For Quick Alerts
  ALLOW NOTIFICATIONS  
  For Daily Alerts

  ಪುನೀತ್ ಪುಣ್ಯ ಸ್ಮರಣೆಯಂದು ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ತರ್ಪಣ ಬಿಟ್ಟ ವಿನೋದ್ ರಾಜ್

  |

  ನಟ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿ ಇಂದಿಗೆ ( ನವೆಂಬರ್ 8) 11ನೇ ದಿನಗಳಾಗಿವೆ. ಈ ಸಂಬಂಧ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಬೆಳಗ್ಗೆನೇ ಅಣ್ಣಾವ್ರ ಕುಟುಂಬ ಪೂಜೆ ಸಲ್ಲಿಸಿ ಬಂದಿತ್ತು. ಮಧ್ಯಾಹ್ನದಿಂದ ಪುನೀತ್ ರಾಜ್‌ಕುಮಾರ್ ಮನೆಯಲ್ಲೂ ವಿಧಿ-ವಿಧಾನಗಳೊಂದಿಗೆ ಪೂಜಾ ಕಾರ್ಯಗಳನ್ನು ನೆರವೇರಿಸಲಾಗಿದೆ. ಇದೇ ವೇಳೆ ಚಿತ್ರರಂಗದ ಗಣ್ಯರು ಹಾಗೂ ಆಪ್ತರು ಪುನೀತ್ ಮನೆಗೆ ಭೇಟಿ ಕೊಟ್ಟು ಅಪ್ಪು ಕುಟುಂಬಕ್ಕೆ ಸಮಾಧಾನದ ಮಾತುಗಳನ್ನು ಆಡಿದರು. ಇದೇ ವೇಳೆ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

  ಒಂದು ಕಡೆ ಬೆಂಗಳೂರಿನಲ್ಲಿ ಪುನೀತ್ ರಾಜ್‌ಕುಮಾರ್ ಚಿತ್ರರಂಗ ಪುನೀತ್ ಪುಣ್ಯತಿಥಿಯಲ್ಲಿ ನಿರತರಾಗಿದ್ದರೆ, ಇನ್ನೊಂದು ಕಡೆ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ್ದರು. ತಾಯಿಯೊಂದಿಗೆ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಪುನೀತ್ ರಾಜ್‌ಕುಮಾರ್‌ ಅವರ ವೈದಿಕ ಕ್ರಿಯೆ ನಡೆಸಿದ್ದಾರೆ.

  ಕಾವೇರಿ ನದಿ ತೀರದಲ್ಲಿ ವಿನೋದ್ ರಾಜ್‌ರಿಂದ ವೈದಿಕ ಕ್ರಿಯೆ

  ಪವರ್‌ಸ್ಟಾರ್ ಪುನೀತ್ ರಾಜ್​ಕುಮಾರ್​ 11ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ನಟ ವಿನೋದ್ ರಾಜ್ ಶ್ರೀರಂಗಪಟ್ಟಣಕ್ಕೆ ಧಾವಿಸಿದ್ದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ನದಿಯ ಸಂಗಮದಲ್ಲಿ ವಿಧಿ-ವಿಧಾನದಂತೆ ಪೂಜೆ ಕಾರ್ಯಗಳನ್ನು ನೆರವೇರಿಸಿದರು. ಅಪ್ಪು 11ನೇ ದಿನದ ಪುಣ್ಯಸ್ಮರಣೆಯಂದು ವೈದಿಕ ಕ್ರಿಯಾ ಕರ್ಮದ ಕಾರ್ಯ ನೆರವೇರಿಸಿ, ಇದೇ ವೇಳೆ ಆಶ್ಲೇಷ ಬಲಿ ಹಾಗೂ ನಾರಾಯಣ ಬಲಿ ಪೂಜೆ ನೆರವೇರಿಸಿದ್ದಾರೆ.

  ಪುನೀತ್ ಆತ್ಮಕ್ಕೆ ಶಾಂತಿ ದೊರಕುವಂತೆ ಪ್ರಾರ್ಥನೆ

  ಶ್ರೀರಂಗಪಟ್ಟಣದ ಗಂಜಾಂ ಬಳಿಯ ಕಾವೇರಿ ನದಿ ತೀರದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯ್ತು. ಬಳಿಕ ವಿನೋದ್ ರಾಜ್ ಕಾವೇರಿ ನದಿಗೆ ತರ್ಪಣ ಬಿಟ್ಟು, ಪುನೀತ್ ಆತ್ಮಕ್ಕೆ ಶಾಂತಿ ಸಿಗುವಂತೆ ಪ್ರಾರ್ಥನೆ ಮಾಡಿಕೊಂಡರು. ಬೆಳಗ್ಗೆಯಿಂದ ಸಂಜೆವರೆಗೂ 11 ನೇ ದಿನದ ಕಾರ್ಯದಲ್ಲೇ ಭಾಗಿಯಾಗಿದ್ದರು. ವಿನೋದ್ ರಾಜ್ ಹಾಗೂ ಲೀಲಾವತಿಯವರೊಂದಿಗೆ ಸಂಬಂಧಿಕರು ಕೂಡ ತೆರಳಿದ್ದರು.

  ಪುನೀತ್ ಮನೆಗೆ ಚಿತ್ರರಂಗದ ಗಣ್ಯರ ಭೇಟಿ

  ಅಪ್ಪು 11ನೇ ದಿನದ ಪುಣ್ಯಸ್ಮರಣೆಯಂದು ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ಸ್ಯಾಂಡಲ್‌ವುಡ್ ದಿಗ್ಗಜರು ಅಪ್ಪು ಮನೆಗೆ ಭೇಟಿ ನೀಡಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ, ಖಳನಟ ರವಿಶಂಕರ್, ಶೃತಿ, ಅನುಪ್ರಭಾಕರ್ ಹಾಗೂ ಪತಿ ರಘು ಮುಖರ್ಜಿ, ಡಾರ್ಲಿಂಗ್ ಕೃಷ್ಣ ಹಾಗೂ ಪತ್ನಿ ಮಿಲನ ನಾಗರಾಜ್ ಸೇರಿದಂತೆ ಸ್ಟಾರ್ ನಟರು ಪುನೀತ್ 11ನೇ ದಿನ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿದ್ದರು.

  ನವೆಂಬರ್ 9ರಂದು ಅಭಿಮಾನಿ ದೇವರುಗಳಿಗೆ ನಮನ

  11ನೇ ದಿನ ಪುಣ್ಯ ಸ್ಮರಣೆಯಲ್ಲಿ ಅಸಂಖ್ಯಾತ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಭಾಗಿಯಾಗಲು ಅವಕಾಶವಿರಲಿಲ್ಲ. ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಸೇರುತ್ತಿದ್ದರಿಂದ ನೂಕು ನುಗ್ಗಲಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೇವಲ ಕುಟುಂಬಸ್ಥರು ಹಾಗೂ ಚಿತ್ರರಂಗದ ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಸುಮಾರು 200 ರಿಂದ 300 ಮಂದಿ ಇಂದಿನ (ನವೆಂಬರ್ 8) ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿ ಪುನೀತ್ ರಾಜ್‌ಕುಮಾರ್ ಅವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

  ನವೆಂಬರ್ 9ರಂದು ಬೆಂಗಳೂರಿನ ಅರಮನೆಯಲ್ಲಿ ಅಭಿಮಾನಿ ದೇವರುಗಳಿಗೆ ನಮನ ಸಲ್ಲಿಸಲು ದೊಡ್ಮನೆ ಕುಟುಂಬ ಮುಂದಾಗಿದೆ. ಹೀಗಾಗಿ ಸುಮಾರು ಪ್ಯಾಲೇಸ್ ಗ್ರೌಂಡ್‌ನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆಯಿದೆ. ಹೀಗಾಗಿ ಅಣ್ಣಾವ್ರ ಕುಟುಂಬ ಮೊದಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅಭಿಮಾನಿಗಳೊಂದಿಗೆ ಅಣ್ಣಾವ್ರ ಇಡೀ ಕುಟುಂಬ ಇರಲಿದೆ. ಅಲ್ಲದೆ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಪುತ್ರರಾದ ವಿನಯ್ ರಾಜ್‌ಕುಮಾರ್ ಹಾಗೂ ಯುವರಾಜ್‌ಕುಮಾರ್ ಅಭಿಮಾನಿಗಳ ಆತಿಥ್ಯ ನೋಡಿಕೊಳ್ಳಲಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ನಮನ ಸಲ್ಲಿಸಲಿದ್ದಾರೆ.

  English summary
  Puneeth Rajkumar 11th day Punyasmarane Senior actress Leelavathi son Vinod raj gave tharpana to cauvery river in Srirangapatana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X