»   » ಶಿವಣ್ಣ ಹೇಳಿಕೆ ಈ ವಿಚಾರದಲ್ಲಿ ಸದ್ಯ ವರ್ಕೌಟ್ ಆಗೋದು ಕಷ್ಟ

ಶಿವಣ್ಣ ಹೇಳಿಕೆ ಈ ವಿಚಾರದಲ್ಲಿ ಸದ್ಯ ವರ್ಕೌಟ್ ಆಗೋದು ಕಷ್ಟ

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮ ಎನ್ನುವುದು ಒಂದು ಮನೆಯಿದ್ದಂತೆ, ಅದು ಬರೀ ಬೆಂಗಳೂರು, ಮೈಸೂರಿಗೆ ಮಾತ್ರ ಸೀಮಿತವಲ್ಲ ಎನ್ನುವುದು ಉತ್ತರ ಕರ್ನಾಟಕದ ಭಾಗದ ಚಿತ್ರ ನಿರ್ಮಾಪಕರ, ಕಲಾವಿದರ, ತಂತ್ರಜ್ಞರ ಕೂಗು ಇಂದು ನಿನ್ನೆಯದಲ್ಲ.

ಬಹಳಷ್ಟು ಬಾರಿ ಉತ್ತರ ಕರ್ನಾಟಕದ ಭಾಗದವರು ಈ ಬಗ್ಗೆ ಸಿಡಿದಿದ್ದುಂಟು, ಆ ಸಮಯಕ್ಕೆ ಏನು ಪರಿಹಾರ ಬೇಕು ಅದನ್ನು ಮಾತ್ರ ಚಲನಚಿತ್ರ ಮಂಡಳಿ ಮಾಡಿತ್ತೇ ಹೊರತು ಅದಕ್ಕೆ ಶಾಸ್ವತ ಪರಿಹಾರ ಕಂಡುಕೊಳ್ಳುವಲ್ಲಿ ಮನಸ್ಸು ಮಾಡಲೇ ಇಲ್ಲ.

ಈಗ ಈ ಸಮಸ್ಯೆ, ಮಂಡಳಿ ಇಬ್ಭಾಗವಾಗುವ ಮಟ್ಟಿಗೆ ಬೆಳೆದು ನಿಂತಿದೆ. ಉತ್ತರ ಕರ್ನಾಟಕ ಚಲನಚಿತ್ರ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಅಧಿಕೃತ ಘೋಷಣೆಯೂ ಹೊರಬಿದ್ದಾಗಿದೆ. ಇದಕ್ಕೆ ವಾರ್ತಾ ಇಲಾಖೆಯಿಂದ ಅನುಮತಿಯೂ ದೊರೆತಾಗಿದೆ.

ಇದೊಂದು ಗಂಭೀರ ಸಮಸ್ಯೆಯಾಗಿದ್ದರೂ ಚಲನಚಿತ್ರ ಮಂಡಳಿ ಇಷ್ಟು ದಿನ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡತೆ ಕಾಣುವುದಿಲ್ಲ. ನೂತನವಾಗಿ ಅಸ್ತಿತ್ವಕ್ಕೆ ಬಂದ ಉ.ಕ ಚಲನಚಿತ್ರ ಮಂಡಳಿ ಈಗ ವಿಜಯಪುರದ ಚಡಚಣದಲ್ಲಿ ಚಲಚಿತ್ರೋತ್ಸವ ನಡೆಸಲೂ ಸಿದ್ದತೆ ನಡೆಸುತ್ತಿದೆ.

ಈ ಮಧ್ಯೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ, ಶಿವರಾಜ್ ಕುಮಾರ್ ಅವರ ಒಂದು ಹೇಳಿಕೆಯಿಂದ ತಕ್ಷಣದ ಮಟ್ಟಿಗೆ ಈ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಕಮ್ಮಿ. ಇಲ್ಲಿ ಶಿವಣ್ಣ ಸೇರಿದಂತೆ ಚಿತ್ರೋದ್ಯಮದ ಹಿರಿಯರ ಮಧ್ಯಪ್ರವೇಶ ಅತ್ಯಗತ್ಯ.

ಹೊಸ ಮಂಡಳಿ ಅಸ್ತಿತ್ವಕ್ಕೆ ತಂದ ಶಂಕರ್ ಸುಗತೆ ಹೇಳುವುದೇನು, ಶಿವಣ್ಣ ನೀಡಿದ ಹೇಳಿಕೆಯೇನು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಕರ್ನಾಟಕ ಎಂದರೆ ಬರೀ ಕಾವೇರಿ, ಕೆಂಪೇಗೌಡ ಅಲ್ಲ

ನದಿ ಎಂದರೆ ಕಾವೇರಿ, ನಾಯಕ ಎಂದರೆ ಕೆಂಪೇಗೌಡ ಮಾತ್ರ ಎನ್ನುವಂತಾಗಿದೆ. ಈ ಬಗ್ಗೆ ನಮಗೆ ತಕರಾರಿಲ್ಲ, ಆದರೆ ಉತ್ತರ ಕರ್ನಾಟಕ ಭಾಗದ ಸಂಸ್ಕೃತಿಯನ್ನೂ ಬಿಂಬಿಸಬೇಕಾಗಿದೆ - ಶಂಕರ್ ಸುಗತೆ (ಹೊಸದಾಗಿ ಅಸ್ತಿತ್ವಕ್ಕೆ ಬಂದ ಉತ್ತರ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ )

ಬೆಂಗಳೂರು ಏಕಸ್ವಾಮ್ಯತೆ ನಿಲ್ಲಬೇಕಾಗಿದೆ

ಈ ಭಾಗದ ಕಲಾವಿದರು ಜೋಕರ್ ಗಳಲ್ಲ, ಇಲ್ಲಿನ ಕನ್ನಡವನ್ನು ಹಾಸ್ಯಕ್ಕೆ ಬಳಸುವುದು ತಪ್ಪು. ರಾಜ್ಯದ ಸಾಂಸ್ಕೃತಿಕ ವಿಚಾರದಲ್ಲಿ ಬೆಂಗಳೂರು, ಮೈಸೂರು ಏಕಸ್ವಾಮ್ಯ ತಡೆಗಟ್ಟ ಬೇಕಾಗಿದೆ - ಶಂಕರ್ ಸುಗತೆ.

ಮುಂಬೈ, ಪುಣೆ ನಮಗೆ ಹತ್ತಿರ

ಬೆಂಗಳೂರಿನಲ್ಲಿ ಚಿತ್ರ ನಿರ್ಮಿಸುವುದಕ್ಕೂ, ಈ ಭಾಗದಲ್ಲಿ ಚಿತ್ರ ನಿರ್ಮಿಸುವುದಕ್ಕೂ ಹಣಕಾಸಿನ ವಿಚಾರದಲ್ಲಿ ಬಹಳ ವ್ಯತ್ಯಾಸವಿದೆ. ಬೆಂಗಳೂರಿನಲ್ಲಿ ಚಿತ್ರ ನಿರ್ಮಿಸಲು ದುಪ್ಪಟ್ಟು ಖರ್ಚಾಗುತ್ತದೆ. ಬೆಂಗಳೂರಿಗೆ ಹೋಲಿಸಿದರೆ ನಮಗೆ ಪುಣೆ, ಮುಂಬೈ ಹತ್ತಿರ - ಶಂಕರ್ ಸುಗತೆ. (ಚಿತ್ರದಲ್ಲಿ ಕೆಎಫ್ ಸಿಸಿ ಅಧ್ಯಕ್ಷ ಥಾಮಸ್ ಡಿಸೋಜ)

ವ್ಯವಹಾರ ಭಾವನಾತ್ಮಕವಾಗಿರಲಿ

ನಮಗೆ ಚಲನಚಿತ್ರ ಮಂಡಳಿಯನ್ನು ಇಬ್ಭಾಗ ಮಾಡಬೇಕೆನ್ನುವ ಉದ್ದೇಶವಿಲ್ಲ. ರಾತ್ರಿ ಬೆಳಗಾಗುವುದರೊಳಗೆ ನಾವು ಉದ್ದಾರವಾಗುತ್ತೇವೆ ಎಂದು ಹೇಳುತ್ತಿಲ್ಲ. ವ್ಯಾವಹಾರಿಕವಾಗಿ ಉತ್ತರ ಕರ್ನಾಟಕ ಬೇರೆಯಾಗುವುದು ಸರಿಯಾದ ನಿರ್ಧಾರ ಎನ್ನುತ್ತಾರೆ ಶಂಕರ್ ಸುಗತೆ. (ಚಿತ್ರದಲ್ಲಿ ಕೆಎಫ್ ಸಿಸಿ ಕಾರ್ಯದರ್ಶಿ ಭಾ.ಮಾ.ಹರೀಶ್)

ಶಿವಣ್ಣ ಹೇಳುವುದೇನು

ಕರ್ನಾಟಕ ಎಂದ ಮೇಲೆ ಒಂದು ಮಂಡಳಿ ಇರಬೇಕು, ನಾವು ಬೇರೆ ಬೇರೆಯಾಗ ಬಾರದು. ಆ ಭಾಗದ ನಮ್ಮ ಸಹದ್ಯೋಗಿಗಳ ನಡುವೆ ಏನಾದರೂ ಮನಸ್ತಾಪ, ತೊಂದರೆಯಿದ್ದರೆ ಮಾತುಕತೆ ಮೂಲಕ ಬಗೆಹರಿಸೋಣ ಎಂದು ಶಿವಣ್ಣ ಹೇಳಿದ್ದಾರೆ.

ಶಿವಣ್ಣ ಇದೊಂದು ಗಂಭೀರ ಸಮಸ್ಯೆ

ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ಶಿವಣ್ಣ ಅವರನ್ನು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಿವಣ್ಣ ಉತ್ತರಿಸುತ್ತಾ, ನಾವೆಲ್ಲಾ ಒಂದೇ ಎಂದಿದ್ದಾರೆ. ಈ ವಿಚಾರದಲ್ಲಿ ಯಾರೂ ನನ್ನನ್ನು ಸಂಪರ್ಕಿಸಲಿಲ್ಲ. ಹುಬ್ಬಳ್ಳಿಯಲ್ಲಿ ಮತ್ತೊಂದು ಮಂಡಳಿ ಬೇಕೋ, ಬೇಡವೋ ಎನ್ನುವುದನ್ನು ಮಾತುಕತೆ ಮೂಲಕ ಬಗೆಹರಿಸೋಣ ಎಂದಿದ್ದಾರೆ.

ನಾನು ರೆಡಿ

ನನ್ನ ಸಲಹೆ ಅಥವಾ ಮಧ್ಯಸ್ಥಿಕೆಯ ಅಗತ್ಯವಿದ್ದರೆ ನಾನು ಅದಕ್ಕೆ ರೆಡಿಯಾಗಿದ್ದೇನೆ. ವಿವಾದಗಳು ಒಂದು ಹಂತಕ್ಕೆ ಹೋದಾಗ ಮಾತ್ರ ನಾವು ಕಲಾವಿದರು ಮಧ್ಯಪ್ರವೇಶಿಸಲು ಸಾಧ್ಯ ಎಂದು ಶಿವಣ್ಣ ಹೇಳಿದ್ದಾರೆ. ಹಾಗಾಗಿ, ಶಿವಣ್ಣ ಅವರ ಒಂದು ಹೇಳಿಕೆಯಿಂದ ಇದಕ್ಕೆ ಪರಿಹಾರ ಸಿಗುವುದು ಸದ್ಯಕ್ಕೆ ಕಷ್ಟ. ಇಲ್ಲಿ ಎಲ್ಲರೂ ಒಂದೇ, ನಿಮ್ಮ ಸಮಸ್ಯೆ ನಮ್ಮ ಸಮಸ್ಯೆ ಇದ್ದ ಹಾಗೇ ಎಂದು ಮನದಟ್ಟು ಮಾಡುವ ಕೆಲಸ ಮಂಡಳಿ ಮತ್ತು ಚಿತ್ರೋದ್ಯಮವರಿಂದ ಸೀರಿಯಸ್ಸಾಗಿ ಆಗಬೇಕಾಗಿದೆ.

    English summary
    Karnataka Film Chamber of Commerce should not be divided, Shiva Rajkumar urged newly established North Karnataka Film Chamber of Commerce.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada