»   » ಅಭಿನಯದ ಮಲಯ ಮಾರುತ ವಿಷ್ಣುವರ್ಧನ್

ಅಭಿನಯದ ಮಲಯ ಮಾರುತ ವಿಷ್ಣುವರ್ಧನ್

Posted By: * ಪ್ರಸಾದ ನಾಯಿಕ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ರಾಮಾಚಾರಿ, ಸಾಹಸಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಅಗಲಿಕೆಯನ್ನು ಪದಗಳಲ್ಲಿ ವರ್ಣಿಸುವುದು ಸಾಧ್ಯವೇ ಇಲ್ಲ. ಬಹುಶಃ ಡಾ. ರಾಜಕುಮಾರ್ ಅವರ ನಂತರ ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ, ಹೃದಯವಂತ, ಪ್ರೀತಿಪಾತ್ರ ನಟ ಕನ್ನಡ ಚಿತ್ರರಂಗದಲ್ಲಿ ಸಿಗಲಿಕ್ಕಿಲ್ಲ, ಸಿಗುವುದೂ ಇಲ್ಲ.

  ಡಿಸೆಂಬರ್ 29ರಂದು ಹುಟ್ಟುಹಬ್ಬದಂದೇ ವಿಧಿವಶರಾದ ಸಿ ಅಶ್ವತ್ಥ್ ಅವರ ಅಗಲಿಕೆಯನ್ನು ಅರಗಿಸಿಕೊಳ್ಳುವ ಮೊದಲೇ ರಾಜ್ಯಕ್ಕೆ ಸಾಹಸಸಿಂಹ ವಿಷ್ಣುವರ್ಧನ್ ಅವರ ನಿಧನ ವಾರ್ತೆ ಬರಸಿಡಿಲಿನಂತೆ ಬಂದೆರಗಿದೆ. ರಾಜ್ ಅಗಲಿಕೆಯ ನಂತರ ನಟನಾಗಿಯೂ ಮತ್ತು ಚಿತ್ರರಂಗದ ನಾಯಕನಾಗಿಯೂ ಅವರ ಸ್ಥಾನವನ್ನು ತುಂಬಬಲ್ಲ ಶಕ್ತಿಯಿದ್ದದ್ದು ವಿಷ್ಣು ಅವರಿಗೆ ಮಾತ್ರ. ಅವರು ಕೂಡ ತಮಗೆ ತಾವೇ ವಿಧಿಸಿಕೊಂಡಿದ್ದ ಬೇಲಿಯನ್ನು ಕಿತ್ತೊಗೆದು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಸಂಕಷ್ಟಕ್ಕೊಳಗಾಗಿದ್ದ ಜನರಿಗಾಗಿ ಪಾದಯಾತ್ರೆ ಮಾಡಿ ನಿಧಿಯನ್ನು ಸಂಗ್ರಹಿಸಿದ್ದರು. ಸಿಡಿ ಪೈರಸಿ ವಿರುದ್ಧ ಮೈಸೂರಿನಲ್ಲಿಯೂ ಘರ್ಜನೆ ಮಾಡಿದ್ದರು. ಮಾಧ್ಯಮದ ಗಮನಕ್ಕೆ ಬರದ ಕೊಡುಗೆಗಳಿಗಂತೂ ಎಣಿಕೆಯೇ ಇಲ್ಲ.

  ಸಾರ್ವಜನಿಕವಾಗಿ ಅವರ ಜೀವನ ಹೇಗೆ ಇರಲಿ, ವೈಯಕ್ತಿಕ ಜೀವನ ಕೂಡ ಏನೇ ಏರಿಳಿತ ಕಂಡಿರಲಿ, ತೆರೆಯ ಮೇಲೆ ವಿಭಿನ್ನ ಪಾತ್ರಗಳಲ್ಲಿ ಅವರು ಮಾಡಿದ್ದ ಮೋಡಿಯನ್ನು ಜನಮಾನಸದಿಂದ ಅಳಿಸಲಾಗದು. ಸಾಹಸ, ಹಾಸ್ಯ, ಭಾವನಾತ್ಮಕ, ರೋಮ್ಯಾಂಟಿಕ್ ಪಾತ್ರಗಳಲ್ಲಿ, ಪಾತ್ರದ ತೂಕ ಎಷ್ಟೇ ಇದ್ದರೂ ಜೀವಂತಿಕೆ ತುಂಬುತ್ತಿದ್ದರು. ಇಂಥ ಸ್ಫುರದ್ರುಪಿ ನಟನ ನಟನೆಗೆ ಅವರ ನಟನೆಯೇ ಸಾಟಿ.

  1950 ಸೆಪ್ಟೆಂಬರ್ 18ರಂದು ಮೈಸೂರನಲ್ಲಿ ಕಲಾವಿದರಾಗಿದ್ದ ಎಚ್ಎಲ್ ನಾರಾಯಣರಾವ್ ಮತ್ತು ಕಮಲಾಕ್ಷಮ್ಮ ದಂಪತಿಗಳ ಮಗನಾಗಿ ಮೈಸೂರಿನಲ್ಲಿ ಹುಟ್ಟಿದ ಸಂಪತ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣ ಮಾಡಿದ್ದ 1972ರಲ್ಲಿ ಗಿರೀಶ್ ಕಾರ್ನಾಡ್ ಅವರ ವಂಶವೃಕ್ಷ ಚಿತ್ರದಲ್ಲಿ. ನಂತರ ನಾಯಕನಟನಾಗಿ 'ನಾಗರಹಾವು' ಚಿತ್ರದಲ್ಲಿ ರಾಮಾಚಾರಿಯಾಗಿ ಶಾಶ್ವತವಾಗಿ ಚಿತ್ರಪ್ರಿಯರ ಮನದಲ್ಲಿ ಚಿರಸ್ಥಾಯಿಯಾಗಿಹೋದರು. ಪುಟ್ಟಣ್ಣ ಕಣಗಾಲ್ ಅವರೇ ಕುಮಾರ್ ಅವರನ್ನು ವಿಷ್ಣುವರ್ಧನ್ ಆಗಿ ಚಿತ್ರರಂಗಕ್ಕೆ ಪರಿಚಯಿಸಿದರು. ನಾಗರಹಾವು ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅವರಿಂದ ಪಡೆದ ಕಪಾಳದೇಟು ಅವರಲ್ಲಿನ ಪ್ರತಿಭಾಮೂರ್ತಿಯನ್ನು ಕೆತ್ತಿ ತೆಗೆಯಿತು. ಅಲ್ಲಿಂದ ಆರಂಭವಾದ ಚಿತ್ರರಂಗದ ಅಭಿಯಾನ ಆಪ್ತರಕ್ಷಕ ಚಿತ್ರದವರೆಗೆ ಅನೇಕ ಏಳುಬೀಳುಗಳನ್ನು ಕಂಡಿದೆ. ರಾಜ್ ಜೊತೆ ಏಕೈಕ ಚಿತ್ರದಲ್ಲಿ ನಟಿಸಿದ್ದ ಗಂಧದ ಗುಡಿ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಅಚಾತುರ್ಯ ಹಿನ್ನೆಡೆ ಉಂಟುಮಾಡಿದರೂ ತಾವುಂಟು ತಮ್ಮ ನಟನೆಯುಂಟು ಎಂಬಂತೆ ಜೀವಿಸಿದವರು ವಿಷ್ಣು.

  ನಾಗರಹಾವಿನ ಚಾಮಯ್ಯ ಮೇಷ್ಟ್ರ ಮೆಚ್ಚಿನ ಶಿಷ್ಯನಾಗಿ, ಭೂತಯ್ಯನ ಮಗ ಅಯ್ಯು ಚಿತ್ರದ ಗುಳ್ಳನಾಗಿ, ಬಂಧನದ ಸ್ನೇಹಕ್ಕಾಗಿ ಜೀವವನ್ನೇ ತೇದ ಡಾಕ್ಟರಾಗಿ, ಮುತ್ತಿನಹಾರದ ಯೋಧನಾಗಿ, ಸುಪ್ರಭಾತದ ಪ್ರೇಮಿಯಾಗಿ, ಹೊಂಬಿಸಿಲಿನ ವೈದ್ಯನಾಗಿ, ಆಪ್ತಮಿತ್ರದ ಮನೋವೈದ್ಯನಾಗಿ, ಕರ್ಣ ಚಿತ್ರದ ತ್ಯಾಗಮಯಿ ಮಗನಾಗಿ, ಮಲಯಮಾರುತದ ಸಂಗೀತಗಾರನಾಗಿ ವಿಷ್ಣು ನೀಡಿದ ಅಭಿನಯ ಕಲಾಪ್ರೌಢಿಮೆ ಎಂದೆಂದಿಗೂ ಚಿರನೂತನ. ಬಲಗೈಯಲ್ಲಿ ಧರಿಸಿದ್ದ ಕಡಗವನ್ನು ಎಡಗೈಯಿಂದ ಮೈಲೆತ್ತುತ್ತ ಮಾತುಗಳನ್ನು ಉದುರುಸಿತ್ತಿದ್ದ ಪರಿ, ಸಾಹಸ ದೃಶ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೀತಿಯನ್ನು ಅವರ ಚಿತ್ರಗಳಲ್ಲಿ ನೋಡಿಯೇ ಸವಿಯಬೇಕು. 59ರ ಹರೆಯದಲ್ಲೂ 19ರ ಹರೆಯದ ಯುವನಾಯಕರನ್ನು ನಾಚಿಸುವಂತೆ ಫೈಟ್ ಮಾಡುತ್ತಿದ್ದರು.

  ಇಮೇಜ್ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದ ವಿಷ್ಣು ಹರಕೆಯ ಕುರಿ, ಮಲಯ ಮಾರುತದಂಥ ಆಫ್ಬೀಟ್ ಚಿತ್ರಗಳಲ್ಲಿಯೂ ನಟಿಸಿ ಸೈ ಎನ್ನಿಸಿಕೊಂಡರು. ಹೊಂಬಿಸಿಲು ಚಿತ್ರದ ಹೆಂಡತಿಯಿಂದ ಅನುಮಾನದ ಚಕ್ರಕ್ಕೆ ಸಿಲುಕುವ ನಿಸ್ಪೃಹ ಗಂಡನಾಗಿ ವಿಷ್ಣು ನೀಡಿದ್ದ ಅಭಿನಯ ಅದ್ಭುತ. ಹೊಂಬಿಸಿಲು ತಮ್ಮ ಜೀವನದ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂದು ಅವರೇ ಹೇಳಿಕೊಂಡಿದ್ದರು. ಮದುವೆ ಮಾಡಿ ನೋಡು ಚಿತ್ರದಲ್ಲಿ ತಂಗಿಯ ಮದುವೆ ಮಾಡಲು ಒದ್ದಾಡುವ ಅಣ್ಣನಾಗಿ ಹಾಸ್ಯಮಿಶ್ರಿತ ಅಭಿನಯ ನನ್ನ ಫೆವರಿಟ್ ಗಳಲ್ಲಿ ಒಂದು.

  ವಿಷ್ಣು ಮತ್ತು ದ್ವಾರಕೀಶ್ ಜೋಡಿಯಾಗಿ ನಟಿಸಿದ ಸಿಂಗಪುರದಲ್ಲಿ ರಾಜಾಕುಳ್ಳ, ಕಳ್ಳ ಕುಳ್ಳ, ಕಿಟ್ಟು ಪುಟ್ಟು, ಗುರು ಶಿಷ್ಯರು, ರಾಯರು ಬಂದರು ಮಾವನ ಮನೆಗೆ, ಆಪ್ತಮಿತ್ರ ಮೊದಲಾದ ಡಜನ್ ಚಿತ್ರಗಳು ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದವು. ಕೆಲವರ ಸಣ್ಣತನದಿಂದಾಗಿ ಅವರಿಬ್ಬರ ಮಧ್ಯೆ ಬಿರುಕು ಮೂಡಿದ್ದು ನಿಜಕ್ಕೂ ದುರದೃಷ್ಟಕರ ಸಂಗತಿ. ವಿಷ್ಣು ಮತ್ತು ರಾಜೇಂದ್ರ ಸಿಂಗ್ ಬಾಬು ಜೋಡಿ ಬಂಧನ, ನಾಗರಹೊಳೆ, ಮುತ್ತಿನಹಾರ ಮುಂತಾದ ಚಿತ್ರಗಳನ್ನು ನೀಡಿವೆ.

  ಪ್ರಶಸ್ತಿಗಾಗಿ ಅವರೆಂದೂ ಹಾತೊರೆಯಲಿಲ್ಲ. ಪ್ರಶಸ್ತಿಗಳೇ ಅವರನ್ನು ಹುಡುಕುಡುಕಿಕೊಂಡು ಬಂದವು. ಏಳು ರಾಜ್ಯ ಪ್ರಶಸ್ತಿ, ಏಳು ದಕ್ಷಿಣ ಭಾರತದ ಫಿಲಂಫೇರ್ ಪ್ರಶಸ್ತಿ, ಡಾ. ರಾಜ್ ಪ್ರಶಸ್ತಿ, ಚೆನ್ನೈನ ಕಲಾದೇವಿ ಪ್ರಶಸ್ತಿ, ಸಿನೆ ಎಕ್ಸ್ ಪ್ರೆಸ್ ಪ್ರಶಸ್ತಿ, ತರಂಗಿಣಿ ಪ್ರಶಸ್ತಿ, ನಾಗೇಂದ್ರರಾವ್ ಪ್ರಶಸ್ತಿ, ಇಂದ್ರ ಪ್ರತಿಷ್ಠಾನ ಪ್ರಶಸ್ತಿ, ಅಭಿಮಾನಿ ಸಂಘದ ಪ್ರಶಸ್ತಿಗಳು ಅವರು ಯಾವ ಮಟ್ಟದ ನಟರೆಂಬುದನ್ನು ಸಾರಿಸಾರಿ ಹೇಳುತ್ತವೆ. ಎಷ್ಟೇ ಪ್ರಶಸ್ತಿಗಳು ಬೆನ್ನತ್ತಿ ಬಂದಿದ್ದರೂ ಜನರ ಅಭಿಮಾನವೇ ತಮಗೆ ದಕ್ಕಿದ ಅತ್ಯುತ್ತಮ ಪ್ರಶಸ್ತಿ ಎಂದು ವಿಷ್ಣು ವಿನಮ್ರರಾಗಿ ಹೇಳುತ್ತಿದ್ದರು.

  ಅವರು ಡಿಸೆಂಬರ್ 30ರಂದು ನಮ್ಮನ್ನು ಅಗಲಿದರೂ ಅವರು ನಟಿಸಿದ ಪಾತ್ರಗಳನ್ನು ಅವರನ್ನು ಎಂದೆಂದಿಗೂ ಜೀವಂತವಾಗಿಟ್ಟಿರುತ್ತವೆ.

  Pay your tributes to Dr. Vishnuvardhan. Click Here.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more