For Quick Alerts
ALLOW NOTIFICATIONS  
For Daily Alerts

  ಕವಿತೆಗೆ ಸೋಲು ; ಇಂದ್ರಜಿತುಗೆ ಗೆಲುವು

  By Super
  |
  ಕೊನೆಗೂ ಇಂದ್ರಜಿತ್‌ ಲಂಕೇಶ್‌ ಗೆದ್ದಿದ್ದಾರೆ ; ಸಂತೋಷ. ಕವಿತಾ ಲಂಕೇಶ್‌ ಹೀನಾಯ ಸೋಲುಂಡಿದ್ದಾರೆ ; ಹೀಗಾಗಬಾರದಿತ್ತು !
  ಇಂದ್ರಜಿತ್‌ ನಿದೇಶನದ ಈ ಮುನ್ನಿನ ಚಿತ್ರಗಳಾದ 'ತುಂಟಾಟ" ಹಾಗೂ 'ಲಂಕೇಶ್‌ ಪತ್ರಿಕೆ" ಭಾರೀ ಕುತೂಹಲ ಕೆರಳಿಸಿದ್ದವು. ಚಿತ್ರಕ್ಕೆ ದೊರೆತ ಪ್ರಚಾರದಿಂದ ಸಿನಿ ರಸಿಕರು ಕುತೂಹಲಿಗಳಾಗಿದ್ದರೆ, ಲಂಕೇಶ್‌ ಪುತ್ರನ ಚಿತ್ರದಲ್ಲಿ ಏನಾದರೂ ಹೊಸತಿರಬಹುದು ಎನ್ನುವ ನಿರೀಕ್ಷೆ ಪತ್ರಿಕೆ ಅಭಿಮಾನಿಗಳಿಗಿತ್ತು . ಆದರೆ ಚಿತ್ರ ನೋಡಿದ ನಂತರ ಕುತೂಹಲ-ನಿರೀಕ್ಷೆ ಎರಡೂ ಸುಳ್ಳಾಗಿದ್ದವು. ತಾಂತ್ರಿಕ ಚಮಕ್‌ನ ಹೊರತಾಗಿ ಹೇಳಿಕೊಳ್ಳುವತದ್ದೇನೂ ಇಂದ್ರಜಿತ್‌ ಚಿತ್ರಗಳಲ್ಲಿರಲಿಲ್ಲ . ತುಂಟಾಟದಲ್ಲಿ ತುಂಟಾಟ ಇರಲಿಲ್ಲ , ಪತ್ರಿಕೆಯಲ್ಲಿ ಕಚಗುಳಿ ಇರಲಿಲ್ಲ . ಹಾಗಾಗಿ ಇಂದ್ರಜಿತ್‌ ಹೊಸ ಚಿತ್ರ 'ಮೊನಾಲಿಸ"ದ ಬಗ್ಗೆ ಸಣ್ಣದೊಂದು ಆತಂಕ ಹಾಗೂ ಗುಮಾನಿ ಇಟ್ಟುಕೊಂಡವರ ಸಂಖ್ಯೆ ದೊಡ್ಡದು.

  ಆದರೆ, ಮೊನಾಲಿಸ ಗೆದ್ದಿದೆ. ಇದರೊಂದಿಗೆ ಎಲ್ಲ ದೂರು-ಆತಂಕಗಳು ದೂರವಾಗಿವೆ. ಇಂದ್ರಜಿತ್‌ ಮೊಗದಲ್ಲೀಗ ಗೆಲುವಿನ ಕಳೆ. ದಾಖಲೆಯ ಪ್ರದರ್ಶನ ಎನ್ನುವ ಇದ್ರಜಿತ್‌ ಮಾತನ್ನು ನಂಬುವುದು ಅಗತ್ಯವಿಲ್ಲವಾದರೂ, ಮೊನಾಲಿಸಳದು ಚೇತರಿಕೆಯ ಗೆಲುವು ಅನ್ನಲಿಕ್ಕಡ್ಡಿಯಿಲ್ಲ .

  ಮೊದ್ದು ಮುಖದ ಧ್ಯಾನ್‌ ಹಾಗೂ ಮುದ್ದು ಮುಖದ ಸದಾ 'ಮೊನಾಲಿಸ" ಚಿತ್ರದ ಪ್ರಮುಖ ಆಕರ್ಷಣೆ. ನೆರೆಮನೆಯಲ್ಲಿ ಸುಖ ಕಾಣುತ್ತಿರುವ 'ಚಿತ್ರ"ದ ರೇಖಾ ಆಂಟಿ ಹಾಗೂ 'ಧರ್ಮ"ವಂಚಿತೆ ದುರ್ಗಾಶೆಟ್ಟಿ 'ಮೊನಾಲಿಸ"ದ ಇನ್ನೆರಡು ಆಕರ್ಷಣೆಗಳು. ಚರ್ವಿತ ಚರ್ವಣ ಕಥೆಯನ್ನು ತಾಂತ್ರಿಕ ಸೆಳಕಿನೊಂದಿಗೆ ರಂಜನೀಯವಾಗಿ ನಿರೂಪಿಸಿದ ಅಗ್ಗಳಿಕೆ ಇಂದ್ರಜಿತ್‌ ಅವರದು.

  ಅದು ಸರಿ, ಒಂದು ಒಳ್ಳೆಯ ಚಿತ್ರ- ಸದಭಿರುಚಿಯ ಚಿತ್ರ- ಪ್ರಯೋಗಶೀಲ ಅನ್ನಬಹುದಾದ ಚಿತ್ರವನ್ನು ಇಂದ್ರಜಿತ್‌ ಯಾಕೆ ಮಾಡಬಾರದು ?

  ಹುಷಾರು. ಇಂಥ ಪ್ರಶ್ನೆ ಕೇಳಿದರೆ ಸ್ವತಃ ಪತ್ರಕರ್ತರೂ ಆಗಿರುವ ಇಂದ್ರಜಿತ್‌ಗೆ ಕೋಪ ಬರುತ್ತದೆ. ಇಂಥದ್ದೇ ಕೋಪ ಪುನೀತ್‌ ರಾಜ್‌ಕುಮಾರ್‌ಗೂ ಬರುತ್ತದೆ. ಇಬ್ಬರೂ ಹೇಳೋದಿಷ್ಟೆ : ನಮಗೇನು ಅಂಥ ವಯಸ್ಸಾಗಿದೆ. ಜನ ನೋಡದ ಚಿತ್ರ ಮಾಡಿ ಅನ್ನಲು ನಿಮಗೆ ಮನಸ್ಸಾದರೂ ಹೇಗೆ ಬರುತ್ತೆ .

  ಇಂದ್ರಜಿತ್‌ ಮಾತುಗಳ ಎಳೆ ಗಮನಿಸುವುದಾದರೆ ಸದ್ಯಕ್ಕವರು ಪ್ರಯೋಗಾತ್ಮಕ ಚಿತ್ರಗಳಿಂದ ದೂರ. ಅವರ ಒಲವೇನಿದ್ದರೂ ತುಂಟಾಟದ ಆಸುಪಾಸಲ್ಲೇ ಸುತ್ತುತ್ತದೆ. ಪ್ರಯೋಗಾತ್ಮಕ ಚಿತ್ರಗಳ ಹಕ್ಕನ್ನು ಸೋದರಿ ಕವಿತಾ ಲಂಕೇಶ್‌ಗೆ ಬಿಟ್ಟುಕೊಟ್ಟಿರುವ ಇಂದ್ರಜಿತ್‌ ಹದಿನಾರಾಣೆ ಕಮರ್ಷಿಯಲ್‌ ಚಿತ್ರಗಳ ರೈಟ್ಸ್‌ ಕಾದಿರಿಸಿಕೊಂಡಿದ್ದಾರೆ. ಇದು ನನ್ನದು, ಅದು ನಿನ್ನದು ಎಂದು ಒಡಹುಟ್ಟಿದವರ ನಡುವೆ ಪಾಲಾಗುತ್ತದಲ್ಲ , ಹಾಗೆ.

  ಇನ್ನು ಕವಿತೆಯ ಕಥೆ. 'ಪ್ರೀತಿ ಪ್ರೇಮ ಪ್ರಣಯ" ದಂಥ ಎಲ್ಲ ಬಗೆಯ ಪ್ರೇಕ್ಷಕರಿಗೂ ಸೇರುವಂಥ ಚಿತ್ರದ ಮೂಲಕ ಅಪಾರ ಆತ್ಮವಿಶ್ವಾಸ ರೂಢಿಸಿಕೊಂಡಿದ್ದ ಕವಿತಾ ಲಂಕೇಶ್‌ ಈಗ ವಿಷಾದಯೋಗದಲ್ಲಿದ್ದಾರೆ. ಈಚೆಗೆ ತೆರೆಕಂಡ ಕವಿತಾ ನಿರ್ದೇಶನದ 'ಬಿಂಬ" ಚಿತ್ರ ಒಂದೇ ವಾರಕ್ಕೆ ಎತ್ತಂಗಡಿಯಾಗಿರುವುದು ಕವಿತಾಳ ಕೊರಗಿಗೆ ಕಾರಣ.

  ತಮ್ಮ ನಿರ್ದೇಶನದ ಚಿತ್ರಗಳ ಬಿಡುಗಧಿಡೆಗೆ ನಿರ್ಮಾಪಕರಿಗಿಂತಲೂ ಹೆಚ್ಚಿನ ಮುತುವರ್ಜಿಯನ್ನು ಕವಿತಾ ವಹಿಸುತ್ತಾರೆ. ಇಂದ್ರಜಿತ್‌ ಕೂಡ ಈ ವಿಷಯದಲ್ಲಿ ಕಡಿಮೆಯಲ್ಲ . ಪ್ರಚಾರದಿಂದ ಹಿಡಿದು ಥಿಯೇಟರ್‌ ರಂಪಾಟದವರೆಗೂ, ಇ-ಮೇಲ್‌ ಪ್ರಚಾರದವರೆಗೂ ಕವಿತಾ ಖುದ್ದು ಆಸಕ್ತಿ ವಹಿಸುತ್ತಾರೆ. ಕೆಲವೊಮ್ಮೆ ಥಿಯೇಟರ್‌ ಸಿಗುವುದು ಕಷ್ಟವಾದಾಗ, ತಮ್ಮ ಚಿತ್ರಕ್ಕೆ ಮಾತ್ರ ಹೀಗಾಗುತ್ತಿದೆ ಎಂದು ಕೊರಗುತ್ತಾರೆ, ಹೋರಾಡುತ್ತಾರೆ. ಮತ್ತೊಂದು ಚಿತ್ರ ಬಿಡುಗಡೆಯಾದಾಗ ಅವರ ಹೋರಾಟ ಮತ್ತೆ ಜಾಗೃತವಾಗುತ್ತದೆ.

  'ಪ್ರೀತಿ ಪ್ರೇಮ ಪ್ರಣಯ" ಚಿತ್ರದ ಯಶಸ್ಸಿನಲ್ಲಿ ಕವಿತಾ ಪಾತ್ರ ದೊಡ್ಡದು. ಚಿತ್ರ ಆರಂಭದಲ್ಲಿ ಕುಂಟಿದರೂ, ಥಿಯೇಟರ್‌ ಸಮಸ್ಯೆ ಎದುರಿಸಿದರೂ ಕವಿತಾ ಜಗ್ಗಲಿಲ್ಲ , ವಿಶ್ವಾಸ ಕಳಕೊಳ್ಳಲಿಲ್ಲ . ಕೊನೆಗೂ ಜನ ಥಿಯೇಟರ್‌ಗೆ ಬಂದರು, ಚಿತ್ರ ಗೆದ್ದಿತು. ಗೆಲುವಿನ ಯಶಸ್ಸು ಕವಿತಾರ ಖಾತೆಗೆ ಸಂದಾಯವಾಯಿತು. ಅನಿವಾಸಿ ನಿರ್ಮಾಪಕರಿಗೆ ದುಡ್ಡು ವಾಪಸ್ಸು ಬಂದ ಖುಷಿ !! ಕವಿತಾರ ತೆರೆಕಂಡ ಇನ್ನೊಂದು ಚಿತ್ರ'ದೇವೀರಿ" ಯೂ ಯಶಸ್ಸು ಕಂಡಿತ್ತು .

  'ಬಿಂಬ" ಚಿತ್ರದ ಬಿಡುಗಡೆಗೂ ಕವಿತಾ ವಿಪರೀತ ಮುತುವರ್ಜಿ ವಹಿಸಿದ್ದರು. ಪಾಪ, ಅವರ ದುರಾದೃಷ್ಣ ! ಬಿಂಬ ತೆರೆಕಾಣುವ ಸಂದರ್ಭದಲ್ಲೇ ಇಂಥ ಚಿತ್ರಕ್ಕೆ ಹೇಳಿಮಾಡಿಸಿದಂತಿದ್ದ ಪುಟ್ಟಣ್ಣ ಚಿತ್ರಮಂದಿರದ ಬಾಗಿಲು ಮುಚ್ಚಿತ್ತು . ಪತ್ರಿಕೆಗಳಲ್ಲಿ ಒಳ್ಳೆಯ ವಿಮರ್ಶೆ ಬಂದರೂ ಕಲ್ಪನಾ ಚಿತ್ರಮಂದಿರದಲ್ಲಿ ಒಂದೇ ವಾರಕ್ಕೆ 'ಬಿಂಬ" ಎತ್ತಂಗಡಿಯಾಯಿತು. ಬಿರುದು ಬಾವಲಿಗಳ ಬಾಲಂಗೋಸಿ 'ಬಿಂಬ"ಕ್ಕೆ ಜನರನ್ನು ಕರೆತರಲಿಲ್ಲ . ಅಲ್ಲಿಗೆ ನಿರ್ದೇಶಕರ ನಾಮಬಲದ ಮೇಲೆ ಚಿತ್ರ ಓಡುತ್ತದೆ ಎನ್ನುವುದು ಮತ್ತೊಮ್ಮೆ ರುಜುವಾತಾಯಿತು.

  ಸೋತರೂ ಕವಿತಾ ಎದೆಗುಂದುವ ಹೆಣ್ಣಲ್ಲ . ಸೋದರನಂತೆ ತುಂಟಾಟದ ವ್ಯಕ್ತಿತ್ವ ಅವರದಲ್ಲ . ಅವರಲ್ಲಿ ಕಲಾತ್ಮಕ ಕನಸುಗಳಿವೆ, ಆ ದಾರಿಯಲ್ಲಿ ಸಾಗುವ ಛಲವೂ ಆಕೆಯಲ್ಲಿದೆ.

  ಏಕಕಾಲದಲ್ಲಿ - ಲಂಕೇಶ್‌ ಪುತ್ರನ ಗೆಲುವು, ಪುತ್ರಿಯ ಸೋಲು ಸ್ಯಾಂಡಲ್‌ವುಡ್‌ನ ವೈಚಿತ್ರ್ಯಗಳ ಒಂದು ಸ್ಯಾಂಪಲ್‌ನಂತಿದೆ. ಇಂದ್ರಜಿತ್‌ಗೆ ಅಭಿನಂದನೆ ಹೇಳುತ್ತಾ , ಕವಿತಾಗೆ ಧೈರ್ಯ ತುಂಬುತ್ತಾ - ಮುಂದಿನ ಬಾರಿ ಇಬ್ಬರೂ ಗೆಲ್ಲಲೆಂದು ಹಾರೈಸೋಣ.

  English summary
  Kavita and Indrajit Lankesh , a comparity study. Journalist, author Late. P. Lankeshs son Indrajit and daughter are into kannada movies as directors. A comparitive study of success and failure quotient of both film makers.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more