ಟೀಸರ್‌ನಿಂದಲೇ ಡಿ ಬಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ 'ಬಾಸ್'; ಈಗ ಚಿತ್ರದ ಮೊದಲ ಹಾಡು ರಿಲೀಸ್
ಕೆಲವು ದಿನಗಳ ಹಿಂದಷ್ಟೇ 'ಬಾಸ್' ಅನ್ನೋ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಟೀಸರ್ ರಿಲೀಸ್ ಆಗುತ್ತಿದ್ದಂತೆ ವಿವಾದದ ಕಿಡಿ ಹೊತ್ತಿ ಉರಿದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಬಗ್ಗೆ ನೂರೆಂಟು ಕಾಮೆಂಟ್‌ಗಳು ಬಂದಿದ್ದವು. ಇದು ದರ್ಶನ್ ಹಾಗೂ ರೇಣುಕಾಸ್ವಾಮಿ ಘಟನೆಯನ್ನೇ ಇಟ್ಟುಕೊಂಡು ಮಾಡಿದ ಸಿನಿಮಾ ಅನ್ನೋ ಕಾಮೆಂಟ್‌ಗಳು ಬಂದಿದ್ದವು.
'ಬಾಸ್' ಟೀಸರ್ ಕೂಡ ಇದೆಲ್ಲದಕ್ಕೂ ಪುಷ್ಠಿಯನ್ನು ಕೊಟ್ಟಿದ್ದವು. ಹೀಗಾಗಿ ಟೀಸರ್ ನೋಡುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಕೆರಳಿ ಕೆಂಡವಾಗಿದ್ದರು. ಸೋಶಿಯಲ್ ಮೀಡಿಯಾದಲ್ಲೇ ಸಿನಿಮಾ ತಂಡದ ವಿರುದ್ಧ ಕಿಡಿಕಾರಿದ್ದರು. ಸಿನಿಮಾ ವಿರುದ್ಧ ದೂರಗಳನ್ನು ನೀಡಲಾಗಿತ್ತು. ಇಷ್ಟೆಲ್ಲ ನಡೆದರೂ ನಿರ್ದೇಶಕ ವಿ.ಲವ ಮಾತ್ರ ಈ ಸಿನಿಮಾಗೂ ದರ್ಶನ್ ಅವರ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿದ್ದರು.

ಇಷ್ಟೆಲ್ಲ ವಿವಾದದ ಕಿಡಿ ಹತ್ತಿದರೂ ಚಿತ್ರತಂಡ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. 'ಬಾಸ್' ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಟೀಸರ್ ಬಿಟ್ಟು ಸುದ್ದಿಯಾಗಿದ್ದ ನಿರ್ದೇಶಕ ವಿ.ಲವ ಈಗ ಮೊದಲ ಹಾಡನ್ನು ರಿಲೀಸ್ ಮಾಡಿದ್ದಾರೆ. "ಏನಿದೆಯೋ ನಿನ್ನ ಮಾಯೇ.." ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಕುತೂಹಲ ಕೆರಳಿಸಿದೆ.
'ಬಾಸ್' ಸಿನಿಮಾವನ್ನು ಸಿರಿ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರುವ 'ಬಾಸ್ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಪ್ರಮೋದ್ ಮರವಂತೆ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಡೆವಿ ಸುರೇಶ್ ಈ ಹಾಡಿಗೆ ಟ್ಯೂನ್ ಹಾಕಿದ್ದಾರೆ. ಇನ್ನು ಈ ಹಾಡನ್ನು ಕನ್ನಡದ ಜನಪ್ರಿಯ ಗಾಯಕ ನವೀನ್ ಸಜ್ಜು ಹಾಡಿದ್ದಾರೆ.
"ಏನಿದೆಯೋ ನಿನ್ನ ಮಾಯೇ.." ಹಾಡು ಬಿಡುಗಡೆಯಾದ ಕ್ಷಣದಿಂದ ಮತ್ತೊಂದಿಷ್ಟು ಪ್ರಶ್ನೆಗಳನ್ನು ಹುಟ್ಟಾಕಿದೆ. ಹಾಡಿನ ಮಧ್ಯೆ ಬಿಟ್ಟಿರುವ ಮತ್ತೊಂದಿಷ್ಟು ತುಣುಕುಗಳು ಕೂಡ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಸವಾಗುತ್ತಿವೆ. ಹೀಗಾಗಿ ಮೊದಲ ಹಾಡು ನಾಯಕ ಪರವಾಗಿ ಬರೆದಂತೆ ಇದ್ದರೂ, ತುಣುಕುಗಳು ದರ್ಶನ್ ಹಾಗೂ ರೇಣುಕಾಸ್ವಾಮಿ ಕಥೆ ಇರಬಹುದೇ ಎಂಬ ಅನುಮಾನವನ್ನು ಮೂಡಿಸುತ್ತಿದೆ.
ಇನ್ನೂ 'ಬಾಸ್' ಸಿನಿಮಾವನ್ನು ಇತ್ತೀಚೆಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ವೀಕ್ಷಿಸಿದೆ. ಯಾವುದೇ ತಕರಾರು ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಚಿತ್ರತಂಡ ಏಪ್ರಿಲ್ ತಿಂಗಳಲ್ಲಿ ತೆರೆಗೆ ತರುವ ಸಿದ್ದತೆಗಳನ್ನು ಮಾಡಿಕೊಂಡಿದೆ. ಮೊದಲ ಹಾಡು ಬಿಡುಗಡೆ ವೇಳೆ ಸಿನಿಮಾ ರಿಲೀಸ್ ಬಗ್ಗೆ ನಿರ್ದೇಶಕ ವಿ.ಲವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇದೇ ವೇಳೆ ಸಿನಿಮಾದ ನಾಯಕ ತನುಷ್ ಶಿವಣ್ಣ ಮಾತಾಡಿ, "ಆರಂಭದಿಂದಲೂ ಪ್ರೋತ್ಸಾಹ ಕೊಡುತ್ತಾ ಬಂದಿರುವ ಪ್ರತಿಯೊಬ್ಬರಿಗೂ ಹಾಗೂ 'ಬಾಸ್' ಚಿತ್ರತಂಡಕ್ಕೂ ಧನ್ಯವಾದ" ಎಂದು ನಾಯಕ ತನುಷ್ ಶಿವಣ್ಣ ಹೇಳಿದ್ದಾರೆ. ಇನ್ನು ಈ ಸಿನಿಮಾಗೆ ನಾಯಕಿಯಾಗಿ ಪಾಯಲ್ ಚಂಗಪ್ಪ ಅವರು ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಡೇ ಹೇಳುವಂತೆ "ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸುವ ವ್ಯಕ್ತಿಯೊಬ್ಬನ ಜೀವನದಲ್ಲಿ ಕಷ್ಟ ಬಂದಾಗ ಆತ ಅನುಭವಿಸುವ ನೋವು ಹಾಗೂ ಪರದಾಟಗಳನ್ನು ಈ ಹಾಡಿನಲ್ಲಿ ಬರೆದಿದ್ದೇನೆ" ಎಂದು ಗೀತರಚನೆಕಾರ ಪ್ರಮೋದ್ ಮರವಂತೆ ಹೇಳಿದ್ದಾರೆ.


Click it and Unblock the Notifications















