ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ಆರ್‌ಜಿವಿ ಕಮೆಂಟ್: ಬಿತ್ತು ಕೇಸ್ ಮೇಲೆ ಕೇಸ್!
ರಾಮ್ ಗೋಪಾಲ್ ವರ್ಮಾಗೂ ವಿವಾದಕ್ಕೂ ತೀರಾ ಹತ್ತಿರದ ಸಂಬಂಧ. ಟ್ವಿಟರ್‌ನಲ್ಲಿ ಏನಾದರೊಂದು ಕಮೆಂಟ್ ಮಾಡಿ ವಿವಾದಗಳನ್ನು ಸೃಷ್ಟಿ ಮಾಡುತ್ತಲೇ ಇರುತ್ತಾರೆ. ಈಗ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ಟ್ವಿಟರ್‌ನಲ್ಲಿ ಕಮೆಂಟ್ ಮಾಡಿದ್ದರು. ಇದೇ ಹೇಳಿಕೆ ಈಗ ಟಾಲಿವುಡ್ ನಿರ್ದೇಶಕನಿಗೆ ತೊಂದರೆ ಕೊಡುವ ಸಾಧ್ಯತೆಯಿದೆ. ರಾಮ್ ಗೋಪಾಲ್ ವರ್ಮಾ ನೀಡಿರುವ ಈ ಹೇಳಿಕೆ ವಿರೋಧಿಸಿಸ ದೂರುಗಳ ಮೇಲೆ ದೂರು ದಾಖಲಾಗಿದೆ.

ದ್ರೌಪದಿ ಬಗ್ಗೆ RGV ಕಮೆಂಟ್ ಏನು?
ವಿಡಂಬನಾತ್ಮಕ ಕಮೆಂಟ್‌ಗಳನ್ನು ಮಾಡುವುದರಲ್ಲಿ ಆರ್‌ಜಿವಿ ಎತ್ತಿದ ಕೈ. ಇಂತಹದ್ದೇ ಕಮೆಂಟ್‌ಗಳನ್ನು ಮಾಡಿ ವಿವಾದಕ್ಕೆ ಸಿಕ್ಕಿಕೊಳ್ಳುವುದೂ ಇದೆ. ಈ ಬಾರಿ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ಕಮೆಂಟ್ ಮಾಡಿ ಪೇಚಿಗೆ ಸಿಲುಕಿದ್ದಾರೆ. ಎರಡು ದಿನಗಳ ಹಿಂದೆ ಆರ್‌ಜಿವಿ ಟ್ವಿಟರ್‌ನಲ್ಲಿ ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದರು." ದ್ರೌಪದಿ ರಾಷ್ಟ್ರಪತಿಯಾದ್ರೆ, ಪಾಂಡವರು ಯಾರು? ಎಲ್ಲಕ್ಕಿಂತ ಮುಖ್ಯವಾಗಿ ಕೌರವರು ಯಾರು?" ಎಂದು ಕಮೆಂಟ್ ಮಾಡಿದ್ದರು.

ಆರ್‌ಜಿವಿ ಮೇಲೆ ಬಿಜೆಪಿ ಮುಖಂಡರ ಕೆಂಗಣ್ಣು
ಆರ್‌ಜಿವಿ ಕೊಟ್ಟ ಈ ಹೇಳಿಕೆ ಬಿಜೆಪಿಯ ಕೆಲವು ಮುಖಂಡರನ್ನು ಕೆರಳಿಸಿದೆ. ದ್ರೌಪದಿ ಮುರ್ಮು ಅವರನ್ನು ಅವಮಾನಿಸಿದ್ದಕ್ಕೆ ಕೆಲವು ನಾಯಕರು ಹಾಗೂ ಮಹಿಳಾ ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದು, ದೂರು ದಾಖಲಿಸಿವೆ. ಬಿಜೆಪಿ ಮುಖಂಡರಾದ ರಾಜಾ ಸಿಂಗ್ ಹಾಗೂ ರಾಕೇಶ್ ರೆಡ್ಡಿ " ಆರ್‌ಜಿವಿ ಒಬ್ಬ ನಿಶ್ಪ್ರಯೋಜಕ. ಅವರನ್ನು ಜೈಲಿಗೆ ಕಳುಹಿಸಬೇಕು. ಅವರಿಗೆ ಬಿಜೆಪಿ ಪವರ್ ತೋರಿಸುತ್ತೇವೆ." ಎಂದು ಹೇಳಿದ್ದಾರೆ.
ಆರ್‌ಜಿವಿ ಡ್ಯಾಮೇಜ್ ಕಂಟ್ರೋಲ್
ವಿವಾದ ಭುಗಿಲೆದ್ದ ಬಳಿಕ ಆರ್‌ಜಿವಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದರು. " ಈ ಹೇಳಿಕೆಯನ್ನು ಕೇವಲ ವ್ಯಂಗ್ಯವಾಗಿ ಹೇಳಲಾಗಿದೆ. ಇದರಲ್ಲಿ ಬೇರೆ ಯಾವುದೇ ರೀತಿಯ ಉದ್ದೇಶವಿಲ್ಲ. ದ್ರೌಪದಿ ಮಹಾಭಾರತದಲ್ಲಿ ನನ್ನ ಅಚ್ಚುಮೆಚ್ಚಿನ ಪಾತ್ರ. ಈ ಹೆಸರು ಅಪರೂಪವಾಗಿದ್ದರಿಂದ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಆ ಹೆಸರಿಗೆ ಸಂಬಂಧಿಸಿದ ಪಾತ್ರಗಳನ್ನು ನೆನಪಿಸಿಕೊಂಡೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿಲ್ಲ." ಎಂದು ಆರ್‌ಜಿವಿ ಟ್ವೀಟ್ ಮಾಡಿದ್ದಾರೆ.

ದೌರ್ಜನ್ಯ ಪ್ರಕರಣ ದಾಖಲು
ಆರ್‌ಜಿವಿ ಕ್ಲಾರಿಫಿಕೇಷನ್ ಕೊಟ್ಟರೂ, ಬಿಜೆಪಿ ಮುಖಂಡರು ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಗಳ ಆಧಾರದ ಮೇಲೆ ದೂರನ್ನು ದಾಖಲಿಸಲು ತೀರ್ಮಾನಿಸಿದ್ದಾರೆ. ಅಲ್ಲದೆ ಆರ್‌ಜಿವಿ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲಿದೆ ಎಂದು ವರದಿಯಾಗಿದೆ.


Click it and Unblock the Notifications











