»   » 'ದೊಡ್ಮನೆ ದೇವತೆ'ಯ ಜೀವನದ ಹಿನ್ನೋಟ

'ದೊಡ್ಮನೆ ದೇವತೆ'ಯ ಜೀವನದ ಹಿನ್ನೋಟ

Posted By:
Subscribe to Filmibeat Kannada

ಓರ್ವ ಯಶಸ್ವಿ ಪುರುಷನ ಹಿಂದೆ, ಓರ್ವ ಮಹಿಳೆ ಇರ್ತಾರೆ ಎಂಬ ಮಾತಿದೆ. ಈ ಮಾತು ಅಕ್ಷರಹ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸೂಕ್ತವಾಗಿದೆ. ಡಾ.ರಾಜ್ ಕುಮಾರ್ ಎಂಬ ಮಹಾನ್ ನಟನ ಹಿಂದೆ ಪಾರ್ವತಮ್ಮ ರಾಜ್ ಕುಮಾರ್ ದೊಡ್ಡ ಶಕ್ತಿ ಆಗಿದ್ದರು.

ಡಾ.ರಾಜ್ ಕುಮಾರ್ ಓರ್ವ ವ್ಯಕ್ತಿಯಾಗಿ, ನಟರಾಗಿ, ನಟಸಾರ್ವಭೌಮರಾಗಿ, ಅಭಿಮಾನಿಗಳ ಪಾಲಿಗೆ ಅಣ್ಣಾವ್ರು ಆಗಿ ರೂಪುಗೊಳ್ಳಲು ಪಾರ್ವತಮ್ಮ ಅವರ ಕಾಣಿಕೆ ದೊಡ್ಡದು. ರಾಜ್ ಕುಮಾರ್ ಅವರಿಗೆ ಪಾರ್ವತಮ್ಮ ಕೇವಲ ಪತ್ನಿಯಾಗಿ ಮಾತ್ರವಲ್ಲ, ಗೆಳತಿ, ಮಾರ್ಗದರ್ಶಕಿ ಹಾಗೂ ವ್ಯಕ್ತಿತ್ವ ರೂಪಕಿ ಆಗಿದ್ದರು. ''ಪಾರ್ವತಿ ನನ್ನ ಪತ್ನಿ ಮಾತ್ರವಲ್ಲ, ನನ್ನ ತಾಯಿ ಎಂದು ಸ್ವತಃ ರಾಜ್ ಕುಮಾರ್ ಅವರೇ ಹಲವು ಬಾರಿ ಹೇಳಿಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದು.[ಆರಿದ 'ದೊಡ್ಮನೆ' ದೀಪ: ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಇನ್ನಿಲ್ಲ]

ಪಾರ್ವತಮ್ಮ ರಾಜ್ ಕುಮಾರ್ ಕೇವಲ ರಾಜ್ ಕುಮಾರ್ ಅವರ ಪತ್ನಿಯಾಗಿ ಮಾತ್ರ ಉಳಿದುಕೊಂಡಿಲ್ಲ. ಕನ್ನಡ ಚಿತ್ರಂಗದ ಸ್ಪೂರ್ತಿಯ ಚಿಲುಮೆಯಾಗಿದ್ದರು. ನೂರಾರು ಕಲಾವಿದರು ಹಾಗೂ ನೂರಾರು ತಂತ್ರಜ್ಞರ ಪಾಲಿನ ತಾಯಿ ಆಗಿದ್ದರು. ಕನ್ನಡ ಚಿತ್ರರಂಗದ ನೂರಾರು ಪ್ರತಿಭೆಗಳಿಗೆ ಗುರು ಎನಿಸಿಕೊಂಡಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಅನೇಕ ವಿಷಯಗಳ ಸಣ್ಣ ಪರಿಚಯವನ್ನ ಮುಂದೆ ನೀಡಲಾಗಿದೆ. ಮುಂದೆ ಓದಿ......

ಪಾರ್ವತಮ್ಮ ಜನನ

ಡಿಸೆಂಬರ್ 06, 1939ರಲ್ಲಿ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಪಾರ್ವತಮ್ಮ ಜನಿಸಿದರು. ಇವರ ತಂದೆ ಅಪ್ಪಾಜಿ ಗೌಡ ಶಾಲಾ ಶಿಕ್ಷಕರಾಗಿದ್ದರು. ಮತ್ತು ತಾಯಿ ಲಕ್ಷ್ಮಮ್ಮ. 8 ಜನ ಮಕ್ಕಳಲ್ಲಿ ಪಾರ್ವತಮ್ಮ ಎರಡನೇಯವರು.[ಇದಕ್ಕೆ ವಿಚಿತ್ರ ಅಂತೀರೋ.. ಕಾಕತಾಳೀಯ ಅಂತೀರೋ.. ನಿಮಗೆ ಬಿಟ್ಟಿದ್ದು.!]

ಪಾರ್ವತಮ್ಮ ಹುಟ್ಟಿದಾಗಲೇ ರಾಜ್ ಪತ್ನಿ ಆಗಿದ್ದರು!

ಸಿಂಗಾನಲ್ಲೂರು ಪುಟ್ಟಸ್ವಾಮಿಯ್ಯ ಹಾಗೂ ಪಾರ್ವತಮ್ಮ ಕುಟುಂಬದವರು ಸಂಬಂಧಿಕರೇ ಆಗಿದ್ದರು. ಪಾರ್ವತಮ್ಮ ಹುಟ್ಟಿದ ಸಮಯದಲ್ಲಿ ಮನೆಗೆ ಬಂದಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಿಯ್ಯನವರು ''ಇವಳೇ ನನ್ನ ಸೊಸೆ'' ಎಂದು ಅಂದೇ ನಿರ್ಧರಿಸಿದ್ದರಂತೆ. ಇನ್ನು ರಾಜ್ ಕುಮಾರ್ ಅವರು ಕೂಡ ಸಂಗೀತ ಕಲಿಯಲು ಪಾರ್ವತಮ್ಮ ಅವರ ಮನೆಗೆ ಹೋಗುತ್ತಿದ್ದರಂತೆ. ಆಗಲೇ ಇಬ್ಬರಲ್ಲಿ ಪರಿಚಯ ಮೂಡಿತ್ತು.[ಪಾರ್ವತಮ್ಮ ಅಗಲಿಕೆ ಸಾಂಸ್ಕೃತಿಕ ಕ್ಷೇತ್ರಕ್ಕೆ ನಷ್ಟ: ಕಣ್ಣೀರಿಟ್ಟ ತಾರೆಯರು]

1953 ಜೂನ್ 25 ವಿವಾಹ

1953 ಜೂನ್ 25 ರಂದು ರಾಜ್ ಕುಮಾರ್ ಅವರೊಂದಿಗೆ ಪಾರ್ವತಮ್ಮ ಅವರು ವಿವಾಹವಾದರು. ಆಗ ಅವರ ವಯಸ್ಸು ಕೇವಲ 14. ರಾಜ್ ಕುಮಾರ್ ಅವರ ವಯಸ್ಸು 24 ವರ್ಷ. ನಂಜನಗೂಡಿನ ರಾಣಪ್ಪ ಛತ್ರದಲ್ಲಿ ಇವರಿಬ್ಬರ ಮದುವೆ ನೆರವೇರಿತ್ತು. ದುರಾದೃಷ್ಟವಶತ್ ರಾಜ್ ಕುಮಾರ್ ಅವರ ತಂದೆ ಈ ಮದುವೆಗೂ ಮುಂಚೆ ವಿಧಿವಶರಾಗಿದ್ದರು.[ಪಾರ್ವತಮ್ಮ ಗುರುತಿಸಿದ ನಟಿಯರಿಂದು 'ದೊಡ್ಡ ಸ್ಟಾರ್ಸ್'ಗಳು]

ರಾಜ್ ಗೆ ಪಾರ್ವತಮ್ಮ ಅದೃಷ್ಟ ದೇವತೆ

ರಾಜ್ ಕುಮಾರ್ ಅವರನ್ನ ಪಾರ್ವತಮ್ಮ ಮದುವೆಯಾದಾಗ ರಾಜ್ ಅವರು ರಂಗಭೂಮಿ ಕಲಾವಿದರಾಗಿದ್ದರು ಅಷ್ಟೇ. ಆದ್ರೆ, ಮದುವೆಯ ನಂತರ ರಾಜ್ ಕುಮಾರ್ ಅವರಿಗೆ ಅದೃಷ್ಟ ಒಲಿಯುತ್ತೆ. ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಗುತ್ತೆ. ಅದು 1954 ರಲ್ಲಿ 'ಬೇಡರ ಕಣ್ಣಪ್ಪ' ಚಿತ್ರ. ಅಲ್ಲಿವರೆಗೂ ಮುತ್ತುರಾಜ್ ಆಗಿದ್ದವರು ರಾಜ್ ಕುಮಾರ್ ಆಗಿ ಬದಲಾದರು.[ಡಾ.ರಾಜ್ ಸಮಾಧಿ ಪಕ್ಕದಲ್ಲಿಯೇ ಪತ್ನಿ ಪಾರ್ವತಮ್ಮ ಅಂತ್ಯಕ್ರಿಯೆ]

ದಿಟ್ಟ ನಿರ್ಮಾಪಕಿ

ಗಾಂಧಿನಗರದಲ್ಲಿ ಸಿನಿಮಾ ಮಾಡಿ ಹಣ ಕಳೆದುಕೊಂಡೆ, ಜೀವನ ಕಳೆದುಕೊಂಡೆ ಎಂದು ಹೇಳುವ ನಿರ್ಮಾಪಕರು ಕಾಣುತ್ತಾರೆ. ಆದ್ರೆ, ಸಿನಿಮಾನೇ ಪ್ರಾಣ, ಸಿನಿಮಾನೇ ಉಸಿರು, ಸಿನಿಮಾದಿಂದಲೇ ಬದುಕು ಎಂದು ಬದುಕುತ್ತಾ, ಸಿನಿಮಾದಿಂದಲೇ ಎಲ್ಲವೂ ಸಿಕ್ಕಿದೆ ಎಂದು ಹೇಳಿಕೊಂಡ ದಿಟ್ಟ ಮಹಿಳೆ ಪಾರ್ವತಮ್ಮ ರಾಜ್ ಕುಮಾರ್. ಅದೇ ರೀತಿ ಯಶಸ್ವಿ ಸಿನಿಮಾಗಳನ್ನ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದ ದಿಟ್ಟೆ ನಿರ್ಮಾಪಕಿ ಎನಿಸಿಕೊಂಡಿದ್ದರು.[ಪತಿಯ ಹಾದಿಯಲ್ಲಿ ಪತ್ನಿ: ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಲಿರುವ 'ದೊಡ್ಮನೆ' ಅಮ್ಮ]

ಪಾರ್ವತಮ್ಮ ಇಂಡಸ್ಟ್ರಿಗೆ ಬರಲು ಬಲವಾದ ಕಾರಣ!

ಅದೊಂದು ಕಾಲ. ರಾಜ್ ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ರೆ, ನಿರ್ಮಾಪಕರಿಗೆ ನಷ್ಟವಾಗುತ್ತೆ ಎಂಬ ಮಾತು ಕೇಳಿ ಬಂತು. ಇದರಿಂದ ರಾಜ್ ಕುಮಾರ್ ಅವರು ಬೇಸರಗೊಂಡು, ನಮಗೆ ಸಿನಿಮಾ ಬೇಡ, ಊರಿಗೆ ಹೋಗಿ ಕೃಷಿ ಮಾಡಿ ಬದುಕೋಣ ಎಂದು ನಿರ್ಧರಿಸಿದ್ದರಂತೆ. ಇಂತಹ ಸಮಯದಲ್ಲಿ ರಾಜ್ ಕುಮಾರ್ ಅವರಿಗೆ ಸಮಾಧಾನ ಪಡಿಸಿದ ಪಾರ್ವತಮ್ಮ ಅವರು ದಿಟ್ಟ ನಿರ್ಧಾರವನ್ನ ತೆಗೆದುಕೊಂಡರು. ಅದರ ಪರಿಣಾಮವೇ ಮೂಡಿ ಬಂದಿದ್ದು 'ತ್ರಿಮೂರ್ತಿ' ಚಿತ್ರ.[ಪಾರ್ವತಮ್ಮ ರಾಜ್ ಕುಮಾರ್ ಅಗಲಿಕೆಗೆ ಕಂಬನಿ ಮಿಡಿದ ತಾರೆಯರು]

'ತ್ರಿಮೂರ್ತಿ' ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ

ಆರಂಭದಲ್ಲಿ ನಿರ್ದೇಶಕರಿಗೆ, ನಿರ್ಮಾಪಕರಿಗೆ ಕಥೆಗಳನ್ನ ಸೂಚಿಸುತ್ತಿದ್ದ ಪಾರ್ವತಮ್ಮ ರಾಜ್ ಕುಮಾರ್, 'ತ್ರಿಮೂರ್ತಿ' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ನಿರ್ಮಾಪಕರಾದರು. ಪೂರ್ಣಿಮಾ ಎಂಟರ್ ಪ್ರೈಸಸ್ ಸಂಸ್ಥೆಯನ್ನ ಹುಟ್ಟುಹಾಕಿದರು. ರಾಜ್ ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ರೆ, ನಷ್ಟವಾಗುತ್ತೆ ಎಂದು ಹೇಳಿದ್ದವರಿಗೆ 'ತ್ರಿಮೂರ್ತಿ' ಸಿನಿಮಾ ಮಾಡಿ ದಿಟ್ಟೆದೆಯಿಂದ ಉತ್ತರ ಕೊಟ್ಟರು.[ಪಾರ್ವತಮ್ಮ ರಾಜ್ ಕುಮಾರ್ ನಿಧನ: ಸದಾಶಿವನಗರದ ನಿವಾಸದಲ್ಲಿ ಅಂತಿಮ ದರ್ಶನ]

ಸೋಲಿಲ್ಲದ ಮಹಿಳೆ ಪಾರ್ವತಮ್ಮ

'ತ್ರಿಮೂರ್ತಿ' ಚಿತ್ರದಿಂದ ಶುರುವಾದ ಪಾರ್ವತಮ್ಮ ಅವರ ಸಿನಿಪಯಣ 'ಗಿರಿಕನ್ಯೆ', 'ಶಂಕರ್ ಗುರು', 'ತಾಯಿಗೆ ತಕ್ಕ ಮಗ', 'ವಸಂತ ಗೀತೆ', 'ಭಾಗ್ಯವಂತ', 'ಕವಿರತ್ನ ಕಾಳಿದಾಸ', 'ಹೊಸ ಬೆಳಕು', 'ಹಾಲು ಜೇನು', 'ಚಲಿಸುವ ಮೋಡಗಳು', 'ಅಪೂರ್ವ ಸಂಗಮ', 'ಒಂದು ಮುತ್ತಿನ ಕಥೆ', 'ಶ್ರುತಿ ಸೇರಿದಾಗ', 'ಆನಂದ್', 'ಅಪ್ಪು', 'ನಂಜುಂಡಿ ಕಲ್ಯಾಣ' ಹೀಗೆ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನ ನಿರ್ಮಾಣ ಮಾಡಿದರು. ಸುಮಾರು 80ಕ್ಕು ಅಧಿಕ ಚಿತ್ರಗಳನ್ನ ನಿರ್ಮಾಣ ಮಾಡಿರುವ ಪಾರ್ವತಮ್ಮ ಇಂದಿಗೂ ಸೋಲಿಲ್ಲದ ನಿರ್ಮಾಪಕಿ ಆಗಿ ಉಳಿದಿದ್ದಾರೆ.[ಪಾರ್ವತಮ್ಮ ರಾಜ್ ಕುಮಾರ್ ನಿಧನ ಹಿನ್ನಲೆಯಲ್ಲಿ ಇಂದು ಚಿತ್ರೋದ್ಯಮ ಬಂದ್]

ಮೂರು ರತ್ನಗಳನ್ನ ಕನ್ನಡಕ್ಕೆ ಕೊಟ್ಟ ಪಾರ್ವತಮ್ಮ

ಪಾರ್ವತಮ್ಮ ಅವರು ಕೇವಲ ರಾಜ್ ಕುಮಾರ್ ಅವರಿಗೆ ಮಾತ್ರ ಶಕ್ತಿ ಆಗಿರಲಿಲ್ಲ. ತಮ್ಮ ಮೂವರು ಮಕ್ಕಳಿಗೂ ಕೂಡ ಪಾರ್ವತಮ್ಮ ಯಶಸ್ಸಿನ ಮೆಟ್ಟಿಲು ಆಗಿದ್ದರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಎಂಬ ಮೂರು ರತ್ನಗಳನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.[ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ: ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ]

ವಿತರಣೆಯಲ್ಲಿ ಬದಲಾವಣೆ ತಂದ ನಿರ್ಮಾಪಕಿ

ಕನ್ನಡ ಚಿತ್ರರಂಗದ ಮಾರುಕಟ್ಟೆಗೆ ಬದಲಾವಣೆ ಮಾಡಿದ್ದು ವಜ್ರೇಶ್ವರಿ ಕಂಬೈನ್ಸ್. ಮುಂಬೈ ಕರ್ನಾಟಕ, ಮೈಸೂರು ಕರ್ನಾಟಕ, ಹೈದರಬಾದ್ ಕರ್ನಾಟಕ ಹೀಗೆ ಕನ್ನಡ ಸಿನಿಮಾಗಳಿಗೆ ಪ್ರಾಂತೀಯ ಆಧಾರದಲ್ಲಿ ವಿತರಣೆ ಮೌಲ್ಯವನ್ನ ತಂದುಕೊಟ್ಟ ಹೆಗ್ಗಳಿಕೆ ವಜ್ರೇಶ್ವರಿ ಕಂಬೈನ್ಸ್ ಗೆ ಸಲ್ಲುತ್ತೆ.

ಪಾರ್ವತಮ್ಮ ಕೃಪಾಕಟಾಕ್ಷದಿಂದ ಬಂದ ನಟಿಯರು

ಪಾರ್ವತಮ್ಮ ಅವರ ಆಶೀರ್ವಾದದಿಂದ ಅನೇಕ ಪ್ರತಿಭೆಗಳು ಇಂಡಸ್ಟ್ರಿಗೆ ಪರಿಚಯವಾಗಿದ್ದಾರೆ. ಸುಧಾರಾಣಿ, ಸರಳ, ವೀಣಾ, ವಿದ್ಯಾಶ್ರೀ, ಮಾಲಾಶ್ರೀ, ಮೋಹಿನಿ, ಮಮತಾಶ್ರೀ, ಪ್ರೇಮಾ, ಶಿಲ್ಪಾ, ಅನು ಪ್ರಭಾಕರ್, ರಕ್ಷಿತಾ, ರಮ್ಯಾ ಹೀಗೆ ಇನ್ನು ಹಲವು ನಟಿಯರನ್ನ ಚಿತ್ರಜಗತ್ತಿಗೆ ಪರಿಚಯಿಸಿದ್ದೇ ಪಾರ್ವತಮ್ಮ ರಾಜ್ ಕುಮಾರ್.

ದೊಡ್ಮನೆಯ ಸಾರಥಿ

ರಾಜ್ ಕುಮಾರ್ ಅವರ ಕುಟುಂಬದಲ್ಲಿ ಸುಮಾರು 40 ಜನ ಇದ್ದರು. ಇನ್ನು ಮನೆಗೆ ಯಾರೇ ಬಂದರು ಅವರನ್ನ ನಗುನಗುತ್ತಾ, ಅವರ ಕಷ್ಟಗಳನ್ನ ಬಗೆಹರಿಸುತ್ತಿದ್ದರು ಪಾರ್ವತಮ್ಮ. ರಾಜ್ ಕುಮಾರ್ ಅವರ ಸಿನಿಮಾ ಅಂತ ಬ್ಯುಸಿಯಾಗಿದ್ದರು. ಈ ವೇಳೆ ಮನೆ, ಮಕ್ಕಳು ಹೀಗೆ ಎಲ್ಲವನ್ನೂ ನಿಭಾಯಿಸಿದ್ದು ಪಾರ್ವತಮ್ಮ ಅವರು. ಒಂದೇ ಮಾತಿನಲ್ಲಿ ಹೇಳಬೇಕಂದ್ರೆ ದೊಡ್ಮನೆಗೆ ಇವರು ಸಾರಥಿ ಆಗಿದ್ದರು.

ಪಾರ್ವತಮ್ಮ ಸಾಧನೆಗೆ ಗೌರವ ಡಾಕ್ಟರೇಟ್

ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮ ಅವರ ಸುದೀರ್ಘ ಸಾಧನೆಯನ್ನ ಗುರುತಿಸಿ, ಪಾರ್ವತಮ್ಮ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕಾಗಿ ದುಡಿದಿರುವ ಪಾರ್ವತಮ್ಮ ಕೇವಲ ರಾಜ್ ಕುಮಾರ್ ಕುಟುಂಬಕ್ಕೆ ಮಾತ್ರ ಅಮ್ಮನಾಗಿರಲಿಲ್ಲ, ಇಡೀ ಇಂಡಸ್ಟ್ರಿಗೆ ಅಮ್ಮ ಆಗಿದ್ದರು. ಆದ್ರೆ, ಇಂದು (ಮೇ 31) ಎಲ್ಲರನ್ನ ಅಗಲಿ ಅಣ್ಣಾವ್ರನ್ನ ಸೇರಿಕೊಂಡಿದ್ದಾರೆ.

English summary
Wife of Legendary Kannada Film Actor Dr. Rajkumar, Parvathamma Rajkumar, who has Passed away at the age of 77, Was from Saligrama of Mysuru. Here is a Small Story on her Journey as a Common Woman from Saligrama to a Mother of Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada