»   » ರವಿಚಂದ್ರನ್‌- ಹಂಸಲೇಖ ಬಿಗಿಯಪ್ಪುಗೆ : ಕಳಚಿದ ಕೊಂಡಿಯ ಬೆಸುಗೆ?

ರವಿಚಂದ್ರನ್‌- ಹಂಸಲೇಖ ಬಿಗಿಯಪ್ಪುಗೆ : ಕಳಚಿದ ಕೊಂಡಿಯ ಬೆಸುಗೆ?

Posted By: Super
Subscribe to Filmibeat Kannada

ವರ್ಷಗಳು ಉರುಳಿವೆ; ಸಿನಿಮಾ ಕ್ಷೇತ್ರದಲ್ಲಿ ಹಂಸಲೇಖ ಹಾಗೂ ರವಿಚಂದ್ರನ್‌ ಕೊಂಡಿ ಕಳಚಿ. ನಂತರ ರವಿ ಹಾಗೂ ಹಂಸ್‌ ಆತ್ಮೀಯ ಸಂವಾದ ನಡೆದದ್ದೇ ಇಲ್ಲ ಅನ್ನುವವರುಂಟು. ಆದರೆ ಕಳೆದ ವಾರ ರವಿ ಹಾಗೂ ಹಂಸ್‌ ಸಿಕ್ಕಾಪಟ್ಟೆ ಮಾತಾಡಿದ್ದಾರೆ, ಕೈಕುಲುಕಿದ್ದಾರೆ, ತಬ್ಬಿಕೊಂಡು ಕಣ್ಣಾಲಿಯಲ್ಲಿ ನೀರು ತುಂಬಿಕೊಂಡಿದ್ದಾರೆ. ಅಂದರೆ....

ಹಂಸಲೇಖ ಹಾಗೂ ರವಿಚಂದ್ರನ್‌ ಮತ್ತೆ ಒಂದಾದರೆ?

ಹಾಗಂತ ಇಬ್ಬರೂ ಹೇಳಿಕೊಳ್ಳುತ್ತಿಲ್ಲ. ವೃತ್ತಿಯಲ್ಲಿ ಭಿನ್ನಾಭಿಪ್ರಾಯ ಇಷ್ಟೆಲ್ಲಕ್ಕೂ ಕಾರಣವಾಯಿತು. ನನ್ನ ಮಾತನ್ನು ರವಿ ಆಗ ಕೇಳಲಿಲ್ಲ. ಆತನೊಳಗಿನ ಛಲಗಾರನನ್ನು ನಾನು ಮೆಚ್ಚುತ್ತೇನೆ. ಏಕಾಂಗಿ ರೀಶೂಟ್‌ನ ವೇಳೆ ಸಾಕಷ್ಟು ಫೋನು ಮಾಡಿ, ಕಷ್ಟ ಹೇಳಿಕೊಂಡಿದ್ದಾನೆ. ಆತ ಒಳ್ಳೆ ತಂತ್ರಜ್ಞ. ಏಕಾಂಗಿ ಸಿನಿಮಾಗೆ ಡ್ರಾಬ್ಯಾಕ್‌ ಆದ ಕ್ಲೈಮಾಕ್ಸ್‌ನ ದೊಡ್ಡ ಹಾಡಿನ ಪಲ್ಲವಿ ನನಗೆ ಹಿಡಿಸಿದೆ....

ರಾಕ್‌ಲೈನ್‌ ನಿರ್ಮಿಸಿ, ನಾಯಕರಾಗಿರುವ ಡಕೋಟಾ ಎಕ್ಸ್‌ಪ್ರೆಸ್‌ ಚಿತ್ರದ ಕೆಸೆಟ್‌ ಬಿಡುಗಡೆ ಸಮಾರಂಭದಲ್ಲಿ ಹಂಸ್‌ ಆಡಿದ ಮಾತಿದು. ನಂತರ ಠಪೋರಿ ಕೆಸೆಟ್‌ ಬಿಡುಗಡೆ ಸಮಾರಂಭಕ್ಕೆ ಬಂದ ಏಕೈಕ ಅತಿಥಿ ರವಿ. ಮಗನ ಸಿನಿಮಾದ ಮೊದಲ ಸಮಾರಂಭದಲ್ಲಿ ಹಂಸ್‌ ಜೀವನ್ಮುಖಿಯಾಗಿ ಓಡಾಡುತ್ತಿದ್ದರು. ಕೆಸೆಟ್‌ ಬಿಡುಗಡೆ ಮಾಡಿದ್ದು ಅನಾಥ ಮಕ್ಕಳು! ಆದರೆ, ಆ ಅನನ್ಯ ಕಾರ್ಯಕ್ರಮದಲ್ಲಿ ಹೈಲೈಟ್‌ ಆಗಿದ್ದು ಹಂಸ್‌ ಹಾಗೂ ರವಿ ಬಿಸಿಯಪ್ಪುಗೆ!

ಸಂಗೀತ ಸಂಯೋಜಕನ ಸೀಟ್‌ನಲ್ಲಿ ಈಗ ಖುದ್ದು ರವಿ ಕೂತಿದ್ದಾರೆ. ಏಕಾಂಗಿ ಸೇರಿದಂತೆ ರವಿ ಹಾಕಿದ ಟ್ಯೂನುಗಳು ಫ್ಲಾಪ್‌. ಹಂಸಲೇಖ ಕಿರುತೆರೆ ಧಾರಾವಾಹಿ ಹಾಗೂ ಮಗ ಅಲಂಕಾರನ ಠಪೋರಿಗೆ ತಲೆ ಕೆಡಿಸಿಕೊಂಡು, ನಡುನಡುವೆ ಸಿನಿಮಾಗಳಿಗೆ ರಾಗಗಳನ್ನು ಹೊಸೆದರು. ಸಂಗೀತವೇ ಪ್ರಧಾನವಾಗಿದ್ದ ಪರ್ವ ಸಂಗೀತದ ಸಮೇತ ಬಕ್ಕಾ ಬೋರಲಾಯಿತು. ಅಂದಹಾಗೆ, ಈ ಸಿನಿಮಾದ ಟ್ಯೂನ್‌ಗಳು ಹಂಸಲೇಖಾರದ್ದು.

ರವಿ ಹಾಗೂ ಹಂಸಲೇಖಾ ಕೊಂಡಿ ಕಳಚಿಕೊಂಡ ನಂತರ ಇಬ್ಬರಿಗೂ ಅದೃಷ್ಟ ಬೆನ್ನು ತೋರಿದೆ. ಹೊಸ ಹಿಟ್‌ ಎಂಬುದು ಇಬ್ಬರ ಲಿಸ್ಟಿಗೂ ಸೇರುತ್ತಿಲ್ಲ. ಹಳೆಯ ವೈಮನಸ್ಸನ್ನು ಮರೆತು, ಕನಸುಗಾರ ಮತ್ತು ಹಾಡುಗಾರ ಮತ್ತೆ ಒಂದಾಗುವುದೇ ಒಳ್ಳೆಯದು ಎಂಬುದು ಅಭಿಮಾನಿಗಳ ಬಯಕೆ. ಹಂಸ್‌- ರವಿ ಬಿಸಿಯಪ್ಪುಗೆ ಮತ್ತೆ ಕೊಂಡಿ ಬೆಸೆಯಲು ಸೋಪಾನವಾಗಲಿ. ಏನಂತೀರಿ?

English summary
Hamsalekha and Ravichandran hugs !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada