»   » ಕನ್ನಡ ಚಿತ್ರರಂಗದ ಜಮಾ ಖರ್ಚು: ಇಸವಿ 2009

ಕನ್ನಡ ಚಿತ್ರರಂಗದ ಜಮಾ ಖರ್ಚು: ಇಸವಿ 2009

Posted By:
Subscribe to Filmibeat Kannada

ಕಳೆದ ವರ್ಷದಂತೆ ಪ್ರಸಕ್ತ ವರ್ಷವೂ ಸ್ಯಾಂಡಲ್ ವುಡ್ ಪಾಲಿಗೆ ನಿರಾಶಾದಾಯಕ ವರ್ಷವಾಗಿ ಪರಿಣಮಿಸಿದೆ. ಎಲ್ಲೋ ಏಳೆಂಟು ಚಿತ್ರಗಳು ಹಿಟ್ ಆದರೆ ಮಿಕ್ಕೆಲ್ಲಾ ಚಿತ್ರಗಳು ಮಕಾಡೆ. ಬೇಡಿಕೆಯ ನಟರ ಚಿತ್ರಗಳೇ ತೋಪೆದ್ದು ಹೋಗಿದೆ. ಇದಕ್ಕೆ ವಿಷ್ಣುವರ್ಧನ್, ಶಿವರಾಜ್, ಗಣೇಶ್, ದರ್ಶನ್, ಉಪೇಂದ್ರ, ಪೂಜಾ ಗಾಂಧೀ ಯಾರ ಚಿತ್ರವೂ ಹೊರತಾಗಿಲ್ಲ.

ಪರಭಾಷಾ ಚಿತ್ರಗಳ ಹಾವಳಿ, ಚಿತ್ರಮಂದಿರ ಬಾಡಿಗೆ ಹೆಚ್ಚಳ, ಕನ್ನಡ ಪ್ರೇಕ್ಷಕನ ತಾತ್ಸಾರ ಕಾರಣಗಳೆಂದು ಪಟ್ಟಿಮಾಡಬಹುದು. ರಿಮೇಕ್ ಚಿತ್ರಗಳ ನಡುವೆ ಸ್ವಮೇಕ್ ಸದಭಿರುಚಿಯ ಚಿತ್ರಗಳು ಸೋಲುತ್ತಿರುವುದು ಚಿತ್ರರಂಗದ ಮಟ್ಟಿಗೆ ಉತ್ತಮ ಬೆಳವಣಿಗೆಯಲ್ಲ. ಕೆಲವುಚಿತ್ರಗಳಿಗೆ ಮಾಧ್ಯಮಗಳಲ್ಲಿ ಉತ್ತಮ ವಿಮರ್ಶೆ ಬಂದಿದ್ದರೂ ಚಿತ್ರಗಳು ಸೋಲುತ್ತಿವೆ. ಈ ನಡುವೆ ಉಮಾಶ್ರೀಗೆ ಉತ್ತಮ ನಟಿ ಪ್ರಶಸ್ತಿ ಸಿಕ್ಕಿದ್ದು ಮತ್ತು ಕನ್ನಡ ಆಡಿಯೋ ಮಾರುಕಟ್ಟೆ ಕೊಂಚ ಸುಧಾರಿಸಿರುವುದು ಸಮಾಧಾನಕರ ವಿಷಯ.

ಕಳೆದ ವರ್ಷದಂತೆ ಈ ವರ್ಷವೂ ಚಿತ್ರೋದ್ಯಮದ ಗಂಧಗಾಳಿ ಗೊತ್ತಿಲ್ಲದ ರಿಯಲ್ ಎಸ್ಟೇಟ್ ಕುಳಗಳೇ ಹೆಚ್ಚಾಗಿ ಹಣ ಹೂಡುತ್ತಿರುವುದು ಕನ್ನಡ ಚಿತ್ರರಂಗದ ಗುಣಮಟ್ಟಕ್ಕೆ ಮುಳ್ಳಾಗಿ, ಹಣ ಒಳಹರಿವಿಗೆ ಹೂವಾಗಿ ಪರಿಣಮಿಸಿದೆ. ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರಗಳೇ ಪೈಪೋಟಿ ಎನ್ನುವ ಸ್ಥಿತಿ ಬಂದಿದೆ. ವಾರಕ್ಕೆ 2,3 ಚಿತ್ರಗಳು ಬಿದುಗಡೆಗೊಂಡರೆ ಸಿನಿ ರಸಿಕರು ಯಾವ ಚಿತ್ರವೆಂದು ನೋಡುತ್ತಾರೆ/ಬಿಡುತ್ತಾರೆಂದು ಅರ್ಥ ಮಾಡಿಕೊಳ್ಳದ ನಿರ್ದೇಶಕ/ನಿರ್ಮಾಪಕರ ಮಧ್ಯೆ ಕನ್ನಡ ಸಿನಿಮಾ ರಂಗ ಹೈರಾಣವಾಗಿ ಹೋಗಿದೆ.

ಬೇರೆ ಭಾಷೆಯ ಚಿತ್ರಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಬಾರದು ಎನ್ನುವ ಚಲನಚಿತ್ರ ಮಂಡಳಿಯ ಆದೇಶವನ್ನು ಯಾರು ಪಾಲಿಸುತ್ತಿದ್ದಾರೆ? ಸಂಘದ ಸದಸ್ಯರೇ ವಿತರಣೆ ಹಕ್ಕು ತೆಗೆದುಕೊಂಡರೆ ಮಂಡಳಿಯ ಈ ಆದೇಶಕ್ಕೆ ಚಿಕ್ಕಾಸು ಬೆಲೆಯಿದೆಯೇ?

ಆಪ್ತಮಿತ್ರ, ಮುಂಗಾರು ಮಳೆ, ದುನಿಯಾ ಚಿತ್ರಗಳ ನಂತರ ಕನ್ನಡ ಚಿತ್ರರಂಗ ಗರಿಗೆದರಿತು ಎನ್ನುತ್ತಿರುವಾಗಲೇ, ಸಾಲು ಸಾಲು ಚಿತ್ರಗಳು ಸೆಟ್ ಏರಲು ಶುರುವಾಯಿತು. ಎಲ್ಲರೂ ಹೀರೋ, ಎಲ್ಲರೂ ಹಿರೋಯಿನ್, ಎಲ್ಲರೂ ನಿರ್ದೇಶಕರು ಎಂದರೆ ಹೇಗೆ? ಕನ್ನಡಿಗರು ಏನು ದಡ್ದರೆ? ಮಾತೆದಿದ್ದರೆ ಮಚ್ಚು ಲಾಂಗ್, ಲಂಗುಲಗಾಮಿಲ್ಲದ ಕಥೆ, ಚಿತ್ರಕಥೆ ನೀಡಿದರೆ ಚಿತ್ರ ಹೇಗೆ ಹಿಟ್ ಆಗುತ್ತೆ. ಹಾಗಂತ ಚಿತ್ರರಂಗದಲ್ಲಿ ಉತ್ತಮ ನಿರ್ದೇಶಕರು ಇಲ್ಲವೆನ್ನಲಾಗುತ್ತಾ? ಗುರು, ಪ್ರಕಾಶ್, ಭಟ್ರು, ಸೂರಿ, ಪ್ರೇಂ, ಅಗ್ನಿ ಶ್ರೀಧರ್. ರಾಜ್ ಚಿತ್ರ ಬಿಡುಗಡೆಯ ನಂತರ ಚಿತ್ರೋದ್ಯಮ ಉದ್ದಾರವಾಗುತ್ತದೆ ಎಂದು ಕೆಲವರು ತಪ್ಪಾಗಿ ಊಹಿಸಿದ್ದು ನಿಜವಾಯಿತು !!

ಸುದೀಪ್ - ರಮ್ಯ ಜಸ್ಟ್ ಮಾತಲ್ಲಿ ಚಿತ್ರೀಕರಣದ ವೇಳೆ ನಡೆದ ಕಿರಿಕ್, ಇತ್ತೀಚಿನ ಐಂದ್ರಿತಾ ಕಪಾಳಮೋಕ್ಷ ಚಿತ್ರರಂಗದ ಪಾಲಿಗೆ ಕಪ್ಪು ಚುಕ್ಕೆ. ಬನ್ನಿ ಈ ವರ್ಷ ಬಿಡುಗಡೆಗೊಂಡಚಿತ್ರಗಳ ಲಿಷ್ಟು, ಹಿಟ್, ಫ್ಲಾಪ್ ಚಿತ್ರಗಳು ಯಾವುವು ನೋಡೋಣ. ಒಟ್ಟು ಬಿಡುಗಡೆಗೊಂಡ ಚಿತ್ರ 120; ಒಟ್ಟು ಯಶಸ್ವಿಯಾದ ಚಿತ್ರಗಳು 9; ಫ್ಲಾಪ್ ಆದ ಚಿತ್ರಗಳು 120 ಮೈನಸ್ 9 =111. ಕನ್ನಡ ಚಿತ್ರೋದ್ಯಮಕ್ಕೆ ಆದ ನಷ್ಟ ಸರಿಸುಮಾರು ರು.160 ಕೋಟಿ.

ಯಶಸ್ವಿಯಾದ ಚಿತ್ರಗಳು: ಅಂಬಾರಿ, ಜಂಗ್ಲಿ, ವೀರ ಮದಕರಿ, ಸವಾರಿ, ಜೋಶ್, ಕಿರಣ್ ಬೇಡಿ, ಎದ್ದೇಳು ಮಂಜುನಾಥ, ರಾಜ್ ಮತ್ತು ಮನಸಾರೆ. ಪ್ರಾಥಮಿಕ ವರದಿಯ ಪ್ರಕಾರ ಗಣೇಶ್ ಅಭಿನಯದ 'ಮಳೆಯಲಿ ಜೊತೆಯಲಿ' ಚಿತ್ರ ಉತ್ತಮ ಆರಂಭ ಕಂಡುಕೊಂಡಿದೆ.

ಗೆಲುವಿನ ನಗೆ ಬೀರಿದವರು: ಐಂದ್ರಿತಾ ರೇ, ವಿಜಯ್, ಪುನೀತ್ ರಾಜ್ ಕುಮಾರ್ ಮತ್ತು ಯೋಗೀಶ್.

ಸೋತ ಮುಖಗಳು: ಪೂಜಾಗಾಂಧಿ, ಗಣೇಶ್, ವಿಷ್ಣುವರ್ಧನ್, ಶಿವರಾಜ್ ಕುಮಾರ್ ಮತ್ತು ದರ್ಶನ್.

ಫ್ಲಾಪ್ ಆದ ಕೆಲವು ಪ್ರಮುಖ ನಟರ ಚಿತ್ರಗಳು: ಸರ್ಕಸ್, ಕಾರಂಜಿ , ಯೋಧ, ವಾಯುಪುತ್ರ, ನಮ್ಮೆಜಮಾನ್ರು, ಹೊಡಿ ಮಗ, ಭಾಗ್ಯದ ಬಳೆಗಾರ, ರಜನಿ, ದುಬೈ ಬಾಬು, ಬಳ್ಳಾರಿ ನಾಗ etc etc... ಇನ್ನು ಮುಂದೆಯಾದರೂ ಚಿತ್ರರಂಗದ ಹಿರಿಯರು ಎಚ್ಚೆತ್ತು ಕೊಳ್ಳದಿದ್ದರೆ ಸ್ಯಾಂಡಲ್ ವುಡ್ ದಿವಾಳಿಯಾಗುವುದರಲ್ಲಿ ಡೌಟೇ ಇಲ್ಲ. ಮೊದಲು ಉತ್ತಮ ಚಿತ್ರಗಳನ್ನು ನೀಡಿ, ಚಿತ್ರ ಬಿಡುಗಡೆಗೆ ಹಿತಕರ ಪೈಪೋಟಿವಿರಲಿ. ಆಮೇಲೆ ಕನ್ನಡಿಗರು ಕನ್ನಡ ಚಿತ್ರವನ್ನು ನೋಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬರೋಣವೇ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada