»   » 2009: ಸೋಲು,ಸಾವಿನ ಸಂವತ್ಸರ

2009: ಸೋಲು,ಸಾವಿನ ಸಂವತ್ಸರ

Subscribe to Filmibeat Kannada

ಕನ್ನಡ ಚಿತ್ರರಂಗ ವ್ಯಾವಹಾರಿಕವಾಗಿ ಕಷ್ಟ ನಷ್ಟ ಅನುಭವಿಸುವುದು ಸಾಮಾನ್ಯ ಸಂಗತಿ ಎನಿಸಿದೆ. 2009 ರ ಸಾಲಿನಲ್ಲೂ ಚಿತ್ರಗಳು ಸಾಲುಸಾಲಾಗಿ ಸೋತು ಅನೇಕ ನಿರ್ಮಾಪಕರು ಕೈಸುಟ್ಟುಕೊಂಡಿದ್ದಾರೆ. ಇದು ನಮ್ಮ ಉದ್ಯಮಿಗಳ ಅವ್ಯಾವಹಾರಿಕ ಮನೋಭಾವ ಮತ್ತು ಕನ್ನಡಿಗರ ಅಸಡ್ಡೆಗೆ ಹಿಡಿದ ಕೈಗನ್ನಡಿಯಾಗಿದೆ.

ಚಿತ್ರರಂಗದ ನಾನಾ ಕ್ಷೇತ್ರಗಳಲ್ಲಿ ದುಡಿದ ಕಲಾವಿದ, ತಂತ್ರಜ್ಞರಿಗೆ ಪ್ರಶಸ್ತಿ, ಪುರಸ್ಕಾರ, ಸಂಭಾವನೆ ವಿಷಯ ಹಾಗಿರಲಿ. ಅನೇಕರ ಪ್ರಾಣ ಪಕ್ಷಿ ಹಾರಿಹೋದ ಕರಾಳ ವರ್ಷವಾಗಿಯೂ 2009ನೆ ಸಾಲು ಇತಿಹಾಸದ ಪುಟಗಳಲ್ಲಿ ಜಮೆ ಆಗಿರುವುದು ವಿಷಾದಕರ. ಹಣ ಹೋಗುತ್ತದೆ, ಬರುತ್ತದೆ. ಆದರೆ ಪ್ರಾಣ ಉಳಿದರೆ ಸಾಕು ಎನ್ನುವುದು ಚಿತ್ರೋದ್ಯಮದಲ್ಲಿ ತೊಡಗಿಕೊಂಡ ಕುಟುಂಬಗಳ ಮೊರೆಯಾಗಿದೆ.

ನಿನ್ನೆ ತಾನೆ ಗಾಯಕ ಮತ್ತು ರಾಗಸಂಯೋಜಕ ಸಿ ಅಶ್ವಥ್ ಅವರನ್ನು ಕಳೆದುಕೊಂಡ ನಾವು ಬೆಳಗಾಗೇಳುವಷ್ಟರಲ್ಲಿ ಮೇರು ಕಲಾವಿದ ವಿಷ್ಮುವರ್ಧನ್ ಅವರನ್ನು ಕಳೆದು ಕೊಂಡಿದ್ದೇವೆ. ತೀರಿಕೊಂಡ ಎಲ್ಲ ಮಹನೀಯರ ಕುಟುಂಬಗಳಿಗೆ ಸಾಂತ್ವನ ಹೇಳುತ್ತಾ, ಹೊಸ ವರ್ಷದ ಹೊಸ್ತಿಲಿನಲ್ಲಿರುವ ನಮ್ಮ ಚಿತ್ರರಂಗಕ್ಕೆ ಶುಭವಾಗಲಿ ಎಂದು ಹಾರೈಸೋಣ. ಈ ಸಾಲಿನಲ್ಲಿ ನಮ್ಮನ್ನಗಲಿದ ಕೆಲವು ಮಹನೀಯರ ಹೆಸರುಗಳು ಇಂತಿವೆ :

2009ನೇ ವರ್ಷದಲ್ಲಿ ಆರಂಭದಲ್ಲೇ ಆಘಾತ ನೀಡಿದ್ದು 'ಸಾಚಾ' ನಿರ್ಮಾಪಕ ಎಸ್.ಮಾದೇಶ್ ಅವರ ನಿಧನ. ಎರಡು ಬಾರ್ ಮತ್ತು ರೆಸ್ಟೋರೆಂಟ್ ಒಂದನ್ನು ಮಾದೇಶ್ ಅವರು ಭೋಗ್ಯಕ್ಕೆ ಪಡೆದಿದ್ದು 'ಸಾಚಾ' ಚಿತ್ರದ ಮೂಲಕ ತಮ್ಮ ಸಹೋದರ ವಿಕ್ಕಿ ಅವರನ್ನು ಹೀರೋ ಮಾಡಲು ಹೊರಟಿದ್ದರು. ಸುಮಾರು 1.5 ಕೋಟಿ ರು.ಗಳನ್ನು ಸಾಚಾ ಚಿತ್ರಕ್ಕಾಗಿ ಹೂಡಿದ್ದಾರೆ. ಇನ್ನೇನು ಅವರ ಕನಸು ನನಸಾಯಿತು ಎನ್ನುವಷ್ಟರಲ್ಲಿ ವಿಧಿ ಅವರನ್ನು ಬಹಳಷ್ಟು ದೂರಕ್ಕೆ ಕರೆದೊಯ್ದು ಬಿಟ್ಟಿತು.

ರಂಗಭೂಮಿ ಕಲಾವಿದ, ಕಿರುತೆರೆ ಮತ್ತು ಚಲನಚಿತ್ರ ನಟ, ನಿರ್ಮಾಪಕ ಮೈನಾ ಚಂದ್ರು ಜುಲೈ 16ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೈನಾ ಚಂದ್ರು ಅವರು ಮುಖ್ಯವಾಗಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದರು. ಅವರ ನಟನೆಯ 'ಉಲ್ಟಾ ಪಲ್ಟಾ' ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಮೈನಾ ಚಂದ್ರು ಅವರು'ಉಲ್ಟಾ ಪಲ್ಟಾ' ಚಿತ್ರದ ನಿರ್ಮಾಪಕರೂ ಆಗಿದ್ದರು.

'ಅಳಿಮಯ್ಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದ ಕಿಶೋರ್ ಸರ್ಜಾ ನಿಧನರಾಗಿದ್ದು ಶನಿವಾರ, ಜೂನ್ 27, 2009. ಮಕ್ಕಳ ಸಾಕ್ಷಿ, ಜೋಡಿ, ತುತ್ತಾ ಮುತ್ತಾ, ಬಾವ ಬಾಮೈದ ಸೇರಿದಂತ ಹಲವಾರು ಕನ್ನಡ ಚಿತ್ರಗಳನ್ನು ಕಿಶೋರ್ ಸರ್ಜಾ ನಿರ್ದೇಶಿಸಿದ್ದಾರೆ.

ಗುರುವಾರ, ಡಿಸೆಂಬರ್ 17, 2009ರ ದಿನ ಮೂವತ್ತೈದು ಕನ್ನಡ ಸಿನಿಮಾಗಳ ನಿರ್ಮಾಪಕ ಚಂದೂಲಾಲ್ ಜೈನ್ ಅಸ್ತಂಗತರಾದ ದಿನ. ಭೂತಯ್ಯನ ಮಗ ಅಯ್ಯು, ಭಕ್ತ ಸಿರಿಯಾಳ, ತಬ್ಬಲಿಯು ನೀನಾದೆ ಮಗನೆ, ಗೋಧೂಳಿ, ವೀರಪ್ಪನ್, ಗಂಗವ್ವ ಗಂಗಾಮಾಯಿ, ಹೇಮಾವತಿ, ಪ್ರಾಯ ಪ್ರಾಯ ಪ್ರಾಯ, ಬೆತ್ತಲೆಸೇವೆ ಚಿತ್ರಗಳ ರೂವಾರಿ ಕಣ್ಮರೆ.

ಸರ್ಕಸ್ ಬೋರಣ್ಣ ಫೈಟ್ ಮಾಡಲು ನಿಂತ ಎಂದರೆ ಪ್ರೇಕ್ಷಕರು ಬೆಚ್ಚಿ ಬೀಳುತ್ತಿದ್ದರು. ಗಜೇಂದ್ರ, ಶರವೇಗದ ಸರದಾರ, ಮಸಣದ ಹೂವು, ರಾಮಾಚಾರಿ ಸೇರಿದಂತೆ ಕನ್ನಡದ 80 ಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬೋರಣ್ಣ ಅವರು ಟೈಗರ್ ಪ್ರಭಾಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದರು. ಪ್ರಭಾಕರ್ ನಾಯಕನಾಗಿ 'ಮೇಯರ್ ಪ್ರಭಾಕರ್' ಎಂಬ ಚಿತ್ರವನ್ನು ಬೋರಣ್ಣ ನಿರ್ಮಿಸಿದ್ದರು. ಇದು ಅವರ ನಿರ್ಮಾಣದ ಕೊನೆಯ ಚಿತ್ರವಾಗಿತ್ತು.

ಕನ್ನಡ ಸುಗಮ ಸಂಗೀತ ಕ್ಷೇತ್ರದ ಗಾರುಡಿಗ, ಸ್ವರ ಮಾಂತ್ರಿಕ ಸಿ ಅಶ್ವಥ್ ಡಿಸೆಂಬರ್ 29, 2009ರಂದು ನಿಧನರಾದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಕಿಡ್ನಿ ವೈಫಲ್ಯದಿಂದ ಬೆಂಗಳೂರು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ 11.30ಕ್ಕೆ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಪಿತ್ತಜನಕಾಂಗ ಹಾಗೂ ಮೂತ್ರಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದಷ್ಟೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕನ್ನಡ ಚಿತ್ರರಂಗದ ಮೇರು ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್(59) ಅವರು ಇನ್ನು ಬರಿ ನೆನಪು ಮಾತ್ರ. ಮೈಸೂರಿನಲ್ಲಿದ್ದ ವಿಷ್ಣುವರ್ಧನ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ ತಕ್ಷಣ ಅವರನ್ನು ಮೈಸೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಬುಧವಾರ (ಡಿ.30) ಮುಂಜಾನೆ 2.30ರ ಸಮಯದಲ್ಲಿ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವಿಕ್ರಂ ಆಸ್ಪತ್ರೆ ಮೂಲಗಳು ತಿಳಿಸಿದವು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada