»   » 'ವಾಸ್ತು ಪ್ರಕಾರ' ಭಟ್ಟರ ಜೋಳಿಗೆ ತುಂಬಿಸಿದ್ದು ಹೇಗೆ?

'ವಾಸ್ತು ಪ್ರಕಾರ' ಭಟ್ಟರ ಜೋಳಿಗೆ ತುಂಬಿಸಿದ್ದು ಹೇಗೆ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಯೋಗರಾಜ್ ಭಟ್ ಅವರ 'ಮುಂಗಾರು ಮಳೆ' ಚಿತ್ರ ಅನಿರೀಕ್ಷಿತ ಯಶಸ್ಸಿನ ನಂತರ ಇಷ್ಟಪಟ್ಟು ತೆಗೆದ 'ಗಾಳಿ ಪಟ' ಕ್ಕೆ ಕನ್ನಡದ ಕೆಲ ದಿನ ಪತ್ರಿಕೆಗಳು ಮುಖಪುಟದಲ್ಲೇ ವಿಮರ್ಶೆ ಪ್ರಕಟಿಸಿ ಬಾಲಂಗೋಚಿ ಕೀಳಲು ಯತ್ನಿಸಿದರು.

ಅದರೆ, ಗಾಳಿಪಟ ಭರ್ಜರಿ ಹಿಟ್ ಆಯಿತು. ಈಗ ಯೋಗರಾಜ್ ಅವರು ನಿರ್ದೇಶಿಸಿ, ನಿರ್ಮಾಣ ಮಾಡಿರುವ 'ವಾಸ್ತು ಪ್ರಕಾರ' ಚಿತ್ರವೂ ಈಗ ಇದೇ ರೀತಿ ನೆಗಟಿವ್ ಪಬ್ಲಿಸಿಟಿಯ ಲಾಭ ಪಡೆದು ಭಟ್ಟರ ಜೋಳಿಗೆ ತುಂಬಿಸಿದೆ.['ವಾಸ್ತುಪ್ರಕಾರ' ಪತ್ರಿಕೆಗಳ ವಿಮರ್ಶಾ ನೋಟ]

ಒಂದು ಚಿತ್ರದ ಹಣೆಬರಹ ಮೊದಲ ಶೋ, ಮೂರು ದಿನ ಹಾಗೂ ಮೂರು ವಾರಗಳಲ್ಲಿ ತಿಳಿದು ಬಿಡುತ್ತದೆ. ಚಿತ್ರ ಚೆನ್ನಾಗಿದೆ ಚೆನ್ನಾಗಿಲ್ಲ ಎಂಬ ಬಾಯಿ ಮಾತಿನ ಪ್ರಚಾರ ಮೊದಲ ದಿನದಿಂದ ಆರಂಭವಾದರೆ, ಮೂರು ದಿನಗಳಲ್ಲಿ ಹಾಕಿದ ದುಡ್ಡಿನ ಲೆಕ್ಕಾಚಾರ ನಿರ್ಮಾಪಕ, ವಿತರಕರ ತಲೆಕೆಡಿಸುತ್ತದೆ. ಮೂರು ವಾರ ಓಡಿದರೆ ಬರೀ ಲಾಭದ ಮಾತೇ ಸರಿ. [ಚಿತ್ರ ವಿಮರ್ಶೆ: ಯೋಗರಾಜ್ ಭಟ್ ರ 'ಸರಳ' ವಾಸ್ತು]

ಹೀಗಾಗಿ ವಾಸ್ತು ಪ್ರಕಾರ ಚಿತ್ರ ಬಿಡುಗಡೆಯಾದ ಮೂರೇ ದಿನಗಳಲೇ ಮೂರು ಪ್ಲಸ್ ಕೋಟಿ ರು.ಗೂ ಹೆಚ್ಚು ದುಡ್ಡು ಬಾಚಿ ಹೊಸ ದಾಖಲೆ ಬರೆದಿದೆ. ರಾಜ್ಯದೆಲ್ಲೆಡೆ 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದ 'ವಾಸ್ತುಪ್ರಕಾರ' ಮೊದಲ ವಾರವೇ ಅಸಲು, ಲಾಭ ದೋಚುವ ಲೆಕ್ಕಾಚಾರದಲ್ಲಿದೆ.

'ವಾಸ್ತು ಪ್ರಕಾರ' ಭಟ್ಟರ ಜೋಳಿಗೆ ತುಂಬಿಸಿದ್ದು ಹೇಗೆ? ಭಟ್ಟರ ಚಿತ್ರದಲ್ಲಿ ಕಥೆ ಇಲ್ಲದಿದ್ದರೂ ಓಡುತ್ತೇ ಏಕೆ? ಜನ ಯಾಕೆ ಅವರ ಚಿತ್ರ ಇಷ್ಟು ನೆಗಟಿವ್ ಪಬ್ಲಿಸಿಟಿ ಕೊಡುತ್ತಾರೆ? ಉತ್ತರಕ್ಕೆ ಮುಂದೆ ಓದಿ...

ಮೊದಲ ದಿನ ಚಿತ್ರಣ ಬದಲಾಗಿ ಬಿಟ್ಟಿತು

ವಾಸ್ತು ಪ್ರಕಾರ ಚಿತ್ರದ ಮುಖ್ಯ ಚಿತ್ರಮಂದಿರ ಮೇನಕಾದಲ್ಲಿ ಮೊದಲ ದಿನ ಅಷ್ಟಾಗಿ ಮೆಚ್ಚುಗೆಯ ಮಾತುಗಳು ಕೇಳಿ ಬಂದಿರಲಿಲ್ಲ. ಮಲ್ಪಿಪ್ಲೆಕ್ಸ್ ಸ್ಕ್ರೀನ್ ಗಳಲ್ಲಿ ಶೇ 70-80ರಷ್ಟು ಸೀಟುಗಳು ಭರ್ತಿಯಾಗಿತ್ತು. ಸುಮಾರು 15ಕೋಟಿ ರು ಬಂಡವಾಳ ಹೂಡಿಕೆ ಮಾಡಿದೆ ಎನ್ನಲಾದ ಚಿತ್ರ ಮೂರು ದಿನಕ್ಕೆ ಎತ್ತಂಗಡಿಯಾಗಬಹುದು ಎಂಬ ಭಯ ಚಿತ್ರತಂಡಕ್ಕೆ ಆವರಿಸಿತ್ತು.

ಕೈ ಹಿಡಿದ ಕಟು ವಿಮರ್ಶೆ ಹಾಗೂ ಪ್ರೇಕ್ಷಕ

ಮೊದಲ ದಿನವೇ 1.13 ಕೋಟಿ ರು ಗಳಿಸಿದ ವಾಸ್ತು ಪ್ರಕಾರ ನಿರಂತರವಾಗಿ ಉತ್ತಮ ಗಳಿಕೆ ಮುಂದುವರೆಸಲು ಪ್ರೇಕ್ಷಕರೆ ಕಾರಣ, ಭಟ್ಟರ ಸಿನಿಮಾ ಹೇಗಿರುತ್ತೆ ನೋಡೋಣ ಎಂಬ ಕೆಟ್ಟ ಕುತೂಹಲ ಅವರನ್ನು ಮತ್ತೆ ಮತ್ತೆ ಚಿತ್ರಮಂದಿರದತ್ತ ಕರೆಸಿಕೊಂಡಿದೆ. ಹಲವು ಪತ್ರಿಕೆಗಳಲ್ಲಿ ಬಂದ ಕಟು ವಿಮರ್ಶೆಯನ್ನು ಓದಿಯೂ ಕೂಡಾ ಚಿತ್ರಮಂದಿರ ಭರ್ತಿಯಾಗುತ್ತಿದೆ.

ನೆಗಟಿವ್ ಪಬ್ಲಿಸಿಟಿ ಹೇಗೆ ನೆರವಾಯಿತು

ಗಾಳಿಪಟದಂತೆ ಗಳಿಕೆ ಏರಲು ಫೇಸ್ ಬುಕ್ ನಲ್ಲಿ ಸಿಕ್ಕ ನೆಗಟಿವ್ ಪಬ್ಲಿಸಿಟಿಯೂ ಕಾರಣ ಎನ್ನಬಹುದು. ಇದರಿಂದ ಚಿತ್ರದ ಬಗ್ಗೆ ಟಾಕ್ ಹೆಚ್ಚಾಗತೊಡಗಿತು. ಚಿತ್ರ ಇಷ್ಟವಿಲ್ಲದಿದ್ದರೆ ನಿರ್ಲಕ್ಷಿಸಬಹುದಿತ್ತು.

ಅದರೆ, ಚಿತ್ರದ ಬಗ್ಗೆ ಹೆಚ್ಚೆಚ್ಚು ಪೋಸ್ಟ್ ಬರುತ್ತಿದ್ದಂತೆ, ಜನ ಕುತೂಹಲಕ್ಕಾಗಿ ಒಮ್ಮೆ ಚಿತ್ರ ನೋಡಿ ಬರುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಪಬ್ಲಿಸಿಟಿ ಗಿಮಿಕ್ ಇಲ್ಲದೆ ಭಟ್ಟರ ಜೋಳಿಗೆ ತುಂಬುತ್ತಿದೆ. ಯೋಗರಾಜ್ ಭಟ್ ರನ್ನು ಉಗಿಯುವ ಭರದಲ್ಲಿ ಅವರ ಚಿತ್ರಕ್ಕೆ ಜನರು(ಫೇಸ್ ಬುಕ್ ಮೂಲಕ) ನೆರವಾಗುತ್ತಿದ್ದಾರೆ.

ಯೋಗರಾಜ್ ಭಟ್ ಅವರ ಸ್ವಂತ ಬ್ಯಾನರ್ ಸಿನಿಮಾ

ಎನ್ ಕುಮಾರ್ ನಿರ್ಮಾಪಕರಾಗಿರುವ ಚಿತ್ರ ಯೋಗರಾಜ್ ಭಟ್ ಅವರ ಸ್ವಂತ ಬ್ಯಾನರ್ ಸಿನಿಮಾ ಎಂಬುದನ್ನು ಮರೆಯುವಂತಿಲ್ಲ. ಏ.2ರಂದು ಬಿಡುಗಡೆಯಾದ ಈ ಚಿತ್ರ ಮೊದಲ ಮೂರು ದಿನದ ಮೊದಲ ಟಾರ್ಗೆಟ್ ಮುಟ್ಟಿದೆ. 3.78 ಕೋಟಿ ರು ಕಲೆಕ್ಷನ್ ಮಾಡಿ ಯಶ ಪಡೆದುಕೊಂಡಿದೆ. ಈ ವಾರದ ತನಕ ಇದೇ ರೀತಿ ಗಳಿಕೆ ಮುಂದುವರೆದರೆ ಭಟ್ಟರ ಮುಖದಲ್ಲಿ ಅಪರೂಪಕ್ಕೆ ನಗೆ ಚಿಮ್ಮಬಹುದು.

ಅಸಲಿಗೆ ಚಿತ್ರ ಜನಕ್ಕೆ ಮೆಚ್ಚುಗೆಯಾಗಿದ್ದೇಕೆ?

* ಯೋಗರಾಜ್ ಭಟ್ ಅವರು ವಾಸ್ತು ಬಗ್ಗೆ ಏನು ಹೇಳಿರುತ್ತಾರೆ? ಎಂಬ ಕುತೂಹಲ ಜನರಲ್ಲಿತ್ತು.
* ಜಗ್ಗೇಶ್-ರಕ್ಷಿತ್ ಶೆಟ್ಟಿ ಕಾಂಬಿನೇಷನ್ ಹೊಸ ರೀತಿ ಅನುಭವ
* ಎದ್ದೇಳು ಮಂಜುನಾಥ ನಂತರ ಜಗ್ಗೇಶ್ ತಮ್ಮ ಲಯಕ್ಕೆ ಮರಳಿದ್ದು ಚಿತ್ರದ ಗಳಿಕೆಗೆ ಮುಖ್ಯ ಕಾರಣ.
* ಪರೂಲ್-ಜಗ್ಗೇಶ್ ಕಿತ್ತಾಟ ಕಿರಿಕಿರಿ ಎನಿಸಿದರೂ ಜಗ್ಗೇಶ್ ಫ್ಯಾನ್ಸ್ ಗೆ ಕಚಗುಳಿ.

ಚಿತ್ರದ ಆರಂಭ- ಚಿತ್ರದ ಅಂತ್ಯ ಜನಕ್ಕೆ ಮೆಚ್ಚುಗೆ

* ಐಶಾನಿ ನಟನೆ ಬಗ್ಗೆ ಹೆಚ್ಚಿನ ನಿರೀಕ್ಷೆ ಇಲ್ಲದಿದ್ದರೂ ಮುದ್ದು ಮುಖದ ಹೊಸ ನಾಯಕಿ ಆಕರ್ಷಣೆ.
* ಚಿತ್ರದ ಆರಂಭ- ಚಿತ್ರದ ಅಂತ್ಯ ಜನಕ್ಕೆ ಮೆಚ್ಚುಗೆಯಾಗಿದೆ. ವಿಶೇಷವಾಗಿ ಗೃಹಿಣಿಯರು, ವಯೋವೃದ್ಧರಿಗೆ.
* ಅನಂತ್ ಮೌನ ಸಹಿಸಿಕೊಂಡವರು ಸುಧಾರಾಣಿ ಆರಚಾಟವನ್ನು ಮೆಚ್ಚಬಹುದು. ಸೀತಾರಾಮ್ ಅವರಿಗೆ ಹೆಚ್ಚಿನ ಅವಕಾಶವಿಲ್ಲ.

ವಾಸ್ತು ಬಗ್ಗೆ ಮನಸ್ಸುಗಳ ಜೋಡಣೆ ಬಗ್ಗೆ ಸೂಕ್ಷ್ಮವಾಗಿ ಹೇಳಿರುವ ಭಟ್ಟರು ಎಂದಿನಂತೆ ಎಲ್ಲೂ ಕಮಿಟ್ ಆಗದೆ ಇರುವುದು ಹಲವರಿಗೆ ಉಡಾಫೆ., ಕೆಲವರಿಗೆ ಇದೇ ಭಟ್ಟರ ಸ್ಟೈಲ್ ಎನಿಸಿದೆ. ಒಟ್ಟಾರೆ ಇತರೆ ಚಿತ್ರಗಳಿಗೆ ಹೋಲಿಸಿದರೆ ಇದು ನೋಡಬಹುದು ಎನಿಸಿದ್ದರಿಂದ ಚಿತ್ರದ ಗಳಿಕೆ ಏರುತ್ತಿದೆ.

ನಾಯಕ ಜಗ್ಗೇಶ್ ಟ್ವೀಟ್

ನಾಯಕ ಜಗ್ಗೇಶ್ ಟ್ವೀಟ್ ಮಾಡಿ ಚಿತ್ರಮಂದಿರಗಳು ಭರ್ತಿಯಾಗುತ್ತಿವೆ. ಇದೆಲ್ಲ ಪ್ರೇಕ್ಷಕರ ಕೃಪೆ ಎಂದಿದ್ದಾರೆ. ಇದಕ್ಕೂ ಮುನ್ನ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಚಿತ್ರದ ಬಗ್ಗೆ ನೆಗಟಿವ್ ವಿಮರ್ಶೆ ಬರೆದವರ ವಿರುದ್ಧ ಕಿಡಿಕಾರಿದ್ದರು.

English summary
Director Yogaraj Bhat's Latest flick Vaasthu Prakara is the now the talk of town. Movie Released on April 2, has recevied mixed response from audience and critics. But, It has collected more than Rs 5 Cr all over Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada