»   » ಕೊರಟಗೆರೆ ನಗೆಕಾರಂಜಿ ತಬ್ಲಾ ನಾಣಿ ಸಂದರ್ಶನ

ಕೊರಟಗೆರೆ ನಗೆಕಾರಂಜಿ ತಬ್ಲಾ ನಾಣಿ ಸಂದರ್ಶನ

Posted By: Super
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡ ಚಿತ್ರರಂಗದಲ್ಲಿ ಇಂದು ಎಷ್ಟೊಂದು ಹಾಸ್ಯನಟರಿದ್ದರೂ ಪ್ರಬುದ್ಧ, ಸ್ವಂತಿಕೆ ಮೈಗೂಡಿಸಿಕೊಂಡಿರುವ ಹಾಸ್ಯನಟರ ಕೊರತೆ ಕಾಡುತ್ತಿದೆ. ಚಿತ್ರಗಳಲ್ಲಿ ಬರುತ್ತಿರುವ ಅನೇಕ ಹಾಸ್ಯ ಸನ್ನಿವೇಶಗಳು ಎಲ್ಲೋ ಕೇಳಿದ್ದೀವಲ್ಲ, ಹೊಸತನವೇ ಇಲ್ಲವಲ್ಲ, ಅನ್ಯಭಾಷಾ ಚಿತ್ರಗಳಿಂದ ಎತ್ತಿದ್ದು ಎಂಬಂತಹ ಭಾವವನ್ನು ಹುಟ್ಟುಹಾಕಿವೆ. ಈ ಪ್ರಶ್ನೆಗಳಿಗೆ ಎದ್ದೇಳು ಮಂಜುನಾಥ ಚಿತ್ರದ ತಬ್ಲಾ ನಾಣಿ ಉತ್ತರವಾಗಬಲ್ಲರಾ? ಓದಿರಿ ತಬ್ಲಾ ನಾಣಿ ಸಂದರ್ಶನಾಧಾರಿತ ಲೇಖನ.

  * ಪ್ರಸಾದ ನಾಯಿಕ

  ಮಣ್ಣಿನ ಸತ್ವ, ಸಂಸ್ಕೃತಿಯ ಬಲದಿಂದ ಸ್ವಂತಿಕೆ ಮೈಗೂಡಿಸಿಕೊಂಡರೆ ಮಾತ್ರ ಮನುಷ್ಯ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ನಂಬಿರುವ ತಬಲಾಪಟು, ನಟ, ಹಾಸ್ಯ ಕಲಾವಿದ ಕೊರಟಗೆರೆ ಆಂಜನಪ್ಪನವರ ಮಗ ಲಕ್ಷ್ಮಿನಾರಾಯಣ ಅಲಿಯಾಸ್ ನಾಣಿ. ಎದ್ದೇಳು ಮಂಜುನಾಥ ಚಿತ್ರದಲ್ಲಿ ಕುರುಡ ಚಲನಚಿತ್ರ ನಿರ್ದೇಶಕನಾಗಿ ಬದುಕಿನ ಸತ್ಯದರ್ಶನ ಮಾಡಿಸುವ 'ಸಂಜಯ'ನಾಗಿ ಮನೋಜ್ಞ ಅಭಿನಯ ನೀಡಿದ ತಬ್ಲಾ ನಾಣಿ ಪ್ರಸ್ತುತ ಚಿತ್ರರಂಗ ಕಂಡಿರುವ ಅಪರೂಪದ ಹಾಸ್ಯ ಕಲಾವಿದ. ನೋವನ್ನು ಕೂಡ ಹಿಂಡಿ ಹಾಸ್ಯರಸ ಹೊಮ್ಮಿಸುವ ಕಲೆ ನಾಣಿಗೆ ಕರತಲಾಮಲಕ.

  Tabla Nani

  ಕನ್ನಡ ಚಿತ್ರರಂಗದಲ್ಲಿ ಕಪ್ಪುಬಿಳುಪು ಕಾಲದಿಂದ ಇಂದಿನವರೆಗೆ ಸಾಕಷ್ಟು ಹಾಸ್ಯದ ಹೊಳೆ ಹರಿದಿದೆ. ನರಸಿಂಹರಾಜು, ಬಾಲಕೃಷ್ಣ, ಮುಸುರಿ ಕೃಷ್ಣಮೂರ್ತಿ, ದಿನೇಶ್ ಮುಂತಾದವರ ಕಾಲಘಟ್ಟದ ಉಚ್ಛ್ರಾಯ ಸ್ಥಿತಿಯಿಂದ ಇಂದಿನ ಅಪಹಾಸ್ಯದ, ಅಶ್ಲೀಲ, ಅತಿರೇಕದ ಪರಮಾವಧಿಯನ್ನು ಕಂಡಿದೆ. ವಿಪರ್ಯಾಸವೆಂದರೆ, ತಮಿಳು, ತೆಲುಗು ಚಿತ್ರಗಳಿಂದ ಎರವಲು ಪಡೆದ ತಂಗಳು ಹಾಸ್ಯ ಸನ್ನಿವೇಶಗಳನ್ನು ಕೂಡ ಮೃಷ್ಟಾನ್ನವೆಂಬಂತೆ ಸ್ವೀಕರಿಸಲಾಗುತ್ತಿದೆ, ಕೆಲವರಿಂದ. ಇದೆಲ್ಲ ಅಪಸವ್ಯದ ನಡುವೆ, ಚಾನ್ಸ್ ಸಿಕ್ಕರೆ ಸಾಕು ಎಂಥದೇ ಹಾಸ್ಯ ಸನ್ನಿವೇಶವಿದ್ದರೂ ದುಡ್ಡಿಗಾಗಿ ಹಪಾಹಪಿಸುವ ಹಾಸ್ಯನಟರ ನಡುವೆ ತಬ್ಲಾ ನಾಣಿ ವಿಭಿನ್ನವಾಗಿ ಗುರುತಿಸಿಕೊಳ್ಳಬಯಸುತ್ತಾರೆ. ಪ್ರಯತ್ನಪಟ್ಟರೆ ಸಹ್ಯವೆನಿಸುವ ಹಾಸ್ಯ ಪ್ರಸಂಗಗಳನ್ನು ನಾವೇ ಸ್ವತಃ ಸೃಷ್ಟಿಸಬಹುದು ಎಂದು ಸಾಬೀತುಪಡಿಸಿದ್ದಾರೆ.

  ಮಠ ಚಿತ್ರದ ಕುಡುಕ, ಎದ್ದೇಳು ಮಂಜುನಾಥದ ಕುರುಡ ನಿರ್ದೇಶಕ ಪಾತ್ರಗಳಲ್ಲಿ ತಾವೆಂಥ ಕೆಟಗರಿಯ ಹಾಸ್ಯನಟ ಎಂಬುದನ್ನು ನಾಣಿ ರುಜುವಾತುಪಡಿಸಿದ್ದಾರೆ. ಎದ್ದೇಳು ಮಂಜುನಾಥ ಚಿತ್ರದ ನಂತರ ನಾಣಿ ಆಯ್ದುಕೊಂಡ ಪಾತ್ರಗಳು ಹತ್ತರಲ್ಲಿ ಹನ್ನೊಂದನೆಯದಾಗಿರದೆ ಅವರು ವಹಿಸಿರುವ ಎಚ್ಚರಿಕೆಗೆ, ಸದಭಿರುಚಿಯ ಹಾಸ್ಯದ ಬಗೆಗಿರುವ ಅವರ ನೈಜ ಕಳಕಳಿಗೆ ಹಿಡಿದ ಕನ್ನಡಿ.

  ತಬಲಾ ಕಲಿಕೆಯಿಂದ ಸಾಗಿಬಂದಿರುವ ನಾಣಿ ಅವರ ಕಲಾಜೀವನದ ಅಭಿಯಾನ ಅವರನ್ನು ಕಲಾಲೋಕದ ನಾನಾ ಕಾಲಘಟ್ಟದಲ್ಲಿ ತಂದು ನಿಲ್ಲಿಸಿದೆ. ಹರಿಕಥೆಗಾಗಿ ತಬಲಾ ನುಡಿಸುವುದರಿಂದ ಹಿಡಿದು, ಸಿನೆಮಾಗಳಲ್ಲಿ ನಟಿಸಿ, ಚಿತ್ರಕಥೆ, ಸಂಭಾಷಣೆ ಬರೆಯುವ ಹಂತದವರೆಗೆ ನಾಣಿ ತಮ್ಮ ಪ್ರತಿಭೆಯ ಅನಾವರಣ ಮಾಡಿದ್ದಾರೆ. ತಮ್ಮ ಜೀವನವನ್ನು ರೂಪಿಸಿದ ಮೂವರು ಮಹಾನುಭಾವರನ್ನು ನೆನೆಯಲು ನಾಣಿ ಮರೆಯುವುದಿಲ್ಲ. ಹರಿಕಥೆಗಾಗಿ ತಬಲಾ ನುಡಿಸಲು ಅವಕಾಶ ಮಾಡಿಕೊಟ್ಟ ಹೆಬ್ಬಾಳ್ ನಾರಾಯಣದಾಸ್, ತಮ್ಮ ತಂಡದಲ್ಲಿ ಆತ್ಮೀಯವಾಗಿ ಕರೆದು, ಸಲುಹಿ ಸಂಗೀತಲೋಕದ ಪರಿಚಯ ಮಾಡಿಕೊಟ್ಟ ದಿವಂಗತ ಜಿವಿ ಅತ್ರಿ, ಅವರಲ್ಲಿನ ನಟನಾ ಪ್ರತಿಭೆಗೆ ಸಾಣೆ ಹಿಡಿದು ಚಿತ್ರಲೋಕದಲ್ಲಿ ನೆಲೆನಿಲ್ಲಲು ಕಾರಣರಾದ ಮಠ, ಎದ್ದೇಳು ಮಂಜುನಾಥ ಚಿತ್ರದ ನಿರ್ದೇಶಕ ಗುರುಪ್ರಸಾದ್... ಆ ಮೂವರು.

  ತಬ್ಲಾ ನಾಣಿ ನಟ ನಾಣಿಯಾಗಿದ್ದೇ ಒಂದು ಚಿತ್ರಕಥೆಗೆ ಆಹಾರವಾಗಬಲ್ಲದು. ತಂದೆ ಆಂಜನಪ್ಪ, ತಾಯಿ ಸಾಕಮ್ಮ. ತುಂಬಿದ ಕುಟುಂಬದಲ್ಲಿ ಹೊದ್ದು ಮಲಗುವಷ್ಟು ಬಡತನ. ಆಂಜನಪ್ಪ ದಂಪತಿಗಳಿಗೆ ಎಂಟು ಜನ ಮಕ್ಕಳು. ಎಂಟನೆಯವರೇ ನಾಣಿ. ತಂದೆ ಆಂಜನಪ್ಪ ಅವರು ನಟ ರಾಜಾನಂದ್ ಮುಂತಾದವರ ವೃತ್ತಿ ನಾಟಕ ಕಂಪನಿಗಳಲ್ಲಿ ತಬಲಾ ವಾದಕರಾಗಿದ್ದರು. ಹಿಂದಿನ ತಲೆಮಾರಿನವರು ಕೂಡ ಮೈಸೂರು ಆಸ್ಥಾನದಲ್ಲಿ ಕಲಾವಿದರಾಗಿದ್ದರಂತೆ. ಸಹಜವಾಗಿ ತಬಲಾ ಕೂಡ ನಾಣಿಗೆ ಒಲಿದುಬಂದಿದೆ. ಆದರೆ, ಹೊಟ್ಟೆಪಾಡು 20ರ ಹರೆಯದಲ್ಲಿ ಅವರನ್ನು ಕೊರಟಗೆರೆಯಿಂದ ಬರಿಗಾಲಲ್ಲಿ ಬೆಂಗಳೂರಿಗೆ ನಡೆಸಿಕೊಂಡು ಬಂದಿತ್ತು, 1987ರಲ್ಲಿ. ಕೆಲ ದಿನಗಳಲ್ಲಿ ಖ್ಯಾತ ಆಯುರ್ವೇದ ಪಂಡಿತರಾಗಿದ್ದ ಹೆಬ್ಬಾಳ ನಾರಾಯಣದಾಸರ ಹರಿಕಥೆಗೆ ತಬಲಾ ನುಡಿಸುವ ಅವಕಾಶವೂ ಸಿಕ್ಕಿತು.

  ಹರಿಕಥೆಗಳಲ್ಲಿ ತಬಲಾ ನುಡಿಸುತ್ತಿದ್ದ ನಾಣಿಯನ್ನು ಕರೆದು ತಮ್ಮ ತಂಡದಲ್ಲಿ ನುಡಿಸಲು ಅವಕಾಶ ನೀಡಿದ್ದು ಅಕಾಲ ಮರಣಕ್ಕೀಡಾದ ಸಂಗೀತಗಾರ ಜಿವಿ ಅತ್ರಿ. ಅಲ್ಲಿ ತಬಲಾ ನುಡಿಸುವುದರ ಜೊತೆಗೆ ಜಿವಿ ಅತ್ರಿಯವರ ಎಲ್ಲ ಕಾರ್ಯಕ್ರಮಗಳನ್ನು ನಿಭಾಯಿಸುತ್ತಿದ್ದರು ನಾಣಿ. ಚಿತ್ರಗೀತೆ, ಆರ್ಕೆಸ್ಟ್ರಾ, ರೆಕಾರ್ಡಿಂಗ್, ಸ್ಟುಡಿಯೋ ಮತ್ತು ವಿವಿಧ ವಾದನಗಳ ಪರಿಚಯವಾಗಿದ್ದು ಅತ್ರಿಯವರ ಹತ್ತಿರ ಎನ್ನುತ್ತಾರೆ ನಾಣಿ. ಅಲ್ಲಿಯೇ ಮಧುರ 'ಮಂಜುಳ'ಗಾನಕ್ಕೆ ಮರುಳಾಗಿ ನಾಣಿ ಮಂಜುಳಾ ಜೊತೆ ಸಪ್ತಪದಿ ತುಳಿದರು.

  ನಾಣಿ ಬದುಕಿಗೆ ತಿರುವು ನೀಡಿದ್ದು, ಭಾಷೆ ಬರದಿದ್ದರೆ ಪೌರಾಣಿಕ ನಾಟಕ ಹೇಗೆ ಅಭಾಸಮಯವಾಗುತ್ತದೆ ಎಂದು ತೋರಿಸುವ ಹಾಸ್ಯನಾಟಕ ವಿಎನ್ ಅಶ್ವಥ್ ರಚಿಸಿದ ಶ್ರೀಕೃಷ್ಣ ಸಂಧಾನ ನಾಟಕದಲ್ಲಿ ಕುಡುಕ ತಬಲಾಪಟುವಾಗಿ ನಟಿಸಿದ ಪಾತ್ರ. ನಾಟಕ ನೋಡಿದ ಡಾ. ರಾಜಕುಮಾರ್ ಕೂಡ ಎದ್ದುಬಿದ್ದು ನಕ್ಕಿದ್ದರು, ಬಂದು ತಬ್ಬಿಕೊಂಡಿದ್ದರಂತೆ. ಅವರ ಆಶೀರ್ವಾದವೇ ನಮ್ಮನ್ನು ಕಾಪಾಡಿದೆ ಎಂದು ನೆನೆಯುತ್ತಾರೆ. ನಾಣಿ ನಟನಾ ಚಾತುರ್ಯ ನೋಡಿ ಧಾರಾವಾಹಿಗಳ ಬಾಗಿಲಲ್ಲಿ ತಂದು ನಿಲ್ಲಿಸಿದವರು ರಂಗನಿರ್ದೇಶಕ ಟಿಎಸ್ ನಾಗಾಭರಣ. ಸಂಕ್ರಾಂತಿ ಧಾರಾವಾಹಿಯಲ್ಲಿ ಅವರಿಗೆ ಕುಡುಕ ತಬಲಾಪಟುವಿನ ಪಾತ್ರವನ್ನೇ ನೀಡಿದರು. ನಂತರ ಗೋಧೂಳಿ, ಚಂದ್ರಬಿಂಬ, ಫಿಫ್ಟಿ ಫಿಫ್ಟಿ, ಉತ್ಸವ ನಾಟಕಗಲ್ಲಿ ಅಭಿನಯ.

  ಧಾರಾವಾಹಿಗಳಲ್ಲಿ ನಟಿಸುತ್ತಲೆ ದೊಡ್ಡತೆರೆಗೂ ನಾಣಿ ಕಾಲಿಟ್ಟರು. ಚಾಣಾಕ್ಷ, ಶಿವರಾಜಕುಮಾರ್ ಜೊತೆಯಲ್ಲಿ ವಾಲ್ಮಿಕಿ. ಅವರ ನಾಲ್ಕನೇ ಸಿನೆಮಾ ಬದುಕಿಗೆ ಮತ್ತೊಂದು ತಿರುವು ನೀಡಿದ ಚಿತ್ರ ಮಠ. ಈ ಅವಕಾಶ ದೊರೆತಿದ್ದು ಕೂಡ ಆಕಸ್ಮಿಕವೆ. ಗುರುಪ್ರಸಾದ್ ಕುಡುಕ ಪಾತ್ರಧಾರಿಯ ಹುಡುಕಾಟದಲ್ಲಿದ್ದರು. ಗೋಧೂಳಿ ನಿರ್ದೇಶಿಸಿದ ಸುನೀಲ್ ಕುಮಾರ್ ಸಿಂಗ್ ನಾಣಿಯನ್ನು ಗುರು ಮುಂದೆ ತಂದು ನಿಲ್ಲಿಸಿದ್ದರು. ಸ್ಕ್ರೀನ್ ಟೆಸ್ಟ್ ನಡೆಸುವಾಗ ಪುರಂಧರದಾಸರ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ಒಬ್ಬ ಮುಸ್ಲಿಂ ಹಾಡಿದರೆ ಹೇಗಿರುತ್ತೆ ಎಂದು ಗುರು ಮುಂದೆ ತೋರಿಸಿದ್ದೇ ನಾಣಿಗೆ ಗುರುಬಲ ಕೂಡಿಬಂದಿತು. ಪಾತ್ರ ನಾಣಿಯದಾಗಿತ್ತು. ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ಮುಸ್ಲಿಂ ಹಾಡಿದಂತೆ ರೂಪಾಂತರಿಸಿದ್ದು ತಮ್ಮ ಕಲ್ಪನೆ. ಆದರೆ, ಖ್ಯಾತ ಪ್ರೊಫೆಸರೊಬ್ಬರು ಅದು ತಮ್ಮದೇ ಕಲ್ಪನೆ ಎಂಬಂತೆ ಅಮೆರಿಕದಲ್ಲೆಲ್ಲ ಡಂಗುರ ಸಾರಿದ್ದಾರೆ ಎಂಬ ಆರೋಪ ನಾಣಿಯವರದು.

  ಎದ್ದೇಳು ಮಂಜುನಾಥ ಚಿತ್ರದಲ್ಲಿ ನಾಣಿ ಅವರ ಲೀಲಾಜಾಲ ನಟನೆ ಜಗ್ಗೇಶ್ ಅವರ ಅಭಿನಯಕ್ಕೆ ತೂಕ ತಂದಿದೆ ಎಂದರೆ ತಪ್ಪಾಗಲಾರದು. ಮಠ, ಎದ್ದೇಳು ಮಂಜುನಾಥ ಚಿತ್ರದ ಸಂಭಾಷಣೆ ಸಹಾಯಕರಾಗಿಯೂ ನಿರ್ದೇಶಕ ಗುರುಪ್ರಸಾದ್ ನಾಣಿಗೆ ಅವಕಾಶ ನೀಡಿದರು. ಈಗ ಶ್ಲೋಕ, ಪೊಲೀಸ್ ಕ್ವಾರ್ಟರ್ಸ್, ಹೊಸ ಚಿತ್ರ ದೂಸ್ರಾಗೆ ಸ್ವತಂತ್ರವಾಗಿ ಸಂಭಾಷಣೆ ಬರೆದಿದ್ದಾರೆ. ಮಠ ಚಿತ್ರದ ನಂತರ ನಾಣಿಗೆ ಒಲಿದಿದ್ದು ಹಾಸ್ಯ ಪಾತ್ರಗಳೇ. ತಾಕತ್, ಜೋಶ್, ಚಮ್ಕಾಯಿಸಿ ಚಿಂದಿ ಉಡಾಯಿಸಿ, ಮುಖಪುಟ ಬಿಡುಗಡೆಯಾಗಿವೆ. ಗೋಲ್ ಮಾಲ್, ಜುಗಾರಿ, ದೇವರು, ಐತ್ತಲಕಡಿ ಬಿಡುಗಡೆಗೆ ಕಾದಿವೆ. ತವರಿನ ಋಣ, ಕಾಲ್ಗೆಜ್ಜೆ, ಶಂಕರ್ ಐಪಿಎಸ್ ಶೂಟಿಂಗ್ ಚಾಲ್ತಿಯಲ್ಲಿವೆ.

  ನಟನೆಯ ಹೊರತಾಗಿ ಜನ ನಾಣಿಯವರನ್ನು ಗುರುತಿಸುವಂತೆ ಮಾಡಿದ್ದು ಅವರೇ ಕಟ್ಟಿರುವ ಚಿತ್ರ ಮೆಲೊಡೀಸ್ ಮತ್ತು ಹಾಸ್ಯರಂಜನಿ ಎಂಬೆರಡು ತಂಡಗಳು ನೀಡುತ್ತಿರುವ ಸಂಗೀತ ಮತ್ತು ಹಾಸ್ಯರಂಜನೆಯಿಂದ. ಜಿಕನ್ನಡದ ಕಾಮಿಡಿ ಕಿಲಾಡಿಯಲ್ಲಿಯೂ ಹಾಸ್ಯದ ಕರಾಮತ್ತು ತೋರಿಸಿದ್ದಾರೆ. ಹಾಡು ಮತ್ತು ಹಾಸ್ಯ ಎಂಬ ವಿನೂತನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ತಾವೂ ಬೆಳೆಯಬೇಕು ಮತ್ತು ತಮ್ಮ ಸುತ್ತಲಿನವರೂ ಬೆಳೆಯಬೇಕು ಎಂಬುದು ನಾಣಿ ಬದುಕಿನ ಮೂಲಮಂತ್ರ.

  ಕನ್ನಡ ರಾಜ್ಯೋತ್ಸವಕ್ಕಾಗಲಿ ಮತ್ತಿನ್ನಾವುದೇ ಸಂದರ್ಭದಲ್ಲಾಗಲಿ ಹಾಡು, ಹಾಸ್ಯ, ರಂಜನೆ ಬೇಕಿದ್ದರೆ ನಾಣಿ ಅವರನ್ನು ಸಂಪರ್ಕಿಸಬಹುದು.

  ವಿಳಾಸ
  ಸಿರಿ, 13/1, 6ನೇ ಎ ತಿರುವು, 1ನೇ ಮುಖ್ಯರಸ್ತೆ
  ವಿದ್ಯಾಪೀಠ ರಸ್ತೆ, ಬನಶಂಕರಿ 3ನೇ ಹಂತ
  ಬಾಲಾಜಿ ಲೇಔಟ್, ಬೆಂಗಳೂರು - 560 085.
  ಮೊಬೈಲ್ : 98453 72118
  ದೂರವಾಣಿ : 080 - 26792993

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more