twitter
    For Quick Alerts
    ALLOW NOTIFICATIONS  
    For Daily Alerts

    ವಿವಾದಗಳ ಮಟ್ಟಿಗೂ 2008 ಉಬ್ಬರದ ವರ್ಷ

    By Staff
    |

    *ಜಯಂತಿ
    ಹೊಸಬರ ಅಬ್ಬರ ಎಷ್ಟರಮಟ್ಟಿಗೆ ಎದ್ದು ಕಾಣಿಸಿತೊ, ವಿವಾದಗಳ ಮಟ್ಟಿಗೂ 2008 ಉಬ್ಬರದ ವರ್ಷ. ಅತ್ತುಕರೆಯುವುದರಿಂದ ಹಿಡಿದು ಜಗಳ ಕೊಲೆಯವರೆಗೆ ಹಲವು ಕಹಿ ಘಟನೆಗಳಿಗೆ 2008 ಸಾಕ್ಷಿಯಾಯಿತು.

    ಸೃಜನಶೀಲತೆಯ ಸುಲಿಗೆ

    'ಸರ್ಕಸ್" ಚಿತ್ರದ ಕಥೆಗೆ ಸಂಬಂಧಿಸಿದಂತೆ ಎಸ್.ಮಹೇಂದರ್ ಚಲನಚಿತ್ರ ವಾಣಿಜ್ಯ ಮಂಡಳಿ ಕಟ್ಟೆ ಹತ್ತಿ ಗೆದ್ದರು. ವಾಣಿಜ್ಯ ಮಂಡಳಿ ಒಂದೂವರೆ ಲಕ್ಷ ರೂಪಾಯಿ ದಂಡವನ್ನು ದಯಾಳ್‌ಗೆ ವಿಧಿಸಿದೆ. ದಯಾಳ್ ಕಥೆಯ ಚೌರ್ಯವನ್ನು ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ ಮಂಡಳಿಯ ತೀರ್ಪಿಗೆ ತಲೆಬಾಗಿದ್ದಾರೆ. ಮೊಗ್ಗಿನ ಮನಸು ಚಿತ್ರದ ಕಥೆ ಕೂಡ ವಿವಾದಕ್ಕೆ ಒಳಗಾಗಿತ್ತು. ಮಯೂರ ಮಾಸಿಕದಲ್ಲಿ ದಶಕಗಳ ಹಿಂದೆ ಪ್ರಕಟವಾಗಿದ್ದ ದಿವಂಗತ ಹರಿದಾಸ ಭಟ್ಟರ ಕಥೆಯನ್ನು ಕದಿಯಲಾಗಿದೆ ಎನ್ನುವುದು ಆರೋಪ. ಈ ಬಗ್ಗೆ ಮಂಡಳಿಯಲ್ಲಿ ಚರ್ಚೆ ನಡೆದರೂ, ಹರಿದಾಸ ಭಟ್ಟರ ಶ್ರೀಮತಿ ಒಂದು ಕೋಟಿ ರೂಪಾಯಿಯ ಅವಾಸ್ತವಿಕ ಮೊತ್ತದ ಪರಿಹಾರ ಕೇಳಿದ್ದರಿಂದ ಚರ್ಚೆ ಮುಂದುವರಿಯಲಿಲ್ಲ. ಕಥೆ ನನ್ನದೇ ಎಂದು ನಿರ್ದೇಶಕ ಶಶಾಂಕ್ ಪಟ್ಟು ಸಡಿಲಿಸಲಿಲ್ಲ.

    ಅಳುವಿನ ಗಂಗಾ ಕಾವೇರಿ

    ವಿಷ್ಣುಕಾಂತ್ ನಿರ್ದೇಶನದ ಗಂಗಾ ಕಾವೇರಿ ಚಿತ್ರದ ಸುದ್ದಿಗೋಷ್ಠಿಯಲ್ಲಿ ನಟಿ ತಾರಾ ಕಣ್ಣೀರು ಸುರಿಸಿದರು. ನಿರ್ದೇಶಕ ವಿಷ್ಣುಕಾಂತ್ ತಮ್ಮ ಘನತೆಗೆ ಕುಂದು ತರುವ ರೀತಿಯಲ್ಲಿ ಸುದ್ದಿ ಹಬ್ಬಿಸುತ್ತಿದ್ದಾರೆ ಎನ್ನುವುದು ಅವರ ಅಳುವಿಗೆ ಕಾರಣ. ಅಳುತ್ತಳುತ್ತಲೇ ತಾರಾ ವಿಷ್ಣುಕಾಂತರನ್ನು ತರಾಟೆಗೆ ತೆಗೆದುಕೊಂಡರು. ಅಪರಾಧಿ ನಾನಲ್ಲ ಎಂದ ವಿಷ್ಣುಕಾಂತ್ ತಮ್ಮ ಬೆರಳು ತೋರಿಸಿದ್ದು ಹಿರಿಯ ಫ್ರೀಲಾನ್ಸ್ ಪತ್ರಕರ್ತರತ್ತ!

    ಹೊಸ ಹುಡುಗಿ ಅಂಕಿತಾ ಕಣ್ಣೀರು ಸುರಿಸಿದ ಮತ್ತೊಬ್ಬ ನಟಿ. ಆಕೆ ಕಣ್ಣೀರು ಸುರಿಸಿದ್ದು ನಿರುದ್ಯೋಗಿ ಚಿತ್ರದ ಸೆಟ್‌ನಲ್ಲಿ. ಫೋಟೊ ಸೆಷನ್‌ನಲ್ಲಿ ನಾಯಕನನ್ನು ಅಪ್ಪಿಕೊಳ್ಳಲು ಹಿಂಜರಿಯುತ್ತಿದ್ದ ಹುಡುಗಿಯನ್ನು ನಿರ್ದೇಶಕ ನಾಗ್ ಹುಣಸೋಡ್ ಸಿನಿಮಾದಿಂದಲೇ ಹೊರಕಳಿಸಿದಾಗ ಅಂಕಿತಾ ಕಣ್ಣೀರು ಹಾಕಿದರು.

    ಅಪಸ್ವರ

    ಮುಂಬೈ ಗಾಯಕರಿಗೆ ಕನ್ನಡ ಚಿತ್ರರಂಗದಲ್ಲಿ ಮಣೆ ಹಾಕುತ್ತಿರುವ ಬಗ್ಗೆ ಇಡೀ ವರ್ಷ ಉದ್ಯಮದಲ್ಲಿ ಚರ್ಚೆ ನಡೆಯಿತು. ಈ ಬಗ್ಗೆ ಪ್ರತಿಭಟನೆ ನಡೆಸಲು ಧರಣಿ ಕಾರ್ಯಕ್ರಮವೊಂದರ ಸಿದ್ಧತೆ ಕೂಡ ನಡೆದಿತ್ತು. ಆದರೆ ಕನ್ನಡದ ಕೋಗಿಲೆಗಳ ನಡುವಣ ಒಗ್ಗಟ್ಟಿನ ಕೊರತೆಯಿಂದಾಗಿ ಧರಣಿ ನಡೆಯಲಿಲ್ಲ. ಸೋನ್ ನಿಗಮ್ ಸಂಭಾವನೆ ಇಳಿಯಲಿಲ್ಲ. ಹಾಡೊಂದಕ್ಕೆ ಸೋನು ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡುತ್ತಿದ್ದಾರೆ.

    ರಕ್ತಕಣ್ಣೀರು!
    ಮಾದೇಶ ಚಿತ್ರದ ನಿರ್ಮಾಪಕ ಮೋಜಿನ ನಶೆಯಲ್ಲಿ ತನ್ನ ಗೆಳೆಯನಿಗೇ ಗುಂಡಿಕ್ಕಿ ಕೊಂದ. ಪಾಪ, ಆ ಹುಡುಗನಿಗೆ ಮದುವೆ ನಿಶ್ಚಯವಾಗಿತ್ತು! ಮತ್ತೊಂದು ಕೊಲೆ ಮುಂಬಯಿಯಲ್ಲಿ ನಡೆಯಿತು. ಈ ಪ್ರಕರಣದಲ್ಲಿ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಮೋನಿಕಾ ಸಿಲುಕಿಕೊಂಡರು. ನಿರ್ಮಾಪಕ-ನಟ ಮದನ್ ಪಟೇಲ್ ಸಿನಿಮಾ ಛಾಯಾಗ್ರಾಹಕರೊಬ್ಬರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದರೂ, ಆ ಪ್ರಕರಣ ಸಾಕಷ್ಟು ಸುದ್ದಿಯಾಗಲಿಲ್ಲ.

    ಇಂದ್ರಜಿತ್ ಖೇಣಿ!

    ಲಂಕೇಶ್ ಪತ್ರಿಕೆಯ ಇಂದ್ರಜಿತ್ ಲಂಕೇಶ್ ವಂಚನೆಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದರು. ಇಂದ್ರಜಿತ್ ತಮಗೆ ಹದಿನೈದು ಕೋಟಿ ರೂಪಾಯಿ ಉಂಡೆನಾಮ ತಿಕ್ಕಿದ್ದಾರೆ ಎನ್ನುವುದು ನೈಸ್ ಕಂಪನಿಯ ಅಶೋಕ್ ಖೇಣಿ ದೂರು. ಇದೆಲ್ಲ ಬಿಜೆಪಿ ಸರ್ಕಾರದ ಕಿತಾಪತಿ ಎನ್ನೋದು ಇಂದ್ರಜಿತ್ ಆರೋಪ. ಪ್ರಕರಣ ಚಾಲ್ತಿಯಲ್ಲಿದೆ.

    ಶಿವಣ್ಣ ಮೀಮಾಂಸೆ
    ಸಿನಿಮಾ ನೋಡಿ ಯಾರು ಉದ್ಧಾರವಾಗಿದ್ದಾರೆ ಎನ್ನುವ ಮಾತನ್ನು ಸಮರ್ಥಿಸುವಂತೆ ನಟ ಶಿವರಾಜ್‌ಕುಮಾರ್ ಸಿನಿಮಾ ನೋಡಿ ಏನನ್ನಾದರೂ ಕಲಿಯುವ ಕಾಲ ಮುಗಿಯಿತು ಎಂದು ಹೇಳುವ ಮೂಲಕ ಪೇಚಿಗೆ ಸಿಕ್ಕಿಕೊಂಡರು. ಮಾದೇಶ ಚಿತ್ರದಲ್ಲಿನ ಹಿಂಸೆಯ ದೃಶ್ಯಗಳನ್ನು ಸಮರ್ಥಿಸಿಕೊಂಡ, ಕಲಾವಿದರಿಗೆ ಸಾಮಾಜಿಕ ಬದ್ಧತೆ ಇರಬೇಕಾಗಿಲ್ಲ ಎಂದ ಶಿವಣ್ಣನ ಮೇಲೆ ಸಾತ್ವಿಕರು ಸಿಟ್ಟಾದರು. ಅವರಿಗೆಲ್ಲ ರಾಜಕುಮಾರ್ ನೆನಪಾಗಿದ್ದರು.

    ಕಚಕಚ ಕತ್ತರಿ

    ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ವರ್ಷಪೂರ್ತಿ ಸುದ್ದಿಯಲ್ಲಿದ್ದರು. ಈವಯ್ಯನಿಗೆ ಸಿನಿಮಾ ನೋಡಲಿಕ್ಕೆ ಬರೊಲ್ಲ ಎಂದು ಅನೇಕ ನಿರ್ಮಾಪಕರು ದೂರಿದರು. ಮೊಗ್ಗಿನ ಮನಸು ಚಿತ್ರದ ನಿರ್ಮಾಪಕರು ಎ ಸರ್ಟಿಫಿಕೇಟ್ ಒಲ್ಲೆನೆಂದು ಟ್ರಿಬ್ಯುನಲ್ ಮೆಟ್ಟಿಲು ಹತ್ತಿದರು. ಅಲ್ಲಿ ಅವರಿಗೆ ದಕ್ಕಿದ್ದು ಯು/ಎ, ಅದೂ ಒಂದಷ್ಟು ಕಟ್‌ಗಳ ನಂತರ.

    ಗೋವಾ ಚಿತ್ರೋತ್ಸವದಲ್ಲಿ ಆತಿಥ್ಯ ಸರಿಯಾಗಿಲ್ಲವೆಂದು ಹಿರಿಯ ನಟಿ ಬಿ.ಸರೋಜಾದೇವಿ ಮುನಿಸಿಕೊಂಡದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಗೂ ನಟಿ ವರ್ಷಾ ನಡುವಿನ ಪ್ರೇಮ ವದಂತಿ, 'ವೀರ ಮದಕರಿ" ಶೀರ್ಷಿಕೆ ವಿರುದ್ಧ ಕಥೆಗಾರ ಬಿ.ಎಲ್.ವೇಣು ದನಿ ಎತ್ತಿದ್ದು ವರ್ಷದ ಕಿರಿಕಿರಿಗಳಲ್ಲಿ ಎದ್ದುಕಾಣುವ ಸ್ವಾರಸ್ಯಗಳು.

    Wednesday, December 31, 2008, 17:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X