twitter
    For Quick Alerts
    ALLOW NOTIFICATIONS  
    For Daily Alerts

    ಸಾವನ್ನು ಗೆದ್ದು ಬಂದ ಸಿನಿಮಾ ಛಾಯಾಗ್ರಾಹಕರು: ಮೈ ಜುಂ ಎನಿಸುವ ಘಟನೆಗಳ ಮೆಲುಕು

    |

    ಸಿನಿಮಾಗಳೆಂದರೆ ಮನರಂಜನೆ, ಖುಷಿ, ರೋಚಕತೆ, ಸಾಹಸ, ಭಾವುಕತೆ ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಬಣ್ಣಿಸಬಹುದು. ಆದರೆ ನಮಗೆ ಸಿನಿಮಾಗಳನ್ನು ಕಥೆ, ಅಭಿನಯಗಳಿಗಿಂತಲೂ ವಿಸ್ಮಯಕಾರಿಯಾಗಿ ಮತ್ತು ಸುಂದರವಾಗಿ ತೋರಿಸುವುದು ಛಾಯಾಗ್ರಹಣ.

    Recommended Video

    Puneeth Rajkumar sweats out at home with these heavy workout | Power stars Powerful workout

    ಎಷ್ಟೋ ಸ್ಥಳಗಳು, ದೃಶ್ಯಗಳನ್ನು ಪ್ರೇಕ್ಷಕ 'ವಾವ್' ಎಂಬ ನಿಬ್ಬೆರಗಾಗಿ ನೋಡುವಂತೆ ಮಾಡುವ ಶಕ್ತಿ ಛಾಯಾಗ್ರಹಣಕ್ಕೆ ಇದೆ. ವಾಸ್ತವವಾಗಿ ಎಷ್ಟೋ ದೃಶ್ಯಗಳು ಮಾತ್ರವಲ್ಲ, ಸಿನಿಮಾಗಳ ಹೀರೋಗಳೂ ಛಾಯಾಗ್ರಾಹಕರೇ ಆಗಿರುತ್ತಾರೆ. ಏಕೆಂದರೆ ಸಿನಿಮಾ ಛಾಯಾಗ್ರಹಣ ಸುಲಭದ ಮಾತಲ್ಲ. ನಿರ್ದೇಶಕರಷ್ಟೇ ಆ ಸಿನಿಮಾದ ಬಗ್ಗೆ ಛಾಯಾಗ್ರಾಹಕರಲ್ಲಿಯೂ ತಿಳಿವಳಿಕೆ, ಪರಿಕಲ್ಪನೆ ಇರಬೇಕು. ಛಾಯಾಗ್ರಹಣ ಒಂದು ಸೃಜನಶೀಲ ಕಲೆ. ಕ್ಯಾಮೆರಾದಲ್ಲಿ ಯಾವ ಕೋನದಿಂದ ಹೇಗೆ ಕಾಣಿಸುತ್ತದೆ ಎಂಬುದನ್ನು ನೋಡುವವರು ಅವರು.

    'ಓಂ' ಚಿತ್ರ ಸೃಷ್ಟಿಸಿದ ಅಪರೂಪದ ದಾಖಲೆಗಳು ಹಾಗೂ ಆಸಕ್ತಿಕರ ಸಂಗತಿಗಳು'ಓಂ' ಚಿತ್ರ ಸೃಷ್ಟಿಸಿದ ಅಪರೂಪದ ದಾಖಲೆಗಳು ಹಾಗೂ ಆಸಕ್ತಿಕರ ಸಂಗತಿಗಳು

    ಎಷ್ಟೋ ದೃಶ್ಯಗಳನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಅವರು ಜೀವವನ್ನೇ ಪಣವಾಗಿಡುವ ದಿಟ್ಟತನ ಪ್ರದರ್ಶಿಸಬೇಕು. ಕಲಾವಿದರು, ಇತರೆ ತಂತ್ರಜ್ಞರಿಗೆ ಇರುವ ಸುರಕ್ಷತೆ ಮತ್ತು ಸೌಲಭ್ಯ ಅವರಿಗೆ ಇರಲಾರದು. ಈಗಿನಂತೆ ಹಿಂದಿನ ಕಾಲದಲ್ಲಿ ಅವರಿಗಿದ್ದ ಸವಲತ್ತುಗಳು ಇನ್ನೂ ಕಡಿಮೆ. ಹೀಗೆ ಅನೇಕ ಛಾಯಾಗ್ರಾಹಕರು ಚಿತ್ರೀಕರಣದ ಸಂದರ್ಭದಲ್ಲಿ ಸಾವಿನ ಅಂಚಿನಿಂದ ಪಾರಾಗಿದ್ದಾರೆ. ನಮ್ಮ ಹಿರಿಯ ತಲೆಮಾರಿನ ಛಾಯಾಗ್ರಾಹಕರು ಸಾವನ್ನು ಗೆದ್ದುಬಂದ ಕೆಲವು ಪ್ರಸಂಗಗಳು ಇಲ್ಲಿವೆ...

    ಮರುಜನ್ಮ ಪಡೆದಿದ್ದ ಗೌರಿಶಂಕರ್

    ಮರುಜನ್ಮ ಪಡೆದಿದ್ದ ಗೌರಿಶಂಕರ್

    ನಟಿ ರಕ್ಷಿತಾ ಪ್ರೇಮ್ ಅವರ ತಂದೆ ಬಿ.ಸಿ. ಗೌರಿಶಂಕರ್, ಕನ್ನಡ ಚಿತ್ರರಂಗ ಕಂಡ ಮಹಾನ್ ಛಾಯಾಗ್ರಾಹಕರಲ್ಲಿ ಒಬ್ಬರು. 1979ರಲ್ಲಿ ಬಿಡುಗಡೆಯಾದ ಶಂಕರ್ ನಾಗ್, ಜಯಮಾಲಾ ಅಭಿನಯದ 'ಮಧು ಚಂದ್ರ' ಚಿತ್ರದ ಶೂಟಿಂಗ್ ಮಂಗಳೂರಿನ ಸೋಮೇಶ್ವರ ಬೀಚ್‌ನಲ್ಲಿ ನಡೆಯುತ್ತಿತ್ತು. ಅಲ್ಲಿ ಎರಡು ಬಂಡೆಗಳಿವೆ. ಒಂದು ಬಂಡೆಯ ಮೇಲೆ ಛಾಯಾಗ್ರಾಹಕ ಗೌರಿಶಂಕರ್ ಇದ್ದರೆ, ಇನ್ನೊಂದು ಬಂಡೆ ಮೇಲೆ ಕಲಾವಿದರು. ಆಗ ದೊಡ್ಡ ಅಲೆಯೊಂದು ಬಂದು ಗೌರಿಶಂಕರ್ ನಿಂತಿದ್ದ ಬಂಡೆಗೆ ಅಪ್ಪಳಿಸಿತ್ತು. 'ಅಮ್ಮಾ' ಎಂದು ಕೂಗುತ್ತಾ ಅವರು ಸಮುದ್ರಕ್ಕೆ ಬಿದ್ದಿದ್ದರು. ಬೀಳೋವಾಗ ಅವರಿಗೇ ಅರಿವಿಲ್ಲದಂತೆ ಸ್ಟ್ಯಾಂಡ್ ಸಹಿತ ಕ್ಯಾಮೆರಾ ಎತ್ತಿಕೊಂಡಿದ್ದರು. ಬಂಡೆಗೆ ಮೈ ಉಜ್ಜಿಕೊಂಡು ಬಿದ್ದದ್ದರಿಂದ ಬೆನ್ನಿನ ಚರ್ಮ ಕಿತ್ತುಹೋಗಿತ್ತು. ಪ್ರಜ್ಞೆ ತಪ್ಪಿದ್ದ ಅವರನ್ನು ಚಿತ್ರತಂಡ ಕೂಡಲೇ ರಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ಸೇರಿಸಿತ್ತು. ಈ ಘಟನೆ ಬಳಿಕ ತಾವು ಪುನರ್ಜನ್ಮ ಪಡೆದಿದ್ದಾಗಿ ಗೌರಿ ಶಂಕರ್ ಹೇಳಿಕೊಂಡಿದ್ದರು.

    ಮಾನಸ ಸರೋವರದಲ್ಲಿ ಬಸವರಾಜ್

    ಮಾನಸ ಸರೋವರದಲ್ಲಿ ಬಸವರಾಜ್

    ಕನ್ನಡದ ಅಪೂರ್ವ ಸಿನಿಮಾಗಳಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಾನಸ ಸರೋವರ' ಒಂದು. ಶೀರ್ಷಿಕೆ ಗೀತೆಯ ಹಾಡಿನ ಚಿತ್ರೀಕರಣ ಬೆಟ್ಟದ ಭಾಗದಲ್ಲಿ ನಡೆಯುತ್ತಿತ್ತು. ಪುಟ್ಟಣ್ಣ ಕಣಗಾಲ್, ಸಹ ನಿರ್ದೇಶಕ ಪಿ.ಎಚ್ ವಿಶ್ವನಾಥ್, ನಟ ಶ್ರೀನಾಥ್ ಮತ್ತು ಛಾಯಾಗ್ರಾಹಕ ಬಿಎಸ್ ಬಸವರಾಜ್ ಲೊಕೇಷನ್ ಬದಲಿಸಲು ಬೇರೊಂದು ದಿಕ್ಕಿಗೆ ನಡೆದುಕೊಂಡು ಹೋಗುತ್ತಿದ್ದರು. ಯೂನಿಟ್ ಹುಡುಗರು ಕ್ರೇನ್ ತಳ್ಳಿಕೊಂಡು ಬರುವಾಗ ಇಳಿಜಾರಿನಲ್ಲಿ ಅವರ ಹಿಡಿತ ತಪ್ಪಿ ವೇಗವಾಗಿ ಈ ನಾಲ್ವರೆಡೆಗೆ ಕ್ರೇನ್ ನುಗ್ಗಿತ್ತು. ಇನ್ನೇನು ಅದರ ಅಡಿಗೆ ಸಿಕ್ಕಿ ಸತ್ತೇ ಹೋದೆವು ಎನ್ನುವಾಗ ಕ್ರೇನ್ ಚಕ್ರಕ್ಕೆ ಸಣ್ಣ ಕಲ್ಲೊಂದು ಸಿಕ್ಕಿ ಅದರ ದಿಕ್ಕು ಬದಲಾಯಿತು. ಅದೃಷ್ಟವಶಾತ್ ನಾಲ್ವರೂ ಅಪಾಯದಿಂದ ಪಾರಾದರು. ಈ ಘಟನೆಯ ನೆನಪನ್ನು ಛಾಯಾಗ್ರಾಹಕ ಬಸವರಾಜ್ ಒಮ್ಮೆ ಹಂಚಿಕೊಂಡಿದ್ದರು.

    1,000 ಕೋಟಿ ರೂ ವೆಚ್ಚದಲ್ಲಿ 'ಮಹಾಭಾರತ' ಸಿನಿಮಾ ನಿರ್ಮಿಸಲು ಮುಂದಾಗಿದ್ದ ಉದ್ಯಮಿಯ ದುರಂತ ಕಥೆ1,000 ಕೋಟಿ ರೂ ವೆಚ್ಚದಲ್ಲಿ 'ಮಹಾಭಾರತ' ಸಿನಿಮಾ ನಿರ್ಮಿಸಲು ಮುಂದಾಗಿದ್ದ ಉದ್ಯಮಿಯ ದುರಂತ ಕಥೆ

    ಒಂಟಿ ಸಲಗ ಬೆನ್ನಟ್ಟಿದ್ದಾಗ

    ಒಂಟಿ ಸಲಗ ಬೆನ್ನಟ್ಟಿದ್ದಾಗ

    'ಕಾಡಿನ ರಹಸ್ಯ' ಚಿತ್ರದ ಬಳಿಕ ಕೆಎಸ್‌ಎಲ್ ಸ್ವಾಮಿ ಅವರ ಮುಂದಿನ ಚಿತ್ರಕ್ಕೆ ಸ್ಥಳ ನೋಡಲು ಛಾಯಾಗ್ರಾಹಕ ಆರ್‌ಎನ್‌ಕೆ ಪ್ರಸಾದ್, ನಿರ್ಮಾಪಕರು ಮತ್ತಿತರರು ಬಿಳಿಗಿರಿ ರಂಗನ ಬೆಟ್ಟಕ್ಕೆ ತೆರಳಿದ್ದರು. ಸಿನಿಮಾ ಚಿತ್ರೀಕರಣದ ವೇಳೆ ಸಾಕಷ್ಟು ಆನೆಗಳನ್ನು ಕಂಡಿದ್ದ ಅವರಿಗೆ, ಈ ಬಾರಿ ಎಲ್ಲಿಯೂ ಆನೆ ಕಾಣಿಸಲಿಲ್ಲ. ಮೇಯುತ್ತಿದ್ದ ಎಮ್ಮೆಗಳನ್ನೇ ತೋರಿಸಿ 'ಆನೆ ನೋಡಿ' ಎಂದು ತಮಾಷೆ ಮಾಡುತ್ತಿದ್ದರು. ಕಾರು ಸ್ವಲ್ಪ ದೂರ ಹೋಗುತ್ತಿದ್ದಂತೆ ಒಂಟಿ ಸಲಗವೊಂದು ಕಂಡಿತು. ಕಾರನ್ನು ನೋಡುತ್ತಿದ್ದಂತೆಯೇ ಕ್ರುದ್ಧಗೊಂಡ ಅದು ಜೋರಾಗಿ ಘೀಳಿಡುತ್ತಾ ಇವರತ್ತ ಮುನ್ನುಗ್ಗಿತು. ಆನೆ ನೋಡಿ ಕಾರು ನಿಲ್ಲಿಸಿದ್ದ ಚಾಲಕ, ಧೈರ್ಯ ಮಾಡಿ ರಿವರ್ಸ್ ಗೇರ್ ಹಾಕಿ ವೇಗವಾಗಿ ಹಿಂದಕ್ಕೆ ಚಲಾಯಿಸಿದರು. ಕೊನೆಗೆ ಅಲ್ಲಿ ನಿಂತಿದ್ದ ಅರಣ್ಯಾಧಿಕಾರಿಯೊಬ್ಬರ ಬಳಿ ಕಾರು ನಿಲ್ಲಿಸಿದರು. ಆನೆ ಕಂಡ ಅವರು ಹುಸಿ ಗುಂಡು ಹಾರಿಸಿ ಸಲಗವನ್ನು ಬೆದರಿಸಿ ಓಡಿಸಿದರು. ಮೈ ನಡುಗಿಸುವ ಘಟನೆಯನ್ನು ಆರ್‌ಎನ್‌ಕೆ ಪ್ರಸಾದ್ ಒಮ್ಮೆ ಸ್ಮರಿಸಿಕೊಂಡಿದ್ದರು.

    'ಜೀವನ ಚೈತ್ರ'ದ ನೆನಪು

    'ಜೀವನ ಚೈತ್ರ'ದ ನೆನಪು

    ಇತ್ತೀಚೆಗೆ ನಿಧನರಾದ ಹಿರಿಯ ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್ ಅವರು ರಾಜ್ ಕುಮಾರ್ ಅಭಿನಯದ 'ಜೀವನ ಚೈತ್ರ' ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದರು. ರಾಜ್ ಕುಮಾರ್ ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ 'ನಾದಮಯ' ಹಾಡಿನ ಚಿತ್ರೀಕರಣ ಕೇದಾರನಾಥದಲ್ಲಿ ನಡೆಯುತ್ತಿತ್ತು. ವಿಪರೀತ ಚಳಿ ಇರುವ ಪ್ರದೇಶದಲ್ಲಿ ಈಗಿನಂತೆ ಅಷ್ಟೊಂದು ಸುರಕ್ಷತೆಯ ಸಾಧನಗಳಿರಲಿಲ್ಲ. ರಾಜ್ ಕುಮಾರ್ ಅವರನ್ನು ವಿವಿಧ ಭಂಗಿಗಳಲ್ಲಿ ಹಾಗೂ ಹಿನ್ನೆಲೆಯಲ್ಲಿ ಕೇದಾರನಾಥದ ಸೌಂದರ್ಯ ಕಾಣಿಸುವಂತೆ ಚಿತ್ರೀಕರಿಸುವ ಸವಾಲು ಶ್ರೀಕಾಂತ್ ಅವರಿಗಿತ್ತು. ವಿಪರೀತ ಚಳಿಯಿಂದ ಅವರು ಕ್ಯಾಮೆರಾ ಹಿಡಿದು ನಿಲ್ಲಲೂ ಸಾಧ್ಯವಾಗಿರಲಿಲ್ಲ. ಸುಮಾರು 19,000 ಅಡಿ ಎತ್ತರದ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬೇಕಿತ್ತು. ಕೈಕಾಲು ಮರಗಟ್ಟಿ ನಡುಗತೊಡಗಿದ ಶ್ರೀಕಾಂತ್, ತಮ್ಮಿಂದ ಸಾಧ್ಯವೇ ಇಲ್ಲ ಎಂದು ಉಳಿದುಕೊಂಡಿದ್ದ ಸ್ಥಳಕ್ಕೆ ವಾಪಸ್ ಹೋಗಿದ್ದರು. ಅಲ್ಲಿ ಬಿಸಿ ನೀರಿನ ಶಾಖ ಪಡೆದು ಮೈ ಬೆಚ್ಚಗಾಗಿಸಿಕೊಂಡ ಅವರು ಮರುದಿನ ಮತ್ತೆ ಚಿತ್ರೀಕರಣಕ್ಕೆ ಸಿದ್ಧರಾಗಿದ್ದರು.

    ಶಂಕರ್ ನಾಗ್ ಕುರಿತು ಭಾವುಕ ಕತೆ ಹೇಳಿದ ಅರುಂಧತಿ ನಾಗ್ಶಂಕರ್ ನಾಗ್ ಕುರಿತು ಭಾವುಕ ಕತೆ ಹೇಳಿದ ಅರುಂಧತಿ ನಾಗ್

    'ರಣಧೀರ'ನ ಸಾಹಸ

    'ರಣಧೀರ'ನ ಸಾಹಸ

    'ರಣಧೀರ' ಚಿತ್ರದ ಕ್ಲೈಮ್ಯಾಕ್ಸ್‌ಅನ್ನು ರವಿಚಂದ್ರನ್ ವಿಭಿನ್ನವಾಗಿ ಚಿತ್ರೀಕರಿಸಲು ಬಯಸಿದ್ದರು. ಅದಕ್ಕಾಗಿ ಹಡಗಿನ ಸೆಟ್ ಸೃಷ್ಟಿಸಲಾಗಿತ್ತು. ಬೆಳಗಿನ ಜಾವದಿಂದ ಮಧ್ಯರಾತ್ರಿ ಕಳೆದರೂ ಅದರ ಕೆಲಸ ಮುಗಿಯುತ್ತಿರಲಿಲ್ಲ. ನೀರಲ್ಲಿ ಸತತವಾಗಿ ನಿಂತಿದ್ದರಿಂದ ಎಲ್ಲ ಕಾಲಲ್ಲೂ ಹುಣ್ಣಾಗಿತ್ತು. ದೃಶ್ಯ ನೈಜವಾಗಿ ಬರಬೇಕೆಂದು ವಿಪರೀತ ರಿಸ್ಕ್ ತೆಗೆದುಕೊಳ್ಳಲಾಗಿತ್ತು. ಸುಮಾರು 20 ಲೋಡ್ ಟ್ಯಾಂಕರ್ ನೀರು ತುಂಬಿಸಿ ಅದರ ಮೇಲೆ ಬೆಳಕು ಹಾಯಿಸಿ ಕಲಾವಿದರ ಮುಖದ ಮೇಲೆ ಪ್ರತಿಫಲನ ಕಾಣಿಸುವಂತೆ ಮಾಡಬೇಕಿತ್ತು. ಹೆಚ್ಚೂಕಡಿಮೆಯಾಗಿ ಶಾರ್ಟ್ ಸರ್ಕ್ಯೂಟ್ ಆದರೆ ಇಡೀ ಯೂನಿಟ್ ತಂಡ ಸುಟ್ಟು ಕರಕಲಾಗುತ್ತಿತ್ತು. ಚಿತ್ರೀಕರಣ ಬಹಳ ನಿಧಾನವಾಗಿ ಸಾಗಿತ್ತು. ಸುಮಾರು 15,000 ಅಡಿ ರೋಲ್ ಚಿತ್ರೀಕರಿಸಿದ್ದರೂ ಬಳಸಿಕೊಂಡಿದ್ದು ಕೊನೆಯಲ್ಲಿ 500 ಅಡಿ ಮಾತ್ರ ಹೀಗೆಯೇ ಬರಬೇಕೆಂದು ರವಿಚಂದ್ರನ್ ಪಟ್ಟು ಹಿಡಿದಿದ್ದರು. ಅಂದುಕೊಂಡಂತೆಯೇ ಚಿತ್ರ ಬಂದಿತ್ತು ಎಂಬುದನ್ನು ಛಾಯಾಗ್ರಾಹಕ ಮಧುಸೂದನ್ ವಿವರಿಸಿದ್ದರು.

    ಚಿತ್ರರಂಗದಲ್ಲಿ ಇನ್ನೂ ರಿಸ್ಕ್ ತೆಗೆದುಕೊಂಡು ಸಿನಿಮಾ ಚಿತ್ರೀಕರಿಸಿದ, ಅಪಾಯದಿಂದ ಪಾರಾದ ಘಟನೆಗಳಿವೆ. ಸಿನಿಮಾ ನಾಯಕರು, ಹೊಡೆದಾಟದ ದೃಶ್ಯಗಳಲ್ಲಿ ಪಾಲ್ಗೊಳ್ಳುವ ಕಲಾವಿದರು, ಸಾಹಸ ನಿರ್ದೇಶಕರು ಮುಂತಾದವರಂತೆ ಛಾಯಾಗ್ರಾಹಕರೂ ರಿಸ್ಕ್ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ಕೆಲವು ಉದಾಹರಣೆಗಳಿವು.

    English summary
    Cinematography is a creative and risky job as well. Here is a list of some cinematographers who were escaped from death on set accidents.
    Wednesday, June 3, 2020, 14:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X