»   » ಅದಕೇ ಅವರಿಗೆ ಫಾಲ್ಕೆ ಸಮ್ಮಾನ

ಅದಕೇ ಅವರಿಗೆ ಫಾಲ್ಕೆ ಸಮ್ಮಾನ

Posted By: Staff
Subscribe to Filmibeat Kannada

ಇಪ್ಪತ್ತಕ್ಕೂ ಹೆಚ್ಚು ಯಶಸ್ವಿ ಬಾಲಿವುಡ್‌ ಚಿತ್ರಗಳ ನಿರ್ಮಾಪಕ ಕಂ ನಿರ್ದೇಶಕ ಯಶ್‌ ಚೋಪ್ರಾ 2001ನೇ ಇಸವಿಯ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಎಪ್ಪತ್ತು ವಯಸ್ಸಿನ ಯಶ್‌ ಚೋಪ್ರಾ ಹೆಸರಿಗೇ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಮಾತು ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿದೆ. ಪ್ರೇಮ, ಪ್ರಣಯದ ತಿರುಳಿನ ಇವರ ಚಿತ್ರಗಳು ತಮ್ಮದೇ ಆದ ಅನನ್ಯತೆಯನ್ನು ಬಿಂಬಿಸಿವೆ. ಧೂಲ್‌ ಕ ಫೂಲ್‌, ವಕ್ತ್‌, ಇತ್ತೆಫಾಕ್‌, ದೀವಾರ್‌, ಕಭಿ ಕಭಿ, ತ್ರಿಶೂಲ್‌, ಸಿಲ್‌ಸಿಲ, ಚಾಂದನಿ, ಲಮ್ಹೆ ಹಾಗೂ ದಿಲ್‌ ತೋ ಪಾಗಲ್‌ ಹೈ ಚಿತ್ರಗಳು ಹಾಗೂ ಅವುಗಳ ಹಾಡುಗಳ ಅಭಿಮಾನಿಗಳು ಇವತ್ತಿಗೂ ಅಸಂಖ್ಯ. ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಚೋಪ್ರಾ ಚಿತ್ರಗಳು ಬುಟ್ಟಿಗೆ ಹಾಕಿಕೊಂಡಿವೆ.

ಯಶ್‌ ಚೋಪ್ರಾ : ಛೋಟಾ ಟಿಪ್ಪಣಿ

1932ರಲ್ಲಿ ಪಂಜಾಬ್‌ನ ಜಲಂಧರ್‌ನಲ್ಲಿ ಹುಟ್ಟಿದ ಯಶ್‌ ಚೋಪ್ರಾ ತಮ್ಮ ಸೋದರನ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಶುರುಮಾಡಿದರು. ಒಳ್ಳೆಯ ಕುಳವಾದ್ದರಿಂದ ತಮ್ಮದೇ ಬ್ಯಾನರಿ (ಯಶ್‌ ರಾಜ್‌ ಫಿಲಂಸ್‌) ನಲ್ಲಿ ಚಿತ್ರ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಕೈಹಾಕಲು ತುಂಬಾ ಕಾಲ ಬೇಕಾಗಲಿಲ್ಲ. ಒಳ್ಳೆಯ ಸ್ಟಾರ್‌ ಕಾಸ್ಟ್‌, ತೆಳುವಾದರೂ ನವಿರಾದ ಪ್ರೇಮ ಕಥಾನಕ, ಗುನುಗುನಿಸುವ ಸಂಗೀತ- ಇದು ಚೋಪ್ರಾ ಚಿತ್ರಗಳ ಛಾಪು. ಗಂಭೀರ ನೋಟವಾದರೂ ಮಾತಿನಲ್ಲಿ ಹಾಸ್ಯ ಹಾಸುಹೊಕ್ಕು. ಎಪ್ಪತ್ತರಲ್ಲೂ ಉಕ್ಕುವ ಹರೆಯ. ಸದ್ಯಕ್ಕೆ ಫೆಡರೇಶನ್‌ ಆಫ್‌ ಇಂಡಿಯನ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರಿಯ ಮನರಂಜನಾ ಸಮಿತಿಯ ಅಧ್ಯಕ್ಷರಾಗಿ ಚೋಪ್ರಾ ಕೆಲಸ ಮಾಡುತ್ತಿದ್ದಾರೆ. ಮಗ ಆದಿತ್ಯ ಚೋಪ್ರಾ ಕೂಡ ಚಿತ್ರ ನಿರ್ದೇಶಕನಾಗಿ ಯಶಸ್ವಿಯಾಗಿದ್ದು, ಅಪ್ಪನ ಉತ್ತರಾಧಿಕಾರಿ ಎಂಬುದನ್ನು ಸಾಬೀತು ಮಾಡಿದ್ದಾರೆ.

ಯಶ್‌ ಚೋಪ್ರಾ ಫಸ್ಟ್‌ ರಿಯಾಕ್ಷನ್‌

'ಐವತ್ತೊಂದು ವರ್ಷಗಳ ಕಾಲ ಸಿನಿಮಾ ಲೋಕದಲ್ಲಿ ಪಯಣಿಸಿದೆ. ಸಿನಿಮಾವನ್ನೇ ಉಸಿರಾಡಿದೆ. ಹಣ ಹಾಕಿದ್ದೂ ಇಲ್ಲೇ, ತೆಗೆದದ್ದೂ ಇಲ್ಲೇ. ಏನಾದರೂ ಸಾಧನೆ ಮಾಡಿದ್ದೇನೆ ಅಂತ ಯಾರಾದರೂ ಗುರುತಿಸಿದರೆ, ಅದೂ ಇಲ್ಲೇ. ಪ್ರಾಮಾಣಿಕವಾಗಿ ನನ್ನ ಕೆಲಸ ಮಾಡಿದ್ದೇನೆ. ಅದಕ್ಕಾಗಿ ನನಗೆ ಈ ಪರಿಯ ಸಮ್ಮಾನ ಸಲ್ಲುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಾನು ಯಾರ್ಯಾರ ಸಿನಿಮಾಗಳನ್ನು ಮೆಚ್ಚಿ, ಬಾಯಿಬಿಟ್ಟುಕೊಂಡು ನೋಡುತ್ತಿದ್ದೆನೋ ಅಂಥ ದಿಗ್ಗಜರ ಸಾಲಿನಲ್ಲಿ ನನ್ನ ಹೆಸರನ್ನು ನೋಡೋಕೆ ಸಂತೋಷವಾಗುತ್ತೆ. ಕೊನೆಯುಸಿರಿರುವರೆಗೆ ಸಿನಿಮಾ ಮಾಡುತ್ತೇನೆ. ಮಾನವ ಸಂಬಂಧಗಳನ್ನೇ ಅಲ್ಲಿ ತೋರಿಸುತ್ತೇನೆ. ಯಾಕೆಂದರೆ, ಫ್ಯಾಷನ್ನು ಪರಿಧಿ ದಾಟಬಹುದು. ಆದರೆ, ಮಾನವ ಸಂಬಂಧಗಳು ನಮ್ಮಲ್ಲಿ ಪರಿಧಿಯಾಳಗಿದ್ದೇ ಖುಷಿ ಕೊಡುತ್ತವೆ ಅಂತ ನಾನು ನಂಬಿದ್ದೇನೆ !"  ಅಂದಹಾಗೆ, ಫಾಲ್ಕೆ ಪ್ರಶಸ್ತಿಯು 2 ಲಕ್ಷ ರುಪಾಯಿ ನಗದು, ಶಾಲು ಹಾಗೂ ಸ್ವರ್ಣ ಕಮಲವನ್ನು ಒಳಗೊಂಡಿದೆ.

English summary
Yash Chopra gets Dada Saheb Phalke award

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada