»   » ಕನ್ನಡ ಚಿತ್ರ ಹೇಗಿತ್ತು ? ಹೇಗಾಯ್ತು?

ಕನ್ನಡ ಚಿತ್ರ ಹೇಗಿತ್ತು ? ಹೇಗಾಯ್ತು?

Posted By: Super
Subscribe to Filmibeat Kannada

ಕನ್ನಡ ಚಿತ್ರಗಳು ಅಂದು ಇಂದು ಮುಂದೆ ಎಂಬ ಶೀರ್ಷಿಕೆಯಲ್ಲಿ ಚರ್ಚೆಗೆ ಬಂದರೆ, ಹಿಂದಿನದನ್ನು ಹೊಗಳುವವರ ಸಂಖ್ಯೆ ಖಂಡಿತಾ ಕಡಿಮೆ ಇರಲಾರದು. ಅಂತೆಯೇ ಈಗಿನ ಚಿತ್ರಗಳನ್ನು, ಆ ಚಿತ್ರಗಳಲ್ಲಿ ಬಳಕೆಯಾಗುತ್ತಿರುವ ದ್ವಂದ್ವಾರ್ಥ ಸಂಭಾಷಣೆ, ಅಶ್ಲೀಲ ದೃಶ್ಯ, ಕೆಟ್ಟ ಅಭಿರುಚಿಯನ್ನು ಮನಸ್ಸು ತೃಪ್ತಿಯಾಗುವವರೆಗೆ ಬೈಯುವವರ ಸಂಖ್ಯೆಯೂ ಹೇರಳವಾಗಿಯೇ ಇರುವುದು. ಮುಂದೆ ಕನ್ನಡ ಚಿತ್ರಗಳು ಹೇಗಿರಬೇಕು ಎಂಬ ಬಗ್ಗೆ ಉಪನ್ಯಾಸ ನೀಡುವವರ ಸಂಖ್ಯೆಯೂ ನಗಣ್ಯವಾಗಲೂ ಬಹುದು.

ಇಂದಿನ ಚಿತ್ರ, ಚಿತ್ರ ಸಾಹಿತ್ಯ, ಗೀತ ಸಾಹಿತ್ಯ ಎತ್ತ ಸಾಗಿದೆ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ ಬಹು ಕಷ್ಟ. ಕನ್ನಡದ ಚಾನೆಲ್‌ಗಳು ಬಂದ ಮೇಲಂತೂ ಕನ್ನಡ ಚಿತ್ರಗಳನ್ನು ಉಚಿತವಾಗಿ ನೋಡುವ ಅವಕಾಶವಿದ್ದಾಗ್ಯೂ ಕೂಡ

ಧಾರಾವಾಹಿಗಳು ಜನಪ್ರಿಯವಾಗುತ್ತಿರುವುದನ್ನು ನೋಡಿದರೆ, ಜನ ಕನ್ನಡ ಚಿತ್ರ ಸುಮ್ಮನೆ ತೋರಿಸಿದರೂ ನೋಡುವ ಮನಸ್ಸಿಲ್ಲದವರಾಗಿದ್ದಾರೆ ಎಂಬುದು ವೇದ್ಯವಾಗುತ್ತದೆ.

ಹಿಂದಿನ ಚಿತ್ರಗಳಲ್ಲಿ ಇದ್ದ ಆ ಸುಂದರ ಗೀತ ಸಾಹಿತ್ಯ. ಮಧುರ ಮಧುರವೀ ಮಂಜುಳ ಗಾನ, ಆಡಿಸಿ ನೋಡು ಬೀಳಿಸಿ ನೋಡು .., ಜಲಲ ಜಲಲ ಜಲ ಧಾರೆಯಂತಹ ಗೀತೆಗಳು , ಆ ಮಾಧುರ್ಯ ಮತ್ತೆ ಕನ್ನಡ ಮನಸ್ಸುಗಳನ್ನು ಚಿತ್ರಮಂದಿರಗಳತ್ತ ಎಳೆದು ತರಬಲ್ಲವುಗಳಾಗಿವೆ. ಆ ಚಿತ್ರಗಳು ಸ್ಮೃತಿ ಪಟಲದಿಂದ ಮಾಸಿಹೋಗಲು ಸಾಧ್ಯವೇ ಇಲ್ಲ. ಇನ್ನು ಧ್ವಂಧ್ವಾರ್ಥ ಸಂಭಾಷಣೆಯೇ ಹಾಸ್ಯ ಎಂದು ತಿಳಿದಿರುವ ನಿರ್ದೇಶಕರು - ನಿರ್ಮಾಪಕರು ಹಾಸ್ಯ ಎಂದೊಡನೆ ಅಂಥ ಬರವಣಿಗೆಯುಳ್ಳ ಸಾಹಿತಿಗಳ ಮನೆ ಮುಂದೆ ಕುರಿಮಂದೆಯಂತೆ ನಿಲ್ಲುತ್ತಾರೆ.

ಹಿಂದಿನ ಚಿತ್ರಗಳಲ್ಲಿದ್ದ ಆ ಮೊನಚು, ಪಾತ್ರ ಪೋಷಣೆ, ತಿಳಿ ಹಾಸ್ಯ ಎಲ್ಲಿ ಹೋಯಿತು. ಹಾಸ್ಯರತ್ನ ನರಸಿಂಹರಾಜು ಅವರು ಚಿತ್ರದ ತೆರೆಯ ಮೇಲೆ ಬಂದರೆ ನಗು ಉಕ್ಕಿ ಬರುತ್ತಿತ್ತು. ಅಲ್ಲಿ ಯಾವುದೇ ಸಂಭಾಷಣೆ ಅಗತ್ಯವಿರಲಿಲ್ಲ. ಅಭಿನಯ ಹಾಸ್ಯ ಪ್ರಧಾನವಾಗಿತ್ತು. ಇಂದು ಅಭಿನಯ ಮೂಲೆ ಗುಂಪಾಗಿದೆ. ಕೇವಲ ಕೆಟ್ಟ ಸಂಭಾಷಣೆಯೇ ಹಾಸ್ಯವಾಗಿದೆ.

ಇನ್ನು ಕೆಲವು ಟಿವಿ ಚಾನೆಲ್‌ಗಳಲ್ಲಿ ಬರುವ ಹಾಸ್ಯವಂತೂ ಹಾಸ್ಯಾಸ್ಪದವಾಗಿದೆ.

ಚಿತ್ರವೊಂದು ಯಶಸ್ಸು ಕಾಣಬೇಕಾದರೆ. ಅದರಲ್ಲಿ ನವರಸ ಇರಬೇಕು. ಸುಂದರವಾದ ಕಥೆ ಇರಬೇಕು. ಉತ್ತಮ ನಿರ್ದೇಶನ, ಪಾತ್ರವರ್ಗ, ಪಾತ್ರ ಪೋಷಣೆ ಇರಬೇಕು. ಅಂತಹ ಆಯ್ಕೆಯನ್ನು ನಿರ್ದೇಶಕ ಮಾಡಬೇಕು. ಅದಾವುದೂ ಇಲ್ಲದೆ ಸರಕಾರ ಸವಲತ್ತು ನೀಡದೆ ಚಿತ್ರೋದ್ಯಮ ಸೊರಗಿತೆಂಬುದು ಪಲಾಯನ ವಾದ ಮಾತ್ರ ಆದೀತು.

ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಮೇಲೇರುವುದೇ ಜಾಣತನ. ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಬಯಸುವವ ಶೂರನೂ ಅಲ್ಲ, ಧೀರನೂ ಅಲ್ಲ ಎಂಬಂತೆ ಕುಳಿತರೆ ಕನ್ನಡ ಚಿತ್ರೋದ್ಯಮ ಯಶಸ್ಸು ಕಾಣಲು ಸಾಧ್ಯವೇ ಇಲ್ಲ.

ಇಂದೂ ರಜನಿ ಕಾಂತ್‌ ಅಭಿನಯದ, ಇಲ್ಲವೇ ಕಮಲಾ ಹಾಸನ್‌ ನಟಿಸಿದ ಚಿತ್ರಗಳನ್ನು ನೋಡಲು ಬೆಂಗಳೂರಿನ ಚಿತ್ರಮಂದಿರಗಳಲ್ಲಿ 100 -200 ರು. ತೆತ್ತು ಕಾಳಸಂತೆಯಲ್ಲಿ ಟಿಕೆಟ್‌ ಕೊಂಡು ನೋಡುವಾಗ, ಕನ್ನಡ ಚಿತ್ರಗಳಿಗೆ ಈ ದುಸ್ಥಿತಿ ಏಕೆ. ಅದಕ್ಕೆ ಉತ್ತರ ಸುಸ್ಪಷ್ಟ. ಅದುವೇ ಕೆಟ್ಟ ಚಿತ್ರ. ಇದಕ್ಕೆ ಕಾನೂರು ಹೆಗ್ಗಡಿತಿ, ಮುನ್ನುಡಿ, ದೇವೀರಿ ಮೊದಲಾದಾವು ಅಪವಾದ.

English summary
Quality of kannada movies : A comparision

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada