»   » ಮೇ ತಿಂಗಳ ಕನ್ನಡ ಚಿತ್ರಗಳ ರಿಪೋರ್ಟ್ ಕಾರ್ಡ್

ಮೇ ತಿಂಗಳ ಕನ್ನಡ ಚಿತ್ರಗಳ ರಿಪೋರ್ಟ್ ಕಾರ್ಡ್

Posted By:
Subscribe to Filmibeat Kannada

ಚಿತ್ರಗಳ ಗುಣಮಟ್ಟ ಸುಧಾರಿಸುತ್ತಿದ್ದಂತೆ, ಕಥೆಯಲ್ಲಿ ಹೊಸತನ ಬರುತ್ತಿದ್ದಂತೆ ಕನ್ನಡ ಚಿತ್ರಗಳ ಬಾಕ್ಸ್ ಆಫೀಸ್ ಪರ್ಫಾರ್ಮೆನ್ಸ್ ಕೂಡಾ ಸುಧಾರಿಸುತ್ತಿರುವುದು ಗಮನಿಸ ಬೇಕಾದ ಅಂಶ.

ಹೊಸಬರೇ ತುಂಬಿರುವ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸುಮಾರು ಎಂಟು ಕೋಟಿ ಆದಾಯಗಳಿಸಿರುವುದು ಫ್ರೆಷ್ ಚಿತ್ರಗಳು ಜನರ ಮೆಚ್ಚುಗೆ ಗಳಿಸುತ್ತದೆ ಎನ್ನುವುದಕ್ಕೊಂದು ಉದಾಹರಣೆ.

ವರದನಾಯಕ, ಬಚ್ಚನ್, ಚಾರ್ಮಿನಾರ್, ಅಟ್ಟಹಾಸ, ಮೈನಾ ಮುಂತಾದ ಚಿತ್ರಗಳು ಕೋಟಿ ಕೋಟಿ ಲೆಕ್ಕದಲ್ಲಿ ಗಳಿಕೆ ಕಂಡಿರುವುದು ಕನ್ನಡ ಚಿತ್ರಗಳ ಮಾರುಕಟ್ಟೆಗೆ ಬರವೇನೂ ಬಂದಿಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆ.

ಕಳೆದ ತಿಂಗಳು ಕನ್ನಡ ಚಿತ್ರರಂಗಕ್ಕೊಂದು ವಿಶೇಷತೆವಿರುವ ತಿಂಗಳು. UFO ತಂತ್ರಜ್ಞಾನದ ಮೂಲಕ ಕಪಾಲಿ ಸೇರಿದಂತೆ ರಾಜ್ಯಾದ್ಯಂತ 43ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಅಣ್ಣಾವ್ರ ಆಪರೇಶನ್ ಡೈಮಂಡ್ ರಾಕೆಟ್ ಚಿತ್ರ ರಿ-ಲೀಸ್ ಆಗಿರುವುದು.

ಚಿತ್ರಕ್ಕೆ ವಾರದ ದಿನದಲ್ಲಿ ಸಾಧಾರಣ ಮತ್ತು ಬಿಡುಗಡೆಯಾದ ವಾರಾಂತ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಡಾ.ರಾಜ್ ಚಿತ್ರಗಳ ಜನಪ್ರಿಯತೆಗಿರುವ ಸಾಕ್ಷಿ.

ಮೇ 2013ರಲ್ಲಿ ಆಪರೇಶನ್ ಡೈಮಂಡ್ ರಾಕೆಟ್ ಸೇರಿ ಹನ್ನೊಂದು ಚಿತ್ರಗಳು ಬಿಡುಗಡೆ ಕಂಡಿದೆ. ಇದರಲ್ಲಿ ಗೆದ್ದ, ಸೋತ ಮತ್ತು ಸಾಧಾರಣ ಯಶಸ್ಸು ಕಂಡ ಚಿತ್ರಗಳಾವು ಸ್ಲೈಡಿನಲ್ಲಿ ನೋಡಿ..

(ಓದುಗರ ಗಮನಕ್ಕೆ ಈ ಬಾಕ್ಸ್ ಆಫೀಸ್ ವರದಿ ನಿರ್ಮಾಪಕರಿಂದ ಅಥವಾ ಹಂಚಿಕೆದಾರರಿಂದ ಬಂದ ಪಕ್ಕಾ ವರದಿಯಾಗಿರುವುದಿಲ್ಲ. ಚಿತ್ರಮಂದಿರದ ಮಾಲೀಕರ, ಮಾಧ್ಯಮಗಳ ವರದಿ ಮತ್ತು ಸಿನಿ ಅಭಿಮಾನಿಗಳ ಅಭಿಪ್ರಾಯ ಆದರಿಸಿ ಬರೆಯಲಾಗಿದೆ)

ಮದರಂಗಿ

ಮಲ್ಲಿಕಾರ್ಜುನ ನಿರ್ದೇಶಿಸಿದ ಕೃಷ್ಣ , ಕಾವ್ಯ ಶೆಟ್ಟಿ, ಸಾಧು ಕೋಕಿಲ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಎವರೇಜ್ ಗಳಿಕೆ ಕಂಡಿದೆ. ರಾಜ್ಯದ ಕೆಲವು ಭಾಗದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬುಲ್ ಬುಲ್

ಈ ವರ್ಷದ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ. ಎಂ ಡಿ ಶ್ರೀಧರ್ ನಿರ್ದೇಶಿಸಿದ ದರ್ಶನ್, ಅಂಬರೀಶ್, ರಚಿತಾ ರಾಮ್ ಸೇರಿದಂತೆ ಕನ್ನಡ ಚಿತ್ರೋದ್ಯಮದ ಪ್ರಮುಖ ಕಲಾವಿದರು ನಟಿಸಿದ್ದ ಈ ಚಿತ್ರ ಗಳಿಕೆಯಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ನಾಗಾಲೋಟದಲ್ಲಿ ಓಡುತ್ತಿದೆ. ಅಂದಹಾಗೆ ಈ ಚಿತ್ರ ತೆಲುಗಿನ ಡಾರ್ಲಿಂಗ್ ಚಿತ್ರದ ರಿಮೇಕ್.

ಆನೆಪಟಾಕಿ

ಪಟಾಕಿಯ ಸದ್ದು ಅಷ್ಟೇನೂ ಬರದ ಚಿತ್ರ. ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಈ ಚಿತ್ರದಲ್ಲಿ ಸೃಜನ್ ಲೋಕೇಶ್, ಪಾರ್ವತಿ, ಸಾಧು ಕೋಕಿಲ, ರಂಗಾಯಣ ರಘು ಪ್ರಮುಖ ತಾರಾಗಣದಲ್ಲಿದ್ದಾರೆ.

ಕುಂಭರಾಶಿ

ಚಂದ್ರಹಾಸ್ ನಿರ್ದೇಶನದ ಈ ಚಿತ್ರದ ಪ್ರಮುಖ ತಾರಗಣದಲ್ಲಿ ಚೇತನ್ ಚಂದ್ರ, ರೂಪಿಕಾ, ಶರತ್ ಲೋಹಿತಾಶ್ವ,ಹರೀಶ್ ರೈ ಇದ್ದಾರೆ. ಕುಂಭರಾಶಿ ಚಿತ್ರಕ್ಕೆ ರಾಶಿ ಫಲ ವರ್ಕೌಟ್ ಅಗಲಿಲ್ಲ.

ಪಗಡೆ

ಬಿ ಎ ಪುರುಶೋತ್ತಮ್ ನಿರ್ದೇಶನದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ವಿಶ್ವಾಸ್ ಭಾರಧ್ವಜ್, ಗಮ್ಯ ಇದ್ದಾರೆ. ಚಿತ್ರ ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸಿತು.

ಎಲೆಕ್ಷನ್

ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಡುಗಡೆಯಾಗ ಬೇಕಿತ್ತು. ಆದರೆ ಸೆನ್ಸಾರ್ ಮಂಡಳಿ ಬಿಡುಗಡೆಗೆ ಅವಕಾಶ ನೀಡದ ಹಿನ್ನಲೆಯಲ್ಲಿ ಚುನಾವಣೆಯ ನಂತರ ಬಿಡುಗಡೆಯಾಯಿತು. ಮಾಲಾಶ್ರೀ, ಪ್ರದೀಪ್ ರಾವತ್, ಸುಚೇಂದ್ರ ಪ್ರಸಾದ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಯಶಸ್ಸು ಕಂಡಿತು.

ಜಿಂಕೆಮರಿ

ತೆಲುಗಿನ ಬಿಂದಾಸ್ ಚಿತ್ರದ ರಿಮೇಕ್. ಚಿತ್ರದ ನಾಯಕ ಲೂಸ್ ಮಾದ ಯೋಗೀಶ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋನಿಯಾ ಗೌಡ, ರಮೇಶ್ ಭಟ್, ಅವಿನಾಶ್ ಪ್ರಮುಖ ಭೂಮಿಕೆಯಲ್ಲಿದ್ದಾರೆ.

ಕಾವೇರಿ ನಗರ

ರವಿ ಮಂಜುನಾಥ್ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ದೇವರಾ, ಸುಪ್ರೀತಾ, ಲೋಹಿತಾಶ್ವ ಇದ್ದಾರೆ. ಚಿತ್ರ ಯಶಸ್ಸು ಕಾಣಲಿಲ್ಲ.

ಸ್ಟೋರಿ ಕಥೆ

ಕೆ ಆರ್ ಜಗದೀಶ್ ನಿರ್ದೇಶನದ ಈ ಚಿತ್ರದ ತಾರಾಗಣದಲ್ಲಿ ತಿಲಕ್ ಶೇಖರ್, ಪ್ರತಾಪ್ ನಾರಾಯಣ್, ನೇಹಾ ಪಾಟೀಲ್, ಪಾರ್ವತಿ ನಾಯರ್ ಇದ್ದಾರೆ. ಈ ಚಿತ್ರ ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ.

ಡೈರೆಕ್ಟರ್ ಸ್ಪೆಷಲ್

ಗುರುಪ್ರಸಾದ್ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಧನಂಜಯ್, ರಂಗಾಯಣ ರಘು, ತಬ್ಲಾ ನಾಣಿ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ.

English summary
Kannada movies released during May 2013 box office performance. 
Please Wait while comments are loading...