»   » ಪ್ರೇಕ್ಷಕ ಪ್ರಭುವೇ ಕನ್ನಡ ಚಿತ್ರಗಳ ಮಾನ ಕಾಪಾಡು!

ಪ್ರೇಕ್ಷಕ ಪ್ರಭುವೇ ಕನ್ನಡ ಚಿತ್ರಗಳ ಮಾನ ಕಾಪಾಡು!

Posted By:
Subscribe to Filmibeat Kannada

ಮಾರ್ಚ್ ತಿಂಗಳಲ್ಲಿ ತೆರೆಕಂಡ ಕನ್ನಡ ಚಿತ್ರಗಳು ಬಾಕ್ಸಾಫೀಸಲ್ಲಿ ನಿಶಬ್ಧವಾಗಿ ಕಣ್ಮುಚ್ಚಿವೆ. ಪರಿಣಾಮ ಪ್ರೇಕ್ಷಕರಿಲ್ಲದೆ ಚಿತ್ರಮಂದಿರಗಳು ಬಣಬಣ. ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳು ಅಷ್ಟೇ ವೇಗವಾಗಿ ಎತ್ತಂಗಡಿಯಾಗಿವೆ. ಬಾಕ್ಸಾಫೀಸಲ್ಲಿ 'ಆಪ್ತರಕ್ಷಕ'ನ ವಿರುದ್ಧ ತೊಡೆತಟ್ಟಿ ನಿಲ್ಲುವಂತಹ ಚಿತ್ರ ಮಾರ್ಚ್ ತಿಂಗಳಲ್ಲೂ ತೆರೆಕಾಣಲಿಲ್ಲ.

'ತಿಪ್ಪಾರಳ್ಳಿ ತರ್ಲೆಗಳು' ಚಿತ್ರವಂತೂ ಬಾಕ್ಸಾಫೀಸ್ ಕದನದಲ್ಲಿ ಸೋತು ಸುಣ್ಣವಾಯಿತು. 'ಆಪ್ತರಕ್ಷಕ' ಮಾತ್ರ ಬಾಕ್ಸಾಫೀಸಲ್ಲಿ ಮೀಸೆ ತಿರುವುತ್ತಲೆ ಇದೆ. ಕಳೆದ ಮೂರು ತಿಂಗಳಲ್ಲಿ ಒಟ್ಟು 33 ಚಿತ್ರಗಳು ಬಿಡುಗಡೆಯಾಗಿವೆ. ಆದರೆ ಪ್ರೇಕ್ಷಕ ಮಾತ್ರ ಬಿಲ್ ಕುಲ್ ಚಿತ್ರಮಂದಿರಗಳತ್ತ ತಲೆಹಾಕುತ್ತಿಲ್ಲ.

ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಪ್ರೀತಿ ನೀ ಶಾಶ್ವತಾನಾ, ಜನನಿ, ನನ್ನ ಒಲವಿನ ಬಣ್ಣ, ಶ್ರೀಹರಿಕಥೆ, ಸಿಹಿಗಾಳಿ, ಸ್ವಯಂವರ, ದಿಲ್ದಾರ, ನಿರ್ದೋಷಿ, ಜಸ್ಟ್ ಪಾಸ್ 35/100 ಚಿತ್ರಗಳಲ್ಲಿ ಒಂದೇ ಒಂದು ಚಿತ್ರವೂ ಬಾಕ್ಸಾಫೀಸಲ್ಲಿ ಗಟ್ಟಿಯಾಗಿ ಕಚ್ಚಿಕೊಳ್ಳಲಿಲ್ಲ. ಶ್ರೀಮುರಳಿ ಅಭಿಯನದ 'ಶ್ರೀಹರಿಕತೆ' ಹಾಗೂ 'ಸಿಹಿಗಾಳಿ' ಅವಳಿ ಚಿತ್ರಗಳು ಒಂದೇ ದಿನ ಕಣ್ಬಿಟ್ಟವಾದರೂ ಒಂದೇ ವಾರದಲ್ಲಿ ಉಸಿರು ನಿಲ್ಲಿಸಿದ್ದವು.

ಉತ್ತಮ ತಾರಾಗಣದ 'ಸ್ವಯಂವರ' ಚಿತ್ರ ಸಹ ಅದ್ಯಾಕೋ ಪ್ರೇಕ್ಷಕರನ್ನು ಸೆಳೆಯಲೇ ಇಲ್ಲ. ಇಷ್ಟೆಲ್ಲಾ ದುರಂತಗಳ ನಡುವೆ ಮಾರ್ಚ್ ತಿಂಗಳಲ್ಲಿ ಕನ್ನಡ ಚಿತ್ರರಂಗ ಕೆಲವೊಂದು ಸಿಹಿ ಸುದ್ದಿಗಳನ್ನು ಕೇಳಿಸಿತು. ಪೃಥ್ವಿ ಚಿತ್ರಕ್ಕಾಗಿ ಶ್ರುತಿ ಹಾಸನ್ ಕನ್ನಡದಲ್ಲಿ ಹಾಡಿದ್ದು, ನಟಿ ತಾರಾ ಬೆಳ್ಳಿಹಬ್ಬ ಆಚರಿಸಿಕೊಂಡದ್ದು, ನವರಸ ನಾಯಕ ಜಗ್ಗೆಶ್ ದಾಂಪತ್ಯ ಇಪ್ಪತ್ತೈದು ವಸಂತಗಳನ್ನು ಕಂಡದ್ದು ಕೆಲವು ಖುಷಿಕೊಟ್ಟ ಸಂಗತಿಗಳು.

ಜೊತೆಗೆ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕಾಗಿ ಸರಕಾರ ರು.10 ಕೋಟಿ ಸಹಾಯ ಧನ ಪ್ರಕಟಿಸಿದ್ದು, ಚಿತ್ರರಂಗದ ಕಾರ್ಮಿಕರ ನಿಧಿಗೆ ರು.50 ಲಕ್ಷ ಪರಿಹಾರ ಪ್ರಕಟಿಸಿದ್ದು, ಸಹ ಹಾಗೂ ಸಹಾಯಕ ನಿರ್ದೇಶಕರ ಸಂಘ ಅಸ್ತಿತ್ವ, ಪ್ರಾರ್ಥನೆ ಚಿತ್ರದ ಮೂಲದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ, ಪ್ರಶಸ್ತಿ ವಿಜೇತರನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಸನ್ಮಾನಿಸಿದ್ದು ಬಿಟ್ಟರೆ ಇನ್ನೇನು ಹೇಳಿಕೊಳ್ಳುವಂತಹ ಘಟನೆಗಳು ನಡೆಯಲಿಲ್ಲ.

ಏಪ್ರಿಲ್ ತಿಂಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಬಿಡುಗಡೆಯಾದ ಚಿತ್ರಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದರೂ ಪರಿಸ್ಥಿತಿ ಬಿಗಡಾಯಿಸಿದೆ. ಬಿಸಿಲಿನ ಬೇಗೆ, ಐಪಿಎಲ್ ಪಂದ್ಯಾವಳಿ, ಶಾಲಾ ಕಾಲೇಜುಗಳ ಪರೀಕ್ಷೆ...ಹೀಗೆ ನಾನಾ ಕಾರಣಗಳಿಂದ ಪ್ರೇಕ್ಷಕ ಚಿತ್ರಮಂದಿರದ ಕಡೆಗೆ ತಲೆ ಹಾಕುತ್ತಿಲ್ಲ. ಒಟ್ಟಿನಲ್ಲಿ ಪ್ರೇಕ್ಷಕ ಪ್ರಭು ಕನ್ನಡ ಚಿತ್ರಗಳ ಮಾನ ಕಾಪಾಡಬೇಕಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada