»   » ದೇವರ ಕೃಪೆಯಿದ್ದರೆ ಮತ್ತೆ ಸಿನಿಮಾಕ್ಕೆ, ರಾಜಕೀಯಕ್ಕಲ್ಲ - ಡಾ.ರಾಜ್‌

ದೇವರ ಕೃಪೆಯಿದ್ದರೆ ಮತ್ತೆ ಸಿನಿಮಾಕ್ಕೆ, ರಾಜಕೀಯಕ್ಕಲ್ಲ - ಡಾ.ರಾಜ್‌

Posted By: Staff
Subscribe to Filmibeat Kannada

ದೇವರ ಕೃಪೆಯಿದ್ದರೆ ಮತ್ತೆ ಬಣ್ಣ ಹಚ್ಚುವುದಾಗಿ 74ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಕಟಿಸಿರುವ ವರನಟ ಡಾ.ರಾಜ್‌, ತಾವು ರಾಜಕೀಯ ಕ್ಷೇತ್ರವನ್ನು ಯಾವುದೇ ಕಾರಣಕ್ಕೆ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿನಿಮಾ ನನ್ನ ಕ್ಷೇತ್ರ, ರಾಜಕೀಯ ನನ್ನ ಕ್ಷೇತ್ರವಲ್ಲ ಎಂದು ಹುಟ್ಟುಹಬ್ಬದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್‌ ತಿಳಿಸಿದರು. ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದ ಕಾರಣ ರಾಜ್‌ ರಾಜಕೀಯ ಪ್ರವೇಶಿಸಲಿಲ್ಲ ಎಂದು ಹಂಪಿ ವಿಶ್ವ ವಿದ್ಯಾಲಯದ ಕನ್ನಡ ಚಲನಚಿತ್ರ ಇತಿಹಾಸ ಕೃತಿಯಲ್ಲಿ ಪ್ರಕಟಿಸಿರುವ ವಿವಾದದ ಬೆನ್ನಲ್ಲೇ ರಾಜಕಾರಣದ ಬಗ್ಗೆ ರಾಜ್‌ ಈ ಸ್ಪಷ್ಟನೆ ನೀಡಿದ್ದಾರೆ.

ಅಭಿಮಾನಿಗಳೇ ನನ್ನ ದೇವರು ಎಂದು ಪುನರುಚ್ಚರಿಸಿದ ವರನಟ, ಭಗವಂತನ ಅನುಗ್ರಹವಿದ್ದಲ್ಲಿ ತಾವು ಮತ್ತೆ ಸಿನಿಮಾದಲ್ಲಿ ಅಭಿನಯಿಸುವುದಾಗಿ ಹೇಳಿದರು. ಇದಕ್ಕೂ ಮುನ್ನ ಅಸಂಖ್ಯ ಅಭಿಮಾನಿಗಳು, ಚಿತ್ರೋದ್ಯಮದ ಪ್ರಮುಖರು, ರಾಜಕಾರಣಿಗಳು, ಕಲಾವಿದರು, ವಿವಿಧ ಕ್ಷೇತ್ರಗಳ ಮುಖಂಡರು ರಾಜ್‌ ಅವರ ನಿವಾಸಕ್ಕೆ ಆಗಮಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

ರಾಜ್‌ ಹುಟ್ಟುಹಬ್ಬಕ್ಕೆ ಶುಭಕೋರಿದವರಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ , ಅವರ ಪತ್ನಿ ಪ್ರೇಮಾ, ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ, ರಾಜ್‌ ಅಭಿಮಾನಿಗಳ ಸಂಘದ ಅಧ್ಯಕ, ಸಾ.ರಾ.ಗೋವಿಂದು, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ , ನಿರ್ದೇಶಕ ಎಸ್‌.ಕೆ.ಭಗವಾನ್‌, ಚಿತ್ರೋದ್ಯಮಿ ಸಿ.ವಿ.ಎಲ್‌.ಶಾಸ್ತ್ರಿ ಪ್ರಮುಖರು. ಈ ಸಂದರ್ಭದಲ್ಲಿ ಪಾರ್ವತಮ್ಮ ರಾಜ್‌, ಪುನೀತ್‌, ಶಿವರಾಜ್‌, ರಾಘವೇಂದ್ರ ಹಾಗೂ ರಾಮ್‌ಕುಮಾರ್‌ ಹಾಜರಿದ್ದರು.

ಮುಂದಿನ ಚಿತ್ರ ಭಕ್ತ ಅಂಬರೀಷ
ರಾಜ್‌ ಅವರ ಮುಂದಿನ ಚಿತ್ರ ಭಕ್ತ ಅಂಬರೀಷ ಎಂದು ರಾಜ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ಶಿವರಾಜ್‌ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು. ಅಂಬರೀಷ ಸೆಟ್ಟೇರುವುದು ಯಾವಾಗ ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡದೆ ನುಣುಚಿಕೊಂಡರು.

ಅಭಿಮಾನಿಗಳಿಂದ ಬೆಳ್ಳಿ ಕಿರೀಟ
ಸದಾಶಿವನಗರದ ಪೂರ್ಣಪ್ರಜ್ಞ ಮೈದಾನದಲ್ಲಿ 74 ಕಿಲೋ ತೂಕದ ಕೇಕ್‌ ಕತ್ತರಿಸುವ ಮೂಲಕ ರಾಜ್‌ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಬುಧವಾರ ಬೆಳಗ್ಗೆ ಆಚರಿಸಿಕೊಂಡರು. ಅಭಿಮಾನಿಗಳ ಅಭಿಮಾನದ ಪ್ರತೀಕವಾದ ಬೆಳ್ಳಿ ಕಿರೀಟವನ್ನು ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ರಾಜ್‌ಗೆ ತೊಡಿಸಿ, ನೂರ್ಕಾಲ ಬಾಳುವಂತೆ ಆಶೀರ್ವದಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ರಾಜ್‌ ಅಭಿಮಾನಿಗಳ ಹರ್ಷೋದ್ಘಾರ ಮೈದಾನದ ತುಂಬ ಮೊರೆಯುತ್ತಿತ್ತು . ಅಖಿಲ ಕರ್ನಾಟಕ ಶಿವರಾಜ್‌ಕುಮಾರ್‌ ಸೇನಾ ಸಮಿತಿ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ಪಾರ್ವತಮ್ಮ ರಾಜ್‌ಕುಮಾರ್‌ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಭಿಮಾನಿಗಳ ಒತ್ತಾಯದ ಮೇರೆಗೆ ರಾಜ್‌ 'ಮಾರುತಿ.. ನಿನ್ನಂತೆ ಸೇವಕನ ಮಾಡು" ಎನ್ನುವ ಹಾಡು ಹಾಡಿದರು.

ಜಯಂತ್‌ಗೆ ನೆರವು, ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರ
ರಾಜ್‌ ಹುಟ್ಟುಹಬ್ಬದ ಸಮಾರಂಭದಲ್ಲಿ ಬಡ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸುಮಂಗಲಿ ಸೇವಾಶ್ರಮಕ್ಕೆ ಧನ ಸಹಾಯ ನೀಡಲಾಯಿತು. ವಿದ್ಯುತ್‌ ಆಘಾತದಲ್ಲಿ ಎರಡೂ ಕೈ ಕಳೆದುಕೊಂಡ ಬಾಲಕ ಜಯಂತನನ್ನು ವೇದಿಕೆಗೆ ಕರೆದು, ತಲೆ ಸವರಿ ಸಮಾಧಾನ ಹೇಳಿದ ರಾಜ್‌, ಆ ಬಾಲಕನಿಗೆ ಧನ ಸಹಾಯ ಮಾಡಿದ ದೃಶ್ಯ ಭಾವುಕವಾಗಿತ್ತು .

ಜೈ ಕರ್ನಾಟಕ ಎನ್ನುವುದು ನಮ್ಮೆಲ್ಲರ ಮಂತ್ರವಾಗಬೇಕು ಎಂದ ರಾಜ್‌, ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಅಭಿಮಾನಿಗಳಿಗೆ ಕರೆ ನೀಡಿದರು.
ವಾರ್ತಾ ಸಂಚಯ

English summary
I wont enter into politics, will remain as an actor : Dr.Rajkumar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada