»   » ಕುರಿ, ಕೋತಿಗಳ ನಂತರ ಕತ್ತೆಗೆ ಜೋತುಬಿದ್ದವರ ಕತೆ...

ಕುರಿ, ಕೋತಿಗಳ ನಂತರ ಕತ್ತೆಗೆ ಜೋತುಬಿದ್ದವರ ಕತೆ...

Posted By: ದಟ್ಸ್‌ಕನ್ನಡ ಬ್ಯೂರೊ
Subscribe to Filmibeat Kannada

ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಹಾಗೂ ಪ್ರಾಣಿಗಳಿಗೆ ಗಣಕೂಟ ಚೆನ್ನಾಗಿರುವಂತಿದೆ. 'ಮುತ್ತಿನಹಾರ", ಹೂವುಹಣ್ಣು", 'ಮಹಾಕ್ಷತ್ರಿಯ"ಗಳಂಥ ಸದಭಿರುಚಿಯ ಹಾಗೂ ಮಹಾತ್ವಾಕಾಂಕ್ಷೆಯ ಚಿತ್ರಗಳನ್ನು ತೆಗೆದು ಗಲ್ಲಾ ಪೆಟ್ಟಿಗೆಯಲ್ಲಿ ಸೋತ ಬಾಬು ಗರಿಕಟ್ಟಿದ್ದು, ಕುರಿಗಳು ಹಾಗೂ ಕೋತಿಗಳ ಬಾಲ ಹಿಡಿದ ನಂತರ !

'ಕುರಿಗಳು ಸಾರ್‌ ಕುರಿಗಳು" ಹಾಗೂ 'ಕೋತಿಗಳು ಸಾರ್‌ ಕೋತಿಗಳು" ಸಿನಿಮಾದ ಮೂಲಕ ಚೇತರಿಸಿಕೊಂಡಿರುವ ಸಿಂಗ್‌ ಬಾಬು, ಈಗ ಕುರಿ ಕೋತಿಗಳಿಂದ ಕತ್ತೆಗಳಿಗೆ ಬಡ್ತಿ ಪಡೆದಿದ್ದು - ಹ್ಯಾಟ್ರಿಕ್‌ ಹಂಬಲದಲ್ಲಿದ್ದಾರೆ. ಯಥಾ ಪ್ರಕಾರ ಬಾಬು ಪ್ರತಿಭೆಯ ಬಗೆಗೆ ಭಯಂಕರ ನಂಬಿಕೆಯಿರುವ ಜೈ ಜಗದೀಶ್‌- ವಿಜಯಲಕ್ಷ್ಮಿಸಿಂಗ್‌ ದಂಪತಿಗಳು ಹೊಸ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಬೆಂಗಳೂರಿನ ಜವಾಹರ್‌ಲಾಲ್‌ ನೆಹರೂ ತಾರಾಲಯದಲ್ಲಿ ಗುರುವಾರ (ಅ.3) ಬೆಳಗ್ಗೆ ಬಾಬು- ಜೈಜಗ್ಗಿ ದಂಪತಿಗಳ ಹೊಸ ಚಿತ್ರ 'ಕತ್ತೆಗಳು ಸಾರ್‌ ಕತ್ತೆಗಳು" ಚಿತ್ರದ ಹೊಸ ಮುಹೂರ್ತ. ಹೆಚ್ಚೂ ಕಮ್ಮಿ ಕುರಿಗಳು, ಕೋತಿಗಳು ಬಳಗವೇ ಕತ್ತೆಗಳು ಚಿತ್ರದಲ್ಲೂ ಮುಂದುವರಿದಿದೆ.

ಚಂದ್ರಶೇಖರ ಕಂಬಾರರ 'ಸಿಂಗಾರವ್ವ ಮತ್ತು ಅರಮನೆ" ಚಿತ್ರದಲ್ಲಿ ಬಿಜಿಯಾಗಿರುವ ಛಾಯಾಗ್ರಾಹಕ ಗೌರಿಶಂಕರ್‌ ಕೋತಿಗಳು ಚಿತ್ರಕ್ಕೆ ಲಭ್ಯರಿಲ್ಲ. ಅದೇರೀತಿ, ರಮೇಶ್‌-ನಾರಾಯಣ್‌ ಜೊತೆ ಕುರಿ-ಕೋತಿಯಾಗಿದ್ದ ಮೋಹನ್‌ ಕತ್ತೆಯಾಗುವ ಅದೃಷ್ಟದಿಂದ ವಂಚಿತರಾಗಿದ್ದಾರೆ. ಮೋಹನ್‌ ಅವರ ಡೇಟ್ಸ್‌ ಹಾಗೂ ಸಂಭಾವನೆ ಎರಡೂ ಹೊಂದಾಣಿಕೆಯಾಗಿಲ್ಲ ಎನ್ನುವುದು ನಿರ್ಮಾಪಕರ ಹೇಳಿಕೆ. ಮೋಹನ್‌ ಬದಲಿಗೆ ಜಗ್ಗೇಶ್‌ ಸೋದರ ಕೋಮಲ್‌ ಮೂರನೇ ಕತ್ತೆಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ.

ಗೌರಿಶಂಕರ್‌ ಹಾಗೂ ಮೋಹನ್‌ ಅವರೊಂದಿಗೆ ಕತ್ತೆಗಳು ಚಿತ್ರದಿಂದ ಹೊರಗುಳಿದ ಇನ್ನೊಂದು ಹೆಸರು, ಸಂಭಾಷಣೆಗಾರ ರಿಚರ್ಡ್‌ ಲೂಯಿಸ್‌. 'ಪಾಪ ಪಾಂಡು" ಈಟೀವಿ ಧಾರಾವಾಹಿ ಮೂಲಕ ಹಾಸ್ಯ ಸಾಹಿತಿಯೆಂದು ಬೆಳಕಿಗೆ ಬಂದ ಎಂ.ಎಸ್‌.ನರಸಿಂಹಮೂರ್ತಿ ಕತ್ತೆಗಳು ಚಿತ್ರಕ್ಕೆ ಮಾತು ಬರೆಯಲಿದ್ದಾರೆ.

ಕತ್ತೆಗಳು ಚಿತ್ರಕ್ಕೆ ಸ್ಫೂರ್ತಿಯೇನು ಸಾರ್‌ ?
ಕತ್ತೆಯ ಮಹತ್ವ ಹಾಗೂ ಕಾಯಕ ನಿಷ್ಠೆಯ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಚಿಕ್ಕದೊಂದು ಉಪನ್ಯಾಸವನ್ನೇ ಕೊಡುತ್ತಾರೆ. ಕತ್ತೆ ತುಂಬಾ ಪ್ರಾಮಾಣಿಕ ಪ್ರಾಣಿ. ನಿಷ್ಠೆಗೆ ಹೆಸರಾದುದು. ಧೂಳು ಹಾಗೂ ಬಟ್ಟೆಯ ಮೂಟೆಗಳನ್ನು ಹೊರುವ ಕತ್ತೆ ಶ್ರಮಜೀವಿಯೂ ಹೌದು. ಆದರೆ, ಯಾರೊಬ್ಬರೂ ಕತ್ತೆಯನ್ನು ತಮ್ಮ ಜೊತೆ ಇಟ್ಟುಕೊಳ್ಳಲು ಬಯಸುವುದಿಲ್ಲ. ಕತ್ತೆಯ ಗುಣಗಳ ಈ ವಿಶ್ಲೇಷಣೆಯಲ್ಲೇ ಕತೆ ಸಾಗುತ್ತದೆ ಎನ್ನುತ್ತಾರೆ ಬಾಬು.

ಕತೆಯ ನಾಯಕರಾದ ಅರ್ಥಾತ್‌ ಕತ್ತೆಗಳಾದ ರಮೇಶ್‌, ನಾರಾಯಣ್‌ ಹಾಗೂ ಕೋಮಲ್‌ ಶುದ್ಧಾತಿಶುದ್ಧ ಒರಟರು. ಜೊತೆಗೆ ಕಿವುಡರು ಕೂಡ. ಮೂಗರು ಅನ್ನೋದು ಇನ್ನೊಂದು ಕ್ವಾಲಿಫಿಕೇಷನ್‌. ಬೇರೆಯವರ ಹಿತಕ್ಕಾಗಿ ಕತ್ತೆಗಳು ಫಜೀತಿಗೆ ಸಿಕ್ಕಿಕೊಳ್ಳುವುದು, ಕೊನೆಗೆ ಕ್ಲೀನ್‌ಚಿಟ್‌ನೊಂದಿಗೆ ಸಿನಿಮಾದ ಮುಕ್ತಾಯ. ಹೆಣ್ಣು ಕತ್ತೆಗಳಾಗಿ ಮೇಘನಾ, ಋತಿಕಾ ಹಾಗೂ ರೀತುಸಿಂಗ್‌ ಅಭಿನಯಿಸುತ್ತಿದ್ದಾರೆ. ಒಬ್ಬಾಕೆ ಚೆಲ್ಲುಚೆಲ್ಲು, ಇನ್ನೊಬ್ಬಳು ಆಸ್ಪತ್ರೆಯಲ್ಲಿ ನರ್ಸ್‌, ಮತ್ತೊಬ್ಬಾಕೆ ಸ್ಕೂಲು ಮಿಸ್ಸು ! ಅಲ್ಲಿಗೆ ಕತ್ತೆಗಳ ಕಿರುಚಾಟಕ್ಕೆ ಸಾಕಷ್ಟು ಅವಕಾಶವಿದೆ ಎಂದಾಯಿತು.

'ನಾನು ಇತರರನ್ನು ಕಾಪಿ ಮಾಡುತ್ತಿಲ್ಲ . ನಾನೊಬ್ಬ ಟ್ರೆಂಡ್‌ ಸೆಟ್ಟರ್‌. ಕತ್ತೆಗಳು ಮೂಲಕ ಆ ಟ್ರೆಂಡ್‌ ಮುಂದುವರಿಸುತ್ತಿದ್ದೇನೆ" ಎಂದು ಬಾಬು ತಮ್ಮ ಹೊಸ ಚಿತ್ರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವತ್ತಿನದು ರಕ್ತದ ಕಲೆಗಳ ರೋಗಪೀಡಿತ ಸಮಾಜ. ಇಂಥ ಸಂದರ್ಭದಲ್ಲಿ ಈ ಥರದ ಕತೆಗಳಿಂದ ಮೂಲಕ ಜನರನ್ನು ಮನರಂಜಿಸಲು ಸಾಧ್ಯ ಎನ್ನವುದು ಬಾಬು ಕಂಡುಕೊಂಡಿರುವ ಸತ್ಯ.

ಕತ್ತೆಗಳು ಬರೋದು ಯಾವಾಗ ?
ಕತ್ತೆಗಳು ಹೊಸ ವರ್ಷದ ಕೊಡುಗೆಯಾಗಿ (2003 ರ ಜನವರಿಯಲ್ಲಿ ) ತೆರೆ ಕಾಣಲಿದೆ. ಚಿತ್ರದಲ್ಲಿ 6 ಹಾಡುಗಳಿದ್ದರೆ ಚೆಂದ ಅಂದುಕೊಂಡಿದ್ದೇವೆ. ಇಪ್ಪತ್ತು ದಿನಗಳಲ್ಲಿ ಶೂಟಿಂಗ್‌ ಮುಕ್ತಾಯವಾಗಲಿದೆ ಎಂದು ಚಿತ್ರದ ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್‌ ತಮ್ಮ ಸಿನಿಮಾದ ಬಗ್ಗೆ ಹೇಳುತ್ತಾರೆ.

ಕೋತಿಗಳು ಚಿತ್ರದ ಶತದಿನದ ಸಂಭ್ರಮವನ್ನು ಸಮಾರಂಭದ ಮೂಲಕ ಹಂಚಿಕೊಳ್ಳುವ ಆಸೆ, ಬಾಬು, ಜಗ್ಗಿ ಹಾಗೂ ವಿಜಯಲಕ್ಷ್ಮಿ ಅವರಿಗಿದೆ. ಆದರೇನು ಮಾಡೋದು, ಒಂದೆಡೆ ಬರ, ಇನ್ನೊಂದಿಗೆ ಕಾವೇರಿಗೆ ಕಿಚ್ಚು . ಆ ಕಾರಣದಿಂದಲೇ ಸದ್ಯಕ್ಕೆ ಸಮಾರಂಭವನ್ನು ಮುಂದೂಡಿದ್ದೇವೆ ಎಂದರು ವಿಜಯಲಕ್ಷ್ಮಿ. ಕತ್ತೆಗಳು ಗೆದ್ದರೆ- ಕೋತಿಗಳು ಹಾಗೂ ಕತ್ತೆಗಳನ್ನು ಒಟ್ಟಿಗೆ ವೇದಿಕೆಗೆ ಕರೆದರಾಯಿತು!!

Read more about: kannada
English summary
I am a trend setter of Animals named film : Rajendra Singh Babu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada