'ಇಂಡಿಯನ್ 2' ದುರಂತ: ಪೊಲೀಸರ ಮುಂದೆ ಹಾಜರಾದ ಕಮಲ್ ಹಾಸನ್
'ಇಂಡಿಯನ್ 2' ಚಿತ್ರೀಕರಣದ ವೇಳೆ ಕಳೆದ ವಾರ ಸೆಟ್‌ನಲ್ಲಿ ಉಂಟಾದ ಅವಘಡದಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಕಮಲ ಹಾಸನ್ ಮಂಗಳವಾರ ಚೆನ್ನೈ ಪೊಲೀಸರ ಮುಂದೆ ಹಾಜರಾದರು.
Recommended Video
ಅಪಘಾತ ಸಂಭವಿಸುವ ಸಂದರ್ಭದಲ್ಲಿ ನಟ ಕಮಲ ಹಾಸನ್ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಆದರೆ ಪೊಲೀಸರು ಕಮಲ ಹಾಸನ್ ಸೇರಿದಂತೆ ಚಿತ್ರತಂಡದ ಅನೇಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಕಮಲ ಹಾಸನ್ ವಿಚಾರಣೆಗೆ ಹಾಜರಾಗಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದರು.
ಚೆನ್ನೈನ ಹೊರವಲಯದ ಇವಿಪಿ ಫಿಲಂ ಸಿಟಿಯಲ್ಲಿ 'ಇಂಡಿಯನ್ 2' ಚಿತ್ರೀಕರಣದ ವೇಳೆ ಶೂಟಿಂಗ್‌ಗೆ ಬಳಸಲಾಗಿದ್ದ ಕ್ರೇನ್ ತುಂಡಾಗಿ ಕೆಳಗೆ ಕೆಲಸ ಮಾಡುತ್ತಿದ್ದವರ ಮೇಲೆ ಪರಿಣಾಮ ಸಹಾಯಕ ನಿರ್ದೇಶಕ ಸೇರಿದಂತೆ ಮೂವರು ಮೃತಪಟ್ಟಿದ್ದರು. ಒಂಬತ್ತು ಮಂದಿ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಕಮಲ ಹಾಸನ್ ಬೇರೊಂದು ಸ್ಥಳದಲ್ಲಿದ್ದರು.

ನಿರ್ಲಕ್ಷ್ಯದಿಂದ ಸಾವು ಮತ್ತು ಗಾಯದ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಘಟನೆಗೆ ಹೊಣೆಗಾರರನ್ನು ಗುರುತಿಸುವುದಾಗಿ ತಿಳಿಸಿದ್ದಾರೆ. ಚಿತ್ರದ ನಿರ್ದೇಶಕ ಶಂಕರ್ ಅವರನ್ನು ಕಳೆದ ವಾರ ವಿಚಾರಣೆ ನಡೆಸಲಾಗಿತ್ತು. ಆದರೆ ಘಟನೆ ನಡೆದ ವೇಳೆ ಅವರು ಸ್ಥಳದಲ್ಲಿ ಇದ್ದರೇ ಅಥವಾ ಇರಲಿಲ್ಲವೇ ಎಂಬುದು ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದರು.


Click it and Unblock the Notifications











