For Quick Alerts
  ALLOW NOTIFICATIONS  
  For Daily Alerts

  ನಾವು ಮಾಡಿದ ತಪ್ಪನ್ನು ಮಾಡಬೇಡಿ: ದ್ವಾರಕೀಶ್

  By *ರಾಜೇಂದ್ರ ಚಿಂತಾಮಣಿ
  |

  ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನೀರವ ಮೌನ. ಒಮ್ಮೆಲೆ ಮಡುಗಟ್ಟಿದ್ದ ದುಃಖ ಪ್ರವಹಿಸಿದ ಸಮಯ. ಅಸ್ತಂಗತರಾದ ಕನ್ನಡ ಚಿತ್ರರಂಗದ ಮೇರುನಟ ಸಾಹಸಸಿಂಹ ಡಾ.ವಿಷ್ಣುವರ್ಧನ್, ಗಾಯಕ ಸಿ ಅಶ್ವತ್ಥ್, ನಿರ್ಮಾಪಕ ಚೆಂದೂಲಾಲ್ ಜೈನ್ ಮತ್ತು ಸರ್ಕಸ್ ಬೋರಣ್ಣ ಅವರ ಅತ್ಮಕ್ಕೆ ಶಾಂತಿ ಕೋರಿ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಭಾವುಕ ಕ್ಷಣಗಳನ್ನು ಇಡೀ ಸಭೆ ಮೌನವಾಗಿ ಆಲಿಸುತ್ತಿತ್ತು...

  ನಾವು ಮಾಡಿದ ತಪ್ಪನ್ನು ಯಾರು ಮಾಡ್ಬೇಡಿ
  ಅಗಲಿದ ಆತ್ಮೀಯ ಸ್ನೇಹಿತ ವಿಷ್ಣುವರ್ಧನ್ ಅವರಿಗೆ ನಟ ದ್ವಾರಕೀಶ್ ಶ್ರದ್ಧಾಂಜಲಿ ಸಲ್ಲಿಸಿದರು. ಕೆಲವರು ಮುಂದೆ ಹೋಗುತ್ತಾರೆ ಮತ್ತೆ ಕೆಲವರು ಹಿಂದೆ ಹೋಗುತ್ತಾರೆ. ನಾವೆಲ್ಲಾ ಹಿಂದಿದ್ದೇವೆ. ಅವನು (ವಿಷ್ಣುವರ್ಧನ್) ಮುಂದೆ ಹೋಗಿಬಿಟ್ಟ. ವಿಷ್ಣು ನನಗೆ ಮರು ಜೀವ ಪ್ರಸಾದಿಸಿದ್ದ. ಎಲ್ಲಿ ಅತಿಯಾದ ಸ್ನೇಹವಿರುತ್ತದೋ ಅಲ್ಲಿ ಜಗಳ ಸಾಮಾನ್ಯ. ಜಗಳ ಆಡಬೇಡವೋ ಎಂದು ಅವನಲ್ಲಿ ಬಹಳಷ್ಟು ಸಲ ವಿನಂತಿಸಿಕೊಂಡಿದ್ದೆ. ಆದರೆ ಅವನು ಕೇಳಲಿಲ್ಲ...

  ನಾವು ಮಾಡಿದ ತಪ್ಪನ್ನು (ಜಗಳವಾಡಿದ್ದು) ಯಾರೂ ಮಾಡಬೇಡಿ. ಕನ್ನಡ ಚಿತ್ರರಂಗವನ್ನು ಉಳಿಸಿ, ಬೆಳೆಸಿ. ಬೆಳ್ಳಿಪರದೆ ಮೇಲೆ ಡಾ.ರಾಜ್, ನರಸಿಂಹರಾಜು ಅವರ ಜೋಡಿ ಅಷ್ಟು ಜನಪ್ರಿಯವಾಗಿತ್ತು. ಅವರ ನಂತರ ವಿಷ್ಣು ಮತ್ತು ದ್ವಾರ್ಕಿ ಜೋಡಿ ಅಷ್ಟೇ ಜನಪ್ರಿಯವಾಗಿತ್ತು ಎಂದು ತಮ್ಮ ಜೋಡಿಯನ್ನು ನೆನೆದರು. ಕನ್ನಡ ಚಿತ್ರರಂಗದ ಒಳಿತಿಗೆ ನಾವೆಲ್ಲರೂ ಒಟ್ಟಿಗೆ ದುಡಿಯೋಣ ಎಂಬ ಮಾತನ್ನು ದ್ವಾರಕೀಶ್ ಈ ಸಂದರ್ಭದಲ್ಲಿ ಹೇಳಿದರು.

  ಹಾಗೆಯೇ ಅಶ್ವಥ್ ಅವರ ಜೊತೆ ಚಿತ್ರ ಮಾಡಬೇಕೆಂಬ ನನ್ನ ಆಸೆ ಕಡೆಗೂ ನೆರವೇರಲಿಲ್ಲ. ಆ ನೋವು ನನ್ನನ್ನು ಇನ್ನೂ ಕಾಡುತ್ತಿದೆ. ನಿರ್ಮಾಪಕ ಚಂದೂಲಾಲ್ ಜೈನ್ ಸಹ ನನ್ನ ದೀರ್ಘ ಕಾಲದ ಗೆಳೆಯ. ನನ್ನ ಹಲವಾರು ಚಿತ್ರಗಳ ನಿರ್ಮಾಪಕ ಎಂದು ನೆನೆದು ಅಶ್ರುತರ್ಪಣ ಸಲ್ಲಿಸಿದರು.

  ನೀ ನಿಲ್ಲದಿರುವಾಗ ಒಬ್ಬೊಂಟಿ ನಾವು
  ಪ್ರಣಯ ರಾಜ ಶ್ರೀನಾಥ್ ಮಾತನಾಡುತ್ತಾ, ಅಶ್ವಥ್ ಅವರ ಹಾಡನ್ನು ಕೇಳುತ್ತಾ ಬೆಳೆದವರು ನಾವು. ಕೆ ಎಸ್ ನರಸಿಂಹ ಸ್ವಾಮಿ ಅವರ ಬಾರೆ ನನ್ನ ಶಾರದೆ...ಕವಿತೆಯನ್ನು ಅಶ್ವಥ್ ಹಾಡಿ ಒಬ್ಬೊಬ್ಬರನ್ನು ಕರೆದು ಹಾಡು ಹೇಗಿದೆ ಹೇಳ್ರೋ ಎಂದು ಕೇಳುತ್ತಿದ್ದರು. ಅವರ ಹಾಡಿನಲ್ಲಿ ಮಾಧುರ್ಯವಿತ್ತು. ಸಂಗೀತದ ರತ್ನ ಅವರು ಎಂದು ತಮ್ಮ ನೆನಪುಗಳನ್ನು ಬಿಚ್ಚಿಟ್ಟರು.

  ಗಾಂಧಿ ಬಜಾರ್, ಬಸವನಗುಡಿಯಲ್ಲಿ ವಿಷ್ಣು ಅವರನ್ನು ಜನ ತೆಲೆ ಎತ್ತಿ ನೋಡುತ್ತಿದ್ದರು. ನಾವೆಲ್ಲಾ ಅವನನ್ನು ಕುಮಾರಿ ( ವಿಷ್ಣು ಮೂಲ ಹೆಸರು ಸಂಪತ್ ಕುಮಾರ್) ಎಂದು ಕರೆಯುತ್ತಿದ್ದೆವು. ವಿಷ್ಣು ಯಾವತ್ತೂ ಮೂಡಿಯಾಗಿರಲಿಲ್ಲ. ಅಳೆದು ತೂಗಿ ವ್ಯಕ್ತಿಗಳನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವ ವ್ಯಕ್ತಿತ್ವವಿತ್ತು. ಇನ್ನೊಂದು ವರ್ಷ ಬದುಕಿದಿದ್ದರೆ ಇದೇ ಅರಮನೆ ಮೈದಾನದಲ್ಲಿ ಅರುವತ್ತನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ. ಆದರೆ ವಿಧಿಯ ಆಟ ಎಂದು ಕಣ್ಣೀರಾದರು ಪ್ರಣಯರಾಜ.

  ಚಂದೂಲಾಲ್ ಜೈನ್ ಅವರಿಗೆ ಒಳ್ಳೆಯ ಚಿತ್ರಗಳನ್ನು ಮಾಡುವ ತುಡಿತವಿತ್ತು. ಎಲ್ಲರನ್ನೂ ಜೈನ್ ಅಣ್ಣ ಅಣ್ಣ ಎಂದು ಕರೆಯುತ್ತಿದ್ದರು. ಸ್ನೇಹಮಯಿ ವ್ಯಕ್ತಿತ್ವ ಅವರಲ್ಲಿತ್ತು. ಅವರ ನಿರ್ಮಾಣದ 'ಎರಡು ರೇಖೆಗಳು' ಚಿತ್ರದಲ್ಲಿ ನನಗೆ ಉತ್ತಮ ಪಾತ್ರ ಕೊಟ್ಟಿದ್ದರು. ಇಂತಹ ನಿರ್ಮಾಪಕರು ಕನ್ನಡಕ್ಕೆ ಬೇಕು ಎಂದು ಶ್ರೀನಾಥ್ ಹೇಳಿದರು.ಸರ್ಕಸ್ ಬೋರಣ್ಣ ಅಗಾಧವಾದ ಶರೀರವಿದ್ದರೂ ಮನಸು ಮಾತ್ರ ಮಗುವಿನಂತಹದ್ದು ಎಂದು ನೆನೆದರು.

  ವಿಷ್ಣು ಹೆಸರಲ್ಲಿ 'ಚಿತ್ರನಗರಿ'
  ಕನಸು ಮನಸಿನಲ್ಲೂ ಬಯಸದ ಕಾರ್ಯುಕ್ರಮ ಶ್ರದ್ಧಾಂಜಲಿ ಕಾರ್ಯಕ್ರಮ. ವಿಷ್ಣುವರ್ಧನ್, ಸಿ ಅಶ್ವಥ್ , ಚಂದೂಲಾಲ್ ಜೈನ್ ಮತ್ತು ಸರ್ಕಸ್ ಬೋರಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅನಂತಕುಮಾರ್, ಮೈಸೂರು ಮತ್ತು ಬೆಂಗಳೂರಿನಲ್ಲಿ ಚಿತ್ರನಗರಿ ನಿರ್ಮಾಣವಾಗಲಿ ಎಂದು ಸಲಹೆ ನೀಡಿದರು.

  ವಿಷ್ಣು ಹೆಸರಿನಲ್ಲಿ ಪ್ರಶಸ್ತಿ ನೀಡಲು ವಿನಂತಿಸಿದ ಅವರು ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ ಇಡೀ ಭಾರತೀಯ ಚಿತ್ರೋದ್ಯಮಕ್ಕೆ ಪ್ರೇರಣೆಯಾಗಬಲ್ಲ ವಿಷ್ಣು ಸ್ಮಾರಕ ನಿರ್ಮಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿನಂತಿಸಿಕೊಂಡರು. ಚಿತ್ರನಗರಿ ನಿರ್ಮಾಣದಿಂದ ಕನ್ನಡ ಚಿತ್ರರಂಗಕ್ಕೆ ಕವಿದಿರುವ ಮಬ್ಬು ಬೆಳಕಾಗಲಿ ಎಂದು ಬಯಸಿದರು.

  ವಿಷ್ಣುವರ್ಧನ್ ಅವರು ಸಜ್ಜನಿಕೆ, ಸ್ನೇಹ, ವಿನಯಕ್ಕೆ ಹೆಸರಾಗಿದ್ದರು. ಗಡಿಬಿಡಿಯಿಂದ ಬಂದ ನಾಗರಹಾವು ಚಿತ್ರದ ರಾಮಾಚಾರಿಯಂತೆ ವಿಷ್ಣು ಸಲ ಗಡಿಬಿಡಿಯಲ್ಲೇ ಹೊರಟು ಹೋದರು. ಅವರ ಸಾವನ್ನು ನಂಬಲಿಕ್ಕೇ ಆಗುತ್ತಿಲ್ಲ. ಅವರು ನಿಧನರಾದ ಕೂಡಲೆ ಸರಕಾರ ತೆಗೆದುಕೊಂಡ ತೀರ್ಮಾನಗಳನ್ನು ಅನಂತಕುಮಾರ್ ಕೊಂಡಾಡಿದರು.

  ಕಣ್ಣೀರಾದ ಚತುರ್ಭಾಷಾ ತಾರೆ
  ಅಭಿನಯ ಸರಸ್ವತಿ, ಚತುರ್ಭಾಷಾ ತಾರೆ ಬಿ ಸರೋಜಾದೇವಿ ಮಾತನಾಡುತ್ತಾ, ವಿಷ್ಣು ಅಗಲಿಕೆ ತೀವ್ರ ದುಃಖ ತಂದಿದೆ. ವಿಷ್ಣು ಇಲ್ಲ ಎಂದು ನೆನೆಸಿಕೊಳ್ಳುವುದು ದುಃಖದ ಸಂಗತಿ. ಸ್ನೇಹಜೀವಿ, ಮಾಹಾನ್ ಕಲಾವಿದ ಎಂದು ನೆನೆದು ಭಾವುಕರಾದರು. ಚಂದೂಲಾಲ್ ಜೈನ್ ನಮ್ಮಂತಹ ಎಷ್ಟೋ ಮಂದಿಗೆ ಅನ್ನದಾತರು ಎಂದು ಹೇಳಿದರು.

  ಜೀವದ ಗೆಳೆಯನ ನೆನೆದ ಅಂಬಿ
  ನನ್ನ ಪಾಲಿಗೆ ವಿ ಷ್ಣು ಇನ್ನೂ ಜೀವಂತವಾಗಿದ್ದಾರೆ. ಅವನು ಇಲ್ಲ ಎಂಬ ಭಾವನೆ ನನಗೆ ಇನ್ನೂ ಬಂದಿಲ್ಲ. ವಿಷ್ಣು ನಿಧನರಾದ ದಿನ ಎಲ್ಲ ರಾಜಕೀಯ ವ್ಯಕ್ತಿಗಳು ಪಕ್ಷಭೇಧ ಮರೆತು ಅಂತಿಮ ಯಾತ್ರೆಗೆ ಸಹಕರಿಸಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಸರಕಾರ ನಡೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ ಎಂದರು.

  ನಾಳೆ ಬರ್ತೀನಿ ಇನ್ನೂ ಐದು ದಿನ ನಿನ್ನೊಂದಿಗೆ ಇರುತ್ತೇನೆ ಎಂದು ಕೊನೆಯದಾಗಿ ಹೇಳಿದ್ದ. ಆ ಮಾತು ಇನ್ನೂ ಹಸಿರಾಗಿಯೇ ಇದೆ ಎಂದು ಜೀವದ ಗೆಳೆಯನ ಮಾತನ್ನು ನೆನೆದು ಗಗ್ದದಿತರಾದರು. ಚಿತ್ರನಗರಿ ಮಾಡಿ ಎಂದು ಅನಂತಕುಮಾರ್ ಕೊಟ್ಟ ಸಲಹೆಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಕುಚುಕು ಗೆಳೆಯನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X