲೂ ಇದ್ದಾವೆ. ಈ ಹಿಜಾಬ್ ಅನ್ನೇ ಇಟ್ಟುಕೊಂಡು ಅವೆಲ್ಲವನ್ನೂ ತೆಗೆದು ಹಾಕಿವ ನಿರ್ಧಾರಕ್ಕೆ ಬರಬಹುದಿತ್ತು. ಕರ್ನಾಟಕ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಡುವಂತೆ ಮಾಡಿದ್ದು ತೀರಾ ವಿಷಾದನೀಯ."

    ಹಿಜಾಬ್ ರಾಜಕೀಯ ಪ್ರೇರಿತವೇ?

    ಹಿಜಾಬ್ ರಾಜಕೀಯ ಪ್ರೇರಿತವೇ?

    "ನನಗೆ ತುಂಬಾ ನೋವು ಆಗುತ್ತಿರುವುದು ಇದೆನೇ. ನಾನು ಖಂಡಿಸುತ್ತಿರುವುದೂ ಕೂಡ ಇದನ್ನೇ. ಈಗಾಗಲೇ ಎರಡೂ ಧರ್ಮದವರು ಹೋರಾಟ ಮಾಡುತ್ತಿರುವವರಾಗಿದ್ದರೆ, ಸರಿ ಎನ್ನಬಹುದಿತ್ತು. ಅದು ಆತಂಕದ ವಿಷಯ ಆಗುತ್ತಿರಲಿಲ್ಲ. ನಾವು ಯಾರಲ್ಲಿ ವಿಷ ಬೀಜ ಬಿತ್ತುತ್ತಿದ್ದೇವೆ. ನಿನ್ನೆ-ಮೊನ್ನೆ ಅಕ್ಕ ಪಕ್ಕ ಕೂತು ಓದುತ್ತಿದ್ದವರ ನಡುವೆ ದ್ವೇಷ ತುಂಬುತ್ತಿದ್ದೇವೆ ಅಂದರೆ, ಬರುವ ದಿನಗಳ ಬಗ್ಗೆ ತುಂಬಾನೇ ಆತಂಕ ಆಗುತ್ತೆ. ನಮ್ಮ ಮಕ್ಕಳ ಭವಿಷ್ಯದಲ್ಲಿ ಈ ಸಮಾಜ ಹೇಗಿರುತ್ತೆ? ಅಂದರೆ ನಾವು ದ್ವೇಷ ಮಾಡುವುದನ್ನು ಅಧಿಕೃತವಾಗಿ ಹೇಳಿಕೊಡುತ್ತಿದ್ದೇವೆ ಅಂತ ಅನಿಸುತ್ತಿದೆ."

    ಇಲ್ಲೂ ಬಡವರ ಮಕ್ಕಳೇ ಟಾರ್ಗೆಟ್ ಅಲ್ಲವೇ?

    ಇಲ್ಲೂ ಬಡವರ ಮಕ್ಕಳೇ ಟಾರ್ಗೆಟ್ ಅಲ್ಲವೇ?

    "ಇಲ್ಲಿ ನೋಡಿ ಯಾವುದೋ ಪ್ರತಿಷ್ಟಿತ ಕಾಲೇಜುಗಳು, ಲಕ್ಷ ಲಕ್ಷ ಫೀಸ್ ಕಟ್ಟಿಸಿಕೊಳ್ಳುವ ಶಾಲೆ ಕಾಲೇಜಿಗಳ ವಿದ್ಯಾರ್ಥಿಗಳು ಬೀದಿಗೆ ಇಳಿದಿಲ್ಲ. ಯಾರೋ ಬಡವರ ಮಕ್ಕಳನ್ನೇ ಮತ್ತೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಅವರ ತಂದೆ-ತಾಯಿಗಳೂ ಕೂಡ ಧರ್ಮ ರಕ್ಷಣೆಗೆ ನನ್ನ ಮಗ ಮಗಳು ನಿಂತಿದ್ದಾರೆ ಅಂತ ಹೇಳಲಿಕ್ಕಿಲ್ಲ. ಎಷ್ಟು ಕಷ್ಟಪಟ್ಟು ಓದಿಸುತ್ತಿದ್ದಾರೆ. ಹಾಗಂತ ಈ ಮಕ್ಕಳದ್ದು ತೀರಾ ತಪ್ಪು ಅಂತ ಹೇಳಲು ಸಾಧ್ಯವಿಲ್ಲ. ಈ ವಯಸ್ಸಿನಲ್ಲಿ ಅವರಿಗೆ ಒಳ್ಳೆ ಗುಣಗಳನ್ನು ನೀಡಿದರೆ ಅದನ್ನೇ ತೆಗೆದುಕೊಳ್ಳುತ್ತಾರೆ. ಕೆಟ್ಟದನ್ನು ನೀಡಿದರೆ ಕೆಟ್ಟದನ್ನೇ ತೆಗೆದುಕೊಳ್ಳುತ್ತಾರೆ."

    ಹಿಂದೆ ಇಲ್ಲದ ಸಮಸ್ಯೆ ಈಗ್ಯಾಕೆ?

    ಹಿಂದೆ ಇಲ್ಲದ ಸಮಸ್ಯೆ ಈಗ್ಯಾಕೆ?

    "ಇದು ಈಗ ಹಿಜಾಬ್ ಪ್ರಕರಣವಾಗಿ ಅಷ್ಟೇ ಉಳಿದುಕೊಂಡಿಲ್ಲ. ಹಿಜಾಬ್ ಪ್ರಕರಣ ಒಂದು ದ್ವೇಷ ಹರಡುವ ಕಾರ್ಯಕ್ರಮವಾಗಿ ಉಳಿದುಕೊಂಡಿದೆ. ಹೇಗೋ ಕೂತು ಎರಡು ಧಾರ್ಮಿಕ ಮುಖಂಡರನ್ನು ಕೂರಿಸಿ ಮಾತಾಡಬಹುದಿತ್ತು. ಇದು ಬೀದಿಗೆ ಬರುವಂತೆ ಮಾಡಿದ್ದು ತುಂಬಾ ತಪ್ಪು. ಶುರುವಾಗಿದ್ದು ಸಣ್ಣ ಧಾರ್ಮಿಕ ವಿಚಾರವಾಗಿದ್ದರೂ, ಆಮೇಲೆ ರಾಜಕೀಯ ವಿಚಾರವಾಗಿ ಪರಿವರ್ತನೆ ಆಯ್ತು. ವೋಟಿನ ಲೆಕ್ಕಾಚಾರ ಶುರುವಾಗಿತ್ತು. ಧರ್ಮದ ಆಧಾರದ ಮೇಲೆ ಮತಗಳ ಧ್ರುವೀಕರಣ ಆರಂಭ ಆಗಿದೆ. ಜನರ ಭಾವನೆಗಳನ್ನು ಕೆರಳಿಸಿ ಮತಗಳಿಸಬೇಕು ಅನ್ನುವ ಸಂಚು ಶುರುವಾಗಿದೆ. ಈ ಕಾರಣಕ್ಕೆ ಇದು ತುಂಬಾ ದೊಡ್ಡದಾಯ್ತು. 70 ವರ್ಷದಿಂದ ನಮ್ಮ ಪೂರ್ಮಿಕರು, ನಾವು ಶಾಲೆ, ಕಾಲೇಜಿಗೆ ಹೋಗಿದ್ದೇವೆ. ಅದನ್ನು ಈಗ ಪ್ರಶ್ನೆ ಮಾಡುವುದು ಸರಿಯಲ್ಲ."

    ಹಿಜಾಬ್ ಪ್ರಕರಣ ಹೇಗೆ ಬಗೆಹರಿಸಬಹುದು?

    ಹಿಜಾಬ್ ಪ್ರಕರಣ ಹೇಗೆ ಬಗೆಹರಿಸಬಹುದು?

    "ಸೌಹಾರ್ದತೆಯ ಪಾಠವನ್ನೇ ಮಾಡಬೇಕಾಗುತ್ತದೆ. ಧಾರ್ಮಿಕ ಮುಖಂಡರನ್ನು ಕೂರಿಸಿ ಮಾತಾಡಬೇಕಾಗುತ್ತದೆ. ಇಲ್ಲಾ ಅಂದರೆ, ಕೋರ್ಟ್ ಇದೆ. ಸಂವಿಧಾನ ಇದ್ದೇ ಇದೆ. ಈಗ ಕೋರ್ಟ್‌ನಲ್ಲಿದೆ. ಅದು ತೀರ್ಪು ಕೊಟ್ಟ ಮೇಲೆ ಎಲ್ಲರೂ ಒಪ್ಪಿಕೊಳ್ಳಲೇ ಬೇಕಾಗುತ್ತೆ. ಆದರೆ, ಇಲ್ಲಿಗೆ ಪ್ರಕರಣ ಬಗೆ ಹರಿಯುತ್ತೆ. ಆದರೆ, ತುಂಬಿರುವ ದ್ವೇಷ ಬಗೆಹರಿಸುವ ಜವಾಬ್ದಾರಿ ನಮ್ಮಲೇ ಉಳಿದುಕೊಳ್ಳುತ್ತೆ. ಮತ್ತೆ ಆ ಮಕ್ಕಳನ್ನು ಕೂರಿಸಿಕೊಂಡು ಹೇಳಬೇಕಾಗುತ್ತೆ. ನಿಮ್ಮನ್ನು ಶಾಲೆಗೆ ಕಳಿಸುತ್ತಿರುವುದು ಪ್ರತಿಭಟನೆ ಮಾಡಲು ಅಲ್ಲ. ವಿದ್ಯಾಬ್ಯಾಸಕ್ಕಾಗಿ, ನಿಮ್ಮ ಒಳಿತಿಗಾಗಿ ಎಂತ ಕೂರಿಸಿಕೊಂಡು ಹೇಳಬೇಕು. ಎರಡೂ ಕಡೆಯ ತಪ್ಪು ಇದೆ. ಹೀಗೆ ಆದರೆ ಯಾರಿಗೂ ಒಳಿತಲ್ಲ." ಎನ್ನುತ್ತಾರೆ ಸಿನಿ ಸಾಹಿತಿ ಕವಿರಾಜ್.

    English summary
    Kannada lyricist Kaviraj said someone targeted poor students on hijab issue. He said this is all about political agenda. They divided people for vote.
    Thursday, February 10, 2022, 9:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X